ETV Bharat / state

ಅನ್ನಭಾಗ್ಯ ಯೋಜನೆ: ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆ; ಸಂಜೆ ಸಿಎಂ ಸಿದ್ದರಾಮಯ್ಯ ಚಾಲನೆ

author img

By

Published : Jul 10, 2023, 8:21 AM IST

Updated : Jul 10, 2023, 9:17 AM IST

ಅಕ್ಕಿ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ಹಣ ವರ್ಗಾಯಿಸುವ ಪ್ರಕ್ರಿಯೆಗೆ ಇಂದು ಚಾಲನೆ ಸಿಗಲಿದೆ. ಈ ಮೂಲಕ ಪಡಿತರದಾರರಿಗೆ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಜೊತೆಗೆ ಹೆಚ್ಚುವರಿ 5 ಕೆಜಿ ಅಕ್ಕಿಗೆ 170 ರೂ ಹಣವನ್ನು ತಾತ್ಕಾಲಿಕವಾಗಿ ಬ್ಯಾಂಕ್ ಖಾತೆಗೆ ರಾಜ್ಯ ಸರ್ಕಾರ ವರ್ಗಾಯಿಸಲಿದೆ.

ಅನ್ನಭಾಗ್ಯ ಯೋಜನೆ
ಅನ್ನಭಾಗ್ಯ ಯೋಜನೆ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯಡಿ ಪಡಿತರದಾರರಿಗೆ ಹಣ ವರ್ಗಾವಣೆ ಪ್ರಕ್ರಿಯೆಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಈ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಗ್ಯಾರಂಟಿ ಯೋಜನೆ ಈಡೇರಿಸಲು ಕಾಂಗ್ರೆಸ್ ಸರ್ಕಾರಕ್ಕೆ ಅಕ್ಕಿ ಕೊರತೆಯುಂಟಾಗಿದೆ. ಇದರಿಂದಾಗಿ 5 ಕೆಜಿ ಅಕ್ಕಿ ವಿತರಿಸಿ, ಇನ್ನುಳಿದ 5 ಕೆಜಿ ಅಕ್ಕಿಗೆ ಹಣ ನೀಡುವುದಾಗಿ ಸರ್ಕಾರ ಘೋಷಿಸಿತ್ತು.

ಇದರಂತೆ ಪ್ರತಿ ಕೆಜಿ ಅಕ್ಕಿಗೆ 34 ರೂ ನಂತೆ 5 ಕೆಜಿಗೆ 170 ರೂ ಹಣವನ್ನು ಪಡಿತರದಾರರ ಖಾತೆಗೆ ವರ್ಗಾಯಿಸಲಿದೆ. ಪಡಿತರ ಚೀಟಿಯಲ್ಲಿ ಹೆಸರಿರುವ ಸದಸ್ಯರೆಲ್ಲರಿಗೂ ತಲಾ 5 ಕೆಜಿ ಅಕ್ಕಿಯ ದುಡ್ಡನ್ನು ಆ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಈ ಯೋಜನೆ ಪ್ರಸಕ್ತ ತಿಂಗಳಿನಿಂದಲೇ ಆರಂಭವಾಗಿದೆ. ಅಂತೆಯೇ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಇಂದು ಸಂಜೆ 5 ಗಂಟೆಗೆ ಹಣ ವರ್ಗಾವಣೆಗೆ ಚಾಲನೆ ಕೊಡಲಿದ್ದಾರೆ. ಈ ಮೂಲಕ ಈ ತಿಂಗಳೊಳಗೆ ಪಡಿತರದಾರರ ಖಾತೆಗೆ ಹಣ ಜಮಾ ಆಗಲಿದೆ. ಹೆಚ್ಚುವರಿ ಅಕ್ಕಿ ಲಭ್ಯವಾದ ಬಳಿಕ ಹಣ ವರ್ಗಾವಣೆ ನಿಲ್ಲಿಸಿ, 5 ಕೆಜಿ ಅಕ್ಕಿ ವಿತರಿಸಲಿದ್ದೇವೆ ಎಂದು ಸರ್ಕಾರ ಈ ಮೊದಲು ತಿಳಿಸಿತ್ತು.

1.28 ಕೋಟಿ ಕುಟುಂಬಗಳಿಗೆ ಪ್ರಯೋಜನ : ರಾಜ್ಯದಲ್ಲಿ 1.28 ಕೋಟಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಕುಟುಂಬಗಳ ಪಡಿತರ ಚೀಟಿದಾರರು ಇರುವುದನ್ನು ಗುರುತಿಸಲಾಗಿದೆ. ಇವುಗಳಲ್ಲಿ ಪ್ರತಿಶತ 99 ರಷ್ಟು ಕಾರ್ಡುಗಳು ಆಧಾರ್​ನೊಂದಿಗೆ ಜೋಡಣೆಯಾಗಿವೆ. ಶೇ. 82 ರಷ್ಟು ಪಡಿತರ ಚೀಟಿಗಳು ಅಂದರೆ 1.06 ಕೋಟಿ ಪಡಿತರ ಚೀಟಿಗಳು, ಸಕ್ರಿಯ ಬ್ಯಾಂಕ್ ಖಾತೆಗಳೊಂದಿಗೆ ಜೋಡಣೆಯಾಗಿವೆ. ಈ ಖಾತೆಗಳಿಗೆ ನಗದು ವರ್ಗಾವಣೆಯನ್ನ ನೇರವಾಗಿ ಮಾಡಲಾಗುತ್ತದೆ. ಬ್ಯಾಂಕ್ ಖಾತೆ ಹೊಂದಿಲ್ಲದ ಸುಮಾರು 22 ಲಕ್ಷ ಕಾರ್ಡುದಾರರಿಗೆ ಖಾತೆ ತೆರೆಯುವಂತೆ ಸರ್ಕಾರ ಮಾಹಿತಿ ನೀಡಲಿದೆ. 1.27 ಕೋಟಿ ಕಾರ್ಡುಗಳಲ್ಲಿ ಒಬ್ಬ ಸದಸ್ಯರನ್ನು ಕುಟುಂಬದ ಮುಖ್ಯಸ್ಥರೆಂದು ಗುರುತಿಸಲಾಗಿದ್ದು, ಅವರ ಖಾತೆಗೆ ನಗದು ವರ್ಗಾಯಿಸಲಾಗುವುದು. ಶೇ. 94 ರಷ್ಟು ಕುಟುಂಬಗಳ ಮುಖ್ಯಸ್ಥರು ಮಹಿಳೆಯರು ಹಾಗೂ ಶೇ.5 ರಷ್ಟು ಪುರುಷರಾಗಿದ್ದಾರೆ. ಈ ಯೋಜನೆಯಡಿ ಈ ಎಲ್ಲ ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿ ಸಿಗಲಿದೆ. ಜೊತೆಗೆ ಬ್ಯಾಂಕ್ ಖಾತೆಗೆ 170 ರೂ ನೇರ ವರ್ಗಾವಣೆ ಆಗಲಿದೆ. ನಾಲ್ಕು ಜನರಿಂತ ಹೆಚ್ಚಿರುವ ಅಂತ್ಯೋದ್ಯಯ ಕುಟುಂಬಗಳಿಗೂ ಯೋಜನೆಯ ಪ್ರಯೋಜನ ಲಭ್ಯ.

ಅನ್ನಭಾಗ್ಯ ಸಿಗಲು ಏನು ಮಾಡಬೇಕು? : ಪಡಿತರ ಚೀಟಿಗೆ ಆಧಾರ್, ಬ್ಯಾಂಕ್ ಖಾತೆ ಜೋಡಣೆ ಮತ್ತು ಇಕೆವೈಸಿ ಮಾಡಿಸುವುದು ಅಗತ್ಯ. ಆಧಾರ್ ಮತ್ತು ಇಕೆವೈಸಿ ಮಾಡಿಸದಿದ್ದರೆ ಈ ಯೋಜನೆ ಸಿಗಲ್ಲ. ಆದ್ದರಿಂದ ಈಗಾಗಲೇ ಶೇ.99ರಷ್ಟು ಪಡಿತರ ಕುಟುಂಬಗಳು ಆಧಾರ್ ಜೋಡಣೆ ಮಾಡಿಸಿವೆ. ಇನ್ನು 22 ಲಕ್ಷ ಕುಟುಂಬಗಳು ಬ್ಯಾಂಕ್ ಖಾತೆ ಮಾಡಿಸಬೇಕಿದೆ.

ಅನ್ನಭಾಗ್ಯ ಯೋಜನೆಯಡಿ ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ನೇರವಾಗಿ ವರ್ಗಾಯಿಸುತ್ತೇವೆ. ಮುಂದಿನ 10 ದಿನಗಳಲ್ಲಿ ಎಲ್ಲರಿಗೂ ಹಣ ವರ್ಗಾವಣೆ ಆಗಲಿದೆ. ಈವರೆಗೆ ಶೇ 90 ರಷ್ಟು ಅಕೌಂಟ್ ಲಿಂಕ್ ಆಗಿವೆ. ಇನ್ನೂ ಅಂದಾಜು ಶೇ 10 ರಷ್ಟು ಆಗಬೇಕಿದ್ದು, ಎಲ್ಲರಿಗೂ ಹಣ ವರ್ಗಾಯಿಸುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದರು.

ಕಾಂಗ್ರೆಸ್​ನ ಪಂಚ ಗ್ಯಾರಂಟಿಗಳು: ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ 'ಶಕ್ತಿ ಯೋಜನೆ', ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಸಂಪರ್ಕದ 'ಗೃಹಜ್ಯೋತಿ' ಯೋಜನೆ, 10 ಕೆಜಿ ಅಕ್ಕಿ ವಿತರಿಸುವ 'ಅನ್ನಭಾಗ್ಯ', ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ ವಿತರಿಸುವ 'ಗೃಹಲಕ್ಷ್ಮೀ' ಮತ್ತು ಪದವೀಧರ ನಿರುದ್ಯೋಗಿಗಳಿಗಾಗಿ 'ಯುವನಿಧಿ' ಯೋಜನೆಯನ್ನು ಅಧಿಕಾರಕ್ಕೇರಿದ ಬಳಿಕ ಜಾರಿಗೆ ತರುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಅದರಂತೆ ಈಗಾಗಲೇ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಹಾಗೆಯೇ ಈ ತಿಂಗಳಿನಿಂದಲೇ ಗೃಹಜ್ಯೋತಿ ಯೋಜನೆ ಕೂಡ ಆರಂಭವಾಗಿದೆ. ಇದೀಗ ಅನ್ನಭಾಗ್ಯ ಯೋಜನೆಗೂ ಅಧಿಕೃತವಾಗಿ ಜಾರಿಗೆ ಬರುತ್ತಿದೆ.

ಇದನ್ನೂ ಓದಿ: ಅಕ್ಕಿ ಲಭ್ಯವಾಗುವವರೆಗೆ ಫಲಾನುಭವಿಗಳ ಖಾತೆಗೆ ಹಣ; ಜುಲೈ 1ರಿಂದ 10 ಕೆಜಿ ಧಾನ್ಯ ವಿತರಣೆ- ಸಿಎಂ ಸಿದ್ದರಾಮಯ್ಯ

Last Updated : Jul 10, 2023, 9:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.