ETV Bharat / state

ಹೈದರಾಬಾದ್-ಕರ್ನಾಟಕ ಭಾಗದ ನಾಯಕರೊಂದಿಗೆ ಡಿಕೆಶಿ ಸುದೀರ್ಘ ಚರ್ಚೆ

author img

By

Published : Dec 1, 2020, 7:27 PM IST

ವಿಧಾನಮಂಡಲ ಅಧಿವೇಶನದಲ್ಲಿ ಹೈದರಾಬಾದ್-ಕರ್ನಾಟಕ ಭಾಗದ ಹಲವು ವಿಚಾರಗಳ ಕುರಿತು ಚರ್ಚಿಸಲು ಕೆಪಿಸಿಸಿ ಅಧ್ಯಕ್ಷರು ನಿರ್ಧರಿಸಿದ್ದು, ಈ ವಿಚಾರ ಕೂಡ ಚರ್ಚೆಗೆ ಬಂತು. ಒಂದು ಗಂಟೆಗೂ ಹೆಚ್ಚು ಕಾಲ ಶಿವಕುಮಾರ್ ನಾಯಕರ ಜೊತೆ ಚರ್ಚಿಸಿದರು..

ಸುದೀರ್ಘ ಚರ್ಚೆ
ಸುದೀರ್ಘ ಚರ್ಚೆ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಕಲ್ಯಾಣ ಕರ್ನಾಟಕ ಭಾಗದ ಕಾಂಗ್ರೆಸ್ ನಾಯಕರ ಜತೆ ಮಹತ್ವದ ಸಭೆ ನಡೆಸಿದರು.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಪಿ ಟಿ ಪರಮೇಶ್ವರ ನಾಯಕ್, ಮಾಜಿ ಸಂಸದ ಬಿ ವಿ ನಾಯಕ್, ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಬೋಸರಾಜ್, ಶರಣಪ್ಪ ಮಟ್ಟೂರು, ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಬಸವನಗೌಡ ಬಾದರ್ಲಿ ಅವರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಅತ್ಯಂತ ಪ್ರಮುಖವಾಗಿ ಪಕ್ಷ ಸಂಘಟನೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ನಾಯಕರೊಂದಿಗೆ ಶಿವಕುಮಾರ್ ಚರ್ಚಿಸಿದರು. ಮುಂಬರುವ ವಿಧಾನಸಭೆ ಚುನಾವಣೆ ವೇಳೆಗೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಪಕ್ಷ ಹೆಚ್ಚಿನ ಸ್ಥಾನ ಗೆಲ್ಲುವಂತೆ ಮಾಡಲು ಕೈಗೊಳ್ಳಬಹುದಾದ ಕ್ರಮಗಳು ಯಾವುವು?.

ಜನರ ಬಳಿ ತೆರಳಿ ಅವರ ವಿಶ್ವಾಸ ಗಳಿಸಲು ಯಾವ ರೀತಿಯ ತಂತ್ರಗಾರಿಕೆ ರೂಪಿಸಬೇಕು. ಶತಾಯಗತಾಯ ಈ ಭಾಗದಲ್ಲಿ ಹೆಚ್ಚಿನ ಸ್ಥಾನಗಳಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರ ಬೇಕು ಎಂದು ಡಿಕೆಶಿ ಕೋರಿದರು.

DK Shivakumar-long-discussion-with-leaders-of-hyderabad-karnataka
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ನಡೆದ ಸಭೆ

ಪ್ರವಾಸ ವಿಚಾರ ಚರ್ಚೆ : ಈಗಾಗಲೇ ಹಂತಹಂತವಾಗಿ ರಾಜ್ಯದ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಂಡಿರುವ ಶಿವಕುಮಾರ್, ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಪ್ರವಾಸ ನಡೆಸಿದ್ದಾರೆ. ಇದೀಗ ಅದರ ಮುಂದುವರಿದ ಭಾಗವಾಗಿ ಹೈದರಾಬಾದ್-ಕರ್ನಾಟಕ ಭಾಗಕ್ಕೆ ಪ್ರವಾಸ ನಡೆಸಲು ಚಿಂತನೆ ಮಾಡಿದ್ದಾರೆ.

ಈ ಸಂಬಂಧ ಕಾರ್ಯ ಯೋಜನೆ ರೂಪಿಸಲು ಹಾಗೂ ಯಾವೆಲ್ಲಾ ಭಾಗಗಳಲ್ಲಿ ಸಂಚರಿಸಬೇಕು ಎಂಬ ಕುರಿತು ಮಾಹಿತಿ ಕಲೆ ಹಾಕಿದರು. ಮುಂದಿನ ದಿನಗಳಲ್ಲಿ ಹೈದರಾಬಾದ್-ಕರ್ನಾಟಕ ಭಾಗದ ಪ್ರಮುಖ ಜಿಲ್ಲೆಗಳಿಗೆ ಭೇಟಿ ಕೊಟ್ಟು ಪಕ್ಷ ಸಂಘಟನೆಗೆ ಮುಂದಾಗಲಿದ್ದಾರೆ.

ಪ್ರತ್ಯೇಕ ಜಿಲ್ಲೆ ವಿಚಾರ ಚರ್ಚೆ : ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಪ್ರತ್ಯೇಕ ಜಿಲ್ಲೆ ಸ್ಥಾಪಿಸುವ ವಿಚಾರವನ್ನು ಕೂಡ ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು. ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ಕೈಗೊಳ್ಳಬೇಕಾಗಿರುವ ನಿಲುವಿನ ಕುರಿತು ಸಹ ಮಾಹಿತಿ ಪಡೆಯಲಾಯಿತು.

ವಿಧಾನಮಂಡಲ ಅಧಿವೇಶನದಲ್ಲಿ ಹೈದರಾಬಾದ್-ಕರ್ನಾಟಕ ಭಾಗದ ಹಲವು ವಿಚಾರಗಳ ಕುರಿತು ಚರ್ಚಿಸಲು ಕೆಪಿಸಿಸಿ ಅಧ್ಯಕ್ಷರು ನಿರ್ಧರಿಸಿದ್ದು, ಈ ವಿಚಾರ ಕೂಡ ಚರ್ಚೆಗೆ ಬಂತು. ಒಂದು ಗಂಟೆಗೂ ಹೆಚ್ಚು ಕಾಲ ಶಿವಕುಮಾರ್ ನಾಯಕರ ಜೊತೆ ಚರ್ಚಿಸಿ ವಿವಿಧ ಮಾಹಿತಿ ಕಲೆ ಹಾಕಿದರು ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.