ETV Bharat / state

1 ರೂಪಾಯಿ ಚಿಲ್ಲರೆ ನೀಡದ ಕಂಡಕ್ಟರ್​: ಪ್ರಯಾಣಿಕನಿಗೆ ₹3 ಸಾವಿರ ಪರಿಹಾರ ನೀಡಲು ಬಿಎಂಟಿಸಿಗೆ ಕೋರ್ಟ್ ಆದೇಶ

author img

By

Published : Feb 22, 2023, 10:54 PM IST

ಬಿಎಂಟಿಸಿಗೆ ಗ್ರಾಹಕರ ಹಕ್ಕುಗಳ ನ್ಯಾಯಾಲಯವು ನ್ಯಾಯಾಲಯದ ವೆಚ್ಚವೂ ಸೇರಿ ಮೂರು ಸಾವಿರ ರೂ. ದಂಡ ಹಾಕಿದೆ.

consumer-court-fined-bmtc-over-conductor-does-not-give-rs-1-to-passengers
1 ರೂ. ಚಿಲ್ಲರೆ ನೀಡದ ಕಂಡಕ್ಟರ್​: ಬಿಎಂಟಿಸಿಗೆ 3 ಸಾವಿರ ರೂ. ದಂಡ ಹಾಕಿದ ಗ್ರಾಹಕರ ಹಕ್ಕುಗಳ ನ್ಯಾಯಾಲಯ

ಬೆಂಗಳೂರು: ಪ್ರಯಾಣಿಕರೊಬ್ಬರಿಗೆ ಒಂದು ರೂಪಾಯಿ ಚಿಲ್ಲರೆ ಪಾವತಿಸಲು ನಿರ್ವಾಹಕ ನಿರಾಕರಿಸಿದ್ದ ಕಾರಣಕ್ಕೆ ಗ್ರಾಹಕರ ಹಕ್ಕುಗಳ ನ್ಯಾಯಾಲಯವು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಗೆ ಮೂರು ಸಾವಿರ ರೂ. ದಂಡ ವಿಧಿಸಿ ಬಿಸಿ ಮುಟ್ಟಿಸಿದೆ. ರಮೇಶ್‌ ನಾಯಕ್‌ ಎಂಬವರು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಇಲ್ಲಿನ ನಾಲ್ಕನೇ ಹೆಚ್ಚುವರಿ ಗ್ರಾಹಕರ ಹಕ್ಕುಗಳ ನ್ಯಾಯಾಲಯವು ಈ ಆದೇಶ ನೀಡಿದ್ದು, ಅರ್ಜಿದಾರರಿಗೆ ಪರಿಹಾರವಾಗಿ ಈ ಮೊತ್ತ ಪಾವತಿಸುವಂತೆ ಸೂಚಿಸಿದೆ.

ಇದನ್ನೂ ಓದಿ: ವಾಹನದಲ್ಲಿ ಎಸಿ ಬಳಸದ ಹಿನ್ನೆಲೆ: ಪ್ರಯಾಣಿಕರಿಗೆ 15 ಸಾವಿರ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯದ ಆದೇಶ

ಅಲ್ಲದೇ, ಕಾನೂನು ಹೋರಾಟಕ್ಕಾಗಿ ಒಂದು ಸಾವಿರ ರೂಪಾಯಿ ನ್ಯಾಯಾಲಯದ ವೆಚ್ಚ ಪಾವತಿಸುವಂತೆ ಬಿಎಂಟಿಸಿಗೆ ನಿರ್ದೇಶಿಸಲಾಗಿದೆ. ಜೊತೆಗೆ 45 ದಿನಗಳೊಳಗೆ ಹಣ ಪಾವತಿಸಬೇಕು. ಇಲ್ಲವಾದಲ್ಲಿ ವಾರ್ಷಿಕ ಶೇ.6ರ ಬಡ್ಡಿ ಅನ್ವಯವಾಗಲಿದೆ ಎಂದು ಎಚ್ಚರಿಸಿದೆ.

ಪ್ರಕರಣದ ಹಿನ್ನೆಲೆ: 2019ರ ಸೆಪ್ಟೆಂಬರ್​ನಲ್ಲಿ​ ಅರ್ಜಿದಾರ ನಾಯಕ್‌ ಬಿಎಂಟಿಸಿ ವೋಲ್ವೊ ಬಸ್​ನಲ್ಲಿ ಶಾಂತಿನಗರದಿಂದ ಮೆಜೆಸ್ಟಿಕ್​ಗೆ ಪ್ರಯಾಣಿಸಿದ್ದರು. ಈ ಸಂದರ್ಭದಲ್ಲಿ 29 ಟಿಕೆಟ್‌ ದರಕ್ಕೆ 30 ರೂಪಾಯಿ ಪಾವತಿಸಿದ್ದರು. ಆದರೆ, ನಿರ್ವಾಹಕರು ಒಂದು ರೂಪಾಯಿ ಚಿಲ್ಲರೆ ಹಿಂದಿರುಗಿಸಿರಲಿಲ್ಲ. ಆದ್ದರಿಂದ 15 ಸಾವಿರ ರೂ. ಪರಿಹಾರ ಕೋರಿ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಕ್ಷುಲ್ಲಕ ಪ್ರಕರಣ ಎಂದಿದ್ದ ಬಿಎಂಟಿಸಿ: ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಬಿಎಂಟಿಸಿ, ಇದೊಂದು ಕ್ಷುಲ್ಲಕ ಪ್ರಕರಣ ಎಂದು ಹೇಳಿತ್ತು. ಜೊತೆಗೆ ಸೇವಾ ನ್ಯೂನತೆಯಾಗಿಲ್ಲ. ಹೀಗಾಗಿ ಈ ದೂರನ್ನು ವಜಾ ಮಾಡಬೇಕೆಂದು ಮನವಿ ಮಾಡಿತ್ತು. ಆದರೆ, ವ್ಯಾಜ್ಯವು ಕ್ಷುಲ್ಲಕ ಎಂದೆನಿಸಿದರೂ ದೂರುದಾರರು ವಿಚಾರವನ್ನು ಹಕ್ಕು ಎಂದು ಪರಿಗಣಿಸಿ, ಅದನ್ನು ಆಯೋಗದ ಮುಂದೆ ಇಟ್ಟಿದ್ದಾರೆ ಎಂದು ಆಯೋಗ ತಿಳಿಸಿದೆ. ಇಷ್ಟೇ ಅಲ್ಲ, ಇದು ಗ್ರಾಹಕರ ಹಕ್ಕಿನ ವಿಚಾರವಾಗಿದ್ದು, ಅದನ್ನು ಗುರುತಿಸಬೇಕಿದೆ. ಅರ್ಜಿದಾರರ ಪ್ರಯತ್ನವನ್ನೂ ಮೆಚ್ಚಬೇಕಿದೆ. ದೂರುದಾರರು ಪರಿಹಾರ ಪಡೆಯಲು ಅರ್ಹರಾಗಿದ್ದಾರೆ ಎಂದು ಆಯೋಗವು ತನ್ನ ಆದೇಶದಲ್ಲಿ ಹೇಳಿದೆ.

ಇದನ್ನೂ ಓದಿ: ಧಾರವಾಡ: ಗರ್ಭಿಣಿಯ ಚೆಕ್​ಅಪ್​ ವೇಳೆ ವೈದ್ಯಕೀಯ ನಿರ್ಲಕ್ಷ್ಯ ತೋರಿದ ವೈದ್ಯೆಗೆ ₹ 11 ಲಕ್ಷ ದಂಡ

ಧಾರವಾಡದಲ್ಲಿ ವೈದ್ಯೆಗೆ 11 ಲಕ್ಷ ದಂಡ: ಮತ್ತೊಂದೆಡೆ, ಇತ್ತೀಚೆಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ವೈದ್ಯೆಯೊಬ್ಬರಿಗೆ 11 ಲಕ್ಷದ 10 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಗರ್ಭಿಣಿಯ ಆರೋಗ್ಯ ತಪಾಸಣೆಯ ವೇಳೆ ಹೊಟ್ಟೆಯಲ್ಲಿರುವ ಶಿಶು ಅಂಗವೈಕಲ್ಯತೆ ಹೊಂದಿರುವುದನ್ನು ಪೋಷಕರ ಗಮನಕ್ಕೆ ತರದೆ ವೈದ್ಯಕೀಯ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಆಯೋಗ ಈ ಆದೇಶ ಹೊರಡಿಸಿತ್ತು.

ಶ್ರೀನಗರದ ಭಾವಿಕಟ್ಟಿ ನಿವಾಸಿ ಪರಶುರಾಮ ಘಾಟಗೆ ಎಂಬುವರು ತಮ್ಮ ಗರ್ಭಿಣಿ ಪತ್ನಿಯನ್ನು ಪ್ರಸೂತಿ ತಜ್ಞೆ ಡಾ. ಸೌಭಾಗ್ಯ ಕುಲಕರ್ಣಿ 2018ರ ಜುಲೈ 12ರಿಂದ 2019ರ ಜನವರಿ 8ರ ತನಕ 5 ಬಾರಿ ಸ್ಕ್ಯಾನ್ ಮಾಡಿದ್ದರು. ಈ ಸಂದರ್ಭದಲ್ಲಿ ಗರ್ಭದಲ್ಲಿನ ಮಗುವಿನ ಬೆಳವಣಿಗೆ ಚೆನ್ನಾಗಿದೆ ಹಾಗೂ ಮಗು ಆರೋಗ್ಯವಾಗಿದೆ ಎಂದು ತಿಳಿಸಿದ್ದರು. ಆದರೆ, 2019ರ ಜನವರಿ 31ರಂದು ಎಸ್​​ಡಿಎಂ​​ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿದೆ. ಮಗುವಿನ ಎರಡೂ ಕಾಲುಗಳು ಅಂಗವಿಕಲತೆಯಿಂದ ಕೂಡಿದ್ದವು ಎಂದು ದೂರುದಾರರು ಆಯೋಗದ ಮೊರೆ ಹೋಗಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.