ETV Bharat / state

ಗ್ಯಾರಂಟಿ ಹಣ ಭರಿಸಲು ಸರ್ಕಾರಿ ಭೂಮಿ ಮಾರಾಟ ಇಲ್ಲ: ಕೃಷ್ಣ ಬೈರೇಗೌಡ

author img

By

Published : Jul 12, 2023, 3:47 PM IST

Krishna Byregowda
ಕೃಷ್ಣ ಬೈರೇಗೌಡ

ಈ ಬಾರಿ ಮುದ್ರಾಂಕ ಶುಲ್ಕ ಪರಿಷ್ಕರಣೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸರ್ಕಾರದ ಭೂಮಿ ಮಾರಾಟ ಮಾಡುವ ಅನಿವಾರ್ಯತೆ ನಮಗಿಲ್ಲ. ಒತ್ತವರಿಯಾಗಿರುವ ಸರ್ಕಾರಿ ಭೂಮಿ ಮರು ವಶಕ್ಕೆ ಪಡೆಯಲು ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒತ್ತುವರಿ ತೆರವು ಅಭಿಯಾನ ನಡೆಸಲಿದ್ದೇವೆ. ಪ್ರತಿ ತಿಂಗಳು ಅಧಿಕಾರಿಗಳಿಗೆ ಟಾರ್ಗೆಟ್ ನೀಡಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ಕಾನೂನಾತ್ಮಕವಾಗಿ ವಾಪಸ್ ಪಡೆಯಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ವೈ.ಎ ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ 38,947 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3,898 ಎಕರೆ ಒತ್ತುವರಿಯಾಗಿದೆ. ಇದರ ತೆರವಿಗೆ ಸರ್ಕಾರ ಮುಂದಾಗಿದೆ. ಇದಕ್ಕಾಗಿಯೇ ವಿಶೇಷ ವ್ಯವಸ್ಥೆ ರೂಪಿಸುತ್ತಿದ್ದೇವೆ. ಸರ್ಕಾರಿ ಭೂಮಿಯನ್ನು ಹುಡುಕಿಕೊಂಡು ಸರ್ಕಾರವೇ ಹೋಗಿ ವಾಪಸ್ ಪಡೆಯಲು ನಿರ್ಧರಿಸಿದೆ. ಇದಕ್ಕೂ ಮೊದಲು ಎಸಿ, ಡಿಸಿ ನ್ಯಾಯಾಲಯದ ಹಂತದಲ್ಲಿ ಆದೇಶವಾಗಬೇಕು. ನಂತರ ಒತ್ತುವರಿ ಜಾಗ ಸರ್ಕಾರದ್ದು ಎಂದು ಪಹಣಿಗೆ ಏರಿಸಿ ನಂತರ ವಶಕ್ಕೆ ಪಡೆಯಲಾಗುತ್ತದೆ ಎಂದರು.

ಇನ್ಮುಂದೆ ಸರ್ಕಾರಿ ಭೂಮಿ ಸರ್ಕಾರದ ವಶದಲ್ಲಿ ಇದೆಯೋ ಇಲ್ಲವೋ ಎನ್ನುವುದನ್ನು ಪರಿಶೀಲಿಸುವ ವ್ಯವಸ್ಥೆ ಜಾರಿ ಮಾಡಲಾಗುತ್ತದೆ. ಪೊಲೀಸ್ ಬೀಟ್ ರೀತಿ ಕಂದಾಯ ಇಲಾಖೆಯಿಂದ ಸರ್ಕಾರಿ ಭೂಮಿ ಸ್ವಾಧೀನದ ಖಚಿತತೆಗೆ ಬೀಟ್ ವ್ಯವಸ್ಥೆ ತರಲಾಗುತ್ತದೆ. ಐದು ಗ್ಯಾರಂಟಿಗೆ ಸರ್ಕಾರದ ಜಮೀನು ಮಾರಿ ಹಣವನ್ನು ಒದಗಿಸುವ ಅನಿವಾರ್ಯತೆ ನಮಗಿಲ್ಲ. ಬೇರೆ ಮೂಲದಿಂದ ಭರಿಸುವ ಸಾಮರ್ಥ್ಯ ಇದೆ. ಹಾಗಾಗಿ ಒತ್ತುವರಿಯಾಗಿರುವ ಜಮೀನನ್ನು ಒತ್ತುವರಿದಾರರಿಗೆ ಮಾರಾಟ ಮಾಡುವ ಚಿಂತನೆ ಇಲ್ಲ. ಸರ್ಕಾರದ ಭೂಮಿಯನ್ನು ಸರ್ಕಾರದ ಸ್ವಾಧೀನಕ್ಕೆ ಪಡೆಯಲಿದೆ ಎಂದರು.

ಬೆಂಗಳೂರಿಗೆ ಬರುವ ಬಹುತೇಕ ಕಂದಾಯ ಇಲಾಖೆ ಅಧಿಕಾರಿಗಳು ಜಾಗ ಉಳಿಸಲು ಬರುತ್ತಾರೋ, ಅಳಿಸಲು ಬರುತ್ತಾರೋ ಎನ್ನುವ ಆಂತಕವನ್ನು ಸದಸ್ಯರ ರೀತಿ ಎಜಿ ಕೂಡ ವ್ಯಕ್ತಪಡಿಸಿದ್ದಾರೆ. ಇರುವ ಕಾನೂನನ್ನು ಮೊದಲು ಬಳಸಬೇಕು, ಆದರೆ ತಪ್ಪು ಮಾಡಿದವರಿಗೆ ಸಹಾಯ ಮಾಡಲು ಕಾನೂನು ಬಳಸುತ್ತಿದ್ದೇವೆ, ಇದಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರಿ ಭೂಮಿ ಒತ್ತುವರಿ ತೆರವು ಅಭಿಯಾನಕ್ಕೆ ನಿರ್ಧರಿಸಿದ್ದೇವೆ. ಒತ್ತುವರಿ ತೆರವು ಅಭಿಯಾನ ಹಾಕಿಕೊಂಡು ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಅಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗುತ್ತದೆ. ತಿಂಗಳವಾರು ಇಷ್ಟು ಪ್ರಕರಣ ಇತ್ಯರ್ಥಪಡಿಸಬೇಕು ಎಂದು ಗುರಿ ನಿಗದಿಪಡಿಸಿ ಒತ್ತುವರಿ ತೆರವು ಮಾಡಲಾಗುತ್ತದೆ ಎಂದು ತಿಳಿಸಿದರು.

ಮುದ್ರಾಂಕ ಶುಲ್ಕದಲ್ಲಿ ಹೆಚ್ಚಳವಿಲ್ಲ, ಮಾರುಕಟ್ಟೆ ದರ ಪರಿಷ್ಕರಣೆ: ಈ ಬಾರಿ ಮುದ್ರಾಂಕ ಶುಲ್ಕ ಪರಿಷ್ಕರಣೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಆದರೆ, ಮಾರುಕಟ್ಟೆ ಬೆಲೆ ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಮುನಿರಾಜು ಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮೂಲಸೌಕರ್ಯಗಳ ಕೊರತೆ ಇದೆ ಎನ್ನುವುದು ನಿಜ. ಅದನ್ನು ಪರಿಹರಿಸಲು ಸರ್ಕಾರ ಸಿದ್ಧವಿದೆ. ಎಲ್ಲ ಉಪ ನೋಂದಾಣಾಧಿಕಾರಿಗಳ ಕಚೇರಿಯಲ್ಲಿ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಪಾಸ್​ಪೋರ್ಟ್ ಕಚೇರಿ ಮಾದರಿಯನ್ನಿರಿಸಿಕೊಂಡು ಅಭಿವೃದ್ಧಿ ಮಾಡುತ್ತೇವೆ. ಸ್ವಂತ ಕಟ್ಟಡ ಕಲ್ಪಿಸುವ ಚಿಂತನೆ ಇದೆ ಎಂದರು.

ಈ ಬಾರಿ ಮುದ್ರಾಂಕ ಶುಲ್ಕ ಪರಿಷ್ಕರಣೆ ಮಾಡಲ್ಲ. ಆದರೆ ಜಮೀನುಗಳ ಮಾರುಕಟ್ಟೆ ದರ ಪರಿಷ್ಕರಣೆ ಮಾಡುತ್ತೇವೆ. ಈ ಬಾರಿಯ ಮಾರುಕಟ್ಟೆ ದರ ಪರಿಷ್ಕರಣೆ ವೇಳೆ ಆದಷ್ಟು ವೈಜ್ಞಾನಿಕ ರೀತಿ ಮಾಡಲಿದ್ದೇವೆ. ಶೇ.100 ರಷ್ಟು ನ್ಯೂನತೆ ಸರಿಪಡಿಸಲಾಗಲ್ಲ. ಆದರೆ, ಇರುವುದರಲ್ಲೇ ವ್ಯವಸ್ಥಿತ ರೀತಿ ಕ್ರಮ ವಹಿಸಲಾಗುತ್ತದೆ. ಉಪ ನೋಂದಾಣಾಧಿಕಾರಿಗಳಿಗೆ ರೊಟೇಷನ್ ಪದ್ಧತಿ ಜಾರಿಗೆ ಚಿಂತನೆ ನಡೆಸಿದ್ದೇವೆ. ಯಾವುದೇ ರೀತಿಯ ಸಿಂಡಿಕೇಟ್​ಗೆ ಅವಕಾಶ ನೀಡದೆ ಸರ್ಕಾರವೇ ಇಲಾಖೆ ನಡೆಸಲು ಕ್ರಮ ವಹಿಸಲಿದೆ ಎಂದರು.

ಇದನ್ನೂ ಓದಿ: ಕೃಷ್ಣಾ ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ಈ ವರ್ಷ ಪರಿಹಾರ ನೀಡಲು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.