ಬಿಡಿಎಫ್‌ಎ ಸೂಪರ್‌ ಡಿವಿಜನ್‌ ಚಾಂಪಿಯನ್‌ಶಿಪ್‌: ಎಫ್‌ಸಿ ಬೆಂಗಳೂರು ಯುನೈಟೆಡ್‌ಗೆ ದಾಖಲೆ ಜಯ

author img

By

Published : Sep 22, 2022, 9:42 PM IST

fc-bangalore-united-win-against-young-challengers

5 -0 ಅಂತರದಲ್ಲಿ ಯಂಗ್‌ ಚಾಲೆಂಜರ್ಸ್‌ ಅನ್ನು ಬಗ್ಗುಬಡಿದ ಹಾಲಿ ಚಾಂಪಿಯನ್‌ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ.

ಬೆಂಗಳೂರು : ಯಂಗ್‌ ಚಾಲೆಂಜರ್ಸ್‌ ವಿರುದ್ಧ 5-0 ಅಂತರದಲ್ಲಿ ಜಯಗಳಿಸಿದ ಹಾಲಿ ಚಾಂಪಿಯನ್‌ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡ ಬಿಡಿಎಫ್‌ಎ ಸೂಪರ್‌ ಡಿವಿಜನ್‌ ಚಾಂಪಿಯನ್‌ಷಿಪ್‌ನಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ.

ಬೆಂಗಳೂರು ಫುಟ್ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡ ಆರಂಭದಿಂದಲೂ ಎದುರಾಳಿ ತಂಡದ ಮೇಲೆ ಪ್ರಾಬಲ್ಯ ಸಾಧಿಸಿತು. ತಂಡದ ಪರ ಇರ್ಫಾನ್‌ ಯರ್ವಾಡ್‌ (5, 25ನೇ ನಿಮಿಷ), ಜೈರೋ ರೋಡ್ರಿಗಸ್‌ (7ನೇ ನಿಮಿಷ), ಚೆಸ್ಟರ್‌ಪೌಲ್‌ ಲಿಂಗ್ಡೋ (66ನೇ ನಿಮಿಷ) ಮತ್ತು ಶಾಜಾನ್‌ ಫ್ರಾಕ್ಲಿನ್‌ (77ನೇ ನಿಮಿಷ) ಗೋಲು ಗಳಿಸಿ ಜಯದ ರೂವಾರಿ ಎನಿಸಿದರು.

ಈ ಹಿಂದಿನ ಪಂದ್ಯಗಳ ರೀತಿಯಲ್ಲೇ ಎಫ್‌ಸಿಬಿಯು ಆರಂಭದಿಂದಲೇ ಅವಕಾಶಗಳನ್ನು ಸೃಷ್ಟಿಮಾಡಿ, ಮೊದಲ ಐದು ನಿಮಿಷಗಳಲ್ಲಿ ಗೋಲು ಗಳಿಸಿತು.ಅಯ್ನಾಮ್‌ ಜೆರ್ವಾ ಮೂಲೆಯಿಂದ ಚೆಂಡನ್ನು ಇರ್ಫಾನ್‌ ಕಡೆಗೆ ನೀಡಿದರು. ಇರ್ಫಾನ್‌ ಚೆಂಡನ್ನು ಹೆಡರ್‌ ಮೂಲಕ ಗೋಲು ಗಳಿಸಿ ಚಾಂಪಿಯನ್‌ ತಂಡಕ್ಕೆ ಮೊದಲ ಗೋಲು ತಂದಿತ್ತರು. ಎರಡು ನಿಮಿಷದಲ್ಲೇ ಜೈರೋ ಡೋಡ್ರಿಗಸ್‌ 7ನೇ ನಿಮಿಷದಲ್ಲಿ ತಂಡದ ಪರ ಎರಡನೇ ಗೋಲು ಗಳಿಸಿದರು. ಇದರೊಂದಿಗೆ ಎಫ್‌ಸಿ ಬೆಂಗಳೂರು ಯುನೈಟೆಡ್‌ 2-0 ಅಂತರದಲ್ಲಿ ಮುನ್ನಡೆ ಸಾಧಿಸಿತು.

ಎಫ್‌ಸಿಬಿಯು ತಂಡದ ಪ್ರಾಬಲ್ಯ: ಎಫ್‌ಸಿಬಿಯು ತನ್ನ ಪ್ರಾಬಲ್ಯ ಮುಂದುವರೆಸುತ್ತಾ, 25ನೇ ನಿಮಿಷದಲ್ಲಿ ಶಾಜಾನ್‌ ಫ್ರಾಂಕ್ಲೀನ್‌ ನೀಡಿದ ಪಾಸ್‌ ಮೂಲಕ ಇರ್ಫಾನ್‌ ಯರ್ವಾಡ್‌ ತನ್ನ ಎರಡನೇ ಗೋಲು ಗಳಿಸಿ ತಂಡಕ್ಕೆ 3-0 ಮುನ್ನಡೆ ನೀಡಿದರು.

77ನೇ ನಿಮಿಷದಲ್ಲಿ ಫ್ರಾಕ್ಲಿನ್‌ ಗೋಲು - ಅಂತರ 5-0 : ದ್ವಿತಿಯಾರ್ಧದಲ್ಲೂ ಎಫ್‌ಸಿಬಿಯು ತನ್ನ ಪ್ರಭುತ್ವನ್ನು ಕಾಯ್ದುಕೊಂಡಿತು. ಎಯ್ನಾಮ್‌ಗೆ ಆರಂಭದಲ್ಲೇ ಗೋಲು ಗಳಿಸುವ ಅವಕಾಶ ಸಿಕ್ಕಿತು. ಆದರೆ ಯಂಗ್‌ ಚಾಲೆಂಜರ್‌ ಗೋಲ್‌ಕೀಪರ್‌ ಅದಕ್ಕೆ ಅವಕಾಶ ನೀಡಲಿಲ್ಲ. 59ನೇ ನಿಮಿಷದಲ್ಲಿ ಜೈರೋಗೆ ಮತ್ತೊಂದು ಗೋಲು ಗಳಿಸುವ ಅವಕಾಶವಿತ್ತು. ಆದರೆ, ಚೆಂಡು ಗೋಲ್‌ಬಾಕ್ಸ್​ ನ ಮೇಲಿಂದ ಸಾಗಿತು.

66ನೇ ನಿಮಿಷದಲ್ಲಿ ಸೆಲ್ವಿನ್‌ ಮಿರಾಂಡ್​ ಗೋಲ್‌ಬಾಕ್ಸ್‌ಗೆ ಗುರಿಯಿಟ್ಟು ತುಳಿದ ಚೆಂಡು ಗೋಲ್‌ ಕೀಪರ್‌ ಕೈಗೆ ತಾಗಿ ಹೊರಕ್ಕೆ ಚಿಮ್ಮತು.ಲಿಂಗ್ಡೋ ಯಾವುದೇ ಪ್ರಮಾದವೆಸಗದೇ ತಂಡದ ಪರ ನಾಲ್ಕನೇ ಗೋಲು ಗಳಿಸುವ ಮೂಲಕ ಎಫ್‌ಸಿ ಬೆಂಗಳೂರು ಯುನೈಟೆಡ್‌ 4-0 ಅಂತರ ಕಾಯ್ದುಕೊಳ್ಳುವಂತೆ ಮಾಡಿದರು. 77ನೇ ನಿಮಿಷದಲ್ಲಿ ಫ್ರಾಕ್ಲಿನ್‌ ವೈಯಕ್ತಿಕ ಮೊದಲ ಗೋಲು ಗಳಿಸಿ ತಂಡಕ್ಕೆ 5-0 ಮುನ್ನಡೆ ನೀಡಿದರು.

ಇದನ್ನೂ ಓದಿ : ಭಾರತ - ಆಸ್ಟ್ರೇಲಿಯಾ ಟಿ20 ಪಂದ್ಯ: ಹೈದರಾಬಾದ್​ನಲ್ಲಿ ಟಿಕೆಟ್​ಗಾಗಿ​ ಕಾಲ್ತುಳಿತ, 7 ಗಂಟೆ ನಂತರ ಆನ್​ಲೈನ್​ನಲ್ಲಿ ವಿತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.