ETV Bharat / state

ಮಳೆಯ ರೌದ್ರಾವತಾರ: 89 ಸಾವಿರ ಹೆಕ್ಟೇರ್​​ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ನಾಶ

author img

By

Published : Aug 29, 2020, 9:48 PM IST

flood
ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ನಾಶ

ಈ ಬಾರಿಯೂ ವರುಣನ ಆರ್ಭಟ ರಾಜ್ಯದಲ್ಲಿ ಜೋರಾಗಿದೆ. ಕೆಲವು ಜಿಲ್ಲೆಗಳಲ್ಲಿ ಸುರಿದ ಮಳೆ ಹಾಗೂ ಪ್ರವಾಹದಿಂದ ಸುಮಾರು 89 ಸಾವಿರ ಹೆಕ್ಟೇರ್​​ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ನೆಲಕಚ್ಚಿವೆ. ಇದರಿಂದ ಅಂದಾಜು ಒಟ್ಟು 3.500ದಿಂದ 4 ಸಾವಿರ ಕೋಟಿ‌ ರೂ. ನಷ್ಟವಾಗಿದೆ.

ಬೆಂಗಳೂರು : ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದ ಅಂದಾಜು 89 ಸಾವಿರ ಹೆಕ್ಟೇರ್​​ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿವೆ.

ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಉತ್ತರಕನ್ನಡ, ಉಡುಪಿ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬೆಳೆ ಮಳೆಗೆ ಹಾನಿಯಾಗಿದೆ.

ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ನಾಶ

ಮುಸುಕಿನ ಜೋಳ, ಈರುಳ್ಳಿ, ಜೋಳ, ರಾಗಿ, ಭತ್ತ, ಕಬ್ಬು, ಹತ್ತಿ, ತೊಗರಿ, ಉದ್ದು, ಸೂರ್ಯಕಾಂತಿ, ಸಜ್ಜೆ, ಶೇಂಗಾ, ಎಳ್ಳು, ತಂಬಾಕು, ಸೋಯಾಬಿನ್​​ ಬೆಳೆಗಳು ನೆಲಕಚ್ಚಿವೆ. ಇದರ ಜೊತೆಗೆ ತೋಟಗಾರಿಕೆ ಬೆಳೆಗಳಾದ ದ್ರಾಕ್ಷಿ, ಸಪೋಟ, ತರಕಾರಿಗಳಾದ ಟೊಮ್ಯಾಟೊ, ಬದನೆ, ಕೋಸ್ ಮತ್ತಿತರ ಬೆಳೆಗಳು ನಷ್ಟವಾಗಿದೆ.

ರಾಜ್ಯದಲ್ಲಿ ಸುಮಾರು 89 ಸಾವಿರ ಎಕರೆ ಬೆಳೆ ಹಾನಿ ಆಗಿದ್ದು, ಅಂದಾಜು ಒಟ್ಟು 3.500ದಿಂದ 4 ಸಾವಿರ ಕೋಟಿ‌ ರೂ. ನಷ್ಟವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಇತ್ತೀಚೆಗೆ ಮಾಹಿತಿ ನೀಡಿದ್ದರು.

ಅಧಿಕಾರಿಗಳ ಲೆಕ್ಕಾಚಾರದ ಪ್ರಕಾರ ಪ್ರವಾಹದಿಂದ 3,500 ರಿಂದ 4,000 ಕೋಟಿ ರೂ. ನಷ್ಟವಾಗಿದೆ. ಸುಮಾರು 89 ಸಾವಿರ ಎಕರೆ ಬೆಳೆ ಪ್ರವಾಹಕ್ಕೆ ತುತ್ತಾಗಿದೆ. ಪ್ರಧಾನಿಯವರಿಗೆ ನಾವು ಮನವರಿಕೆ ಮಾಡಿಕೊಡುತ್ತೇವೆ. ಕೇಂದ್ರ ಸರ್ಕಾರ ಎನ್​ಡಿಆರ್​ಎಫ್ ನಿಯಮಗಳ ಪ್ರಕಾರ ಪರಿಹಾರ ಕೊಡುತ್ತದೆ ಎಂದು ಹೇಳಿದ್ದಾರೆ.

ಈ ಬಾರಿ ಬಾಗಲಕೋಟೆ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 31 ರಷ್ಟು ಹೆಚ್ಚು ಮಳೆಯಾಗಿದೆ. ಪ್ರವಾಹ ಹಾಗೂ ಮಳೆಯಿಂದಾಗಿ 22,473 ಹೆಕ್ಟೇರ್​ ಕೃಷಿ ಬೆಳೆ,12,388 ಹೆಕ್ಟೇರ್​ ತೋಟಗಾರಿಕೆ ಬೆಳೆ, 8.4 ಹೆಕ್ಟೇರ್​​ ರೇಷ್ಮೆ ಬೆಳೆ ಸೇರಿ ಒಟ್ಟು 34,869.40 ಹೆಕ್ಟೇರ್​ ಬೆಳೆ ಹಾನಿಯಾಗಿದೆ.

ರಾಜ್ಯದಲ್ಲಿ ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ಈರುಳ್ಳಿ ಬೆಳೆಗೆ ಫಂಗಸ್​ನಿಂದ ‘ಸ್ಟೆಂ ಫೀಲಿಯಂ’ ರೋಗ ಕಾಣಿಸಿಕೊಂಡಿದೆ. ಇದರಿಂದ ಸಾವಿರಾರು ಹೆಕ್ಟೇರ್ ಈರುಳ್ಳಿ ನಷ್ಟವಾಗುವ ಆತಂಕ ಸೃಷ್ಟಿಯಾಗಿದೆ. ಪರಿಣಾಮ ಈರುಳ್ಳಿ ಬೆಲೆ ದುಬಾರಿ ಆಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ 2020-21ನೇ ಸಾಲಿನ ಮುಂಗಾರು ಮಳೆ ಆಧಾರವಾಗಿ 1,52,366 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಬಳ್ಳಾರಿ, ಕೊಪ್ಪಳ, ಹಾವೇರಿ, ಧಾರವಾಡ, ದಾವಣಗೆರೆ, ಬೆಳಗಾವಿ, ಚಿತ್ರದುರ್ಗ ಮತ್ತು ಗದಗ ಜಿಲ್ಲೆಗಳಲ್ಲಿ ಈರುಳ್ಳಿ ಬೆಳೆಯುತ್ತಿದ್ದು, ಎಲ್ಲ ಭಾಗದಲ್ಲಿ ಈ ರೋಗ ಪತ್ತೆಯಾಗಿದೆ. ಈ ರೋಗದಿಂದಾಗಿ ಶೇ.20 ಎಂದರೆ 1.52 ಲಕ್ಷ ಹೆಕ್ಟೇರ್​ನಲ್ಲಿ 30 ಸಾವಿರ ಹೆಕ್ಟೇರ್ ಈರುಳ್ಳಿ ಬೆಳೆ ನಷ್ಟವಾಗಲಿದೆ ಎಂದು ಕೃಷಿ ತಜ್ಞರು ಅಂದಾಜಿಸಿದ್ದಾರೆ.

ದೇಶದ 4ನೇ ಅತಿದೊಡ್ಡ ಈರುಳ್ಳಿ ಉತ್ಪಾದನೆ ಕರ್ನಾಟಕದಲ್ಲಿ ಆಗುತ್ತದೆ. ಪ್ರತಿವರ್ಷ 1.2 ಲಕ್ಷದಿಂದ 1.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಮೋಡ ಕವಿದ ವಾತಾವರಣ ಮತ್ತು ಮಳೆ ಮುಂದುವರಿದರೆ ಈರುಳ್ಳಿ ಬೆಳೆ ನಷ್ಟವಾಗುವ ಮೂಲಕ ಕಳೆದ ವರ್ಷದಂತೆ ದರ ಹೆಚ್ಚಳವಾಗುವ ಸಾಧ್ಯತೆ ಇದೆ. ಜತೆಗೆ, ಮಹಾರಾಷ್ಟ್ರ ಮತ್ತು ಗುಜರಾತ್​ನಿಂದ ಆಮದಾಗುತ್ತಿದ್ದ ಈರುಳ್ಳಿ ಕೂಡ ಮಳೆಗೆ ಸಿಲುಕಿ ಕೊಳೆಯಲು ಆರಂಭವಾಗಿದೆ.ಬೆಳ್ಳುಳ್ಳಿ ಬೆಲೆ ಕ್ವಿಂಟಲ್‌ಗೆ 14,000 ರೂ. ತಲುಪಿ ಮತ್ತೆ ದಾಖಲೆ ಸೃಷ್ಟಿಸಿದೆ. ಬೆಳ್ಳುಳ್ಳಿ ಬೆಳೆದ ರೈತರಲ್ಲಿ ಸಂತಸ ಮೂಡಿದೆ. ಇನ್ನು ಈರುಳ್ಳಿ ಬೆಲೆ ಮಾತ್ರ ಸ್ಥಿರವಾಗಿದೆ.

ಕಳೆದ ವರ್ಷ ಸಹ ಹೆಚ್ಚು ಮಳೆಯಿಂದಾಗಿ ಈರುಳ್ಳಿ ದರ ಗಗನಕ್ಕೇರಿತ್ತು. ಕ್ವಿಂಟಲ್ ಈರುಳ್ಳಿಗೆ 20 ಸಾವಿರ ರೂ. ದರ ದಾಟಿತ್ತು. ಕೆಜಿಗೆ 200 ರೂ. ವರೆಗೆ ಮಾರಾಟವಾಗಿತ್ತು. ಕಳೆದ ವಾರವಷ್ಟೇ ಕೆಜಿ ಈರುಳ್ಳಿ 15 ರೂ. ನಿಂದ 20 ರೂ. ದರ ಇತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ 25-30 ರೂ. ದರ ಇದೆ. ಮುಂದಿನ ದಿನಗಳಲ್ಲಿ 50- 60 ರೂ. ವರೆಗೆ ಹೆಚ್ಚುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಸ್ಥರು.

ರಾಜ್ಯದ ಹಲವು ಭಾಗಗಳಲ್ಲಿ ಹೆಚ್ಚು ಮಳೆಯಾಗಿದ್ದು, ಇನ್ನು ಕೆಲ ಭಾಗಗಳಲ್ಲಿ ಮಳೆ ಕಡಿಮೆಯಾಗಿರುವುದರಿಂದ ತರಕಾರಿ ಬೆಲೆಯಲ್ಲಿ ದಿಢೀರ್‌ ಹೆಚ್ಚಳವಾಗಿದೆ. ಮಾರುಕಟ್ಟೆಯಲ್ಲಿ ಬದನೆ, ಹೀರೇಕಾಯಿ, ನುಗ್ಗೆಕಾಯಿ ಸೇರಿದಂತೆ ಹಲವು ತರಕಾರಿ ಬೆಳೆಗಳ ಬೆಲೆ ಏರಿಕೆಯಾಗಿದೆ.ಕೆಲ ಭಾಗಗಳಲ್ಲಿ ಸಾಧಾರಣ ಮಳೆ ಮುಂದುವರಿದಿದೆ.

ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ಬೆಳೆಯಲಾದ ತರಕಾರಿ ಹಾಗೂ ಸೊಪ್ಪು ಮಾರುಕಟ್ಟೆಗೆ ಬರುತ್ತಿದೆ. ಬೇರೆ ಜಿಲ್ಲೆಗಳ ತರಕಾರಿ ಕಡಿಮೆ ಪ್ರಮಾಣದಲ್ಲಿ ಮಾರುಕಟ್ಟೆಗೆ ರವಾನೆಯಾಗುತ್ತಿದೆ. ಒಂದು ಕಡೆ ವ್ಯಾಪಕ ಮಳೆ, ಇನ್ನೊಂದು ಕಡೆ ಮಳೆ ಕಡಿಮೆಯಾಗಿರುವುದರಿಂದ ತರಕಾರಿ ಬೆಳೆಗಳು ಮಾರುಕಟ್ಟೆಗೆ ಬರುವುದು ಕಡಿಮೆಯಾಗಿದೆ. ಇದರಿಂದ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ತರಕಾರಿ ವ್ಯಾಪಾರಿ ಸುರೇಶ್.


ಬೆಳೆ ನಷ್ಟ ಹೆಕ್ಟೇರ್​​ಗಳಲ್ಲಿ :
ಮುಸುಕಿನ ಜೋಳ: 22,289 ಹೆಕ್ಟೇರ್
ಜೋಳ: 232
ರಾಗಿ:16.44
ತೊಗರಿ: 18592
ಕಬ್ಬು:21160
ಶೇಂಗಾ: 3199.33
ಭತ್ತ: 8947
ಸೋಯಾ: 9986
ಹೆಸರು: 37623
ತಂಬಾಕು: 140
ಇತರ ಧಾನ್ಯಗಳು:4911.83 ಹೆಕ್ಟೇರ್.

ತರಕಾರಿ ದರ ಎಷ್ಟಿದೆ :ಕೆ.ಜಿಗಳಲ್ಲಿ
ಈರುಳ್ಳಿ:15-20 ರೂ.
ಆಲೂಗಡ್ಡೆ: 30-40
ಎಲೆಕೋಸು: 30-40
ಬೀನ್ಸ್: 30-35
ಹೂಕೋಸು: 40-45
ಬೆಳ್ಳುಳ್ಳಿ: 120-140
ಬೀಟ್ ರೋಟ್: 40-50
ಹೀರೇಕಾಯಿ: 60-70
ಟೊಮ್ಯಾಟೊ:30-40
ಬೆಂಡೆಕಾಯಿ:50-70
ಕೊತಂಬರಿ ಸೊಪ್ಪು:20-25

ETV Bharat Logo

Copyright © 2024 Ushodaya Enterprises Pvt. Ltd., All Rights Reserved.