ETV Bharat / state

SC-ST ಕಾಯಿದೆಯಡಿಯ ಸುಳ್ಳು ಪ್ರಕರಣಗಳು ನ್ಯಾಯಾಂಗ ವ್ಯವಸ್ಥೆಗೆ ಅಡ್ಡಿ: ಹೈಕೋರ್ಟ್

author img

By

Published : Aug 8, 2023, 12:42 PM IST

ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗುತ್ತಿರುವ ಸುಳ್ಳು ಕ್ರಿಮಿನಲ್​ ಪ್ರಕರಣಗಳು ನ್ಯಾಯಾಂಗ ವ್ಯವಸ್ಥೆಗೆ ಅಡ್ಡಿ ಪಡಿಸುತ್ತಿವೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಡಗಳ (ದೌರ್ಜನ್ಯ ತಡೆ) ಕಾಯಿದೆಯಡಿ ದಾಖಲಾಗುತ್ತಿರುವ ಸುಳ್ಳು ಕ್ರಿಮಿನಲ್​ ಪ್ರಕರಣಗಳು ನ್ಯಾಯಾಂಗ ವ್ಯವಸ್ಥೆಗೆ ಅಡ್ಡಿ ಪಡಿಸುತ್ತಿವೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಅಲ್ಲದೇ, ಈ ರೀತಿಯ ಪ್ರಕರಣಗಳು ನ್ಯಾಯಾಂಗ ಕ್ಷೇತ್ರದ ಅಮೂಲ್ಯ ಸಮಯ ವ್ಯರ್ಥ ಮಾಡುತ್ತಿವೆ ಎಂದು ತಿಳಿಸಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಕಾಯಿದೆಯಡಿ ದಾಖಲಾಗಿದ್ದನ್ನು ಪ್ರಶ್ನಿಸಿ ರಸಿಕ್ ಲಾಲ್ ಮತ್ತು ಪುರುಷೋತ್ತಮ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತ ಪಡಿಸಿದೆ. ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಅಡಿ ಸುಳ್ಳು ಪ್ರಕರಣಗಳು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗಲಿದ್ದು, ನಿಯಂತ್ರಿಸುವಲ್ಲಿ ವಿಫಲವಾದಲ್ಲಿ ಇಡೀ ಅಪರಾಧ ನ್ಯಾಯ ವ್ಯವಸ್ಥೆಗೆ ದೊಡ್ಡ ಹೊರೆಯಾಗಬಹುದು ಎಂದು ತಿಳಿಸಿದೆ.

ಜತೆಗೆ, ಈ ಸಂಬಂಧ ಪ್ರಕರಣದಲ್ಲಿ ಸಿಲುಕುವವರಿಗೆ ಕಿರುಕುಳ ಮುಂದುವರೆಯಲಿದೆ ಮತ್ತು ನ್ಯಾಯ ತಪ್ಪಿದಂತಾಗಬಹುದು ಎಂದು ಪೀಠ ಅಭಿಪ್ರಾಯ ವ್ಯಕ್ತ ಪಡಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವರ್ಗಗಳ ಜನತೆಯ ಮೇಲಿನ ದೌರ್ಜನ್ಯಗಳನ್ನು ತಡೆಯುವ ಉದ್ದೇಶದಿಂದ ಕಾಯಿದೆ ಜಾರಿ ಮಾಡಲಾಗಿದೆ. ಆದರೆ, ಈ ಕಾಯಿದೆ ಉಲ್ಲಂಘನೆ ಮಾಡಿರುವುದಕ್ಕೆ ಪ್ರಸ್ತುತದ ಪ್ರಕರಣ ಒಂದು ಉತ್ತಮ ನಿರ್ದಶನವಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.

ಅಲ್ಲದೇ, ಈ ರೀತಿಯ ಪ್ರಕರಣಗಳಿಂದ ನಿಜವಾಗಿಯೂ ಸಮಸ್ಯೆಗೆ ಸಿಲುಕಿರುವವರು ನ್ಯಾಯಕ್ಕಾಗಿ ಕಾಯುತ್ತಿರುವ ಸಂದರ್ಭದಲ್ಲಿ ಸುಳ್ಳು ಪ್ರಕರಣವನ್ನು ವಿಚಾರಣೆಗೊಳಪಡಿಸುವುದು ಒಂದು ರೀತಿಯ ಅಪಹಾಸ್ಯದಂತಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ. ಜತೆಗೆ, ದೂರುದಾರರ ತಂದೆ ಅರ್ಜಿದಾರರಿಗೆ ತಮ್ಮ ಜಮೀನನ್ನು ಮಾರಾಟ ಮಾಡಿದ್ದಾರೆ. ಅಲ್ಲದೇ, ಆ ಆಸ್ತಿಯನ್ನು ಅರ್ಜಿದಾರರು ಕಳೆದ 50 ವರ್ಷಗಳಿಂದ ತಮ್ಮಲ್ಲಿ ಉಳಿಸಿಕೊಂಡಿರುವ ಸಂಬಂಧ ಸರ್ಕಾರದಲ್ಲಿ ದಾಖಲೆಗಳಿವೆ. ಹಾಗೆ, ಅರ್ಜಿದಾರರು ಜಮೀನನ್ನು ಖರೀದಿ ಮಾಡಿದ್ದಾರೆ ವಿನಃ ಅತಿಕ್ರಮ ಮಾಡಿಲ್ಲ ಎಂಬ ಅಂಶ ದಾಖಲೆಗಳಲ್ಲಿ ಎತ್ತಿ ತೋರಿಸುತ್ತಿದೆ, ಆದರೂ ಈ ಅಂಶವನ್ನು ಪರಿಗಣಿಸದೇ ದೂರು ನೀಡಲಾಗಿದೆ. ಹೀಗಾಗಿ ಪ್ರಕರಣ ರದ್ದುಗೊಳಿಸುತ್ತಿರುವುದಾಗಿ ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ : ರಸಿಕ್ ಲಾಲ್ ಮತ್ತು ಪುರುಷೋತ್ತಮ್ ಎಂಬುವರ ವಿರುದ್ಧ ತಮ್ಮ ಮನೆಯ ನೆರೆಹೊರೆಯವರು ಮನೆ ಒತ್ತುವರಿ ಮತ್ತು ನಿರಂತರ ಕಿರುಕುಳ ನೀಡಲಾಗುತ್ತಿದೆ. ತಮ್ಮ ಆಸ್ತಿಗೆ ಸಂಬಂಧಿಸಿದಂತೆ ನಖಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಪ್ರಕರಣದಲ್ಲಿ ಐಪಿಸಿಯ ವಿವಿಧ ಸೆಕ್ಷನ್‌ಗಳು ಸೇರಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧದ ದೌರ್ಜನ್ಯ ತಡೆ ಕಾಯಿದೆಯ ಸೆಕ್ಷನ್‌ಗಳನ್ನು ಸೇರ್ಪಡೆ ಮಾಡಿದ್ದರು. ಪ್ರಕರಣ ಸಂಬಂಧ ರಾಮಮೂರ್ತಿ ನಗರದ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.

ಇದನ್ನೂ ಓದಿ: ಪಿಎಸ್‌ಐ ನೇಮಕಾತಿ: ಅರ್ಜಿ ವಿಚಾರಣೆ ಆ.16 ಕ್ಕೆ ಮುಂದೂಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.