ETV Bharat / state

ವಿದೇಶದಿಂದ ಅಕ್ರಮವಾಗಿ ತಂದ 1.46 ಕೋಟಿ ಮೌಲ್ಯದ 7.3 ಲಕ್ಷ ಸಿಗರೇಟ್​ಗಳ ನಾಶ..

author img

By ETV Bharat Karnataka Team

Published : Oct 30, 2023, 5:02 PM IST

Updated : Oct 30, 2023, 5:33 PM IST

ಸಿಗರೇಟ್​ಗಳನ್ನು ನಾಶಪಡಿಸುತ್ತಿರುವುದು
ಸಿಗರೇಟ್​ಗಳನ್ನು ನಾಶಪಡಿಸುತ್ತಿರುವುದು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಅಧಿಕಾರಿಗಳು 1.46 ಕೋಟಿ ಮೌಲ್ಯದ 7.3 ಲಕ್ಷ ಸಿಗರೇಟ್​ಗಳನ್ನು ವಶಕ್ಕೆ ಪಡೆದುಕೊಂಡು ನಂತರ ನಾಶಗೊಳಿಸಿದ್ದಾರೆ.

ಬೆಂಗಳೂರು : ವಿದೇಶದಿಂದ ಅಕ್ರಮವಾಗಿ ಸಿಗರೇಟ್​ ಸಾಗಿಸುವ ಯತ್ನವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ. ಈ ವೇಳೆ ಪ್ರಯಾಣಿಕರು ಸಿಕ್ಕಿಬಿದ್ದಿದ್ದು, ಅವರಿಂದ ವಶಪಡಿಸಿಕೊಂಡು 1.46 ಕೋಟಿ ಮೌಲ್ಯದ 7.3 ಲಕ್ಷ ಸಿಗರೇಟ್​ಗಳನ್ನು ಸುಟ್ಟು ನಾಶ ಮಾಡಲಾಗಿದೆ. ನೆಲಮಂಗಲದ ಬೆಂಗಳೂರು ಇಕೋ ಪ್ರೈವೇಟ್ ಲಿಮಿಟೆಡ್​ನಲ್ಲಿರುವ ಇನ್ಸಿನರೇಟರ್​ನಲ್ಲಿ ಜಪ್ತಿ ಮಾಡಲಾದ ಸಿಗರೇಟ್​ಗಳನ್ನು ಇಡೀ ದಿನ ನಾಶಪಡಿಸಲಾಗಿದೆ.

ಪಶ್ಚಿಮ ಏಷ್ಯಾ ಮತ್ತು ಥಾಯ್ಲೆಂಡ್​ನಿಂದ ಪ್ರಯಾಣಿಕರು ಬೆಂಗಳೂರಿಗೆ ಅಕ್ರಮವಾಗಿ ಸಿಗರೇಟ್​ ಸಾಗಿಸುವ ಯತ್ನದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬೀಳುತ್ತಿದ್ದರು. ಒಬ್ಬ ಪ್ರಯಾಣಿಕನಿಗೆ ವಿದೇಶದಿಂದ 100 ಸಿಗರೇಟ್​ಗಳನ್ನು ತರಲು ಅನುಮತಿ ನೀಡಲಾಗಿದೆ. ಆದರೆ ಪ್ರಯಾಣಿಕರು 100ಕ್ಕಿಂತ ಹೆಚ್ಚು ಸಿಗರೇಟ್​ಗಳನ್ನು ತಂದು ಕಸ್ಟಮ್ಸ್ ಆಕ್ಟ್ 1962ರ ಅಡಿ ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ. ನಿಯಮಗಳನ್ನ ಮೀರಿ ಸಿಗರೇಟ್​ಗಳನ್ನ ತರುವ ಪ್ರಯಾಣಿಕರಿಗೆ ಅನುಗುಣವಾಗಿ ದಂಡವನ್ನು ವಿಧಿಸಲಾಗುತ್ತದೆ. 50 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಸಿಗರೇಟ್​ಗಳನ್ನ ತಂದವರನ್ನ ಬಂಧನಕ್ಕೆ ಒಳಪಡಿಸಲಾಗುತ್ತದೆ.

ಸಿಗರೇಟ್​ಗಳನ್ನು ನಾಶಪಡಿಸುತ್ತಿರುವುದು
ಸಿಗರೇಟ್​ಗಳನ್ನು ನಾಶಪಡಿಸುತ್ತಿರುವುದು

ಅಕ್ಟೋಬರ್ 2 ರಿಂದ 31ರ ವರೆಗೆ ಕಸ್ಟಮ್ಸ್ ಇಲಾಖೆಯು ನಡೆಸುತ್ತಿರುವ ಸ್ವಚ್ಛತಾ ಅಭಿಯಾನದ ಅಂಗವಾಗಿ ಸಿಗರೇಟ್ ಗಳನ್ನು ನಾಶಪಡಿಸಲಾಯಿತು. ಸಿಗರೇಟ್​ಗಳ ನಾಶಪಡಿಸುವ ವೇಳೆ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಏರ್ ಕಾರ್ಗೋ ಕಮಿಷನರೇಟ್‌ನ ಜಾಗೃತ ಘಟಕದ ಅಧಿಕಾರಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಪ್ರಕರಣಗಳು- ಬೆಂಗಳೂರು ಕಸ್ಟಮ್ಸ್‌ಗೆ ಸಿಕ್ಕಿಬಿದ್ದ ಸ್ಮಗ್ಲರ್ಸ್ : ವಿದೇಶದಿಂದ ಅಕ್ರಮವಾಗಿ ಇ-ಸಿಗರೇಟ್​ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್) ಕಸ್ಟಮ್ಸ್ ಅಧಿಕಾರಿಗಳಿಗೆ (ಸೆಪ್ಟೆಂಬರ್ 18-2023) ಸಿಕ್ಕಿಬಿದ್ದಿದ್ದರು. ಆರೋಪಿಗಳಿಂದ 15.9 ಲಕ್ಷ ರೂಪಾಯಿ ಮೌಲ್ಯದ ಇ-ಸಿಗರೇಟ್ ವಶಕ್ಕೆ ಪಡೆಯಲಾಗಿತ್ತು.

ಸೋಮವಾರ ಮಲೇಷ್ಯಾದ ಕೌಲಾಲಂಪುರ್​ನಿಂದ ಮಲೇಷ್ಯಾ ಏರ್‌ಲೈನ್ಸ್ ಎಮ್ ಹೆಚ್ 192 ವಿಮಾನದ ಮೂಲಕ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ಲಗೇಜ್​ಗಳನ್ನು ಪರಿಶೀಲನೆ ಮಾಡುವಾಗ ಅಕ್ರಮ ಪತ್ತೆಯಾಗಿತ್ತು. 1,590 ಇ-ಸಿಗರೇಟ್​ಗಳನ್ನು ಜಪ್ತಿ ಮಾಡಲಾಗಿತ್ತು. ಆರೋಪಿಗಳ ವಿರುದ್ಧ ಕಸ್ಟಮ್ಸ್ ಕಾಯ್ದೆ 1962 ಅಡಿ ಪ್ರಕರಣ ದಾಖಲಿಸಲಾಗಿತ್ತು.

ಸೂಟ್‌ಕೇಸ್​ನಲ್ಲಿ 20 ವಿಷಕಾರಿ ಕಿಂಗ್ ಕೋಬ್ರಾ!: ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನ ಲಗೇಜ್​ಗಳನ್ನು ತಪಾಸಣೆ ಮಾಡಿದಾಗ ಆತನ ಸೂಟ್ ಕೇಸ್​ನಲ್ಲಿ 20 ವಿಷಕಾರಿ ಕಿಂಗ್ ಕೋಬ್ರಾಗಳು ಪತ್ತೆಯಾಗಿದ್ದವು. ಹೆಬ್ಬಾವು, ಕೋತಿಗಳು ಸೇರಿದಂತೆ ಒಟ್ಟು 78 ಪ್ರಾಣಿಗಳಿದ್ದವು. ಸೆಪ್ಟೆಂಬರ್​ 6 ರಂದು ರಾತ್ರಿ 10:30ಕ್ಕೆ ಏರ್ ಏಷ್ಯಾ ವಿಮಾನದಲ್ಲಿ ಬಂದ ಪ್ರಯಾಣಿಕನ ಲಗೇಜ್​ಗಳನ್ನು ಪರಿಶೀಲನೆ ಮಾಡಿದಾಗ ಅಕ್ರಮ ಬಯಲಾಗಿತ್ತು.

ಇದನ್ನೂ ಓದಿ: ಅಕ್ರಮವಾಗಿ ವಿದೇಶದಿಂದ ಇ-ಸಿಗರೇಟ್ ಸಾಗಣೆ: ಬೆಂಗಳೂರು ಕಸ್ಟಮ್ಸ್‌ಗೆ ಸಿಕ್ಕಿಬಿದ್ದ ಸ್ಮಗ್ಲರ್ಸ್

Last Updated :Oct 30, 2023, 5:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.