ETV Bharat / state

ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನೀಡಲು ವಿಳಂಬ.. ಬ್ಯಾಂಕ್​ ಮತ್ತು ಕೆಂದ್ರಕ್ಕೆ ಹೈಕೋರ್ಟ್​ನಿಂದ ₹ 1 ಲಕ್ಷ ದಂಡ

author img

By

Published : Feb 19, 2023, 2:47 PM IST

ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನೀಡಲು ವಿಳಂಬ ಮಾಡಿದ ಬ್ಯಾಂಕ್​ ಮತ್ತು ಕೇಂದ್ರಕ್ಕೆ 1 ಲಕ್ಷ ರೂಪಾಯಿ ದಂಡವನ್ನು ಹೈಕೋರ್ಟ್ ವಿಧಿಸಿದೆ.

HighCourt
ಹೈಕೋರ್ಟ್​

ಬೆಂಗಳೂರು : ಸುಮಾರು 102 ವರ್ಷದ ಸ್ವಾತಂತ್ರ್ಯ ಹೋರಾಟಗಾರರು ಪಿಂಚಣಿ ಪಡೆಯಲು ಸತತ ಮೂರು ಬಾರಿ ಹೈಕೋರ್ಟ್ ಮೆಟ್ಟಿಲೇರುವುದಕ್ಕೆ ಕಾರಣವಾಗಿದ್ದ ರಾಷ್ಟೀಕೃತ ಬ್ಯಾಂಕ್​ ಮತ್ತು ಕೇಂದ್ರ ಗೃಹ ಮಂತ್ರಾಲಯದ ಸ್ವಾತಂತ್ರ್ಯ ಹೋರಾಟಗಾರರ ವಿಭಾಗಕ್ಕೆ ಹೈಕೋರ್ಟ್ 1 ಲಕ್ಷ ರೂ.ಗಳ ದಂಡ ವಿಧಿಸಿ ಆದೇಶಿಸಿದೆ.

ಜೀವನ ಪ್ರಮಾಣ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ 2018ರಿಂದ ಪಿಂಚಣಿ ನೀಡದ ಬ್ಯಾಂಕ್​ನ ಕ್ರಮ ಪ್ರಶ್ನಿಸಿ ಮಲ್ಲೇಶ್ವರದ ನಿವಾಸಿ ಎಚ್​.ನಾಗಭೂಷಣ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ದಂಡ ವಿಧಿಸಿ ಆದೇಶಿಸಿದೆ. ಅಲ್ಲದೆ, ಪಿಂಚಣಿ ಎನ್ನುವುದು ವರದಾನವಲ್ಲ. ಸಾಮಾಜಿಕ-ಆರ್ಥಿಕ ನ್ಯಾಯದ ಅಡಿಯಲ್ಲಿ ಭದ್ರತೆಯನ್ನು ನೀಡುತ್ತದೆ. ಜೀವನದ ಕೊನೆ ಹಂತದಲ್ಲಿ ಆರ್ಥಿಕ ಮತ್ತು ಮಾನಸಿಕವಾಗಿ ಕುಗ್ಗದಂತೆ ಸಹಕಾರಿಯಾಗಲಿದೆ. ಆದರೆ, ವಯಸ್ಸಾದ ಕಾರಣದಿಂದ ಜೀವನ ಪ್ರಮಾಣಪತ್ರ ಸಲ್ಲಿಸಲಾಗಿಲ್ಲ ಎಂದು ಪಿಂಚಣಿ ತಡೆಹಿಡಿಯಲು ಸಾಧ್ಯವಿಲ್ಲ.

ಇದರಿಂದ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪಿಂಚಣಿ ಹಕ್ಕು ಕಸಿದುಕೊಳ್ಳದಂತೆ ಆಗಬಾರದು. ದಂಡದ ಮೊತ್ತವನ್ನು ಅರ್ಜಿದಾರರಿಗೆ ನೀಡಬೇಕು ಎಂದು ಸೂಚಿಸಿದೆ. ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗ ಸೂಚಿಗಳ ಪ್ರಕಾರ ಬ್ಯಾಂಕ್ ಅಧಿಕಾರಿಗಳು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ಹೋಗಿ ಜೀವಿತ ಪ್ರಮಾಣಪತ್ರ ಪಡೆದು ಕಾಲ ಕಾಲಕ್ಕೆ ನವೀಕರಿಸಿಕೊಳ್ಳಬೇಕು ಎಂದು ಹೇಳಿದೆ. ಜೊತೆಗೆ, 2018 ರಿಂದ ಬಾಕಿಯಿರುವ ಸುಮಾರು 3.71 ಲಕ್ಷ ರೂ.ಗಳಿಗೆ ವಾರ್ಷಿಕ ಶೇ. 6 ರಷ್ಟು ಬಡ್ಡಿಯೊಂದಿಗೆ ಮುಂದಿನ ಎರಡು ವಾರದಲ್ಲಿ ಪಾವತಿಸಬೇಕು. ತಪ್ಪಿದಲ್ಲಿ ಶೇ.18 ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ನಿರ್ದೇಶನ ನೀಡಿದೆ.

ಆ ಮೂಲಕ ಅನಗತ್ಯವಾಗಿ ಪದೇ ಪದೇ ಬ್ಯಾಂಕ್​ಗಳಲ್ಲಿ ದಾಖಲಾಗುವ ಅರ್ಜಿಗಳನ್ನಾದರೂ ತಪ್ಪಿಸಬಹುದಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು, 1974 ರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪಿಂಚಣಿ ಪಡೆಯುತ್ತಿದ್ದರು. ವಯಸ್ಸಾದ ಕಾರಣದ ಜೀವನ ಪ್ರಮಾಣಪತ್ರ ಸಲ್ಲಿಸಲಾಗಿಲ್ಲ. ಅಲ್ಲದೆ, 70 ರಿಂದ 99 ವರ್ಷದೊಳಗಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಜೀವನ ಪ್ರಮಾಣ ಪತ್ರವನ್ನು ಪಡೆಯುವುದಕ್ಕಾಗಿ ಬ್ಯಾಂಕ್​ ಸಿಬ್ಬಂದಿಯೇ ಅರ್ಜಿದಾರರ ಮನೆಗೆ ಹೋಗಬೇಕು. ಜೀವನ ಪ್ರಮಾಣಪತ್ರ ಪಡೆದು ಆನ್ಲೈನ್​ನಲ್ಲಿ ನವೀಕರಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿಗಳನ್ನು ಹೊರಡಿಸಿದೆ.

ಆದರೆ, ಬ್ಯಾಂಕ್​ ಅಧಿಕಾರಿಗಳು ಕಾರ್ಯಕ್ಕೆ ಮುಂದಾಗದೆ ಪಿಂಚಣಿ ಸ್ಥಗಿತಗೊಳಿಸಿದ್ದಾರೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. ಕೇಂದ್ರ ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಜೀವಿತ ಪ್ರಮಾಣಪತ್ರ ಸಲ್ಲಿಸದಿರುವುದು ಮತ್ತು ಪಿಂಚಣಿ ಸ್ಥಗಿತಗೊಳ್ಳುವುದಕ್ಕೆ ಕೇಂದ್ರ ಸರ್ಕಾರ ಜವಾಬ್ದಾರಿಯಲ್ಲ. ಸ್ವಾತಂತ್ರ್ಯ ಹೋರಾಟಗಾರರ ಜೀವಿತ ಪ್ರಮಾಣಪತ್ರ ಸಂಗ್ರಹಿಸಿ ಸಲ್ಲಿಸುವುದು ಬ್ಯಾಂಕ್​ ಅಧಿಕಾರಿಗಳ ಕರ್ತವ್ಯ. ಹೀಗಾಗಿ ಅರ್ಜಿದಾರರಿಗೆ ಪಿಂಚಣಿ ಸ್ಥಗಿತಗೊಳ್ಳಲು ಬ್ಯಾಂಕ್​ ಅಧಿಕಾರಿಗಳೇ ಹೊಣೆ ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಅರ್ಜಿದಾರರು ಸುಮಾರು 102 ವರ್ಷದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 1974ರಿಂದ ಸ್ವಾತಂತ್ರ್ಯ ಸೈನಿಕ ಸಮ್ಮಾನ್​ ಗೌರವಧನ ಪಡೆದುಕೊಳ್ಳುತ್ತಿದ್ದರು. ಇದಕ್ಕಾಗಿ ಮಲ್ಲೇಶ್ವರದ ರಾಷ್ಟ್ರೀಕೃತ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದರು. ಈ ನಡುವೆ 2017ರ ನವೆಂಬರ್​ 1 ರಿಂದ ಪಿಂಚಣಿ ಸ್ಥಗಿತಗೊಂಡಿತ್ತು. ಇದಕ್ಕೆ ಕಾರಣ ಪತ್ತೆ ಹಚ್ಚಿದಾಗ ಜೀವಿತ ಪ್ರಮಾಣಪತ್ರ ಸಲ್ಲಿಸಿಲ್ಲ ಎಂಬುದಾಗಿ ತಿಳಿದು ಬಂದಿತ್ತು. ಇದಾದ ಬಳಕ ಜೀವಿತ ಪ್ರಮಾಣಪತ್ರ ಸಲ್ಲಿಸಿದ್ದರೂ ಪಿಂಚಣಿ ಮಂಜೂರಾಗಿರಲಿಲ್ಲ. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಸೂಚನೆ ಮೇರೆಗೆ ಪಿಂಚಣಿ ಪಾವತಿಸದ ಬ್ಯಾಂಕ್​ ಮತ್ತು ಕೇಂದ್ರ ಸರ್ಕಾರದ ಗೃಹ ಮಂತ್ರಾಲಯದ ವಿರುದ್ಧ ಮತ್ತೊಂದು ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಮ್ಯಾನ್​ಹೋಲ್​ ಶುಚಿಗೊಳಿಸುತ್ತಿದ್ದ ಪತಿ ಸಾವು: ನಿವೇಶನ ಹಿಂಪಡೆದ ಗ್ರಾ,ಪಂಗೆ 1 ಲಕ್ಷ ದಂಡ ವಿಧಿಸಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.