ETV Bharat / state

ಬೆಂಗಳೂರು: ತಂದೆ-ತಾಯಿಯನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳ ವಿರುದ್ಧ ಕ್ರಿಮಿನಲ್ ಕೇಸ್

author img

By ETV Bharat Karnataka Team

Published : Jan 7, 2024, 8:31 PM IST

ಬೆಂಗಳೂರು ಪೊಲೀಸರು
ಬೆಂಗಳೂರು ಪೊಲೀಸರು

ಪೋಷಕರನ್ನು ಸೂಕ್ತ ರೀತಿಯಲ್ಲಿ ಸಲಹದ ಮಕ್ಕಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ನಡೆದ ಘಟನೆಯೊಂದು ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಬೆಂಗಳೂರು: ಪೋಷಕರನ್ನು ಸೂಕ್ತ ರೀತಿಯಲ್ಲಿ‌ ನೋಡಿಕೊಳ್ಳದೇ ಮಕ್ಕಳೇ ಕರೆತಂದು ವೃದ್ಧಾಶ್ರಮಕ್ಕೆ ಹಾಕುತ್ತಿರುವ ಪ್ರಕರಣಗಳು ನಗರದಲ್ಲಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲು ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.

ನ್ಯಾಯಾಲಯದ ಆದೇಶಾನುಸಾರ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿಕೊಳ್ಳುವಂತೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸೂಚಿಸಿದ್ದಾರೆ. ಬೆಂಗಳೂರಿನ ವೃದ್ಧಾಶ್ರಮಗಳ ಮೇಲೆ‌ ನಿಗಾ ವಹಿಸಿರುವ ಪೊಲೀಸರು, ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದ ಅಥವಾ ಇಳಿ ವಯಸ್ಸಿನಲ್ಲಿ ಪೋಷಕರನ್ನು ನಿರ್ಗತಿಕರಂತೆ ತ್ಯಜಿಸುವ ಮಕ್ಕಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಲು ನಿರ್ಧರಿಸಿದ್ದಾರೆ.

80 ವರ್ಷದ ವೃದ್ಧೆಯನ್ನು ಆಕೆಯ ಮಗಳು ಅಳಿಯ ಮಧ್ಯರಾತ್ರಿ ಕಾರಿನಲ್ಲಿ ತಂದು ರಸ್ತೆ ಬದಿ ಮಲಗಿಸಿ ಹೋಗಿದ್ದ ಘಟನೆ ನಿನ್ನೆಯಷ್ಟೇ ಬೆಂಗಳೂರು ಗ್ರಾಮಾಂತರದ ಆನೇಕಲ್ ಬಳಿ ನಡೆದಿತ್ತು. ವೃದ್ಧೆಯನ್ನು ರಸ್ತೆ ಬದಿ ಇಳಿಸಿ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ರಾತ್ರಿಯಿಡೀ ಕಸದಂತೆ ರಸ್ತೆ ಬದಿ ಕಳೆದಿದ್ದ ವೃದ್ಧೆಯನ್ನು ಗಮನಿಸಿದ್ದ ಸ್ಥಳೀಯರು ಅವರನ್ನು ರಕ್ಷಿಸಿ, ಸಮೀಪದ ಆಶ್ರಮಕ್ಕೆ ದಾಖಲಿಸಿದ್ದರು.

ಸ್ವಂತ ಮಗಳು ಮತ್ತು ಅಳಿಯ ತನಗೆ ಹೊಡೆದು, ಬಡಿದು ಕಾರಿನಲ್ಲಿ ಕರೆತಂದು ಇಲ್ಲಿ ಬಿಟ್ಟಿದ್ದಾರೆ. ಮತ್ತೆ ತಾನು ಅವರ ಬಳಿ ಹೋಗಲ್ಲ ಎಂದು ವೃದ್ಧೆ ಕಣ್ಣೀರಿಟ್ಟಿದ್ದರು. ಇಂಥಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಇನ್ಮುಂದೆ ಪೋಷಕರನ್ನು ವೃದ್ಧಾಶ್ರಮಗಳಿಗೆ ಕಳುಹಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸಿಕೊಳ್ಳುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಬೆಳೆದ ಮಗಳಿಗೆ ಭಾರವಾದ ತಾಯಿ; ಕಾರಿನಲ್ಲಿ ಕರೆತಂದು ರಾತ್ರಿ ರಸ್ತೆಯಲ್ಲೇ ಬಿಟ್ಟು ಹೋದರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.