ETV Bharat / state

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ: ಮೊಲ್ಯಾಸಿಸ್ ಲಾಭಾಂಶ ಹಂಚಿಕೆ, ಪ್ರತಿ ಮೆಟ್ರಿಕ್ ಟನ್​ಗೆ 100 ರೂ. ಹೆಚ್ಚುವರಿ ಪಾವತಿ

author img

By

Published : Dec 30, 2022, 2:26 PM IST

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ - ಮೊಲ್ಯಾಸಿಸ್ ಮಾರಾಟದಿಂದ ಕಾರ್ಖಾನೆಗಳಿಗೆ ಬರುವ ಲಾಭಾಂಶ ರೈತರಿಗೆ ವರ್ಗಾವಣೆ - ಮಹತ್ವದ ಆದೇಶ ಹೊರಡಿಸಿದ ಸರ್ಕಾರ

Vidhana Soudha
ವಿಧಾನಸೌಧ

ಬೆಂಗಳೂರು: ಹೊಸ ವರ್ಷಕ್ಕೆ ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮೊಲ್ಯಾಸಿಸ್ ಮಾರಾಟದಿಂದ ಕಾರ್ಖಾನೆಗಳಿಗೆ ಬರುವ ಲಾಭಾಂಶವನ್ನು ರೈತರಿಗೆ ವರ್ಗಾಯಿಸಲು ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರ ಆದೇಶಿಸಿದೆ. ಜೊತೆಗೆ ಎಫ್ಆರ್‌ಪಿ ದರ ಹೊರತುಪಡಿಸಿ ಪ್ರತಿ ಮೆಟ್ರಿಕ್ ಟನ್‌ಗೆ 100 ರೂಪಾಯಿ ಹೆಚ್ಚು ಪಾವತಿಸಲು ತಿಳಿಸಿದೆ. ಈ ಮೂಲಕ ರಾಜ್ಯದ ಕಬ್ಬು ಬೆಳೆಗಾರರಿಗೆ 622 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಸಂದಾಯವಾಗಲಿದೆ.

ಇದಕ್ಕೂ ಮುನ್ನ ರಾಜ್ಯ ಸರ್ಕಾರ ಎಥೆನಾಲ್‌ನಿಂದ ಬರುವ ಲಾಭಾಂಶದಲ್ಲಿ ಪ್ರತಿ ಮೆಟ್ರಿಕ್ ಟನ್‌ಗೆ 50 ರೂ.ಗಳಂತೆ ಒಟ್ಟು 204 ಕೋಟಿ ರೂಪಾಯಿ ಪಾವತಿಸಲು ಆದೇಶಿಸಿತ್ತು. ಕಬ್ಬಿನ ಉಪ ಉತ್ಪನ್ನಗಳಾದ ಎಥೆನಾಲ್ ಮತ್ತು ಮೊಲ್ಯಾಸಿಸ್ ಮೂಲಕ ಒಟ್ಟಾರೆ ಈ ಸಾಲಿನಲ್ಲಿ ಎಫ್ಆರ್‌ಪಿ ದರ ಹೊರತುಪಡಿಸಿ ಕಬ್ಬು ಬೆಳೆಗಾರರಿಗೆ ಒಟ್ಟು 804 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಪಾವತಿಸಲು ಆದೇಶಿಸಲಾಗಿದೆ.

ಕೇಂದ್ರ ಸರ್ಕಾರ 17 - 08- 2022 ರಂದು 2022-23ನೇ ಸಾಲಿನ ಸಕ್ಕರೆ ಹಂಗಾಮಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (ಎಫ್ಆರ್​ಪಿ) ನಿಗದಿಗೊಳಿಸಿದ್ದು, ಶೇ.10.25 ರಷ್ಟು ಸಕ್ಕರೆ ಇಳುವರಿಗೆ ಪ್ರತಿ ಮೆಟ್ರಿಕ್​ ಟನ್ ಕಬ್ಬಿಗೆ ರೂ. 3,050 ದರ ನಿಗದಿಗೊಳಿಸಿದೆ.

ರಾಜ್ಯ ಸರ್ಕಾರ ಈವರೆಗೆ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಆದಾಯ ಹಂಚಿಕೆ ಮಾಡುವಾಗ ಸಕ್ಕರೆ, ಬಗ್ಯಾಸ್, ಮೊಲ್ಯಾಸಿಸ್ ಮತ್ತು ಪ್ರೆಸ್‌ ಮಡ್‌ಗಳಿಂದ ಬರುವ ಆದಾಯವನ್ನು ಮಾತ್ರ ಪರಿಗಣಿಸಲಾಗುತ್ತಿತ್ತು. ಸಕ್ಕರೆ ಉದ್ಯಮದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಈ ವರ್ಷದಲ್ಲಿ ಉಪ ಉತ್ಪನ್ನವಾದ ಎಥನಾಲ್‌ ಅನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಅದರಂತೆ ಪ್ರಥಮ ಕಂತಿನಲ್ಲಿ ಎಫ್.ಆರ್.ಪಿ ಜೊತೆಗೆ ಪ್ರತಿ ಮೆಟ್ರಿಕ್​ ಟನ್ ಒಂದಕ್ಕೆ 50 ರೂ. ಗಳನ್ನು ಹೆಚ್ಚುವರಿಯಾಗಿ ಪಾವತಿಸಲು ಎಥೆನಾಲ್ ಹೊಂದಿರುವ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಪರಿಷತ್​ನಲ್ಲಿ ಸದ್ದು ಮಾಡಿದ ಕಬ್ಬಿನ ತೂಕದಲ್ಲಿ ಮೋಸ ವಿಷಯ: ಚರ್ಚೆಗೆ ಅವಕಾಶ ನೀಡಿದ ಸಭಾಪತಿ

29 -12 - 2022 ರಂದು ಆದೇಶ ಹೊರಡಿಸಿ, ಮೊಲ್ಯಾಸಿಸ್ ಮಾರಾಟದಿಂದ ಸಕ್ಕರೆ ಕಾರ್ಖಾನೆಗಳಿಗೆ ಬರಬಹುದಾದ ಲಾಭಾಂಶವನ್ನು ಮತ್ತು ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚದ ಹೆಚ್ಚಳವನ್ನು ಪರಿಗಣನೆಗೆ ತೆಗೆದುಕೊಂಡು ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ರೈತರಿಗೆ ಮೊದಲ ಕಂತಿನಲ್ಲಿ ಕೇಂದ್ರ ಸರ್ಕಾರ 2022-23ನೇ ಸಾಲಿಗೆ ನಿಗದಿಪಡಿಸಿರುವ ಎಫ್ಆರ್​ಪಿ ಜೊತೆಗೆ ಪ್ರತಿ ಮೆಟ್ರಿಕ್​ ಟನ್ ಒಂದಕ್ಕೆ 100 ರೂ. ಗಳನ್ನು ಹೆಚ್ಚುವರಿಯಾಗಿ ಪಾವತಿಸಲು ಆದೇಶಿಸಲಾಗಿದೆ.

ಜೊತೆಗೆ, ಸರ್ಕಾರ ಎಫ್ ಆರ್ ಪಿ ದರದ ಮೇಲೆ ಕಬ್ಬು ಬೆಳೆಗಾರ ರೈತರಿಗೆ ಪ್ರತಿ ಮೆ.ಟನ್‌ ಗೆ ರೂ.150 ರಂತೆ ಹೆಚ್ಚುವರಿ ಕಬ್ಬಿನ ಬಿಲ್​ ಅನ್ನು ಪಾವತಿಸಲು ಕಾರ್ಖಾನೆಗಳಿಗೆ ಆದೇಶಿಸಿರುವುದರಿಂದ ರೈತರಿಗೆ ಒಟ್ಟಾರೆಯಾಗಿ ರೂ. 826.47 ಕೋಟಿಗಳಷ್ಟು ಹೆಚ್ಚುವರಿ ಕಬ್ಬಿನ ಬಿಲ್​ ದೊರೆಯಲಿದೆ.

ಇದನ್ನೂ ಓದಿ: ಶುಗರ್ ಮಾಫಿಯಾ ವಿರುದ್ಧ ಕಬ್ಬು ಬೆಳೆಗಾರರಿಂದ ಪೊರಕೆ ಚಳವಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.