ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಶಿಫಾರಸ್ಸು ಮಾಡಿದ್ದೇ ನಾನು: ಬಿಎಸ್​ವೈ

author img

By

Published : Sep 22, 2022, 4:37 PM IST

Updated : Sep 22, 2022, 5:30 PM IST

ಬಿಎಸ್​ವೈ

ಪಂಚಮಸಾಲಿ ಸಮುದಾಯದ ಮೀಸಲಾತಿಗೆ ಸಂಪೂರ್ಣ ಬೆಂಬಲ ಇದೆ ಎಂದು ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ತಿಳಿಸಿದರು. ಇನ್ನು ಮೀಸಲಾತಿ ಕುರಿತು ಕ್ರಮ ಕೈಗೊಳ್ಳುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದರು.

ಬೆಂಗಳೂರು: ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ಪಂಚಮಸಾಲಿ ಸಮುದಾಯ 2ಎಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸಭೆಯಲ್ಲಿ ಇಂದು ಶೂನ್ಯವೇಳೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‍.ಯಡಿಯೂರಪ್ಪ ಅವರು ವಿಷಯ ಪ್ರಸ್ತಾಪಿಸಿದಾಗ ಉತ್ತರಿಸಿದ ಸಿಎಂ, ವೀರಶೈವರ ಹತ್ತು-ಹಲವು ಪಂಗಡ ಬಿಟ್ಟು ಹೋಗಿದ್ದವು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಸಂಪುಟ ಉಪ ಸಮಿತಿ ಮಾಡಿದ್ದರು. ನಾನೂ ಕೂಡ ಅದರ ಸದಸ್ಯ ಆಗಿದ್ದೆ. ಹತ್ತು-ಹಲವು ಪಂಗಡಗಳನ್ನು 2ಎಗೆ ಸೇರಿಸಲು ಸರಿಯಾದ ಡೇಟಾ ಇರಲಿಲ್ಲ. ಹಾಗಾಗಿ 3ಬಿನಲ್ಲಿ ಸೇರಿಸಲಾಗಿತ್ತು. ನಂತರ 2ಎ ಹೋರಾಟ ಪಾದಯಾತ್ರೆ ಬಂದಾಗ ಕೂಡಲೇ ಹಿಂದುಳಿದ ವರ್ಗಗಳ ಆಯೋಗಕ್ಕೆ ವರದಿ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು. ಇದೊಂದು ಕಾನೂನಿನ ಅಂಶವಾಗಿರುವುದರಿಂದ ಸಾಕಷ್ಟು ಸಮಯ ಬೇಕಾಗುತ್ತದೆ. ಆದರೂ ನಮ್ಮ ಸರ್ಕಾರ ನ್ಯಾಯ ಒದಗಿಸಲು ಬದ್ಧವಾಗಿದೆ ಎಂದು ಆಶ್ವಾಸನೆ ನೀಡಿದರು.

ಸದನದಲ್ಲಿ ಬಿಎಸ್​ವೈ

ಪಂಚಮಸಾಲಿ ಸಮುದಾಯದ ಮೀಸಲಾತಿಗೆ ಸಂಪೂರ್ಣ ಬೆಂಬಲ: ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಯಡಿಯೂರಪ್ಪ, ನಾನು ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಲು ಎಲ್ಲಿಯೂ ವಿರೋಧ ವ್ಯಕ್ತಪಡಿಸಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಆ ಸಮುದಾಯದ ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಟ್ಟಿದ್ದೆ ಎಂದು ಹೇಳಿದರು.

ವೀರಶೈವ ಲಿಂಗಾಯಿತ ಅಭಿವೃದ್ಧಿ ಪ್ರಾಧಿಕಾರಕ್ಕೂ 500 ಕೋಟಿ ರೂ., ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೂ ಆರ್ಥಿಕ ನೆರವು ಒದಗಿಸಿದ್ದೆ. ವಿವಿಧ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಈ ಸಮುದಾಯ 2ಎ ಸೇರ್ಪಡೆ ಮಾಡುವ ಕುರಿತು ವರದಿ ನೀಡಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಶಿಫಾರಸ್ಸು ಮಾಡಿದ್ದು ನಾನೇ. ಮುಖ್ಯಮಂತ್ರಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

(ಇದನ್ನೂ ಓದಿ: ನನಗೆ ಮಂತ್ರಿ ಸ್ಥಾನ ಬೇಡ, ಪಂಚಮಸಾಲಿ ಮೀಸಲಾತಿ ಕೊಡಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ)

ಯಡಿಯೂರಪ್ಪ ವಿರುದ್ಧ ಕೂಡಲಸಂಗಮ ಸ್ವಾಮೀಜಿ ಆರೋಪ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಸವಣೂರು ರಸ್ತೆಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಮಂಗಳವಾರ ಕೂಡಲಸಂಗಮ ಪೀಠಾಧ್ಯಕ್ಷರಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸತ್ಯಾಗ್ರಹ ಆಯೋಜಿಸಲಾಗಿತ್ತು.

ಸಿಎಂ ಬೊಮ್ಮಾಯಿ ಭರವಸೆ

ಈ ವೇಳೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಯಡಿಯೂರಪ್ಪ ಕಿಡಿಕಾರಿದ್ದರು. ಬೊಮ್ಮಾಯಿ ಅವರು ಮೀಸಲಾತಿ ಕೊಟ್ರೆ ಕಾಯಂ ಲಿಂಗಾಯತ ನಾಯಕರಾಗ್ತಾರೆ ಅಂತಾ ಮೀಸಲಾತಿ ಕೊಡದಂತೆ ಯಡಿಯೂರಪ್ಪ ಒತ್ತಡ ಹಾಕುತ್ತಿದ್ದಾರೆ ಎಂದು ಸ್ವಾಮೀಜಿ ದೂರಿದ್ದರು.

ಸಮಾಜದ ಋಣ ನಿಮ್ಮ ಮೇಲಿದೆ. ಮೀಸಲಾತಿ ಘೋಷಣೆ ಮಾಡಿ. ಆಗಲ್ಲ ಅಂದರೆ ಅದನ್ನಾದರೂ ಅಧಿವೇಶನದಲ್ಲಿ ಘೋಷಣೆ ಮಾಡಿ. ಮೀಸಲಾತಿ ಕೊಟ್ಟ ಮೇಲೆ ಸಿಎಂ ಬೊಮ್ಮಾಯಿ ಅವರಿಗೆ ಡೈಮಂಡ್ ಕವಚ ಹಾಕಿ ತುಲಾಭಾರ ಮಾಡುತ್ತೇವೆ. ಕೂಡಲಸಂಗಮ ಪಂಚಮಸಾಲಿ ಪೀಠದಲ್ಲಿ ನಿಮ್ಮ ಫೋಟೋ ಫಿಕ್ಸ್ ಮಾಡುತ್ತೇವೆ. ಬೊಮ್ಮಾಯಿ ಅವರು ಮೀಸಲಾತಿ ಕೊಟ್ಟು ಹೊಸ ಇತಿಹಾಸ ನಿರ್ಮಾಣ ಮಾಡಬೇಕು ಎಂದು ಸ್ವಾಮೀಜಿ ತಿಳಿಸಿದ್ದರು.

(ಇದನ್ನೂ ಓದಿ: ಮೀಸಲಾತಿಗೆ ಯಡಿಯೂರಪ್ಪ ಅಡ್ಡಿ.. ಸಿಎಂ ಬೊಮ್ಮಾಯಿ ಮನೆ ಮುಂದೆ ಸತ್ಯಾಗ್ರಹಕ್ಕೆ ಕುಳಿತ ಬಸವಜಯ ಮೃತ್ಯುಂಜಯ ಸ್ವಾಮೀಜಿ)

Last Updated :Sep 22, 2022, 5:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.