ETV Bharat / state

ರಾಜ್ಯಕ್ಕೆ ಮತ್ತೆ ಕಾವೇರಿ ಆಘಾತ.. 18 ದಿನ 3000 ಕ್ಯೂಸೆಕ್​ ನೀರು ಬಿಡಲು CWRC ಶಿಫಾರಸು

author img

By ETV Bharat Karnataka Team

Published : Sep 26, 2023, 4:00 PM IST

ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ತಮಿಳುನಾಡಿಗೆ 18 ದಿನಗಳ ಕಾಲ 3000 ಕ್ಯೂಸೆಕ್​​ ನೀರು ಬಿಡಲು ಶಿಫಾರಸ್ಸು ಮಾಡಿದೆ.

ಕಾವೇರಿ
ಕಾವೇರಿ

ಬೆಂಗಳೂರು : ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ಕರ್ನಾಟಕಕ್ಕೆ ಮತ್ತೆ ಆಘಾತ ನೀಡಿದೆ.‌ 18 ದಿನಗಳ ಕಾಲ 3,000 ಕ್ಯೂಸೆಕ್​​ ನೀರು ಬಿಡಲು ಶಿಫಾರಸು ಮಾಡಿದೆ. ಇಂದು ನಡೆದ CWRC ಸಭೆಯಲ್ಲಿ ಉಭಯ ರಾಜ್ಯಗಳ ವಾದ ಆಲಿಸಿ, ಮತ್ತೆ ತಮಿಳುನಾಡಿಗೆ 3,000 ಕ್ಯೂಸೆಕ್​​ ಕಾವೇರಿ ನೀರು ಬಿಡುವಂತೆ ಶಿಫಾರಸು ಮಾಡಿದೆ.‌ ಈಗಾಗಲೇ ನೀರಿಲ್ಲದೆ ಬರಿದಾಗಿರುವ ರಾಜ್ಯಕ್ಕೆ ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ಗಾಯದ ಮೇಲೆ ಬರೆ ಎಳೆದಿದೆ. ರೈತರು, ವಿವಿಧ ಸಂಘಟನೆಗಳು ಬೆಂಗಳೂರು ಬಂದ್ ಕರೆದಿರುವ ಇಂದೇ CWRC ನೀರು ಬಿಡುವಂತೆ ಶಿಫಾರಸು ಮಾಡಿದೆ.

ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ಮುಂದೆ ವಾದ ಮಂಡಿಸಿದ ಕರ್ನಾಟಕ ಅಧಿಕಾರಿಗಳು, 25.09.2023 ರ ವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು 53.04% ಆಗಿದೆ. ಕರ್ನಾಟಕ ಸರ್ಕಾರ ದಿನಾಂಕ 13.09.2023 ರ ಆದೇಶದಲ್ಲಿ ರಾಜ್ಯದ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಮತ್ತು 34 ತಾಲೂಕುಗಳನ್ನು ಮಧ್ಯಮ ಬರ ಪೀಡಿತ ಎಂದು ಘೋಷಿಸಿದೆ. ಈ ಪೈಕಿ 32 ತೀವ್ರ ಬರ ಪೀಡಿತ ತಾಲೂಕುಗಳು ಮತ್ತು 15 ಮಧ್ಯಮ ಬರ ಪೀಡಿತ ತಾಲೂಕುಗಳು ಕಾವೇರಿ ಜಲಾನಯನ ಪ್ರದೇಶದಲ್ಲಿವೆ. ಈ ಅಂಶವು ಅತ್ಯಂತ ಮನ್ನಣೆಯ ಮತ್ತು ಸಮಿತಿಯಿಂದ ವಿಮರ್ಶಾತ್ಮಕ ಪರಿಗಣನೆಗೆ ಅಗತ್ಯವಿದೆ ಎಂದು ಮನವಿ ಮಾಡಿದರು.

ಕರ್ನಾಟಕ ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ ಅಥವಾ ಅದರ ಜಲಾಶಯಗಳಿಂದ ಯಾವುದೇ ಹರಿವನ್ನು ಅಂತಾರಾಜ್ಯ ಗಡಿಯಾದ ಬಿಳಿಗುಂಡ್ಲುನಲ್ಲಿ ನಿರ್ವಹಿಸಬೇಕಾದ ಹರಿವುಗಳಿಗೆ ಕೊಡುಗೆ ನೀಡುವುದಿಲ್ಲ ಎಂದು ವಿವರಿಸಿದರು.

ಇತ್ತ ತಮಿಳುನಾಡು ಅಧಿಕಾರಿಗಳು ವಾದ ಮಂಡಿಸಿ, ಕರ್ನಾಟಕ ಸಹ ಸಂಕಷ್ಟದ ಅನುಪಾತದ ಆಧಾರದ ಮೇಲೆ ನೀರಾವರಿ ಪೂರೈಕೆಯನ್ನು ಕಡಿಮೆ ಮಾಡಬೇಕು. ಕರ್ನಾಟಕ ತಕ್ಷಣವೇ ಕೊರತೆಯ ಪ್ರಮಾಣವನ್ನು ಬಿಡುಗಡೆ ಮಾಡಬೇಕು ಮತ್ತು ಸಂಕಷ್ಟದ ಅನುಪಾತಕ್ಕೆ ಅನುಗುಣವಾಗಿ ಮತ್ತಷ್ಟು ನೀರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಅಂತಿಮವಾಗಿ CWRC ಕರ್ನಾಟಕ ಬಿಳಿಗುಂಡ್ಲುವಿನಲ್ಲಿ 28.09.2023 (ಬೆಳಗ್ಗೆ 8) ರಿಂದ 15.10.2023 ರ ವರೆಗೆ 3000 ಕ್ಯೂಸೆಕ್​ ನೀರನ್ನು ಬಿಡುಗಡೆ ಮಾಡುವಂತೆ ಶಿಫಾರಸ್ಸು ಮಾಡಿತು. ಕಳೆದ ಬಾರಿ 5000 ಕ್ಯೂಸೆಕ್​​ ನಷ್ಟು ನೀರು ಬಿಡಲು ಸೂಚಿಸಿತ್ತು‌. ಇದೀಗ 3000 ಕ್ಯೂಸೆಕ್​​ ನೀರು ಬಿಡುಗಡೆಗೆ ಶಿಫಾರಸು ಮಾಡಿದೆ.

ಕಳೆದ ಬಾರಿ CWRC ಕರ್ನಾಟಕಕ್ಕೆ 5000 ಕ್ಯೂಸೆಕ್​​ ನೀರು ಬಿಡುವಂತೆ ಶಿಫಾರಸು ಮಾಡಿತ್ತು.‌ ಈ ಸಂಬಂಧ ಕಾವೇರಿ ನದಿ ನೀರು ಪ್ರಾಧಿಕಾರವೂ ಸಮಿತಿಯ ಶಿಫಾರಸ್ಸನ್ನು ಎತ್ತಿ ಹಿಡಿಯಿತು. ಇದನ್ನು ಪ್ರಶ್ನಿಸಿ ಕರ್ನಾಟಕ ಸುಪ್ರೀಂಕೋರ್ಟ್ ಮೊರೆ ಹೋಗಿತ್ತು. ಆದರೆ ಸುಪ್ರೀಂಕೋರ್ಟ್ ಕೂಡ ನೀರು ಬಿಡುಗಡೆಗೆ ನಿರ್ದೇಶಿಸಿ, CWRC ಮುಂದೆ ಹೋಗುವಂತೆ ಆದೇಶಿಸಿತ್ತು. ಇದೀಗ ಇಂದು ನಡೆದ CWRC ಸಭೆಯಲ್ಲಿ ಮತ್ತೆ 18 ದಿನಗಳ ಕಾಲ ನೀರು ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿರುವುದು ಕರ್ನಾಟಕ ರಾಜ್ಯಕ್ಕೆ ದೊಡ್ಡ ಆಘಾತ ನೀಡಿದೆ.

ಇದನ್ನೂ ಓದಿ: 'ತಮಿಳುನಾಡು ಕೇಳಿದಷ್ಟು ನಮ್ಮ ಬಳಿ ನೀರಿಲ್ಲ, ಬಿಡುವುದೂ ಇಲ್ಲ': ಡಿಸಿಎಂ ಡಿ.ಕೆ.ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.