ETV Bharat / state

ವಿಧಾನಸೌಧದೊಳಗೆ ಎಂಎಲ್ಸಿಗಳ ಕಾರು ಪ್ರವೇಶಕ್ಕೆ ಅಡ್ಡಿ, ಪಾರ್ಕಿಂಗ್ ಸಮಸ್ಯೆ: ಸಭಾಪತಿಗಳ ನೇತೃತ್ವದಲ್ಲಿ ಸಭೆಗೆ ನಿರ್ಧರಿಸಿದ ಸರ್ಕಾರ

author img

By

Published : Jul 10, 2023, 3:28 PM IST

ಯಾರು ಯಾರೋ ಪಾಸ್​ಗಳನ್ನು ಹಾಕಿಕೊಂಡು ವಿಧಾನಸೌಧದ ಒಳಗೆ ಬರುತ್ತಾರೆ. ಇದನ್ನು ತಡೆಗಟ್ಟಲು ಕ್ಯೂ ಆರ್​ ಕೋಡ್​ ವ್ಯವಸ್ಥೆ ತಂದರೆ ಉತ್ತಮ ಎನ್ನುವ ಸಲಹೆ ಕೇಳಿ ಬಂತು.

Vidhanasoudha
ವಿಧಾನಸೌಧ

ಬೆಂಗಳೂರು: ವಿಧಾನಸೌಧ, ಶಾಸಕ ಭವನದಲ್ಲಿ ವಿಧಾನ ಪರಿಷತ್ ಸದಸ್ಯರ ವಾಹನಗಳ ಸಂಚಾರ, ಕಾರುಗಳನ್ನು ಪಾರ್ಕ್​ ಮಾಡಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದು ಹಾಗೂ ಕ್ಯಾಂಟೀನ್​ಗಳಲ್ಲಿ ಪರಿಷತ್ ಸದಸ್ಯರಿಗೆ ಸಮರ್ಪಕವಾಗಿ ಸೇವೆ ಸಿಗದ ವಾತಾವರಣ ಸೃಷ್ಟಿಯಾಗಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಸ್ತುತ ಸರ್ಕಾರ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಭಾಪತಿಗಳ ಕಚೇರಿಯಲ್ಲಿ ಸಭೆ ನಡೆಸಿ ಸದಸ್ಯರ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆಯಲು ನಿರ್ಧಾರ ಮಾಡಿದೆ.

ವಿಧಾನ ಪರಿಷತ್ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಡಿ ಎಸ್ ಅರುಣ್ ಅವರು, ನಮ್ಮ ವಾಹನಗಳನ್ನು ವಿಧಾನಸೌಧಕ್ಕೆ ತರಲು ಕಷ್ಟವಾಗುತ್ತಿದೆ. ಕಾರುಗಳನ್ನು ಪಾರ್ಕ್ ಮಾಡಲು ಸಾಧ್ಯವಾಗುತ್ತಿಲ್ಲ. ಸರಿಯಾದ ವ್ಯವಸ್ಥೆ ಇಲ್ಲದೇ ನಮಗೆ ಸಮಸ್ಯೆಯಾಗುತ್ತಿದೆ ಎಂದರು. ಇದಕ್ಕೆ ದನಿಗೂಡಿಸಿದ ಜೆಡಿಎಸ್ ಸದಸ್ಯ ಟಿ ಎ ಶರವಣ, ಯಾರು ಯಾರೋ ಪಾಸ್ ಹಾಕಿಕೊಂಡು ಬರುತ್ತಿದ್ದಾರೆ. ಅವೆಲ್ಲ ಕಲರ್ ಜೆರಾಕ್ಸ್ ಇರಬಹುದು. ಹಾಗಾಗಿ ಇಂತಹ ಸಮಸ್ಯೆಗಳನ್ನು ನಿವಾರಿಸಲು ಕ್ಯೂ ಆರ್ ಕೋಡ್ ವ್ಯವಸ್ಥೆ ತಂದರೆ ಉತ್ತಮ ಎಂದರು. ಇದಕ್ಕೆ ಬಿಜೆಪಿ ಸದಸ್ಯ ಶಶಿಲ್ ನಮೋಶಿ ಬೆಂಬಲಿಸಿ ಮಾತನಾಡಿ, ಪಾರ್ಕಿಂಗ್​ಗೆ ಸರಿಯಾದ ಜಾಗ ಸಿಗುತ್ತಿಲ್ಲ. ವಿಧಾನಸೌಧದ ಒಳಗಡೆ ಬರಲು ಪ್ರಯಾಸ ಪಡುವಂತಾಗಿದೆ. ಕ್ಯಾಂಟೀನ್ ವ್ಯವಸ್ಥೆ ಕೂಡ ಸರಿಯಿಲ್ಲ, ಬೇಕಾದಾಗ ವ್ಯವಸ್ಥೆ ಸಿಗಲ್ಲ ಎಂದು ಹೇಳಿದರು.

ಇದಕ್ಕೆ ಸರ್ಕಾರದ ಪರವಾಗಿ ಉತ್ತರಿಸಿದ ಕಾನೂನು ಸಚಿವ ಹೆಚ್. ಕೆ ಪಾಟೀಲ್, ಇದು ಗಂಭೀರ ಸಮಸ್ಯೆಯಾಗಿದ್ದು, ಸಂಬಂಧ ಪಟ್ಟವರ ಜೊತೆ ಹಾಗೂ ಸಭಾಪತಿಗಳೊಂದಿಗೆ ಸಭೆ ನಡೆಸಿ ಪರಿಹಾರಕ್ಕೆ ಕ್ರಮ ವಹಿಸೋಣ, ನಮ್ಮ ಹೆಸರಿನಲ್ಲಿ ದಲ್ಲಾಳಿಗಳು ಪಾಸ್​ಗಳನ್ನು ಪಡೆದು ಒಳ ನುಗ್ಗುತ್ತಿದ್ದಾರೆ. ಇದನ್ನು ತಪ್ಪಿಸಬೇಕು, ಇದಕ್ಕಾಗಿ ಅಧ್ಯಕ್ಷರ ಕೊಠಡಿಯಲ್ಲಿ ಸಭೆ ನಡೆಸಿ ಉತ್ತಮ ನಿರ್ಧಾರ ಕೈಗೊಳ್ಳೋಣ. ದಲ್ಲಾಳಿಗಳು ಮುಟ್ಟಾಳರು, ಅವರನ್ನು ದೂರ ಇಡುವುದು ಸದನದ ದೊಡ್ಡ ಜವಾಬ್ದಾರಿ ಹಾಗಾಗಿ ಸಭಾಧ್ಯಕ್ಷರ ಕೊಠಡಿಯಲ್ಲಿ ಸಭೆ ಕರೆಯಲು ನಿರ್ಧರಿಸಿದ್ದೇವೆ ಎಂದರು.

ಈ ವೇಳೆ ಜೆಡಿಎಸ್​ನ ಫಾರೂಕ್, ನಮಾಜ್ ಮಾಡಲು ಕೊಠಡಿ ಮಾಡಿಕೊಡಿ ಎಂದರು. ಇದಕ್ಕೆ ಸಭಾಪತಿ ಕೊಠಡಿ ಸಭೆಯಲ್ಲಿ ಕೇಳಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು. ಇತರ ಸದಸ್ಯರು ಮಾತನಾಡಲು ಮುಂದಾದಾಗ ಅವಕಾಶ ನಿರಾಕರಿಸಿದ ಸಭಾಪತಿಗಳು, ಸಭೆಗೆ ನಿರ್ಧಾರವಾಗಿದೆ. ಸಭೆಯಲ್ಲಿಯೇ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಚರ್ಚೆಗೆ ತೆರೆ ಎಳೆದರು.

ಇದನ್ನೂ ಓದಿ: ಅನ್ನಭಾಗ್ಯ ಯೋಜನೆ: ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆ; ಸಂಜೆ ಸಿಎಂ ಸಿದ್ದರಾಮಯ್ಯ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.