ETV Bharat / state

ಕೋಲಾರದಿಂದಲೇ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಅಭಿಮಾನಿಗಳ ಒತ್ತಡ: ನಿವಾಸಕ್ಕೆ ಮುತ್ತಿಗೆ ಯತ್ನ

author img

By

Published : Mar 21, 2023, 12:05 PM IST

Updated : Mar 21, 2023, 1:44 PM IST

ಕೋಲಾರ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸುವಂತೆ ಸಿದ್ದರಾಮಯ್ಯಗೆ ಅಭಿಮಾನಿಗಳಿಂದ ತೀವ್ರ ಒತ್ತಡ.

Fans tried to besiege Siddaramaiah residence
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಅಭಿಮಾನಿಗಳು

ಸಿದ್ದರಾಮಯ್ಯನವರ ಸರ್ಕಾರಿ ನಿವಾಸಕ್ಕೆ ಆಗಮಿಸಿದ ನೂರಾರು ಅಭಿಮಾನಿಗಳು, ಹೊರಭಾಗದ ಗೇಟ್ ಮುಂದೆ ಕುಳಿತು ಧರಣಿ ನಡೆಸಿದರು.

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಒತ್ತಡ ಹೇರುತ್ತಿದ್ದಾರೆ. ಇಂದು ನಗರದ ಶಿವಾನಂದ ವೃತ್ತದ ಸಮೀಪವಿರುವ ಸಿದ್ದರಾಮಯ್ಯನವರ ಸರ್ಕಾರಿ ನಿವಾಸಕ್ಕೆ ಆಗಮಿಸಿದ ನೂರಾರು ಅಭಿಮಾನಿಗಳು, ಹೊರಭಾಗದ ಗೇಟ್ ಮುಂದೆ ಕುಳಿತು ಧರಣಿ ನಡೆಸಿದರು.

"ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿಯಬಾರದು. ಇದು ಜಿಲ್ಲೆಯ ಅಭಿಮಾನಿಗಳ ಕೋರಿಕೆ. ಕೋಲಾರವನ್ನೇ ತಮ್ಮ ಆಯ್ಕೆಯಾಗಿ ಉಳಿಸಿಕೊಳ್ಳಬೇಕು" ಎಂದು ಆಗ್ರಹಿಸಿದರು.

ಪುಟ್ಟಣ್ಣ ವಿರೋಧಿಗಳ ಪ್ರತಿಭಟನೆ: ಇನ್ನೊಂದೆಡೆ, ಇತ್ತೀಚೆಗಷ್ಟೇ ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿ ರಾಜಾಜಿನಗರದಿಂದ ಅಭ್ಯರ್ಥಿಯಾಗಲು ತೀರ್ಮಾನಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟಣ್ಣರಿಗೆ ತಮ್ಮ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ನೀಡಬಾರದು ಎಂದು ರಾಜಾಜಿನಗರದ ಕಾರ್ಯಕರ್ತರು ಪ್ರತಿಭಟನೆ ಮೂಲಕ ಸಿದ್ದರಾಮಯ್ಯನವರಿಗೆ ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ನಿವಾಸಕ್ಕೆ ರಾಜಾಜಿನಗರ ಕಾಂಗ್ರೆಸ್ ಕಾರ್ಯಕರ್ತರ ದಂಡು ಆಗಮಿಸಿ ಪ್ರತಿಭಟಿಸಿದ್ದು, ಪುಟ್ಟಣ್ಣನಿಗೆ ಟಿಕೆಟ್ ಕೊಡುವ ನಡೆಯನ್ನು ವಿರೋಧಿಸಿದರು. ಇದೇ ವೇಳೆ, ಟಿಕೆಟ್ ಆಕಾಂಕ್ಷಿಗಳಾದ ಪುಟ್ಟರಾಜು, ಎಸ್‌.ಮನೋಹರ್ ನೇತೃತ್ವದಲ್ಲಿ ಆಗಮಿಸಿದ ಕಾರ್ಯಕರ್ತರು ಮೂಲ ಕಾಂಗ್ರೆಸ್ಸಿ​ಗರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿರುವ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಆಗಮಿಸಲು ಕೋಲಾರ ಹಾಗೂ ರಾಜಾಜಿನಗರ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆಯಿಂದಾಗಿ ಸಿದ್ದರಾಮಯ್ಯಗೆ ನಿವಾಸದಿಂದ ಹೊರಬರಲು ತೊಡಕಾಯಿತು. ಈ ಹಿಂದೆಯೂ ಸಿದ್ದರಾಮಯ್ಯ ಸ್ಪರ್ಧೆಗೆ ಒತ್ತಾಯಿಸಿ ಮೈಸೂರಿನ ವರುಣ ಹಾಗೂ ಬಾಗಲಕೋಟೆಯ ಬಾದಾಮಿ ಕಾಂಗ್ರೆಸ್ ಕಾರ್ಯಕರ್ತರು ಶಿವಾನಂದ ವ್ರತ್ತ ಸಮೀಪವಿರುವ ಸರ್ಕಾರಿ ನಿವಾಸಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿ ಒತ್ತಡ ಹೇರಿದ್ದರು. ಇದೀಗ ಕೋಲಾರದಿಂದ ಸ್ಪರ್ಧಿಸುವ ಆಸಕ್ತಿ ಕಳೆದುಕೊಂಡಿರುವ ಬೆನ್ನೆಲ್ಲೇ ಆ ಭಾಗದ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮನವೊಲಿಕೆಗೆ ಸುದರ್ಶನ್ ಯತ್ನ: ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ಕೋಲಾರ ಭಾಗದ ಕಾಂಗ್ರೆಸ್ ನಾಯಕ ಆರ್.ವಿ.ಸುದರ್ಶನ್ ಅವರು ಧರಣಿ ಕೈಗೊಂಡಿರುವ ಅಭಿಮಾನಿಗಳ ಮನವೊಲಿಸಲು ಯತ್ನಿಸಿದರು. ಸಿದ್ದರಾಮಯ್ಯ ಕ್ಷೇತ್ರ ಘೋಷಣೆ ಮಾಡುವವರೆಗೆ ಮನೆ ಬಿಟ್ಟು ಹೋಗುವುದಿಲ್ಲವೆಂದು ಪಟ್ಟು ಹಿಡಿದಿರುವ ಬೆಂಬಲಿಗರು, ಧರಣಿ ಮುಂದುವರಿಸಿದ್ದಾರೆ. ಈ ಸಂದರ್ಭದಲ್ಲಿ ವಿ.ಆರ್.ಸುದರ್ಶನ್ ಮಾತನಾಡಿ, ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಸಿದ್ದರಾಮಯ್ಯ ಕೋಲಾರದಲ್ಲಿ ಸ್ವರ್ಧೆ ಮಾಡುವುದು ಅಷ್ಟೇ ಸತ್ಯ ಎಂದು ಹೇಳಿದರು.

ರಮೇಶ್ ಕುಮಾರ್ ಬೆಂಬಲಿಗರ ಹೋರಾಟ: ರಮೇಶ್ ಕುಮಾರ್ ಬಣ್ಣದಿಂದ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಲಾಯಿತು. ಕೆ.ಹೆಚ್.ಮುನಿಯಪ್ಪ ಬಣದಿಂದ ಯಾರೂ ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ. ಪೋಸ್ಟರ್​ ಹಿಡಿದುಕೊಂಡು ಸಿದ್ದರಾಮಯ್ಯ ಅಭಿಮಾನಿಗಳು ಧರಣಿ ನಡೆಸಿದರು. ಕೊಟ್ಟ ಮಾತು ತಪ್ಪಬೇಡಿ, ಕೋಲಾರದಿಂದಲೇ ಸ್ಪರ್ಧಿಸಿ. ರಕ್ತ ಕೊಟ್ಟೇವು ಸಿದ್ದರಾಮಯ್ಯ ಅವರನ್ನು ಬಿಡೆವು. ಕೋಲಾರ ನಮ್ಮೂರು- ಸಿದ್ದರಾಮಯ್ಯ ನಮ್ಮೋರು. ನಿಮ್ಮ ಕೈ ಹಿಡಿಯುತ್ತೇವೆ. ನಮ್ಮ ಕೈ ಹಿಡಿಯಿರಿ ಎಂಬಿತ್ಯಾದಿ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು.

ಆತ್ಮಹತ್ಯೆ ಬೆದರಿಕೆ: ಇದೇ ವೇಳೆ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆಯ ಮಾತು ಕೇಳಿ ಬಂತು. ಶರ್ಟ್ ಬಿಚ್ಚಿ ಬಾರುಕೊಲಿನಿಂದ ಹೊಡೆದುಕೊಂಡ ಸಿದ್ದು ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಬಾರುಕೋಲಿನ ಹಗ್ಗವನ್ನು ಕುತ್ತಿಗೆಗೆ ಸುತ್ತಿಕೊಂಡ ಓರ್ವ ಸಿದ್ದರಾಮಯ್ಯ ಅಭಿಮಾನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು.

ಕುತ್ತಿಗೆಗೆ ಹಗ್ಗ ಸುತ್ತಿಕೊಂಡ ವ್ಯಕ್ತಿಯಿಂದ ಹಗ್ಗ ವಾಪಸ್ ಪಡೆದ ಕಾರ್ಯಕರ್ತರು ಆತನನ್ನು ಕಾಪಾಡಿದರು. ಸಿದ್ದರಾಮಯ್ಯ ಕೋಲಾರಕ್ಕೆ ಬರಲಿಲ್ಲ ಅಂದ್ರೆ ನಾವು ಸಾಯುವುದು ಗ್ಯಾರಂಟಿ ಎಂದು ಘೋಷಣೆ ಕೂಗಿದ ಕಾರ್ಯಕರ್ತರು, ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ‌ಮಾಡಲೇಬೇಕು ಎಂಬ‌ ಪಟ್ಟು ಹಿಡಿದರು.

ಸಿದ್ದರಾಮಯ್ಯ ಹೇಳಿದ್ದೇನು?: ಅಭಿಮಾನಿಗಳನ್ನು ಉದ್ದೇಶಿಸಿ ಸಿದ್ದರಾಮಯ್ಯ ಮಾತನಾಡಿ, ದೆಹಲಿಯಲ್ಲಿ ಕೋಲಾರ ಮತಕ್ಷೇತ್ರದ ಬಗ್ಗೆ ಚರ್ಚೆಯಾಗಿಲ್ಲ. ಅದು ಪೆಂಡಿಂಗ್​ನಲ್ಲಿ ಇದೆ. ಹೈಕಮಾಂಡ್ ನಾನು ಒಂದು ಪರ್ಸೆಂಟ್ ಕೂಡ ರಿಸ್ಕ್ ತೆಗೆದುಕೊಳ್ಳಬಾರದು ಅಂತಾ ಹೇಳಿದ್ದಾರೆ. ಅದು ಬಿಟ್ಟು ಬೇರೆ ಏನೂ ಅಂದಿಲ್ಲ. ಕೋಲಾರದಲ್ಲಿ ಸ್ಪರ್ಧೆ ಮಾಡಬೇಡಿ ಅಂತಾ ಹೇಳಿಲ್ಲ. ಸುಮ್ಮನೆ ಅಪಪ್ರಚಾರವಾಗಿದೆ. ಕೋಲಾರ ಸ್ಪರ್ಧೆಯನ್ನು ನಿಮ್ಮ ತೀರ್ಮಾನಕ್ಕೆ ಬಿಡ್ತೇವೆ ಅಂತಾ ಹೈಕಮಾಂಡ್ ಹೇಳಿದೆ. ಕ್ಷೇತ್ರದಲ್ಲಿ ನಿಮ್ಮನ್ನು ಕಟ್ಟಿಹಾಕಲು ಪ್ರಯತ್ನ ಮಾಡ್ತಿದ್ದಾರೆ ಅಂತಾ ಹೈಕಮಾಂಡ್ ಹೇಳಿದೆ ಎಂದು ಅವರು ಕಾರ್ಯಕರ್ತರಿಗೆ ತಿಳಿಸಿದರು.

ನೀವು ಚುನಾವಣಾ ಪ್ರಚಾರಕ್ಕಾಗಿ ಇಡೀ ರಾಜ್ಯದಲ್ಲಿ ಓಡಾಡಬೇಕಾಗುತ್ತದೆ ಎಂದಿದ್ದಾರೆ. ಕೋಲಾರಕ್ಕೆ ಒಂದು ದಿನವೂ ಕೂಡ ಹೋಗಬಾರದು ಅಂತಾ ಹೈಕಮಾಂಡ್ ಹೇಳಿದೆ. ಕೋಲಾರಕ್ಕೆ ಸಮಯ ಕೊಡೋಕೆ ಆಗೋದಿಲ್ಲ ಎಂದಿದ್ದಾರೆ. ಅದಕ್ಕೆ ನಾನು ಕೋಲಾರ ಸ್ಪರ್ಧೆ ವಿಚಾರವನ್ನ ಪೆಂಡಿಂಗ್‌ನಲ್ಲಿಡಿ ಅಂತಾ ಹೇಳಿದ್ದೇನೆ. ರಾಹುಲ್ ಗಾಂಧಿಯಾಗಲಿ, ಮಲ್ಲಿಕಾರ್ಜುನ ಖರ್ಗೆಯಾಗಲಿ ಕೋಲಾರದಲ್ಲಿ ನಿಂತುಕೊಳ್ಳಬೇಡಿ ಅಂತಾ ಹೇಳಿಲ್ಲ. ನಜೀರ್, ರಮೇಶ್, ಅನಿಲ್ ಕುಮಾರ್ ಹಾಗೂ ಮುನಿಯಪ್ಪ ಜೊತೆ ಮಾತನಾಡಿದ್ದೇನೆ. ಸ್ಪರ್ಧೆ ವಿಚಾರವನ್ನು ಹೈಕಮಾಂಡ್ ನನಗೆ ಬಿಟ್ಟಿದೆ. ಟಿಕೆಟ್​​ಗೆ ಅರ್ಜಿ ಸಲ್ಲಿಸುವಾಗಲೂ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದೇನೆ ಅಂತಾ ಹೇಳಿದ್ದೆ ಎಂದು ಹೇಳಿದರು.

ನನಗೆ ಯಾರೂ ಸಲಹೆ ಕೊಟ್ಟಿಲ್ಲ. ನಾನು ನಾಳೆ ನಮ್ ಮನೆಯವ್ರ ಜೊತೆ ಚರ್ಚೆ ಮಾಡುತ್ತೇನೆ. ನಾಳೆ ಬೆಳಗ್ಗೆ ನಮ್ಮ ಮನೆಯವರ ಜೊತೆ ಚರ್ಚೆ ಮಾಡಿ ಹೇಳ್ತೀನಿ ಅಂತ ಅವರಿಗೆ ಹೇಳಿದ್ದೀನಿ. ಹೈಕಮಾಂಡ್​ಗೆ ಬಿಟ್ಟಿದ್ದೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದು ಹೇಳಿದ್ದೇನೆ. ಹೈಕಮಾಂಡ್ ಕೂಡ ನನಗೆ ಕೋಲಾರದಲ್ಲಿ ನಿಲ್ಲಬೇಡಿ ಎಂದು ಹೇಳಿಲ್ಲ. ಸದ್ಯ ಈ ಡೆವಲಪ್ಮೆಂಟ್ ಆಗಿದ್ದು, ನಾಳೆ ನನ್ನ ಮನೆಯವ್ರ ಹಾಗೂ ನನ್ನ ಮಗನ ಜೊತೆ ಮಾತಾಡಿ ಹೇಳುತ್ತೇನೆ ಎಂದು ಕೋಲಾರ ಸ್ಪರ್ಧೆ ಬಗ್ಗೆ ಸ್ಪಷ್ಟ ತೀರ್ಮಾನ ತಿಳಿಸದ ಸಿದ್ದರಾಮಯ್ಯ, ಬಳಿಕ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಗೆ ತೆರಳಿದರು.

ಇದನ್ನೂ ಓದಿ: ಟಿಕೆಟ್ ಕೊಡಲು ಸಿದ್ದವಿದ್ರೂ ಚಿಂಚನಸೂರ್ ಪಕ್ಷ ಬಿಟ್ರು: ಬಿ.ಎಸ್.ಯಡಿಯೂರಪ್ಪ

Last Updated : Mar 21, 2023, 1:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.