ETV Bharat / state

Guarantee scheme: ಹೊರ ರಾಜ್ಯಗಳಿಂದ ಅಕ್ಕಿ ತರಲು ತೀರ್ಮಾನ : ಜುಲೈ 1ಕ್ಕೆ ಅನ್ನಭಾಗ್ಯ ಯೋಜನೆ ಜಾರಿಗೆ ಪ್ರಯತ್ನ

author img

By

Published : Jun 15, 2023, 6:36 PM IST

Updated : Jun 15, 2023, 7:33 PM IST

ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಲ್ಲೊಂದಾದ ಅನ್ನಭಾಗ್ಯ ಯೋಜನೆಗೆ ಹೊರ ರಾಜ್ಯಗಳಿಂದ ಅಕ್ಕಿಯನ್ನು ತರಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

cabinet-decided-to-bring-rice-from-outside-states-for-annabhagya-yojana
ಅನ್ನಭಾಗ್ಯ ಯೋಜನೆಗೆ ಹೊರ ರಾಜ್ಯಗಳಿಂದ ಅಕ್ಕಿ ತರಲು ಕ್ಯಾಬಿನೆಟ್​​ನಲ್ಲಿ ತೀರ್ಮಾನಅನ್ನಭಾಗ್ಯ ಯೋಜನೆಗೆ ಹೊರ ರಾಜ್ಯಗಳಿಂದ ಅಕ್ಕಿ ತರಲು ಕ್ಯಾಬಿನೆಟ್​​ನಲ್ಲಿ ತೀರ್ಮಾನ

ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ

ಬೆಂಗಳೂರು : ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಹೊರರಾಜ್ಯಗಳಿಂದ ತರಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಜ್ಜಾಗಿದ್ದಾರೆ. ಯೋಜನೆಗೆ ಅಗತ್ಯವಾದ ಅಕ್ಕಿಯನ್ನು ತೆರೆದ ಮಾರುಕಟ್ಟೆಯಲ್ಲಿ ಒದಗಿಸಲು ಕೇಂದ್ರ ಸರ್ಕಾರ ನಿರಾಕರಿಸಿದ ಹಿನ್ನೆಲೆಯಲ್ಲಿ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಸಿದ್ದರಾಮಯ್ಯ ತಮ್ಮ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯನ್ನು ಜುಲೈ ಒಂದರಂದೇ ಜಾರಿಗೆ ತರಲು ಎಲ್ಲ ಕಸರತ್ತು ನಡೆಸಿದ್ದಾರೆ.

ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅನ್ನಭಾಗ್ಯ ಯೋಜನೆಗೆ ಅಗತ್ಯವಾದ ಅಕ್ಕಿ ಯಾವ ಯಾವ ರಾಜ್ಯಗಳಿಂದ ತರಬಹುದು ಎಂಬ ಕುರಿತು ಮಾಹಿತಿ ಪಡೆದಿದ್ದಲ್ಲದೆ, ಈ ಅಕ್ಕಿಯನ್ನು ಪಡೆಯಲು ಹೊರರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಿದ್ಧ ಎಂಬ ಸಂದೇಶ ರವಾನಿಸಿದರು. ಈ ಮಧ್ಯೆ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರು, ಅನ್ನಭಾಗ್ಯ ಯೋಜನೆಗೆ ಅಗತ್ಯವಾದ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರ ಹಿಂಜರಿದ ಬೆಳವಣಿಗೆಯನ್ನು ಖಂಡಿಸಿದರು.

ತೆರೆದ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಅಕ್ಕಿಯನ್ನು 34 ರೂ. ದರದಲ್ಲಿ ಖರೀದಿಸಲು ನಾವು ಸಿದ್ಧರಿದ್ದರೂ ಕೇಂದ್ರ ಸರ್ಕಾರ ನಮಗೆ ಅಕ್ಕಿ ನೀಡಲು ತಯಾರಿಲ್ಲ. ಆದರೆ ಅದೇ ಕಾಲಕ್ಕೆ ಟೆಂಡರ್ ಮೂಲಕ 15 ಲಕ್ಷ ಟನ್ ಅಕ್ಕಿಯನ್ನು ವಿಲೇವಾರಿ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಮೊದಲು ನಮಗೆ ಅಕ್ಕಿ ಕೊಡುವುದಾಗಿ ಹೇಳಿದವರು ಇದ್ದಕ್ಕಿದ್ದಂತೆ ಅಕ್ಕಿ ಕೊಡುವುದಿಲ್ಲ ಎಂದಿರುವುದು ರಾಜಕೀಯವೇ ಹೊರತು ಇನ್ನೇನಲ್ಲ. ಬಡವರ ಪರ ಕಾರ್ಯಕ್ರಮಗಳಿಗೆ ಅದು ವಿರುದ್ಧವಾಗಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕಿಲ್ಲ ಎಂದರು.

ಕೇಂದ್ರ ಸರ್ಕಾರದ ಈ ಧೋರಣೆಯ ಹಿನ್ನೆಲೆಯಲ್ಲಿ ನಾವು ತೆಲಂಗಾಣ, ಛತ್ತೀಸ್ ಘಡದ ಮುಖ್ಯಮಂತ್ರಿಗಳನ್ನು ಸಂಪರ್ಕಿಸಿದ್ದು, ಅವರು ರಾಜ್ಯಕ್ಕೆ ಅಕ್ಕಿ ನೀಡಲು ಒಪ್ಪಿಕೊಂಡಿದ್ದಾರೆ. ಆದರೆ ಯಾವ ರೀತಿ ರಾಜ್ಯಕ್ಕೆ ಸರಬರಾಜು ಮಾಡಬೇಕು ಎಂಬ ಸಂಬಂಧ ಚರ್ಚಿಸಲು ಬರುವಂತೆ ಹೇಳಿದ್ದಾರೆ. ಅದರ ಪ್ರಕಾರ, ನಮ್ಮ ಅಧಿಕಾರಿಗಳ ತಂಡ ತೆಲಂಗಾಣಕ್ಕೆ ತೆರಳಿದ್ದು, ಆದಷ್ಟು ಬೇಗ ಹೊರರಾಜ್ಯಗಳಿಂದ ಅಗತ್ಯದಷ್ಟು ಅಕ್ಕಿ ಪಡೆಯಲು ಕ್ರಮ ಕೈಗೊಳ್ಳುತ್ತೇವೆ. ಸಾಧ್ಯವಾದ ಮಟ್ಟಿಗೆ ಜುಲೈ 1 ರಿಂದಲೇ ಈ ಯೋಜನೆಯನ್ನು ಜಾರಿಗೊಳಿಸಲು ತಯಾರಿ ನಡೆಸಿದ್ದೇವೆ ಎಂದರು. ಅನ್ನಭಾಗ್ಯ ಯೋಜನೆಗೆ ಬೇಕಾದ ಅಕ್ಕಿಯನ್ನು ಪಡೆಯಲು ಹೊರರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಾತನಾಡಲು ನಾನೇ ಸಿದ್ಧ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಕೇಂದ್ರ ಸರ್ಕಾರದ ಅಸಹಕಾರದ ಹಿನ್ನೆಲೆಯಲ್ಲಿ ಹೊರರಾಜ್ಯಗಳಿಂದ ಅಕ್ಕಿ ತರುವುದು ಅನಿವಾರ್ಯ. ಈ ಸಂದರ್ಭದಲ್ಲಿ ಅಕ್ಕಿಯನ್ನು ಸಾಗುವಳಿ ಮಾಡಲು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ವೆಚ್ಚವಾಗಬಹುದು. ಆದರೆ ಸಾಧ್ಯವಾದ ಮಟ್ಟಿಗೆ ಖರ್ಚನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ತೆಲಂಗಾಣದಿಂದ ಅಕ್ಕಿ ತರುವಾಗ ಕಲಬುರಗಿ ಸೇರಿದಂತೆ ರಾಜ್ಯದ ಹಲವು ಪ್ರದೇಶಗಳಿಗೆ ಕಡಿಮೆ ವೆಚ್ಚವಾಗುತ್ತದೆ. ಆದರೆ ಛತ್ತೀಗಡದಿಂದ ಅಕ್ಕಿ ತರುವಾಗ ಹೆಚ್ಚು ವೆಚ್ಚವಾಗುತ್ತದೆ. ಹೀಗಾಗಿ ಎಲ್ಲ ಸಾಧಕ ಬಾಧಕಗಳನ್ನು ಪರಿಶೀಲಿಸಿಯೇ ಮುಂದುವರಿಯುವುದಾಗಿ ಅವರು ತಿಳಿಸಿದರು.

10 ವರ್ಷ ಯುಪಿಎ ಆಡಳಿತದಲ್ಲಿ ತಾರತಮ್ಯ ಮಾಡಿರಲಿಲ್ಲ. ಪಕ್ಕದ ರಾಜ್ಯಗಳಿಂದ ಅಕ್ಕಿ ತಂದು 10 ಕೆಜಿ ಕೊಟ್ಟು ಮಾತು ಉಳಿಸಿಕೊಳ್ಳುತ್ತೇವೆ. ನಾವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಹೊರೆಯಾಗದಂತೆ ಬಡವರಿಗೆ ನೀಡಲು ಉದ್ದೇಶಿಸಿದ್ದೇವೆ ಎಂದರು. ಅಕ್ಕಿ ಅಲ್ಲದೆ, ರಾಗಿ, ಜೋಳ ಕೂಡ ಪಡಿತರ ವ್ಯವಸ್ಥೆಯಲ್ಲಿ ನೀಡಲಾಗುತ್ತಿದೆ. ನಾವು ಅಕ್ಕಿ ಕೊಡುವುದಾಗಿ ಮಾತು ಕೊಟ್ಟಿದ್ದೇವೆ. ಸಮಯಕ್ಕೆ ಸರಿಯಾಗಿ ನೀಡಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಅವರು ಮಾತನಾಡಿ, ಸಾರಿಗೆ ಇಲಾಖೆ ಹೊಸತಾಗಿ ಹತ್ತು ಡಬಲ್ ಡೆಕ್ಕರ್ ಬಸ್ಸುಗಳು ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು 28 ಕೋಟಿ ರೂ. ಕೊಡಲಾಗುವುದು ಎಂದು ನುಡಿದರು. ಪ್ರಕೃತಿ ವಿಕೋಪಕ್ಕೆ ಸಂಬಂಧಪಟ್ಟಂತೆ ಸಂಪುಟ ಉಪಸಮಿತಿಯನ್ನು ರಚಿಸಬೇಕಿದ್ದು, ಈ ಸಂಬಂಧದ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ ಎಂದು ತಿಳಿಸಿದರು.

ಇದನ್ನೂ ಓದಿ : Anna Bhagya Scheme: 'ಪುಕ್ಸಟ್ಟೆ ಅಕ್ಕಿ ಕೊಡುವಂತೆ ನಾವು ಕೇಳಿಲ್ಲ'- ಕೇಂದ್ರದ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ

Last Updated : Jun 15, 2023, 7:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.