ETV Bharat / state

ವಾಹನದಲ್ಲಿ ಎಸಿ ಬಳಸದ ಹಿನ್ನೆಲೆ: ಪ್ರಯಾಣಿಕರಿಗೆ 15 ಸಾವಿರ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯದ ಆದೇಶ

author img

By

Published : Jan 28, 2023, 10:38 PM IST

ಕಾರಿನಲ್ಲಿ ಎಸಿ ಕೆಲಸ ಮಾಡದ ಹಿನ್ನೆಲೆ - ಪ್ರಯಾಣಿಕರಿಗೆ 15 ಸಾವಿರ ಪರಿಹಾರ ನೀಡುವಂತೆ ನ್ಯಾಯಾಲಯದ ಆದೇಶ - ಓಲಾಗೆ ಗ್ರಾಹಕ ನ್ಯಾಯಾಲಯ ಆದೇಶ

deficiency-in-service-consumer-court-ordered-pay-15000-fine-to-customer
ವಾಹನದಲ್ಲಿ ಎಸಿ ಬಳಸದ ಹಿನ್ನೆಲೆ : ಪ್ರಯಾಣಿಕರಿಗೆ 15 ಸಾವಿರ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ಆದೇಶ

ಬೆಂಗಳೂರು : ಸುಮಾರು ಎಂಟು ತಾಸು ಪ್ರಯಾಣದಲ್ಲಿ ಕಾರಿನಲ್ಲಿ ಹವಾನಿಯಂತ್ರಣ(ಎಸಿ) ಕೆಲಸ ಮಾಡದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ 15,000 ರೂಪಾಯಿ ಪರಿಹಾರ ನೀಡುವಂತೆ ಕ್ಯಾಬ್‌ ಅಗ್ರಿಗೇಟರ್‌ ಓಲಾಗೆ ಬೆಂಗಳೂರಿನ ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಪ್ರಕರಣ ಸಂಬಂಧಿಸಿದಂತೆ ವಿಕಾಸ್​ ಭೂಷಣ್ ಎಂಬುವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಎಂ. ಶೋಭಾ, ಸದಸ್ಯರಾದ ಸುಮಾ ಅನಿಲ್ ಕುಮಾರ್ ಮತ್ತು ಎನ್.ಜ್ಯೋತಿ ಅವರಿದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ.

ಅಲ್ಲದೇ, ಗ್ರಾಹಕರಿಗೆ ನೀಡಿದ ಭರವಸೆಯಂತೆ ಅವರಿಗೆ ಸೇವೆ ಒದಗಿಸುವುದು ಅಗ್ರಿಗೇಟರ್‌ (ಓಲಾ) ಸಂಸ್ಥೆಯ ಕರ್ತವ್ಯವಾಗಿದೆ. ಎಂಟು ಗಂಟೆಗಳ ಪ್ರಯಾಣದ ಅವಧಿಗೆ ಎಸಿ ಸೇವೆ ಒದಗಿಸದೆ ದೂರುದಾರರು ತಮ್ಮ ಪ್ರಯಾಣದಲ್ಲಿ ಅನಾನುಕೂಲ ಮತ್ತು ಮಾನಸಿಕ ಯಾತನೆ ಅನುಭವಿಸುವಂತೆ ಮಾಡಲಾಗಿದೆ. ಆದ್ದರಿಂದ ಓಲಾ ಕರ್ತವ್ಯ ಲೋಪ ಎಸಗಿದೆ ಎಂದು ಅಭಿಪ್ರಾಯ ಪಟ್ಟಿರುವ ಪೀಠ ದಂಡ ವಿಧಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ : ದೂರುದಾರ ವಿಕಾಸ್ ಭೂಷಣ್ ಅಕ್ಟೋಬರ್ 2021ರಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಓಲಾ ಅಪ್ಲಿಕೇಶನ್ ಮೂಲಕ ಕ್ಯಾಬ್ ಬಾಡಿಗೆಗೆ ಪಡೆದು 80 ಕಿ.ಮೀ ಅಥವಾ ಎಂಟು ಗಂಟೆಗಳ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಪ್ರಯಾಣದ ಆಯ್ಕೆ ಮಾಡಿಕೊಂಡಿದ್ದರು. ಆದರೆ, 8 ಗಂಟೆಗಳ ಪ್ರಯಾಣದ ಅವಧಿಯಲ್ಲಿ ಎಸಿ ಕಾರ್ಯನಿರ್ವಹಿಸಿರಲಿಲ್ಲ. ಪ್ರಯಾಣದ ವೇಳೆ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ಯಾವುದೇ ವ್ಯವಸ್ಥೆ ಇಲ್ಲ. ಜೊತೆಗೆ ಪ್ರಯಾಣ ರದ್ದುಗೊಳಿಸಿದರೆ ಬುಕಿಂಗ್‌ ಮೊತ್ತವೂ ರದ್ದಾಗುತ್ತಿತ್ತು. ಓಲಾ ಗ್ರಾಹಕ ಸೇವಾ ಕೇಂದ್ರವನ್ನು ಅದೇ ದಿನ ಸಂಪರ್ಕಿಸಿದರೂ ಮೊತ್ತ ಹಿಂಪಡೆಯಲು ಸಾಧ್ಯವಾಗಿರಲಿಲ್ಲ. ಜತೆಗೆ, ಇಮೇಲ್ ಮೂಲಕ ಪತ್ರ ಬರೆಯಲಾಗಿತ್ತು. ಇದಾದ ಬಳಿಕ ಕಸ್ಟಮರ್ ಕೇರ್ ಸರ್ವಿಸ್​ನೊಂದಿಗೆ ಕರೆ ಮಾಡಿ ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಅರ್ಜಿದಾರರು ತಮ್ಮ ದೂರಿನಲ್ಲಿ ವಿವರಿಸಿದ್ದರು.

ಜತೆಗೆ ಓಲಾ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ನಿರ್ದೇಶಕ ಭುವಿಷ್ ಎಂಬುವರಿಗೆ ಟ್ವಿಟರ್​ ಮತ್ತು ಇಮೇಲ್ ಮೂಲಕ ತಿಳಿಸಿದ್ದರು. ಬಳಿಗೆ ಹೋದಾಗ ಚರ್ಚೆ ನಡೆಸದೆ 100 ಮರುಪಾವತಿ ಮಾಡಲಾಯಿತು. ಇದರಿಂದ ಸಿಟ್ಟಿಗೆದ್ದ ದೂರುದಾರರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ತನಗೆ 50,000 ರೂಗಳ ಪರಿಹಾರ ಹಾಗೂ 1,837 ಬುಕಿಂಗ್ ಮೊತ್ತ ಒದಗಿಸಿಕೊಡಬೇಕೆಂದು ಕೋರಿದ್ದರು.

15 ಸಾವಿರ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ : ಅಲ್ಲದೇ, ಭರವಸೆ ನೀಡಿದಂತೆ ಸೇವೆ ಒದಗಿಸುವುದು ಓಲಾ ಕರ್ತವ್ಯವಾಗಿದ್ದು, ತಮ್ಮ 8 ಗಂಟೆಗಳ ಪ್ರಯಾಣಕ್ಕೆ ಹವಾನಿಯಂತ್ರಣವನ್ನು ಒದಗಿಸದೇ ದೂರುದಾರರಿಗೆ ಅದು ನೋವುಂಟು ಮಾಡಲಾಗಿದೆ. ಹೀಗಾಗಿ ದೂರು ನೀಡಿದ ದಿನದಿಂದ ಮರುಪಾವತಿ ದಿನದವರೆಗೆ ವಾರ್ಷಿಕ 10 ರಷ್ಟು ಬಡ್ಡಿಯೊಂದಿಗೆ ಬುಕಿಂಗ್‌ ಮೊತ್ತ ಮರುಪಾವತಿಸಬೇಕು. ದೂರುದಾರರಿಗೆ 10,000 ಪರಿಹಾರ ಮತ್ತು 5,000 ದಾವೆ ವೆಚ್ಚ ಪಾವತಿಸಬೇಕು ಎಂದು ಓಲಾ ಸಂಸ್ಥೆಗೆ ನಿರ್ದೇಶನ ನೀಡಿದೆ.

ಇದನ್ನೂ ಓದಿ : ಲ್ಯಾಪ್‍ಟಾಪ್‍ನಲ್ಲಿ ದೋಷ: ವಿದ್ಯಾರ್ಥಿಗೆ ಪರಿಹಾರ ನೀಡುವಂತೆ ಲೆನೆವೊ ಕಂಪನಿಗೆ ಗ್ರಾಹಕರ ಕೋರ್ಟ್​ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.