ETV Bharat / state

ಗೃಹಲಕ್ಷ್ಮಿ ಯೋಜನೆ ಸಮಸ್ಯೆ ಬಗೆಹರಿಸಲು ಗ್ರಾಪಂ ಮಟ್ಟದಲ್ಲಿ ಕ್ಯಾಂಪ್‌ ಆಯೋಜಿಸಲು ಸರ್ಕಾರದ ಸೂಚನೆ

author img

By ETV Bharat Karnataka Team

Published : Dec 21, 2023, 12:41 PM IST

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಪಂಚಾಯತ್​ ಮಟ್ಟದಲ್ಲಿ ಡಿ. 27 ರಿಂದ 29 ರವರೆಗೆ ಕ್ಯಾಂಪ್‌ಗಳನ್ನು ಆಯೋಜಿಸುವ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ.

Gruha Lakshmi
ಗೃಹಲಕ್ಷ್ಮಿ

ಬೆಂಗಳೂರು : ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಪಂಚಾಯತ್​ ಮಟ್ಟದಲ್ಲಿ ಡಿಸೆಂಬರ್ 27 ರಿಂದ 29 ರವರೆಗೆ ಕ್ಯಾಂಪ್‌ಗಳನ್ನು ಆಯೋಜಿಸಲು ಸರ್ಕಾರ ಸೂಚನೆ ನೀಡಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿ ಹೊಂದಿರುವ ಗೃಹಲಕ್ಷ್ಮಿ ಯೋಜನೆಗೆ ಜುಲೈ 19 ರಂದು ಚಾಲನೆ ನೀಡಲಾಗಿತ್ತು. ಇದುವರೆಗೂ, 1.17 ಕೋಟಿ ಮಹಿಳಾ ಕುಟುಂಬಗಳ ಮುಖ್ಯಸ್ಥರು, ಈ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದು, ಪ್ರತಿ ತಿಂಗಳು ಅವರುಗಳ ಬ್ಯಾಂಕ್ ಖಾತೆಗೆ 2,000 ರೂ.ಗಳನ್ನು ನೇರ ನಗದು ವರ್ಗಾವಣೆ ಮೂಲಕ ಪಾವತಿ ಮಾಡಲಾಗುತ್ತಿದೆ.

ಸರ್ಕಾರದ ಸುತ್ತೋಲೆ
ಸರ್ಕಾರದ ಸುತ್ತೋಲೆ

ಈ ಪ್ರಕ್ರಿಯೆಯಲ್ಲಿ ಸುಮಾರು 2.5 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡದೇ ಇರುವುದು ಮತ್ತು ಸುಮಾರು 70,000 ನಿಷ್ಕ್ರಿಯ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಿರುವುದು ಕಂಡು ಬಂದಿದೆ. ಈ ಫಲಾನುಭವಿಗಳು ಹೊಸ ಬ್ಯಾಂಕ್ ಖಾತೆ ತೆರೆಯಲು ಇಚ್ಚಿಸಿರುವುದು ಗಮನಕ್ಕೆ ಬಂದಿದೆ. ಹಾಗೆಯೇ, ಬಹಳಷ್ಟು ಫಲಾನುಭವಿಗಳು ನೇರ ನಗದು ವರ್ಗಾವಣೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡುವುದು ಅಗತ್ಯವಿದೆ.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮ ಪಂಚಾಯತ್​ ಮಟ್ಟದಲ್ಲಿ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಡಿ. 27 ರಿಂದ 29 ರವರೆಗೆ ಕ್ಯಾಂಪ್‌ಗಳನ್ನು ಆಯೋಜಿಸುವ ಕುರಿತು ಸುತ್ತೋಲೆಯಲ್ಲಿ ಈ ಕೆಳಕಂಡಂತೆ ಸೂಚನೆಗಳನ್ನು ನೀಡಲಾಗಿದೆ.

1. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯತ್​ ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಕ್ಯಾಂಪ್‌ಗಳನ್ನು ಆಯೋಜಿಸಬೇಕು.

2. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಎಲ್ಲ ತಾಂತ್ರಿಕ ಮತ್ತು ಬ್ಯಾಂಕ್ ಸಂಬಂಧಿಸಿದ ಸಮಸ್ಯೆಗಳನ್ನು ಈ ಕ್ಯಾಂಪ್‌ಗಳಲ್ಲಿ ಪರಿಹರಿಸಬೇಕು.

3. ಸ್ಥಳೀಯ ಬಾಪೂಜಿ ಸೇವಾ ಕೇಂದ್ರದ ಗಣಕ ಯಂತ್ರ ನಿರ್ವಾಹಕರು, ಅಂಗನವಾಡಿ ಕಾರ್ಯಕರ್ತರು ಮತ್ತು Electronic Delivery of Citizen Services (EDCS) ತಂಡಗಳು ಈ ಕ್ಯಾಂಪ್‌ಗಳಲ್ಲಿ ಭಾಗವಹಿಸಬೇಕು.

4. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್​ನ ಪ್ರತಿನಿಧಿಗಳು ಮತ್ತು ಇತರ ಬ್ಯಾಂಕ್‌ಗಳ ಪ್ರತಿನಿಧಿಗಳು ಈ ಕ್ಯಾಂಪ್‌ಗಳಲ್ಲಿ ಭಾಗವಹಿಸಬೇಕು.

ಕ್ಯಾಂಪ್‌ಗಳಲ್ಲಿ ಫಲಾನುಭವಿಗಳಿಗೆ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸಬೇಕು : ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡುವುದು. ಹೊಸ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಮತ್ತು ಆಧಾರ್ ಜೋಡಣೆ ಮಾಡುವುದು. ಇ-ಕೆವೈಸಿ ಅಪ್‌ಡೇಟ್ ಮಾಡುವುದು. ಗೃಹಲಕ್ಷ್ಮಿ ಅರ್ಜಿಯ ಸ್ಥಿತಿ ಪರಿಶೀಲಿಸುವುದು. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಪರಿಹರಿಸುವುದು.

ಪ್ರತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಡಿ.27 ರಿಂದ 29 ರವರೆಗೆ ನಿತ್ಯ ಬೆಳಗ್ಗೆ 9.00 ರಿಂದ ಸಂಜೆ 5.00 ಗಂಟೆಯವರೆಗೆ ಕ್ಯಾಂಪ್‌ಗಳನ್ನು ಆಯೋಜಿಸಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಕ್ಯಾಂಪ್ ಆಯೋಜಿಸುವ ಕುರಿತು ಫಲಾನುಭವಿಗಳಿಗೆ EDCS ರವರು SMS ಮೂಲಕ ಮಾಹಿತಿ ನೀಡುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕ್ಷೇತ್ರ ಮಟ್ಟದ ಸಿಬ್ಬಂದಿಗಳು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮಾಹಿತಿ ನೀಡಿ, ಅವರನ್ನು ಕ್ಯಾಂಪ್‌ಗಳಿಗೆ ಕರೆತರುವ ಜವಾಬ್ದಾರಿ ನಿರ್ವಹಿಸುವುದು. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಕ್ಯಾಂಪ್‌ಗಳನ್ನು ಆಯೋಜಿಸಿ ಯಶಸ್ವಿಗೊಳಿಸಲು ಸೂಚಿಸಿದೆ.

ಇದನ್ನೂ ಓದಿ : ನಮ್ಮ ಸರ್ಕಾರದ ಯೋಜನೆಗಳು ದೇಶಕ್ಕೆ ಮಾದರಿ ಆಗಿವೆ : ಡಿಸಿಎಂ ಡಿ ಕೆ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.