ETV Bharat / state

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ನಕಲಿ ಜಾತಿ ಪ್ರಮಾಣ ಪತ್ರದ ವಿಚಾರ : ಕಾಂಗ್ರೆಸ್ ಸದಸ್ಯರಿಂದ ಧರಣಿ

author img

By

Published : Mar 23, 2022, 4:17 PM IST

ರೇಣುಕಾಚಾರ್ಯ ಮಗಳ ನಕಲಿ ಜಾತಿ ಪ್ರಮಾಣ ಪತ್ರದ ವಿಚಾರ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಈ ವಿಚಾರವಾಗಿ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ಸಹ ನಡೆಯಿತು. ಈ ವಿಚಾರವಾಗಿ ಚರ್ಚೆ ಮಾಡಲು ಸ್ಪೀಕರ್ ಅವಕಾಶ ನೀಡದಿದ್ದಾಗ, ಕಾಂಗ್ರೆಸ್​ ಸದಸ್ಯರು ಸದನದ ಬಾವಿಗಿಳಿದು ಧರಣಿ ಮಾಡಿದರು..

ವಿಧಾನಸಭೆ
ವಿಧಾನಸಭೆ

ಬೆಂಗಳೂರು : ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಮಗಳ ನಕಲಿ ಜಾತಿ ಪ್ರಮಾಣ ಪತ್ರದ ವಿಚಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಇದು ಆಡಳಿತ-ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ವಾಗ್ವಾದಕ್ಕೆ ಕಾರಣವಾಯಿತು. ಅಲ್ಲದೇ ಕಾಂಗ್ರೆಸ್‍ನ ಕೆಲ ಶಾಸಕರು ಧರಣಿ ನಡೆಸಿದ ಪ್ರಸಂಗವೂ ನಡೆಯಿತು.

ಇಂದು ಶೂನ್ಯವೇಳೆಯಲ್ಲಿ ಪ್ರತಿಪಕ್ಷದ ಉಪನಾಯಕ ಯು ಟಿ ಖಾದರ್ ಅವರು ರೇಣುಕಾಚಾರ್ಯ ಬಗ್ಗೆ ಬಳಸಿದ ಶಬ್ದವನ್ನು ಕಡತದಿಂದ ತೆಗೆಯುವುದಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಿಸಿದರು. ಆಗ ವಿವರಣೆ ನೀಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ಸಂವಿಧಾನದ ವಿರುದ್ಧವಾಗಿ ಜಾತಿ ಪ್ರಮಾಣ ಪತ್ರ ಪಡೆದಿಲ್ಲ.

ನನ್ನ ಸಹೋದರ ನನ್ನ ಪುತ್ರಿಗೆ ಪ್ರಮಾಣ ಪತ್ರ ಕೊಡಿಸಿದ್ದರು. ಅದನ್ನು ವಾಪಸ್ ಮಾಡಲಾಗಿದೆ. ನಾನು ಜಾತ್ಯತೀತ ವ್ಯಕ್ತಿ. ಯಾವುದೇ ಸೌಲಭ್ಯ ಪಡೆದಿಲ್ಲ. ನಕಲಿ ಪ್ರಮಾಣಪತ್ರವಿದ್ದರೆ ದಾಖಲೆ ನೀಡಲಿ, ಸರ್ಕಾರಿ ಸೌಲಭ್ಯ ಪಡೆದಿದ್ದರೆ ಗಲ್ಲಿಗೇರಲು ಸಿದ್ದ ಎಂದು ಸದನದಲ್ಲಿ ಹೇಳಿದರು.

ನಕಲಿ ಜಾತಿ ಪ್ರಮಾಣ ಪತ್ರ ವಿಚಾರವಾಗಿ ಸದನದಲ್ಲಿ ಮಾತಿನ ಚಕಮಕಿ..

ರೇಣುಕಾಚಾರ್ಯ, ಪರಮೇಶ್ವರ್ ನಾಯಕ್ ನಡುವೆ ಮಾತಿನ ಚಕಮಕಿ : ಆಗ ಕಾಂಗ್ರೆಸ್‍ ಶಾಸಕರಾದ ಪ್ರಿಯಾಂಕ್‌ ಖರ್ಗೆ, ಭೀಮಾ ನಾಯಕ್, ಪರಮೇಶ್ವರ್ ನಾಯಕ್ ಮತ್ತಿತರರು ಮಾತನಾಡಲು ಮುಂದಾದರು. ಸ್ಪೀಕರ್ ಅದಕ್ಕೆ ಅವಕಾಶ ನೀಡದಿದ್ದಾಗ ಸದನದ ಬಾವಿಗಿಳಿದು ಧರಣಿ ಮಾಡಿದರು. ಈ ವೇಳೆ ರೇಣುಕಾಚಾರ್ಯ ಹಾಗೂ ಪರಮೇಶ್ವರ್ ನಾಯಕ್ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಆಗ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು, ಧರಣಿ ನಿರತ ತಮ್ಮ ಶಾಸಕರನ್ನು ಸಮಾಧಾನಪಡಿಸಿ ಸ್ವಸ್ಥಾನಗಳಿಗೆ ಮರಳುವಂತೆ ಮಾಡಿದರು. ಈ ವೇಳೆ ಸಿದ್ದರಾಮಯ್ಯ ಮಾತನಾಡಿ, ರೇಣುಕಾಚಾರ್ಯ ಅವರ ಮಗಳಿಗೆ ಬೇಡ ಜಂಗಮ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸಹೋದರರು ಕೊಡಿಸಿದ್ದಾರೆ ಎಂದು ಹೇಳಿದ್ದಾರೆ.

ಅವರು ಮುಖ್ಯಮಂತ್ರಿಗಳ ಕಾರ್ಯದರ್ಶಿ ಆಗಿದ್ದು, ಪ್ರಮಾಣ ಪತ್ರ ಪಡೆದಿರುವುದು ತಪ್ಪೇ.. ಅವರ ವಿರುದ್ಧ ಕ್ರಮಕೈಗೊಳ್ಳಬಹುದು. ಬೇರೆ ರೂಪದಲ್ಲಿ ಶಾಸಕರು ಈ ಬಗ್ಗೆ ಚರ್ಚಿಸಲು ಅವಕಾಶವಿದೆ ಎಂದರು. ಆಗಲೂ ಕೂಡ ಕಾಂಗ್ರೆಸ್ ಶಾಸಕರು ಸಮಾಧಾನಗೊಳ್ಳಲಿಲ್ಲ. ಆಗ ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, ನಕಲಿ ಜಾತಿಪ್ರಮಾಣ ಪತ್ರದ ಬಗ್ಗೆ ಚರ್ಚೆಯಾಗಿದೆ.

ಇದನ್ನೂ ಓದಿ: ಎಸ್​​ಸಿ ಮೀಸಲಾತಿಯಡಿ ಒಂದೇ ಒಂದು ಸವಲತ್ತು ಪಡೆದರೂ ರಾಜಕೀಯ ನಿವೃತ್ತಿ : ರೇಣುಕಾಚಾರ್ಯ

ಖಾದರ್ ಅವರು ಬಳಸಿದ ಶಬ್ಧ ಕಡತಕ್ಕೆ ಹೋಗುವುದು ಬೇಡ ಎಂದಷ್ಟೇ ಹೇಳಲಾಗಿತ್ತು. ಸರ್ಕಾರ ಯಾರನ್ನೂ ವಹಿಸಿಕೊಂಡಿಲ್ಲ. ತಹಶೀಲ್ದಾರ್, ಉಪವಿಭಾಗಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಅವರು ಹೋಗಬಹುದು. ಇಲ್ಲಿ ಮತ್ತೆ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ಆಗಲೂ ಕೂಡ ಕಾಂಗ್ರೆಸ್ ಸದಸ್ಯರು ಸುಮ್ಮನಾಗದಿದ್ದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಯಾರಿಗೆ ಅನ್ಯಾಯವಾಗಿದೆ ಅವರು ದೂರು ಕೊಡಲಿ. ಸತ್ಯಾಸತ್ಯತೆ ಹೊರಬರಲಿ. ದಾಖಲೆ ಪ್ರಕಾರ ಕಾನೂನು ವಿಚಾರಣೆಯಾಗಲಿ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಹೆಚ್ಚಿನ ಚರ್ಚೆ ಬೇಡ ಎಂದು ಮುಖ್ಯಮಂತ್ರಿಗಳು ಪರಿಸ್ಥಿತಿ ತಿಳಿಗೊಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.