ETV Bharat / state

ಸೀಮಂತ ಕಾರ್ಯಕ್ರಮದಲ್ಲಿ ಹೊಡೆದಾಟ: ಮೊದಲ ಪತ್ನಿ - ಪತಿಯ ತಂದೆಯಿಂದ ದೂರು, ಪ್ರತಿ ದೂರು

author img

By

Published : Feb 9, 2023, 10:54 PM IST

Updated : Feb 10, 2023, 6:25 AM IST

fight-in-baby-shower-program-in-bengaluru
ಸೀಮಂತ ಕಾರ್ಯಕ್ರಮದಲ್ಲಿ ಗಲಾಟೆ: ಪರಸ್ಪರ ಬಡಿದಾಡಿಕೊಂಡ ಪತಿ, ಪತ್ನಿ

ಬೆಂಗಳೂರಿನಲ್ಲಿ ಎರಡನೇ ಪತ್ನಿಯ ಸೀಮಂತ ಕಾರ್ಯಕ್ರಮದ ಸಂದರ್ಭದಲ್ಲೇ ಮೊದಲ ಪತ್ನಿಯು ಮನೆಗೆ ಬಂದು ಗಲಾಟೆ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರು: ಎರಡನೇ ಪತ್ನಿಯ ಸೀಮಂತದ ಸಂದರ್ಭದಲ್ಲೇ ಮೊದಲ ಪತ್ನಿಯು ಮನೆಗೆ ಬಂದು ಗಲಾಟೆ ಮಾಡಿದ್ದಲ್ಲದೆ, ಸಿನಿಮೀಯ ಶೈಲಿಯಲ್ಲಿ ಮಾರಾಮಾರಿ ನಡೆದಿರುವ ಘಟನೆ ನಗರದ ಚಂದ್ರಾ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ. ತನ್ನ ಪತಿ ತನಗೆ ಮೋಸ ಮಾಡಿ ಬೇರೆ ಮಹಿಳೆಯೊಂದಿಗೆ ಮದುವೆ ಮಾಡಿಕೊಂದ್ದಾನೆ. ಅಲ್ಲದೆ, ಸೀಮಂತ ಕಾರ್ಯವನ್ನೂ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಾಗಲೂರು ಮೂಲದ ಮಹಿಳೆ (ಮೊದಲ ಪತ್ನಿ) ಚಂದ್ರಾಲೇಔಟ್​​ನಲ್ಲಿ ತನ್ನ ಗಂಡನ ಎರಡನೇ ಹೆಂಡತಿ ಮನೆಯಲ್ಲಿ ಮಹಿಳಾ ಸಂಘಟನೆಯೊಂದಿಗೆ ತೆರಳಿ ಗಲಾಟೆ ಮಾಡಿದ್ದಾಳೆ.

ಚಂದ್ರಾಲೇಔಟ್​​ನಲ್ಲಿ ಎರಡನೇ ಹೆಂಡತಿ ಮನೆಯಲ್ಲಿ ವಾಸವಾಗಿದ್ದ ಎಂದು ಹೇಳಲಾಗುತ್ತಿರುವ ತೇಜಸ್ ಎಂಬುವರ ವಿರುದ್ಧ ಮೊದಲ ಪತ್ನಿ ಆರೋಪ ಹೊರಿಸಿದ್ದು, ಸ್ಥಳಕ್ಕೆ ತೆರಳಿ ಗಲಾಟೆ ಮಾಡಿದ್ದಾರೆ. ಮಹಿಳೆ ಹಾಗೂ ತೇಜಸ್ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ನೋಡ ನೋಡುತ್ತಿದ್ದಂತೆ ದೊಡ್ಡ ಹೈಡ್ರಾಮ ನಡೆದಿದ್ದು, ಪರಸ್ಪರ ಬಡಿದಾಡಿಕೊಂಡಿದ್ದಾರೆ. ಸ್ಥಳೀಯರು ಗಲಾಟೆ ಬಗ್ಗೆ ಹೊಯ್ಸಳ ಪೊಲೀಸರಿಗೆ ಕರೆ‌ ಮಾಡಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಗಲಾಟೆ ಬಿಡಿಸಿದ್ದಾರೆ. ಆಗ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ್ದ ಪೊಲೀಸರು, ಸದ್ಯ ಯಾರೂ ದೂರು ನೀಡಿಲ್ಲ. ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು.

ಗಲಾಟೆಗೆ ಕಾರಣ?: ಮಹಿಳೆ (ಮೊದಲ ಪತ್ನಿ) ಹಾಗೂ ತೇಜಸ್​​ಗೆ ಕಳೆದ ಒಂದೂವರೆ ವರ್ಷದ ಹಿಂದೆ ಮದುವೆಯಾಗಿತ್ತು. ಆರಂಭದಲ್ಲಿ ಅನ್ಯೋನ್ಯವಾಗಿದ್ದ ದಂಪತಿ ನಡುವೆ ಕ್ರಮೇಣ ವೈಮನಸ್ಸು ಮೂಡಿ, ಕೌಟುಂಬಿಕ ಕಲಹಕ್ಕೆ ಕಾರಣವಾಗಿತ್ತು. ಒಂದು ವರ್ಷದಿಂದಲೂ ಪರಸ್ಪರ ದೂರವಾಗಿದ್ದರು. ಈ ನಡುವೆ ತೇಜಸ್​ ಮತ್ತೊಬ್ಬಳೊಂದಿಗೆ ಮದುವೆ ಆಗಿದ್ದಾನೆ ಎನ್ನಲಾಗಿದೆ. ಗುರುವಾರ ಮಧ್ಯಾಹ್ನ ಎರಡನೇ ಹೆಂಡತಿಯ ಸೀಮಂತ ಕಾರ್ಯಕ್ರಮ ನಡೆಯುತ್ತಿದೆ ಎಂದು ಮಾಹಿತಿ ಅರಿತ ಮೊದಲ ಪತ್ನಿ ನೇರವಾಗಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾಳೆ. ಇದಕ್ಕೆ‌ ತಗಾದೆ ತೆಗೆದ ತೇಜಸ್ ಮನೆಯವರು ಸೀಮಂತ ಕಾರ್ಯಕ್ರಮ ನಡೆಯುತ್ತಿಲ್ಲ. ಬದಲಾಗಿ ತಂಗಿ ಮಗಳ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿತ್ತು ಎಂದು ಸಬೂಬು ಹೇಳಿದ್ದಾರೆ‌‌. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಾಗ್ವಾದ ನಡೆದು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮಹಿಳೆ ಹೇಳುವುದೇನು?: ಈ ಬಗ್ಗೆ ಮಾಧ್ಯಮದವರೆದುರು ಮಾತನಾಡಿರುವ ಮೊದಲ ಪತ್ನಿ, ''ನಾವಿಬ್ಬರೂ ಒಂದು ವರ್ಷದಿಂದ ದೂರವಿದ್ದೇವೆ. ಮದುವೆಯಾದ ಕೆಲ ದಿನಗಳಲ್ಲೇ ಪತಿಯು ಬೇರೆ ಹುಡುಗಿಯೊಂದಿಗೆ ಮಾತನಾಡುವುದು ಅರಿವಿಗೆ ಬಂದಿತು. ಆದರೆ ಇದನ್ನು ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆಯೇ ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಆರೋಪ ಹೊರಿಸಿದರು. ಅಲ್ಲದೆ, ನನ್ನ ಮೊಬೈಲ್​ ತೆಗೆದುಕೊಂಡು ಬೇರೆ ವ್ಯಕ್ತಿಗಳೊಂದಿಗೆ ಅವರೇ ಫೋನ್​ನಲ್ಲಿ ಮಾತನಾಡುತ್ತ, ತಾವೇ ಮೆಸೇಜ್​ ಕಳಿಸಿದ್ದಲ್ಲದೆ, ಮಿಸ್​ ಕಾಲ್​ ಮಾಡುವ ಮೂಲಕ ಆ ಕಡೆಯಿಂದ ಕರೆಗಳು ಬರುವಂತೆ ಮಾಡಿದರು. ಇದರ ಮೂಲಕ ನನಗೆ ಬೇರೆ ವ್ಯಕ್ತಿಗಳೊಂದಿಗೆ ಸಂಬಂಧ ಇದೆ ಎಂದು ತನ್ನ ಮನೆಯವರಿಗೆ ಪತಿ ತೇಜಸ್ ನನ್ನ ಮೊಬೈಲ್​​ ತೋರಿಸಿ ನಂಬಿಸುವ ಮೂಲಕ ಕಿರುಕುಳ ನೀಡಿದ್ದಾರೆ. ಬಳಿಕ ನಾನು ಪತಿಯಿಂದ ದೂರವಿದ್ದೆ. ಅದಾದ ಕೆಲದಿನಗಳ ನಂತರ ಪೊಲೀಸರೆದುರು ಮುಚ್ಚಳಿಕೆ ಬರೆದು ಕೊಟ್ಟ ಹಿನ್ನೆಲೆಯಲ್ಲಿ ಮತ್ತೆ ನಾನು ಪತಿಯ ಮನೆಗೆ ಹೋಗಿದ್ದೆ. ಆದರೆ ಪತಿಯ ಮನೆಯವರು ನಮಗೆ ಅವಮಾನ ಮಾಡಿದರು. ಮನೆಗೆ ಸೇರಿಸಿಕೊಳ್ಳಲಿಲ್ಲ'' ಎಂದು ಮಹಿಳೆ ಆರೋಪಿಸಿದ್ದಾರೆ.

ಪತಿ ಪ್ರತಿಕ್ರಿಯೆ: ಘಟನೆ ಬಗ್ಗೆ ತೇಜಸ್ ಪ್ರತಿಕ್ರಿಯಿಸಿದ್ದು, ''ಮಹಿಳೆ ಹೇಳುವುದು ಸುಳ್ಳು, ಆಕೆಗೆ ಬಾಯ್ ಫ್ರೆಂಡ್ ಇದ್ದಾನೆ. ನಾನು ಹೆಂಡತಿ ಬೇಕು ಅಂತ ಕೋರ್ಟ್​ಗೆ ಹೋಗಿದ್ದೆ. ಆದರೆ, ನ್ಯಾಯಾಲಯದಲ್ಲಿ 40 ಲಕ್ಷ ಪರಿಹಾರ ಕೇಳಿದ್ದಳು‌. ಅಷ್ಟು ಕೊಡಲು ಸಾಧ್ಯವಿಲ್ಲ ಎಂದಿದ್ದೆವು. ಆದರೆ, ತಂಗಿಯ ಮಗಳ ಬರ್ತ್ ಡೇ ಕಾರ್ಯಕ್ರಮ ಮಾಡುವ ವೇಳೆಯೇ ಏಕಾಏಕಿ ಮಹಿಳೆಯರು ರೌಡಿಪಟಾಲಂ ಜೊತೆ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ತನ್ನ ಪತ್ನಿ ನನ್ನ ಮೇಲೆ ಮಾಡುತ್ತಿರುವ ಆರೋಪ ಸುಳ್ಳು'' ಎಂದು ಹೇಳಿದ್ದಾರೆ.

ಗಲಾಟೆ ಬಳಿಕ ಚಂದ್ರಾಲೇಔಟ್ ಪೊಲೀಸ್​ ಠಾಣೆಗೆ ಮೊದಲ ಪತ್ನಿ ಮತ್ತು ತೇಜಸ್ ತಂದೆ ಕೃಷ್ಣಪ್ಪ ಅವರು ದೂರು, ಪ್ರತಿದೂರು ನೀಡಿದ್ದಾರೆ.

ಇದನ್ನೂ ಓದಿ: ಗಂಗಾವತಿ: ಹೊಲಕ್ಕೆ ಆಕಳು ನುಗ್ಗಿತೆಂದು ದಲಿತ ಮಹಿಳೆಗೆ ಹಲ್ಲೆ, ಆರೋಪಿ ಸೆರೆ

Last Updated :Feb 10, 2023, 6:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.