ETV Bharat / state

ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಮಾಡಿಸಿದ್ರೂ ಕಾಂಗ್ರೆಸ್ ಗೆಲ್ಲಲ್ಲ: ಹೆಚ್​​ಡಿಕೆ

author img

By

Published : Jun 9, 2022, 5:46 PM IST

ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಜೊತೆ ನಾನು ದೂರವಾಣಿಯಲ್ಲಿ ಮಾತನಾಡಿದ್ದು ಸತ್ಯ. ಜೆಡಿಎಸ್‌ನ ಎರಡನೇ ಪ್ರಾಶಸ್ತ್ಯದ ಮತವನ್ನು ಕಾಂಗ್ರೆಸ್ ಅಭ್ಯರ್ಥಿಗೆ ಕೊಡಿ ಎಂದು ಮನವಿ ಮಾಡಿಕೊಂಡರು. ನಾವು ಎರಡನೇ ಪ್ರಾಶಸ್ತ್ಯದ ಮತ ಕೊಟ್ಟರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲ್ಲ. ಹೀಗಾಗಿ ನಮ್ಮ ಅಭ್ಯರ್ಥಿಗೆ ನಿಮ್ಮ ಎರಡನೇ ಪ್ರಾಶಸ್ತ್ಯದ ಮತ ಕೊಡಿ ಎಂದು ಮನವಿ ಮಾಡಿಕೊಂಡಿದ್ದೇನೆ- ಹೆಚ್.ಡಿ.ಕುಮಾರಸ್ವಾಮಿ

HDK
ಹೆಚ್​​ಡಿಕೆ

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಮಾಡಿಸಿದರೂ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ. ನಮಗೆ ಕ್ರಾಸ್ ವೋಟಿಂಗ್ ಆತಂಕ, ಭಯ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟರು.

2 ಪ್ರಾಶಸ್ತ್ಯದ ಮತ ನೀಡಲು ಮನವಿ: ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಅವರು ಬಿಜೆಪಿ ಗೆಲ್ಲಲು ಅನುಕೂಲ ಮಾಡುತ್ತಿದ್ದಾರೆ. ನಮ್ಮ 32 ಶಾಸಕರು ನಮ್ಮ ಜೊತೆಗಿದ್ದಾರೆ. ಮುಂದಿನ ಚುನಾವಣೆ ಬರುವವರೆಗೆ ನಮ್ಮ ಶಾಸಕರು ನಮ್ಮ ಜೊತೆ ಇರುತ್ತೇವೆಂದು ಹೇಳಿದ್ದಾರೆ. ಬೇರೆ ಪಕ್ಷದವರು ನನ್ನ ಸಂಪರ್ಕದಲ್ಲಿಲ್ಲ. ನನ್ನ ಆತ್ಮೀಯ ಕೆಲ ಕಾಂಗ್ರೆಸ್ ಶಾಸಕರಿಗೆ ನಮಗೆ ಎರಡು ಪ್ರಾಶಸ್ತ್ಯದ ಮತ ನೀಡಲು ಮನವಿ ಮಾಡಿದ್ದೇನೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲ್ಲ: ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಜೊತೆ ನಾನು ದೂರವಾಣಿಯಲ್ಲಿ ಮಾತನಾಡಿದ್ದು ಸತ್ಯ. ಜೆಡಿಎಸ್‌ನ ಎರಡನೇ ಪ್ರಾಶಸ್ತ್ಯದ ಮತವನ್ನು ಕಾಂಗ್ರೆಸ್ ಅಭ್ಯರ್ಥಿಗೆ ಕೊಡಿ ಎಂದು ಮನವಿ ಮಾಡಿಕೊಂಡರು. ನಾವು ಎರಡನೇ ಪ್ರಾಶಸ್ತ್ಯದ ಮತ ಕೊಟ್ಟರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲ್ಲ. ಹೀಗಾಗಿ ನಮ್ಮ ಅಭ್ಯರ್ಥಿಗೆ ನಿಮ್ಮ ಎರಡನೇ ಪ್ರಾಶಸ್ತ್ಯದ ಮತ ಕೊಡಿ ಎಂದು ಮನವಿ ಮಾಡಿಕೊಂಡಿದ್ದೇನೆ. ಅವರು ಏನು ಮಾಡ್ತಾರೆ ನೋಡೋಣ ಎಂದು ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಗುಡುಗು: ಮೈತ್ರಿ ಸರ್ಕಾರದಲ್ಲಿ ಏನೇನು ಆಟ ಆಡಿದಿರಿ ಎಂಬುದು ಗೊತ್ತಿದೆ. ನಿಮಗೆ ಬೇಕಾದ ಖಾತೆಗಳು, ನಿಮಗೆ ಬೇಕಾದ ಅಧಿಕಾರಗಳು, ಸಾಕಷ್ಟು ಒತ್ತಡ ಇದ್ದರೂ ರೈತರ ಸಾಲ ಮನ್ನಾ ಮಾಡಲು ನಾನು ಸುಮ್ಮನಿದ್ದೆ. ಪಠ್ಯದ ಬಗ್ಗೆ ಈಗ ಧರಣಿ ಕೂತಿದ್ದೀರಾ. ಈಗ ಜೆಡಿಎಸ್ ಶಾಸಕರ ಸಂಪರ್ಕ ಬೇಕು. 2016 ರಲ್ಲಿ ಹೈಜಾಕ್ ಮಾಡಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸಿದ್ದೀರಲ್ಲಾ? ಇದೇನಾ ಜಾತ್ಯಾತೀತ ಸಿದ್ದರಾಮಯ್ಯನವರೆ?, ಡಿ.ಕೆ. ಶಿವಕುಮಾರ್ ಅವರೇ, ನೀವು ಎಷ್ಟು ಬಾರಿ ಬೆಂಬಲ ಕೊಟ್ಟಿದ್ದೀರಿ. ನೀವು ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದ್ದು, 2006ರಲ್ಲಿ ನಾವು ಬೆಂಬಲ ಕೊಟ್ಟು ಮುಖ್ಯಮಂತ್ರಿ ಆಗಿದ್ದಾರೆ. ಬೇರೆಯವರ ಬಳಿ ನಿಮ್ಮ ಆಟ ಆಡಿ ನನ್ನ ಹತ್ತಿರ ಅಲ್ಲ. 2009ರಲ್ಲಿ ಸಿದ್ದರಾಮಯ್ಯ ಆ್ಯಂಡ್ ಟೀಂ ಬಿಜೆಪಿ ಸೇರಲು ಪ್ರಯತ್ನ ಮಾಡಿದ್ದರು. ಎಲ‌್.ಕೆ.ಅಡ್ವಾಣಿ ಬಳಿ ಚರ್ಚೆ ಮಾಡಿದ್ದರು. ಇದು ಗೊತ್ತಿಲ್ವಾ? ಎಂದರು.

ಕಾಂಗ್ರೆಸ್​ನಲ್ಲಿ ಡಿಕೆಶಿಯದ್ದು ಏನೂ ನಡೆಯಲ್ಲ: ಕಾಂಗ್ರೆಸ್ ಪಕ್ಷದಲ್ಲಿ ನಾಮಕಾವಸ್ಥೆಗೆ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿದ್ದಾರೆ. ಅವರ ಮಾತು ಏನೂ ನಡೆಯಲ್ಲ. ಕಾಂಗ್ರೆಸ್ ಹೈಕಮಾಂಡ್ ಮಾತು ಕೂಡಾ ನಡೆಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಒಬ್ಬರೇ ಇದ್ದಾರೆ. ಅವರ ಮಾತೇ ಇಲ್ಲಿ‌ ನಡೆಯುವುದು ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಜಾತ್ಯತೀತತೆಯ ಸಾವು-ಬದುಕಿನ ಪ್ರಶ್ನೆ, ಆತ್ಮಸಾಕ್ಷಿಯ ಮತ ಮನ್ಸೂರ್​ಗೆ ಕೊಡಿ: ಜೆಡಿಎಸ್ ಶಾಸಕರಿಗೆ ಸಿದ್ದು ಪತ್ರ

ಡಿಕೆಶಿ ಜೊತೆ ಮಾತುಕತೆ ಸತ್ಯ: ಕಾಂಗ್ರೆಸ್ ಪಕ್ಷಕ್ಕೆ 2023ಕ್ಕೆ ಕೊನೆ ಮೊಳೆ ಹೊಡೆದು ಸಿದ್ದರಾಮಯ್ಯ ಹೋಗ್ತಾರೆ ಎಂದು ಹೆಚ್​ಡಿಕೆ ಹೇಳಿದರು. ನಿನ್ನೆ ರಾತ್ರಿ ನಾನು ಡಿ.ಕೆ. ಶಿವಕುಮಾರ್ ಜೊತೆ ದೂರವಾಣಿಯಲ್ಲಿ ಮಾತಾಡಿದ್ದು ಸತ್ಯ. ಇದರಲ್ಲಿ ಕದ್ದು ಮುಚ್ಚಿ ಇಡೋದು ಏನಿದೆ? ಎಂದರು.

ಜೆಡಿಎಸ್‍ ಅಸಮಾಧಾನ ಶಾಸಕರ ಬಗ್ಗೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ಶಿವಲಿಂಗೇಗೌಡರ ಬಳಿ ನಾನೇ ಮಾತನಾಡಿದ್ದೇನೆ. ಇನ್ನು ಜಿ.ಟಿ.ದೇವೇಗೌಡರು ಮತ ಹಾಕುವುದಾಗಿ ಹೇಳಿದ್ದಾರೆ. ಗುಬ್ಬಿ ಶ್ರೀನಿವಾಸ್ ಅವರನ್ನು ಸಂಪರ್ಕ ಮಾಡಲಾಗಿದೆ. ಬಿಜೆಪಿ ಗೆಲ್ಲಿಸಲು ಹೀಗೆ ಮಾತನಾಡುತ್ತಿದ್ದಾರೆ‌. ದರಿದ್ರ ಸರ್ಕಾರ ತಂದವರು ನೀವು ನಾನಲ್ಲ. ಜನಕ್ಕೆ ಸಂದೇಶ ಕೊಡಬೇಕು ಅಂದರೆ ಏನು ಮಾಡ್ತೀರ ನೋಡಿ?. ಬಿಜೆಪಿ ಬಿ ಟೀಂ ಯಾರು ಅಂತಾ 10 ರ ನಂತರ ಜನರಿಗೆ ಗೊತ್ತಾಗುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.