ಟಿಕೆಟ್ ಕೊಡಲು ಸಿದ್ದವಿದ್ರೂ ಚಿಂಚನಸೂರ್ ಪಕ್ಷ ಬಿಟ್ರು: ಬಿ.ಎಸ್.ಯಡಿಯೂರಪ್ಪ

author img

By

Published : Mar 21, 2023, 12:14 PM IST

bs-yadiyurappa-spoke-about-baburao-chinchansoor
ಟಿಕೆಟ್ ಕೊಡೋಕೆ ಸಿದ್ದವಿದ್ರೂ ಚಿಂಚನಸೂರ್ ಪಕ್ಷ ಬಿಟ್ಟಿದ್ದಾರೆ.. ನಾವೇನು ಮಾಡಲು ಸಾಧ್ಯವಿಲ್ಲ: ಯಡಿಯೂರಪ್ಪ ()

ಬಾಬುರಾವ್​​ ಚಿಂಚನ್​ಸೂರ್​ ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಅವರಿಗೆ ಟಿಕೆಟ್​ ಕೊಡಲು ಸಿದ್ಧವಿದ್ದರೂ ಪಕ್ಷ ಬಿಟ್ಟಿದ್ದಾರೆ. ಈ ಬಗ್ಗೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರು: ಟಿಕೆಟ್ ನೀಡುವುದೂ ಸೇರಿ ಎಲ್ಲದಕ್ಕೂ ನಾವು ಸಿದ್ಧವಿದ್ದರೂ ಬಾಬುರಾವ್ ಚಿಂಚನಸೂರ್ ಬಿಜೆಪಿ ಬಿಟ್ಟು ಹೋಗಿದ್ದಾರೆ. ಅದಕ್ಕೆ ನಾವೇನು ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಚರ್ಚೆ ಅನಗತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿದರು.

ಅಧಿಕೃತ ನಿವಾಸ ಕಾವೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಬುರಾವ್ ಚಿಂಚನಸೂರು ಬಿಜೆಪಿ ಬಿಟ್ಟಿದ್ದಾರೆ. ಏನೂ ಮಾಡಲು ಬರಲ್ಲ. ಮೊನ್ನೆ ತಾನೇ ಗಂಡ ಹೆಂಡತಿ ಬಂದು ಕಾಲು ಹಿಡ್ಕೊಂಡಿದ್ರು. ನಾನು ಎಲ್ಲೂ ಹೋಗಲ್ಲ ಅಂದಿದ್ದರು. ಆದರೆ ಈಗ ಹೋಗಿದ್ದಾರೆ. ಬೇರೆ ಬೇರೆ ಒತ್ತಡಕ್ಕೆ ಹೋಗಿರಬಹುದು. ಟಿಕೆಟ್ ನೀಡುವುದು ಸೇರಿದಂತೆ ನಾವು ಎಲ್ಲದಕ್ಕೂ ಸಿದ್ಧ ಇದ್ದೆವು. ಆದರೂ ಅವರು ಹೋದರು. ಆಗಿದ್ದು ಆಯ್ತು ಈಗ ಬಿಟ್ಟು ಹೋಗಿದ್ದಾರೆ. ಈಗ ಯಾಕೆ ಚರ್ಚೆ? ಎಂದರು.

ಕಾಂಗ್ರೆಸ್ ನಾಲ್ಕನೇ ಗ್ಯಾರಂಟಿ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಆ ಯೋಜನೆಗೆ ಎಲ್ಲಿ ಬೆಲೆ ಇದೆ? ಹಿಂದೆಲ್ಲ ಬೇರೆ ರಾಜ್ಯದಲ್ಲಿ ಯೋಜನೆ ಘೋಷಣೆ ಮಾಡಿದ್ದು ಕಾರ್ಯರೂಪಕ್ಕೆ ಬಂದಿದ್ಯಾ? ಅಭಿವೃದ್ಧಿ ಕಾರ್ಯಕ್ಕೆ ಎಲ್ಲಿ ಹಣ ಉಳಿಯುತ್ತದೆ. ಅವರು ಘೋಷಣೆ ಮಾಡಿದ್ದು ನೋಡಿದರೆ ಉಚಿತ ಯೋಜನೆ ಮತ್ತು ಸರ್ಕಾರಿ ಸಂಬಳ ಕೊಡೋಕೆ ಅಷ್ಟೇ ರಾಜ್ಯದ ಬಜೆಟ್ ಸಾಲುತ್ತದೆ. ಇನ್ನೆಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಹಣ ಉಳಿಯುತ್ತದೆ. ಅಧಿಕಾರಕ್ಕೆ ಬರಲ್ಲ ಅಂದಾಗ ಜನರಲ್ಲಿ ಗೊಂದಲ ಉಂಟು ಮಾಡಲು ಈ ರೀತಿಯ ಸುಳ್ಳು ಭರವಸೆ ಕೊಡುತ್ತಾರೆ. ಇಂತಹ ಭರವಸೆಗಳಿಂದ ಕಾಂಗ್ರೆಸ್ ಗೆ ಯಾವುದೇ ಲಾಭವಿಲ್ಲ.ಅವರಿಗೆ ಬಿಜೆಪಿ ಮೇಲೆ ತುಂಬ ಭಯ ಇದೆ ಎಂದು ಟಾಂಗ್ ನೀಡಿದರು.

ನಾವು ಹೋದ ಕಡೆಯಲ್ಲೆಲ್ಲ ದೊಡ್ಡ ಪ್ರಮಾಣದಲ್ಲಿ ಜನ ಬೆಂಬಲ ಸಿಗುತ್ತಿದೆ. ಇದರ ಪರಿಣಾಮ ಕರ್ನಾಟಕದಲ್ಲಿ ನಿಶ್ಚಿತವಾಗಿ 140 ಸ್ಥಾನ ಗೆದ್ದು ಮತ್ತೆ ಸರ್ಕಾರ ರಚನೆ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತಹವರ ನಾಯಕತ್ವ ನಮಗಿದೆ. ರಾಹುಲ್ ಗಾಂಧಿ ಇವರಿಗೆ ಸಮ ಆಗಲು ಸಾಧ್ಯವಿಲ್ಲ. ಹಾಗಾಗಿ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸ್ವಂತ ಶಕ್ತಿ ಮೇಲೆ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲಿದೆ ಎಂದರು.

ಬಿಎಸ್​ವೈ ತುಮಕೂರು ಪ್ರವಾಸ: ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಆಯೋಜನೆ ಮಾಡಿರುವ ರೋಡ್ ಶೋ, ವಿಜಯ ಸಂಕಲ್ಪ ಯಾತ್ರೆ ಹಾಗು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ತುಮಕೂರು ಪ್ರವಾಸ ಕೈಗೊಂಡಿದ್ದಾರೆ. ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ತುಮಕೂರಿನ ತುರುವೆಕೆರೆಗೆ ತೆರಳಲಿರುವ ಯಡಿಯೂರಪ್ಪ ಬಿಜೆಪಿ ಆಯೋಜನೆ ಮಾಡಿರುವ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.

ನಂತರ ವಿಜಯ ಸಂಕಲ್ಪ ಯಾತ್ರೆ ಮತ್ತು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸಲಿದ್ದಾರೆ. ನಂತರ ಬೆಳ್ಳಾವಿಗೆ ತೆರಳಲಿರುವ ಯಡಿಯೂರಪ್ಪ ಅಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆವರೆಗೆ ರೋಡ್ ಶೋ ನಡೆಸಲಿದ್ದಾರೆ. ನಂತರ ವಿಜಯ ಸಂಕಲ್ಪ ಯಾತ್ರೆ ಮತ್ತು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಪ್ರಚಾರ ನಡೆಸಲಿದ್ದಾರೆ. ಬಳಿಕ ತುಮಕೂರು ನಗರಕ್ಕೆ ಆಗಮಿಸಲಿರುವ ಯಡಿಯೂರಪ್ಪ ಸಂಜೆ 4.30 ರಿಂದ 5.30ರವರೆಗೆ ರೋಡ್ ಶೋ ನಡೆಸಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲಿದ್ದು, ರಸ್ತೆ ಮಾರ್ಗದ ಮೂಲಕ ರಾತ್ರಿ ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಇದನ್ನೂ ಓದಿ : 'ಶಿಗ್ಗಾಂವಿ ಕ್ಷೇತ್ರದಿಂದಲೇ ನನ್ನ ಸ್ಪರ್ಧೆ': ವದಂತಿಗಳಿಗೆ ತೆರೆ ಎಳೆದ ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.