ETV Bharat / state

ಚೆಕ್​ ಬೌನ್ಸ್​ ಪ್ರಕರಣದಲ್ಲಿ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅಪರಾಧಿ; ಹಣ ಪಾವತಿಗೆ ತಪ್ಪಿದರೆ 6 ತಿಂಗಳು ಜೈಲು ಶಿಕ್ಷೆ

author img

By

Published : Jun 26, 2023, 9:17 PM IST

ಚೆಕ್​ ಬೌನ್ಸ್​ ಪ್ರಕರಣದಲ್ಲಿ ಮಾಜಿ ಶಾಸಕ ಜೆ. ನರಸಿಂಹಸ್ವಾಮಿ ಅಪರಾಧಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

court-declared-former-mla-j-narasimhaswamy-as-an-accused-in-cheque-bounce-case
ಚೆಕ್​ ಬೌನ್ಸ್​ ಪ್ರಕರಣ: ಮಾಜಿ ಶಾಸಕ ಜೆ.ನರಸಿಂಹಸ್ವಾಮಿಗೆ ಆರೋಪಿ ಎಂದು ಪ್ರಕಟಿಸಿದ ನ್ಯಾಯಾಲಯ

ಬೆಂಗಳೂರು : ಮೆಡಿಕಲ್​ ಸೀಟು ಕೊಡಿಸುವುದಾಗಿ ಪಡೆದ ಹಣಕ್ಕೆ ಬದಲಾಗಿ ನೀಡಿದ್ದ ಚೆಕ್​ ಬೌನ್ಸ್ ಆದ​ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಆರ್​.ಎಲ್. ಜಾಲಪ್ಪ ಪುತ್ರ ಮಾಜಿ ಶಾಸಕ ಜೆ. ನರಸಿಂಹಸ್ವಾಮಿ ಅವರನ್ನು ಅಪರಾಧಿ ಎಂದು ಪ್ರಕಟಿಸಿರುವ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಮೊತ್ತವನ್ನು ಪಾವತಿಸಲು ವಿಫಲವಾದಲ್ಲಿ ಆರು ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಇದೇ ವೇಳೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಅಲ್ಲಿಸುವವರೆಗೂ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು, ಜಾಮೀನು ಮಂಜೂರು ಮಾಡಿದೆ.

ಈ ಸಂಬಂಧ ಬಿಟಿಎಂ ಬಡಾವಣೆಯ ಪ್ರಕಾಶ್​ ಕುಮಾರ್​ ಯಾರಪ್ಪ ಎಂಬವರು ದಾಖಲಿಸಿದ್ದ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜೆ. ಪ್ರೀತ್​ ಈ ಆದೇಶ ನೀಡಿದ್ದಾರೆ. ದೂರುದಾರರಿಗೆ ಪಾವತಿಸಬೇಕಾದ ಒಟ್ಟು ಮೊತ್ತದಲ್ಲಿ 64,95,000 ಲಕ್ಷ ರೂಪಾಯಿಗಳನ್ನು ಪಾವತಿಸಿ, 5 ಸಾವಿರ ರೂಪಾಯಿಗಳನ್ನು ಸರ್ಕಾರಕ್ಕೆ ಪಾವತಿ ಮಾಡುವಂತೆ ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು? : ಬೆಂಗಳೂರಿನ ಬಿಟಿಎಂ ಬಡಾವಣೆ ನಿವಾಸಿ ಪ್ರಕಾಶ್​ ಕುಮಾರ್​ ಯಾರಪ್ಪ ತಮ್ಮ ಅವರ ಮಗಳಿಗೆ ವೈದ್ಯಕೀಯ ಪದವಿಗೆ ಸೇರಲು ಪ್ರಯತ್ನ ನಡೆಸುತ್ತಿದ್ದರು. ಈ ನಡುವೆ ಆರೋಪಿತರ ಪತ್ನಿಯ ಮೂಲಕ ಪರಿಚಯವಾಗಿದ್ದ ಆರೋಪಿ ನರಸಿಂಹಸ್ವಾಮಿ ಅವರು, ತನಗೆ ಹಲವು ಮೆಡಿಕಲ್​ ಕಾಲೇಜುಗಳು ಪರಿಚಯವಿದ್ದು, ಸೀಟು ಕೊಡಿಸುತ್ತೇನೆ ಎಂಬುದಾಗಿ ಭರವಸೆ ನೀಡಿದ್ದರು ಎಂದು ದೂರಲಾಗಿದೆ.

ಇದಕ್ಕಾಗಿ 60 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, 20 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದರ ಮುಂದುವರೆದ ಭಾಗವಾಗಿ ಒಮ್ಮೆ 10 ಲಕ್ಷ ರೂ. ಹಾಗೂ ಮತ್ತೊಮ್ಮೆ 15 ಲಕ್ಷ ರೂಪಾಯಿಗಳನ್ನು ನರಸಿಂಹಸ್ವಾಮಿ ಮನೆಗೆ ತಲುಪಿಸಲಾಗಿದೆ. ಅಲ್ಲದೆ, ನರಸಿಂಹಸ್ವಾಮಿ ಅವರ ಮ್ಯಾನೇಜರ್​ ಮತ್ತವರ ಹೆಂಡತಿ ಖಾತೆಗಳಿಗೆ ತಲಾ 10 ಲಕ್ಷದಂತೆ 20 ಲಕ್ಷ ರೂ.ಗಳನ್ನು ಜಮೆ ಮಾಡಿದ್ದರು. ಒಟ್ಟು 45 ಲಕ್ಷ ರೂಪಾಯಿಗಳನ್ನು ಪಡೆದು ಮೆಡಿಕಲ್ ಸೀಟು ಕೊಡಿಸಿಲ್ಲ. ಹಣ ಹಿಂದಿರುಗಿಸುವಂತೆ ಬೇಡಿಕೆ ಇಟ್ಟಿದ್ದರೂ ನೀಡದೆ ಕಾಲ ತಳ್ಳುತಿದ್ದರು. ಮನೆಗೆ ಹೋಗಿ ಕೇಳಿದಾಗ 20 ಲಕ್ಷ ಮತ್ತು 25 ಲಕ್ಷ ರೂ.ಗಳ ಎರಡು ಬ್ಯಾಂಕ್​ ಆಫ್​ ಬರೋಡಾದ ಚೆಕ್​ಗಳನ್ನು ನೀಡಿದ್ದರು. ಆದರೆ, ಚೆಕ್​ಗಳು ಬೌನ್ಸ್​ ಆಗಿದ್ದವು. ಇದನ್ನು ಪ್ರಶ್ನಿಸಿ ನೆಗೋಷಿಬಲ್​ ಇನ್​ಸ್ಟ್ರುಮೆಂಟ್​ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಆದೇಶ ನೀಡಿದೆ.

ಇದನ್ನೂ ಓದಿ: ವ್ಯಕ್ತಿಯ ವೃಷಣ ಹಿಸುಕಿ ಗಾಯಗೊಳಿಸಿದ ಪ್ರಕರಣ.. ಆರೋಪಿಗೆ ವಿಧಿಸಿದ್ದ ಶಿಕ್ಷೆ ಇಳಿಕೆ ಮಾಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.