ETV Bharat / state

ನಮ್ಮ ಮೆಟ್ರೋ ರೈಲಿನಲ್ಲಿ ಗೋಬಿ ಮಂಚೂರಿ ಸೇವನೆ; ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲು

author img

By ETV Bharat Karnataka Team

Published : Oct 6, 2023, 6:26 PM IST

ಮೆಟ್ರೋ ರೈಲಿನಲ್ಲಿ ಗೋಬಿ ಮಂಚೂರಿ ಸೇವಿಸಿದ ಪ್ರಯಾಣಿಕನ ವಿರುದ್ದ ಬಿಎಂಆರ್​ಸಿಎಲ್​​ ಪ್ರಕರಣ ದಾಖಲಿಸಿದೆ.

ಮೆಟ್ರೋ ರೈಲಿನಲ್ಲಿ ಗೋಬಿ ಮಂಚೂರಿ ಸೇವಿಸಿದ ಪ್ರಕರಣ
ಮೆಟ್ರೋ ರೈಲಿನಲ್ಲಿ ಗೋಬಿ ಮಂಚೂರಿ ಸೇವಿಸಿದ ಪ್ರಕರಣ

ಬೆಂಗಳೂರು : ಮೆಟ್ರೋ ರೈಲಿನಲ್ಲಿ ಗೋಬಿ ಮಂಚೂರಿ ಸೇವಿಸುತ್ತಿದ್ದ ಪ್ರಯಾಣಿಕನ ವಿರುದ್ಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಪ್ರಕರಣ ದಾಖಲಿಸಿದೆ. ರೈಲು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 500 ರೂ. ದಂಡದ ಬರೆ ಎಳೆದಿದೆ. ಬಿಎಂಆರ್‌ಸಿಎಲ್ ಈ ರೀತಿಯ ಕ್ರಮ ಕೈಗೊಂಡಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದರು.

ಆರೋಪಿ ನಮ್ಮ ಮೆಟ್ರೋದಲ್ಲಿ ಜಯನಗರ ಮತ್ತು ಸಂಪಿಗೆ ರಸ್ತೆಯ ನಡುವೆ ನಿತ್ಯ ಪ್ರಯಾಣಿಸುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯ ವೈರಲ್ ವಿಡಿಯೋದಲ್ಲಿ, ಸ್ನೇಹಿತರು ಮೆಟ್ರೋ ಬೋಗಿಯೊಳಗೆ ಆಹಾರ ಸೇವಿಸದಂತೆ ತಿಳಿಸಿದ್ದಾರೆ. ಈ ಸಲಹೆಯನ್ನು ನಿರ್ಲಕ್ಷಿಸಿದ ಆತ ಆಹಾರ ಸೇವಿಸುವುದನ್ನು ನೋಡಬಹುದು.

ನಿಯಮಗಳ ಪ್ರಕಾರ, ಮೆಟ್ರೋ ರೈಲಿನಲ್ಲಿ ಆಹಾರ ಸೇವಿಸುವಂತಿಲ್ಲ. ಆದರೆ ಪ್ರಯಾಣಿಕ ನಿಯಮ ಉಲ್ಲಂಘಿಸಿ ಆಹಾರ ಸೇವಿಸಿದ ಹಿನ್ನೆಲೆಯಲ್ಲಿ ಜಯನಗರ ಪೊಲೀಸ್ ಠಾಣೆಗೆ ಬಿಎಂಆರ್‌ಸಿಎಲ್ ದೂರು ನೀಡಿದೆ. ಇಂತಹ ತಪ್ಪು ಮರುಕಳಿಸುವುದಿಲ್ಲ ಎಂದು ಪ್ರಯಾಣಿಕ ಭರವಸೆ ನೀಡಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ.

ಆಡಿಯೋ ಮತ್ತು ವಿಡಿಯೋ ಸಂದೇಶಗಳ ಮೂಲಕ, ಮೆಟ್ರೋ ಸೇವೆಗಳನ್ನು ಬಳಸುವಾಗ ಅನುಸರಿಸಬೇಕಾದ ಶಿಷ್ಟಾಚಾರಗಳ ಬಗ್ಗೆ ನಾವು ಜಾಗೃತಿ ಮೂಡಿಸುತ್ತಿದ್ದೇವೆ. ನಿಯಮಗಳನ್ನು ಉಲ್ಲಂಘಿಸಬೇಡಿ, ತೊಂದರೆಯನ್ನು ಆಹ್ವಾನಿಸಬೇಡಿ ಎಂದು ನಾವು ಪ್ರಯಾಣಿಕರಲ್ಲಿ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಟಿಕೆಟ್ ಇಲ್ಲದ ಪ್ರಯಾಣಕ್ಕೆ ಯೂಟ್ಯೂಬರ್​ಗೆ ದಂಡ: ಮೆಟ್ರೋ ನಿಲ್ದಾಣಕ್ಕೆ ನುಸುಳಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದ್ದಕ್ಕಾಗಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಸೈಪ್ರಸ್ ಮೂಲದ ಯೂಟ್ಯೂಬರ್ ಫಿಡಿಯಾಸ್ ಪನಯೋಟೌ ಎಂಬಾತನ ವಿರುದ್ಧ ಬಿಎಂಆರ್‌ಸಿಎಲ್ ಪ್ರಕರಣ ದಾಖಲಿಸಿತ್ತು.'ಪ್ರೊಫೆಷನಲ್ ಮಿಸ್ಟೇಕ್ ಮೇಕರ್' ಎಂಬ ಯೂಟ್ಯೂಬರ್‌ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಬಿಎಂಆರ್‌ಸಿಎಲ್ ಕೆ.ಆರ್.ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.

ಮೆಟ್ರೋ ರೈಲಿನಲ್ಲಿ ಕುಳಿತು ಬೀಡಿ ಸೇದಿದ ವ್ಯಕ್ತಿ: ದೆಹಲಿ ಮೆಟ್ರೋ ರೈಲಿನಲ್ಲಿ ನೃತ್ಯ, ಕೆಲವೊಮ್ಮೆ ಹೊಡೆದಾಟ ಮತ್ತೂ ಕೆಲವೊಮ್ಮೆ ಪ್ರಣಯದ ವಿಡಿಯೋಗಳು ಈ ಹಿಂದೆ ವೈರಲ್ ಆಗಿದ್ದವು. ಇತ್ತೀಚೆಗೆ ಹೊಸ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ವ್ಯಕ್ತಿಯೊಬ್ಬರು ಮೆಟ್ರೋ ಕೋಚ್‌ನೊಳಗೆ ಕುಳಿತು ಬೀಡಿ ಸೇದುತ್ತಿರುವ ವಿಡಿಯೋ ಇದಾಗಿತ್ತು. ಹಿರಿಯ ನಾಗರಿಕರಿಗಾಗಿ ಮೀಸಲಿಟ್ಟ ಆಸನದ ಮೇಲೆ ಕುಳಿತ ವ್ಯಕ್ತಿ ತನ್ನ ಜೇಬಿನಿಂದ ಬೀಡಿ ಮತ್ತು ಬೆಂಕಿ ಪೊಟ್ಟಣ ತೆಗೆದು ಬೆಂಕಿ ಹಚ್ಚಿ ಬೀಡಿ ಸೇದಲು ಶುರುವಿಟ್ಟುಕೊಂಡನು. ಸೇದಿದ ನಂತರ ಬೀಡಿಯ ತುಂಡನ್ನು ರೈಲಿನೊಳಗೇ ಎಸೆದಿದ್ದಾನೆ.

ಇದನ್ನೂ ಓದಿ: ದೆಹಲಿ ಮೆಟ್ರೋ ರೈಲಿನಲ್ಲಿ ಕುಳಿತು ಬೀಡಿ ಸೇದಿದ ವ್ಯಕ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.