ETV Bharat / state

ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬರುತ್ತಿದೆ: ಬಸವರಾಜ ಬೊಮ್ಮಾಯಿ

author img

By ETV Bharat Karnataka Team

Published : Sep 29, 2023, 4:44 PM IST

Updated : Sep 29, 2023, 5:09 PM IST

former-cm-basavaraja-bommai-reaction-on-state-government-over-cauvery-issue
ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬರುತ್ತಿದೆ: ಬಸವರಾಜ ಬೊಮ್ಮಾಯಿ

ರಾಜ್ಯ ಸರ್ಕಾರ ಪ್ರಾಮಾಣಿಕವಾಗಿ ಕಾನೂನು ಹೋರಾಟ ಮಾಡಿ, ಮುಂದಿನ ದಿನಗಳಲ್ಲಿ ರಾಜ್ಯದ ವಿರುದ್ಧ ಆದೇಶಗಳು ಬರದಂತೆ ನೋಡಿಕೊಳ್ಳಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬರುತ್ತಿದ್ದು, ಈಗ ಕಾನೂನು ತಜ್ಞರು, ರೈತರನ್ನು ಕರೆದು ಮಾತನಾಡಿಸುತ್ತಿದೆ. ಈ ಕೆಲಸ ಮೊದಲೇ ಮಾಡಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಸಿಎಂ, ಡಿಸಿಎಂ ನಡುವೆ ಹೊಂದಾಣಿಕೆಯಿಲ್ಲ, ಆದರೆ, ಗೃಹ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ನಡುವೆಯೂ ಹೊಂದಾಣಿಕೆ ಇಲ್ಲ ಎನ್ನುವುದು ಸಾಬೀತಾಗಿದೆ ಎಂದರು.

ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿದಂತೆ ಈಗ ಕಾನೂನು ಹೋರಾಟ ಮಾಡಲು ಹೊರಟಿದ್ದಾರೆ. ಕಾನೂನು ತಜ್ಞರ ಜೊತೆ ಮಾತನಾಡುವ ಕೆಲಸವನ್ನು ಮುಂಚೆಯೇ ಮಾಡಬೇಕಿತ್ತು. ಈಗಲಾದರೂ ಸರ್ಕಾರ ಪ್ರಾಮಾಣಿಕವಾಗಿ ಕಾನೂನು ಹೋರಾಟ ಮಾಡಿ, ಮುಂದಿನ ದಿನಗಳಲ್ಲಿ ರಾಜ್ಯದ ವಿರುದ್ಧ ಆದೇಶಗಳು ಬರದಂತೆ ನೋಡಿಕೊಳ್ಳಲಿ ಎಂದು ಸಲಹೆ ನೀಡಿದರು. ಈ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬರುತ್ತಿದೆ. ಕಾನೂನು ತಜ್ಞರು ರೈತರನ್ನು ಮುಂಚೆಯೇ ಮಾತನಾಡಬೇಕಿತ್ತು. ಗಡಿ, ನೆಲ ಜಲ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್​​ ಪರಿಣಿತರಿದ್ದಾರೆ‌ ಅವರನ್ನು‌ ಕರೆದು ಮಾತನಾಡಿಸಬೇಕಿತ್ತು. ಇನ್ನೂ ಅನೇಕ ಕಾನೂನು ತಜ್ಞರಿದ್ದಾರೆ. ಅವರೊಡನೆ ಮಾತನಾಡಬೇಕಿತ್ತು ಎಂದು ಹೇಳಿದರು.

ಬರ ಪರಿಹಾರ ನೀಡಲಿ: ರಾಜ್ಯದಲ್ಲಿ ಬರಗಾಲ ಇದ್ದಾಗ ಇಂತಹ ಸರ್ಕಾರ ಇರೋದು ದುರಂತ‌. ಉತ್ತರ ಕರ್ನಾಟಕದ ನೂರಾರು ತಾಲೂಕುಗಳಲ್ಲಿ ಬರ ಇದೆ. ಇದಕ್ಕೂ ಇವರು ಕೇಂದ್ರದ ಕಡೆಗೆ ಬೆರಳು ತೋರಿಸುತ್ತಾರೆ. ಪ್ರವಾಹ ಬಂದಾಗ ನಾವೇ ಪರಿಹಾರ ಕೊಟ್ಟಿದ್ದೇವೆ. ಕೇಂದ್ರದ ಪರಿಹಾರಕ್ಕಿಂತ ಎರಡು ಪಟ್ಟು ಹಣ ಕೊಟ್ಟಿದ್ದೇವೆ. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಯಾವ ರೀತಿ ವರ್ತಿಸುತ್ತಿದೆ ಅನ್ನುವುದರ ಮೇಲೆ ಸರ್ಕಾರದ ನಡೆ ಗೊತ್ತಾಗುತ್ತಿದೆ ಎಂದು ಟೀಕಿಸಿದರು.

ಇನ್ನು ಕೋಲಾರದಲ್ಲಿ ಈದ್​ ಮಿಲಾದ್ ಸಂದರ್ಭದಲ್ಲಿ ಖಡ್ಗ ಹಿಡಿದು ಮೆರವಣಿಗೆ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಆಡಳಿತ ಹೇಗಿರುತ್ತದೆಯೋ ಹಾಗೆ ಇಂಥವರ ಆಟಗಳು ನಡೆಯುತ್ತವೆ. ಈಗ ಗೂಂಡಾಗಳಿಗೆ, ಗಲಾಟೆ ಮಾಡುವವರಿಗೆ ಯಾವುದೇ ಭಯ ಇಲ್ಲ. ಹೀಗಾಗಿ ಮುಕ್ತವಾಗಿ ಈ ರೀತಿ ತಿರುಗಾಡುವಂತಾಗಿದೆ ಎಂದು ಹೇಳಿದರು.

ಸಂಕಷ್ಟ ಕಾಲದಲ್ಲಿ ಕಾವೇರಿ ನೀರು ಹರಿಸುವುದಕ್ಕೆ ಹೊಸ ಸೂತ್ರ: ಮತ್ತೊಂದೆಡೆ, ಡಿಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿ, ಮಳೆ ಇಲ್ಲದ ಸಂಕಷ್ಟದ ಕಾಲದಲ್ಲಿ ನೀರು ಹರಿಸುವ ಹೊಸ ಸೂತ್ರ ರೂಪಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಗೆ ಆಗ್ರಹ ಮಾಡಲಾಗುವುದು. ಇಂದು ನಡೆಯುವ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆಯ ನಂತರ ಸಂಕಷ್ಟ ಸೂತ್ರದ ರೂಪುರೇಷೆ ಹೇಗಿರಬೇಕು ಎಂದು ತೀರ್ಮಾನ ಮಾಡಲಾಗುತ್ತದೆ. ಸಂಕಷ್ಟ ಸೂತ್ರ ಆಗ್ರಹ ಮಾಡುವ ಮೊದಲು ನಮಗೆ ಅದರ ಬಗ್ಗೆ ಸ್ಪಷ್ಟತೆ ಇರಬೇಕು. ಅದಕ್ಕೆ ನಾವು ಮೊದಲು ಒಂದು ಸೂತ್ರದ ಬಗ್ಗೆ ಚರ್ಚೆ ಮಾಡುತ್ತೇವೆ. ಅದಕ್ಕಾಗಿ ಇಂದು ಸಂಜೆ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಸಿಎಂ ಭೇಟಿ ಮಾಡಿದ ಕುರುಬೂರು, ಮುಖ್ಯಮಂತ್ರಿ ಚಂದ್ರು ನೇತೃತ್ವದ ನಿಯೋಗ: ಸಂಜೆ ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಎಂದ ಸಿದ್ದರಾಮಯ್ಯ

Last Updated :Sep 29, 2023, 5:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.