ETV Bharat / state

ಇದು ಬಿಜೆಪಿ, ಮೋದಿ ಸರ್ಕಾರಗಳ ನಿಂದನಾ ಬಜೆಟ್ : ಯೋಜನೆಗಳನ್ನು ಎಟಿಎಂ ಮಾಡಿಕೊಳ್ಳುವ ಮುಂಗಡ ಪತ್ರ - ಹೆಚ್​ಡಿಕೆ ವಾಗ್ದಾಳಿ

author img

By

Published : Jul 7, 2023, 6:47 PM IST

ಮೂಲಭೂತವಾಗಿ ಜನರಿಗೆ ಏನು ಬೇಕು ಅದನ್ನ ನೀಡುವುದಕ್ಕೆ ಬಜೆಟ್​ ಪೂರ್ಣವಾಗಿ ಎಡವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಹೆಚ್​ಡಿಕೆ
ಮಾಜಿ ಸಿಎಂ ಹೆಚ್​ಡಿಕೆ

ಬೆಂಗಳೂರು: ಇದು ಕಟ್ ಆ್ಯಂಡ್ ಪೇಸ್ಟ್ ಬಜೆಟ್. ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರ, ಹಿಂದಿನ ಬಿಜೆಪಿ ಸರ್ಕಾರವನ್ನು ನಿಂದಿಸಲು ಮೀಸಲಾದ ಬಜೆಟ್. ರಾಜಕೀಯ ಹೇಳಿಕೆಗಳಿಗೆ ಸೀಮಿತವಾದ ಬಜೆಟ್ ಹಾಗೂ ಅನೇಕ ಎಟಿಎಂ ಗಳನ್ನು ತುಂಬಿಸಿಕೊಳ್ಳಲು ಮಾಡಲಾದ ಬಜೆಟ್ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತೀಕ್ಷ್ಣವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ಬಸವರಾಜ್ ಬೊಮ್ಮಾಯಿ ಅವರು ಲೇಖಾನುದಾನ ಪಡೆದಿದ್ದರು. ಅದರ ಮುಂದುವರೆದ ಭಾಗವೇ ಈ ಬಜೆಟ್. ನಮ್ಮ ಹಣಕಾಸು ಸಚಿವರು ದಾಖಲೆ ಸ್ಥಾಪನೆ ಮಾಡಿಕೊಳ್ಳಲು ಮಂಡಿಸಿದ ದಾಖಲೆಯ ಬಜೆಟ್ ಅಷ್ಟೇ ಇದು ಎಂದು ಕಟುವಾಗಿ ಟೀಕಿಸಿದರು.

ಇದನ್ನು ರಾಜ್ಯದ ಬಜೆಟ್ ಪುಸ್ತಕ ಅನ್ನುವುದಕ್ಕಿಂತ ಬಿಜೆಪಿಯ ನಿಂದನಾ ಪುಸ್ತಕ ಎಂದರೆ ಸರಿಯಾದೀತು. ಕೇಂದ್ರ ಸರ್ಕಾರ ಮತ್ತು ಹಿಂದಿನ ಸರ್ಕಾರ ಬಿಜೆಪಿಯ ಆಡಳಿತ ಬಂದ ನಂತರ ಆರ್ಥಿಕ ಶಿಸ್ತನ್ನ ಉಲ್ಲಂಘಿಸಿದ್ದಾರೆ. ಸ್ವೆಚ್ಛಾಚಾರದಿಂದ ಆರ್ಥಿಕ ಶಿಸ್ತು ಹಾಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ ದೂರದೃಷ್ಟಿ, ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಟ್ಟು ಹೇಳುವ ಬದಲು ಕೇವಲ ಅನ್ಯರನ್ನು ತೆಗಳಲು ಬಜೆಟ್ ಅನ್ನು ಬಳಕೆ ಮಾಡಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ನಮಗೆ ಅನ್ಯಾಯ ಮಾಡಿದೆ ಎಂದು ಬಹಳಷ್ಟು ಕಡೆ ಆರೋಪ ಮಾಡಿದ್ದಾರೆ ಎಂದು ಅವರು ಹೇಳಿದರು.

ಬಸವರಾಜ ಬೊಮ್ಮಾಯಿಯವರ ಆಡಳಿತಾವಧಿಯಲ್ಲಿ ನೀರಾವರಿ ಇಲಾಖೆಗೆ 1 ಲಕ್ಷ ಕೋಟಿ ಯೋಜನೆಗಳಿಗೆ ಅನುಮತಿ ಕೊಟ್ಟಿದ್ದಾರೆ. ಅದಕ್ಕೆ ಈಗ 40 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಸೇರ್ಪಡೆ ಆಗಿದೆ. 1 ಲಕ್ಷ 75 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ಹಣ ಇಡದೇ ಘೋಷಿಸಿದ್ದಾರೆ. 2013 -18 ರಿಂದ 15 ಲಕ್ಷ ಮನೆ ಕಟ್ಟಿದ್ದೀವಿ ಎಂದು ಹೇಳಿದ್ದಾರೆ. ಎಲ್ಲಿ ಕಟ್ಟಿದ್ದಾರೆ.? ಇನ್ನು 12 ಲಕ್ಷ ಮನೆ ಕಟ್ಟಲು 17,815 ಕೋಟಿ ರೂಪಾಯಿ ಬೇಕು ಎಂದು ಹೇಳಿದ್ದಾರೆ. ಅದನ್ನು ಎಲ್ಲಿಂದ ತರುತ್ತಾರೆ. ಈಗ ನೋಡಿದರೆ ಆರ್ಥಿಕ ಶಿಸ್ತನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಅಗತ್ಯ ಇತ್ತೇ? ಎಂದು ಅವರು ಪ್ರಶ್ನಿಸಿದರು.

85 ಸಾವಿರ ಕೋಟಿ ಸಾಲ ಎತ್ತುತ್ತಾರೆ: ಈ ಬಾರಿ 3 ಲಕ್ಷ 28 ಸಾವಿರ ಕೋಟಿ ಬಜೆಟ್​ನಲ್ಲಿ ಎರಡೂವರೆ ಲಕ್ಷ ಕೋಟಿ ರೆವಿನ್ಯೂ ಎಕ್ಸೆಂಪೆಂಡಿಚರ್, 27 ಸಾವಿರ ಕೋಟಿ ಸಾಲ ಮರುಪಾವತಿಗೆ ಇಟ್ಟುಕೊಂಡಿದ್ದಾರೆ. ಅದಾದ ಮೇಲೆ 85 ಸಾವಿರ ಕೋಟಿ ಸಾಲ ಎತ್ತುತ್ತಾರೆ. ಆ ಸಾಲಕ್ಕೆ ತಲೆ ಕೊಡುವುದು ಯಾರು? ಇವರು ನೋಡಿದರೆ ಹಿಂದಿನ ಸರಕಾರ ಆರ್ಥಿಕ ಶಿಸ್ತನ್ನ ಹಾಳು ಮಾಡಿದೆ ಎಂದು ಬಜೆಟ್ ಉದ್ದಕ್ಕೂ ಹೇಳಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಹಣಕ್ಕೆ ಕೊರತೆ ಇಲ್ಲ.ರಾಜ್ಯದ ತೆರಿಗೆ ಇಲಾಖೆಗಳ ಯಾವುದೇ ಶ್ರಮ ಇಲ್ಲದೆ ರಾಜ್ಯದ ಜನತೆ ಖಜಾನೆ ತುಂಬಿದ್ದಾರೆ. ಅದಕ್ಕಾಗಿ ಜನತೆಯನ್ನು ಅಭಿನಂದಿಸುತ್ತೇನೆ. ಕೋವಿಡ್ ಸಮಸ್ಯೆಯಲ್ಲೂ, ಜನ ಹಣ ತುಂಬಿಸಿಕೊಟ್ಟಿದ್ದಾರೆ. ಒಂದೇ ವರ್ಷಕ್ಕೆ ಜನರ ಮೇಲೆ 85 ಸಾವಿರ ಕೋಟಿ ಸಾಲದ ಹೊರೆ ಹೊರಿಸುತ್ತಿದ್ದಾರೆ. ಇಷ್ಟೊಂದು ಸಾಲ ಏಕೆ ಮಾಡ್ತೀದೀರಿ.? ಅದಕ್ಕೆ ಕಾರಣ ಕೊಡಿ ಎಂದು ಅವರು ಒತ್ತಾಯ ಮಾಡಿದರು.

ಈ ಬಜೆಟ್ ನಲ್ಲಿ ದುಡಿಯುವ ಜನರ ಕೈಗೆ ಸ್ವಾವಲಂಬಿಯಾಗಲು, ಅವರು ಬದುಕಲು ದೀರ್ಘಕಾಲೀನ ಯೋಜನೆ ಏನು? ಈ ಪ್ರಶ್ನೆ ಹಾಕಿಕೊಂಡರೆ ಉತ್ತರ ಶೂನ್ಯ ಎಂದ ಅವರು; ಇವರ ಯಾವ ಗ್ಯಾರಂಟಿಗೂ ನನ್ನ ತಕರಾರಿಲ್ಲ. ಇನ್ನೂ ಎರಡು ಜ್ಯೋತಿ ಕೊಡಿ. ನಮ್ಮದ್ದೇನೂ ತಕರಾರಿಲ್ಲ. ವರ್ಷಕ್ಕೆ 50 ರಿಂದ 60 ಸಾವಿರ ಕೋಟಿ ವೆಚ್ಚವಾಗಲಿದೆ. ಇದೊಂದೇ ಈ ಬಜೆಟ್​ನಲ್ಲಿ ಇರೋದು. ಆದರೆ ಯಾವುದಕ್ಕೂ ಈ ಬಜೆಟ್​ನಲ್ಲಿ ಹಣ ಇಟ್ಟಿಲ್ಲ. ಇದು ಕೇವಲ ಕೇಂದ್ರ ಸರ್ಕಾರ- ಹಿಂದಿನ ಸರ್ಕಾರವನ್ನ ದೂಷಣೆ ಮಾಡುವ ಬಜೆಟ್ ಅಷ್ಟೇ. ಇದರಲ್ಲಿ ಏನೂ ಇಲ್ಲ ಎಂದು ದೂರಿದರು.

ಅಬಕಾರಿ ಮೂಲಕ ಸುಲಿಗೆ: ನೀರಾವರಿ, ಕೃಷಿಗೆ, ಜನರ ಬದುಕು ಕಟ್ಟಲು, ಜನರು ಸ್ವಾಭಿಮಾನಿಗಳಾಗಿ, ಸ್ವಾವಲಂಬಿಗಳಾಗಿ ಜೀವನ ಮಾಡಲು ಈ ಬಜೆಟ್ ಕೊಟ್ಟ ದೂರದೃಷ್ಟಿ ಏನು? ಇದು ನನ್ನ ಪ್ರಶ್ನೆಯಾಗಿದೆ. ಆದಾಯ ಹೆಚ್ಚಿಸಲು ಅಬಕಾರಿ ಇಲಾಖೆ ಒಂದನ್ನೇ ನೆಚ್ಚಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ಈ ಬಜೆಟ್ ನಲ್ಲಿ ಅಬಕಾರಿ ಸುಂಕ ಹೆಚ್ಚಿಸಿದ್ದಾರೆ. ಅನ್ನಭಾಗ್ಯ ಅಕ್ಕಿಗೆ ಹಣ ಕೊಡಲು ಹೊರಟ್ಟಿದ್ದಾರಲ್ಲ ಇವರು, ಆ ದುಡ್ಡು ಇದಕ್ಕೆ ಹೋಗುತ್ತೆ. ಅನ್ನಭಾಗ್ಯಕ್ಕೆ ಕೊಡುವ ಹಣವನ್ನು ಅಬಕಾರಿ ಮೂಲಕ ಸುಲಿಗೆ ಮಾಡಿಕೊಳ್ಳಲು ಈ ಬಜೆಟ್ ಹುನ್ನಾರ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಅವರು ಆರೋಪ ಮಾಡಿದರು.

ಆರ್ಥಿಕ ಶಿಸ್ತು ಎಂದರೆ ಇದೇನಾ? : ಯಾರೋ ಒಬ್ಬರ ಬ್ಯಾಂಕ್ ಖಾತೆಗೆ ಹಣ ಹೋಗುತ್ತದೆ. ಆತ ಆ ಹಣವನ್ನು ಮನೆಗೆ ತೆಗೆದುಕೊಂಡು ಹೋಗ್ತಾನೊ.. ಇನ್ನೆಲ್ಲಿ ತಗೊಂಡು ಹೋಗ್ತಾನೊ ಗೊತ್ತಿಲ್ಲ. ಒಂದು ಕಡೆ ಇವರೇ ಬೆಳಗ್ಗೆ 7 ಗಂಟೆಗೆ ಮದ್ಯದ ಅಂಗಡಿ ತೆಗೆಸುತ್ತಾರೆ. ಬೆಳಗ್ಗೆ 7 ಗಂಟೆಗೆ ಒಂದು ರೇಟು, ರಾತ್ರಿ 10 ಗಂಟೆಗೆ ಒಂದು ರೇಟು ಇಟ್ಟಿದ್ದಾರಲ್ಲ? ಹೀಗೆ ಕಿತ್ತುಕೊಳ್ಳುವ ಹಣ ಎಲ್ಲಿಗೆ ಹೋಗುತ್ತದೆ. ಒಂದು ಕೈಲಿ ಕೊಟ್ಟು ಇನ್ನೊಂದು ಕೈಲಿ ಕಿತ್ತುಕೊಳ್ಳುವುದಾ?. ಆರ್ಥಿಕ ಶಿಸ್ತು ಎಂದರೆ ಇದೇನಾ? ಎಂದು ಅವರು ಪ್ರಶ್ನಿಸಿದರು.

ಒಂದು ಪತ್ರಿಕೆಯಲ್ಲಿ ಒಂದು ವರದಿ ಓದಿದೆ. ಆನ್​ಲೈನ್ ಗೇಮ್​ನಿಂದ ಒಬ್ಬ 65 ಲಕ್ಷ ರೂಪಾಯಿ ಕಳೆದುಕೊಂಡು ಅಷ್ಟೂ ಹಣವನ್ನು ಸಾಲ ಮಾಡಿಕೊಂಡಿದ್ದಾರೆ. ಈ ಅನ್ನಭಾಗ್ಯ ಹಣ ಇದಕ್ಕೆ ಹೋಗುತ್ತೊ ಏನೋ? ಯೋಜನೆ ಮಾಡುವುದು ದೊಡ್ಡದಲ್ಲ, ಅದನ್ನು ಹೇಗೆ ಕಾರ್ಯಗತ ಮಾಡುತ್ತೇವೆ ಎನ್ನುವುದು ಬಹಳ ಮುಖ್ಯ. ಅದಕ್ಕೊಂದು ನಿರ್ದಿಷ್ಟ ದೂರದೃಷ್ಟಿ ಬೇಡವೇ? ಎಂದು ಅವರು ತಿಳಿಸಿದರು.

ರಾಜ್ಯಕ್ಕೆ ನಷ್ಟ ತಪ್ಪಿದ್ದಲ್ಲ: ಈ ದಾಖಲೆಯ ಬಜೆಟ್ ಮಂಡನೆ ಮಾಡಿದವರ ಎಲ್ಲಾ ಬಜೆಟ್​ಗಳನ್ನು ಅಧ್ಯಯನ ಮಾಡುತ್ತಿದ್ದೇನೆ. 1995ರಿಂದ ಇವರು ಮಂಡಿಸಿದ ಎಲ್ಲಾ 13 ಬಜೆಟ್​ಗಳನ್ನು ಅಧ್ಯಯನ ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು. ಕೇಂದ್ರ ಸರ್ಕಾರ- ರಾಜ್ಯ ಸರ್ಕಾರಗಳ ನಡುವೆ ಸುಂದರ ಬಾಂಧವ್ಯ ಇರಬೇಕು. ಸಂಪನ್ಮೂಲ, ಅನುದಾನ, ಅಭಿವೃದ್ಧಿ ಇತ್ಯಾದಿ ವಿಷಯಗಳಲ್ಲಿ ತಿಕ್ಕಾಟ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಪ್ರತಿಬಾರಿ ಅವರನ್ನು ದೂಷಣೆ ಮಾಡಿದರೆ ರಾಜ್ಯಕ್ಕೆ ನಷ್ಟ ತಪ್ಪಿದ್ದಲ್ಲ. ಕೇಂದ್ರವನ್ನು ಇವರು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅದರಿಂದ ನಮಗೆ ಲಾಭ ಜಾಸ್ತಿ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.

ಬಜೆಟ್ ಅಂದರೆ ಅದಕ್ಕೊಂದು ಘನತೆ ಇರುತ್ತದೆ: ಅಂಥ ಸಾಮರಸ್ಯದ ಸಂದೇಶ ಸಾರದ ಇವರು, ಕರ್ನಾಟಕದ ಬಜೆಟ್ ಇಡೀ ದೇಶಕ್ಕೆ ಸಂದೇಶ ಕೊಡುವ ಬಜೆಟ್ ಅಂತ ಕೊಚ್ಚಿಕೊಳ್ಳುತ್ತಿದ್ದಾರೆ. ಬಜೆಟ್ ಬುಕ್ ಜತೆ ಕೇಂದ್ರದ ಜತೆ ಜಗಳಕ್ಕೆ ನಿಲ್ಲುವುದಾ ಸಂದೇಶ? ಬಜೆಟ್ ಅಂದರೆ ಅದಕ್ಕೊಂದು ಘನತೆ ಇರುತ್ತದೆ. ಅದನ್ನು ಇವರು ಹಾಳು ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.

ಬಸವರಾಜ ಬೊಮ್ಮಾಯಿ 77 ಸಾವಿರ ಕೋಟಿ ಸಾಲ ಮಾಡಿದ್ರು. ಇವರು 85 ಸಾವಿರ ಕೋಟಿಗೆ ತೆಗೆದುಕೊಂಡು ಹೋಗಿದ್ದಾರೆ. ಹಿಂದಿನ ಬಜೆಟ್​ನ ಯೋಜನೆ ಎಲ್ಲ ಲೆಕ್ಕಾಚಾರ ತೆಗೆದ್ರು 59 ಕೋಟಿ ವ್ಯತ್ಯಾಸ ಆಗಿರಬಹುದು ಅಷ್ಟೇ. ಆರೋಗ್ಯ, ಶಿಕ್ಷಣ ಕ್ಷೇತ್ರ ಪ್ರಮುಖವಾದುವು. ಅದಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕಿದೆ. ಅದನ್ನು ಜನರಿಗೆ ತಲುಪಲು ನಾವು ಎಡವುತ್ತಿದ್ದೇವೆ. ಮೂಲಭೂತವಾಗಿ ಜನರಿಗೆ ಏನು ಬೇಕು ಎನ್ನುವ ಬಗ್ಗೆ ಬಜೆಟ್ ಪೂರ್ಣವಾಗಿ ಎಡವಿದೆ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಇದನ್ನೂ ಓದಿ: ಸಿದ್ದರಾಮಯ್ಯ ಬಜೆಟ್: ರಾಜ್ಯ ಸಾಲದ ಕೂಪಕ್ಕೆ ಹೋಗುವ ಲಕ್ಷಣಗಳು ಎದ್ದು ಕಾಣಸ್ತಿವೆ ಎಂದ ಪ್ರಹ್ಲಾದ್ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.