ETV Bharat / state

ದೆಹಲಿಯಲ್ಲಿ ಮುಕುಲ್ ರೋಹಟಗಿ, ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ಮಾಡಿ ಚರ್ಚಿಸಿದ ಡಿಸಿಎಂ ಡಿಕೆಶಿ

author img

By

Published : Jun 29, 2023, 10:49 PM IST

ನವದೆಹಲಿಯಲ್ಲಿ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಭೇಟಿಯಾಗಿ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಜಾರಿ ಹಾಗೂ ಕಾಮಗಾರಿಗಳ ಪ್ರಗತಿ ಕುರಿತು ಚರ್ಚಿಸಿದ್ದಾರೆ.

dcm d k shivakumar met
ಕೇಂದ್ರ ಸಚಿವ ಗಜೇಂದ್ರ ಸಿಂಗ್,ಮುಕುಲ್ ರೋಹಟಗಿ ಅವರನ್ನು ಭೇಟಿ ಮಾಡಿದ ಡಿಕೆಶಿ

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹಿರಿಯ ನ್ಯಾಯವಾದಿ ಹಾಗೂ ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರನ್ನು ದೆಹಲಿಯಲ್ಲಿ ಗುರುವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಮುಕುಲ್ ರೋಹಟಗಿ ಈ ಹಿಂದೆ ಇಡಿ, ಸಿಬಿಐ ಕೇಸ್‌ಗಳಿಗೆ ಸಂಬಂಧಪಟ್ಟಂತೆ ಡಿ.ಕೆ. ಶಿವಕುಮಾರ್ ಪರವಾಗಿ ವಾದಿಸಿದ್ದಾರೆ. ಭೇಟಿಯ ಸಂದರ್ಭದಲ್ಲಿ ಅವರ ವಿರುದ್ಧ ನಡೆಯುತ್ತಿರುವ ಪ್ರಕರಣಗಳ ಪ್ರಸ್ತುತ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಬುಧವಾರ ರಾತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳಿದ್ದು, ವರಿಷ್ಠರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪರಿಷತ್ ಸದಸ್ಯರ ಆಯ್ಕೆ, ನಿಗಮ ಮಂಡಳಿ ನೇಮಕ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ಮೇಕೆದಾಟು ಸಂಬಂಧ ಟ್ರಿಬ್ಯುನಲ್ ರಚಿಸುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ನವದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಶೇಖಾವತ್ ಅವರ ನಿವಾಸದಲ್ಲಿ ಗುರುವಾರ ರಾತ್ರಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಇಬ್ಬರು ನಾಯಕರು ಸುದೀರ್ಘವಾಗಿ ಸಮಾಲೋಚಿಸಿದ್ದಾರೆ ಎಂಬ ಮಾಹಿತಿ ಇದೆ. ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಜಾರಿ ಹಾಗೂ ಕಾಮಗಾರಿ ಪ್ರಗತಿ ಕುರಿತು ಸಹ ಚರ್ಚಿಸಿದ್ದಾರೆ. ಕೇಂದ್ರ ಸರ್ಕಾರದಿಂದ ದೊರೆಯಬೇಕಿರುವ ಅನುದಾನವನ್ನು ಆದಷ್ಟು ತ್ವರಿತವಾಗಿ ಬಿಡುಗಡೆ ಮಾಡುವಂತೆ ಕೋರಿದ್ದಾರೆ.

ರಾಜ್ಯದಲ್ಲಿ ಮಾನ್ಸೂನ್ ಮಳೆ ಕಾಲಾವಧಿ ಆರಂಭವಾಗಿ ತಿಂಗಳು ಕಳೆದಿದ್ದರೂ ಎಲ್ಲೆಡೆ ಸಮರ್ಪಕವಾಗಿ ಮಳೆ ಬರುತ್ತಿಲ್ಲ. ವಾಡಿಕೆಗಿಂತ ಶೇಕಡಾ 58ರಷ್ಟು ಪ್ರಮಾಣದಲ್ಲಿ ಮಳೆ ಕಡಿಮೆಯಾಗಿದ್ದು ವಿವಿಧ ಜಿಲ್ಲೆಗಳು ಬರ ಪರಿಸ್ಥಿತಿಗೆ ತುತ್ತಾಗಲಿವೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಎದುರಾಗಲಿದೆ. ರಾಜ್ಯದ ಎಲ್ಲ ಸಮಸ್ಯೆಗಳಿಗೂ ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದು ಇದೇ ಸಂದರ್ಭದಲ್ಲಿ ಡಿಕೆಶಿ ಮನವಿ ಮಾಡಿದ್ದಾರೆ. ನಾಳೆಯೂ ದಿಲ್ಲಿಯಲ್ಲಿ ವಿವಿಧ ಮುಖಂಡರನ್ನು ಭೇಟಿಯಾಗಲಿರುವ ಡಿಕೆಶಿ ಪಕ್ಷದ ರಾಷ್ಟ್ರೀಯ ನಾಯಕರನ್ನು ಸಹ ಭೇಟಿಯಾಗಿ ಚರ್ಚಿಸಲಿದ್ದಾರೆ.

ವಿಧಾನ ಪರಿಷತ್ ಆಕಾಂಕ್ಷಿಗಳಿಂದ ಅರ್ಜಿ : ಈ ಹಿಂದೆ ವಿಧಾನಸಭೆ ಚುನಾವಣೆಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದ ಕಾಂಗ್ರೆಸ್ ಪಕ್ಷ ಈಗ ವಿಧಾನ ಪರಿಷತ್ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿದ್ದು, ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ. ವಿಧಾನ ಪರಿಷತ್‌ನ ಆರು ಕ್ಷೇತ್ರಗಳಿಗೆ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು, ಶಿಕ್ಷಕರ ಕ್ಷೇತ್ರದ ಮೂರು ಸ್ಥಾನ, ಪದವೀಧರ ಕ್ಷೇತ್ರದ ಮೂರು ಸ್ಥಾನಕ್ಕೆ ನಡೆಯುವ ಚುನಾವಣೆಗೆ ಸ್ಪರ್ಧಿಸಿಲು ಇಚ್ಚಿಸುವವರು ವಿಧಾನಸಭೆ ಚುನಾವಣೆ ಮಾದರಿಯಲ್ಲಿ ಟಿಕೆಟ್‌ಗೆ ಅರ್ಜಿ ಹಾಕಬೇಕು ಎಂದಿದೆ. ಅರ್ಜಿ ಶುಲ್ಕ 5,000 ರೂ., ಪಕ್ಷದ ‌ನಿಧಿ 2,00,000 ರೂ. ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶ ಮಾಡಿದ್ದಾರೆ.

ಇದನ್ನೂಓದಿ: Political Training Institute: ರಾಜಕೀಯ ಕಲಿಯಲು ಪೊಲಿಟಿಕಲ್ ಟ್ರೈನಿಂಗ್ ಇನ್​ಸ್ಟಿಟ್ಯೂಟ್ ಆರಂಭ: ಸ್ಪೀಕರ್ ಯು ಟಿ ಖಾದರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.