ETV Bharat / state

ಡಿ.ಕೆ.ಶಿವಕುಮಾರ್ ಪ್ರಕರಣ: ಸಿಬಿಐ, ಯತ್ನಾಳ್ ಅರ್ಜಿ ವಿಸ್ತೃತ ಪೀಠಕ್ಕೆ

author img

By ETV Bharat Karnataka Team

Published : Jan 5, 2024, 5:55 PM IST

Updated : Jan 5, 2024, 7:58 PM IST

Etv Bharat
Etv Bharat

ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮಿರಿ ಆಸ್ತಿ ಗಳಿಕೆ ಆರೋಪ ಪ್ರಕರಣ ಸಂಬಂಧ ಸಿಬಿಐ ಮತ್ತು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದೆ.

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಸಿಬಿಐ ಮತ್ತೆ ಹೈಕೋರ್ಟ್ ಕದ ತಟ್ಟಿದೆ. ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್, ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲು ಏಕ ಸದಸ್ಯ ಪೀಠ ಶಿಫಾರಸು ಮಾಡಿದೆ.

ಶುಕ್ರವಾರ ಸಿಬಿಐ ಮತ್ತು ಯತ್ನಾಳ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ, ಯುದ್ಧೋಪಾದಿಯಲ್ಲಿ ಅರ್ಜಿಯ ವಿಚಾರಣೆ ನಡೆದು ಶೀಘ್ರದಲ್ಲಿ ಅಂತಿಮ ಹಂತ ತಲುಪಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿಸ್ತೃತ ಪೀಠ ರಚನೆ ಮಾಡುವಂತೆ ಕೋರಿ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಿತು. ವಿಸ್ತೃತ ಪೀಠದಲ್ಲಿ ಎಷ್ಟು ನ್ಯಾಯಮೂರ್ತಿಗಳಿರಬೇಕು ಎಂಬುದು ಮುಖ್ಯನ್ಯಾಯಮೂರ್ತಿಗಳಿಗೆ ಬಿಟ್ಟಿದ್ದು. ಜೊತೆಗೆ, ಪ್ರತಿವಾದಿಗಳಾದ ಲೋಕಾಯುಕ್ತ ಮತ್ತು ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿತು. ಅಲ್ಲದೆ, ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ಪ್ರಕರಣ ವಿಚಾರಣೆ ಪೂರ್ಣಗೊಳ್ಳುವವರೆಗೂ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಪೀಠ ನಿರ್ದೇಶನ ನೀಡಿತು.

ವಿಚಾರಣೆ ವೇಳೆ ಸಿಬಿಐ ಪರ ವಕೀಲ ಪ್ರಸನ್ನ ಕುಮಾರ್ ಹಾಜರಾಗಿ, ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿತ್ತು. ಇದಕ್ಕೆ ಸರ್ಕಾರ ಅನುಮತಿಯನ್ನೂ ನೀಡಿತ್ತು. ಆದರೆ, ಇದೀಗ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದು ಲೋಕಾಯುಕ್ತಕ್ಕೆ ವಹಿಸಲಾಗಿದೆ. ಆದ್ದರಿಂದ ರಾಜ್ಯ ಸಚಿವ ಸಂಪುಟದ ಆದೇಶವನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ, ಲೋಕಾಯುಕ್ತಕ್ಕೆ ವಹಿಸಿದ್ದ ಎಫ್‌ಐಆರ್ ದಾಖಲಾಗಿದೆ. ಆದ್ದರಿಂದ, ಈ ಸಂಬಂಧ ದಾಖಲೆಗಳನ್ನು ವಶಕ್ಕೆ ಪಡೆಯಬೇಕು ಎಂದು ಕೋರಿದರು.

ಅಲ್ಲದೆ, ಸಿಬಿಐ ನಡೆಸುತ್ತಿರುವ ತನಿಖೆ ಮುಂದುವರೆಸುವುದಕ್ಕೆ ಅವಕಾಶ ನೀಡಬೇಕು ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಈ ನಡುವೆ ಯತ್ನಾಳ್ ಪರ ವಕೀಲರು, ಹಲವು ಸುಪ್ರೀಂ ಕೋರ್ಟ್ ಪ್ರಕರಣಗಳನ್ನು ಉಲ್ಲೇಖಿಸಿ, ಒಬ್ಬ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ಕ್ಯಾಬಿನೆಟ್ ಹಿಂಪಡೆದಲ್ಲಿ ಮೂರನೇ ವ್ಯಕ್ತಿ ಮಧ್ಯಪ್ರವೇಶಕ್ಕೆ ಅವಕಾಶವಿದೆ. ಆದ ಕಾರಣ ನಮ್ಮನ್ನು ಪರಿಗಣಿಸಿ ವಾದವನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು. ವಾದ ಆಲಿಸಿದ ಪೀಠ, ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿ ಆದೇಶಿಸಿದೆ.

ಎರಡೂ ಅರ್ಜಿಗಳ ಅರ್ಜಿದಾರರಿಗೆ ಅರ್ಜಿ ಸಲ್ಲಿಸುವ ಅಧಿಕಾರ ಇಲ್ಲ. 2013ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಮೂರನೇ ವ್ಯಕ್ತಿಯು ಕ್ರಿಮಿನಲ್ ಪ್ರಕ್ರಿಯೆಯಲ್ಲಿ ಮೂಗು ತೂರಿಸುವಂತಿಲ್ಲ ಎಂದು ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.

ಪ್ರಕರಣದ ಹಿನ್ನೆಲೆ: 2019ರಲ್ಲಿ ಬಿಜೆಪಿ ಸರ್ಕಾರವು ಡಿ.ಕೆ.ಶಿವಕುಮಾರ್ ವಿರುದ್ಧ ಅಕ್ರಮ ಹಣ ಗಳಿಕೆ ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ವಜಾ ಮಾಡಿತ್ತು. ಆ ನಂತರ ಇದನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಈ ಮಧ್ಯೆ, ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು, ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ನವೆಂಬರ್ 28ರಂದು ಹಿಂಪಡೆದಿತ್ತು. ಈ ಹಿನ್ನೆಲೆಯಲ್ಲಿ ಡಿಕೆಶಿ ಮೇಲ್ಮನವಿ ಹಿಂಪಡೆದಿದ್ದರು. ಹೀಗಾಗಿ, ವಿಭಾಗೀಯ ಪೀಠವು ಅರ್ಜಿ ಇತ್ಯರ್ಥಪಡಿಸಿತ್ತು. ಇದಕ್ಕೆ ಆಕ್ಷೇಪಿಸಿ ಬಿಜೆಪಿ ಶಾಸಕ ಯತ್ನಾಳ್ ಅವರು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗ ಸಿಬಿಐ ಕೂಡಾ ಹೈಕೋರ್ಟ್ ಮೆಟ್ಟಿಲೇರಿದೆ.

Last Updated :Jan 5, 2024, 7:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.