ETV Bharat / state

ಯೂಟ್ಯೂಬ್ ಸಿನಿಮಾ ವಿಮರ್ಶಕರ ವಿರುದ್ಧ ದೂರು ನೀಡಿದ 'ಮುಂದುವರೆದ ಅಧ್ಯಾಯ' ಚಿತ್ರತಂಡ

author img

By

Published : Mar 23, 2021, 4:02 PM IST

Updated : Mar 23, 2021, 4:08 PM IST

'ಮುಂದುವರೆದ ಅಧ್ಯಾಯ' ಚಿತ್ರವನ್ನು ನಕಾರಾತ್ಮಕವಾಗಿ ವಿಮರ್ಶೆ ಮಾಡಿದ ಯೂಟ್ಯೂಬ್ ವಿಮರ್ಶಕರ ವಿರುದ್ಧ ದೂರು ನೀಡಲಾಗಿದೆ.

Complaint registered against youtube Cinema reviewer
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಿತ್ರತಂಡ

ಬೆಂಗಳೂರು: 'ಮುಂದುವರೆದ ಅಧ್ಯಾಯ' ಚಿತ್ರವನ್ನು ನಕಾರಾತ್ಮಕವಾಗಿ ವಿಮರ್ಶೆ ಮಾಡಿರುವ ಯೂಟ್ಯೂಬ್ ವಿಮರ್ಶಕರ ವಿರುದ್ಧ ನಟ ಆದಿತ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

ಕಳೆದ ವಾರ ಆದಿತ್ಯ ಅಭಿನಯದ 'ಮುಂದುವರೆದ ಅಧ್ಯಾಯ' ಸಿನಿಮಾ ಬಿಡುಗಡೆ ಆಗಿತ್ತು. ಸಸ್ಪೆನ್ಸ್ ಕಮ್ ಥ್ರಿಲ್ಲರ್ ಕಥೆ ಆಧರಿಸಿರುವ ಈ ಸಿನಿಮಾ, ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಒಳ್ಳೆಯ ವಿಮರ್ಶೆ ಪಡೆದುಕೊಂಡಿದೆ. ಆದರೆ, ಕೆಲ ಯೂಟ್ಯೂಬ್ ಚಾನೆಲ್ ವಿಮರ್ಶಕರು, ಚಿತ್ರ ಚೆನ್ನಾಗಿಲ್ಲ ಎಂಬ ರೀತಿಯಲ್ಲಿ ವಿಮರ್ಶೆ ಮಾಡಿರುವುದು ಚಿತ್ರತಂಡದ ಕೋಪಕ್ಕೆ ಕಾರಣವಾಗಿದೆ. ಹೀಗಾಗಿ, ಯೂಟ್ಯೂಬ್ ವಿಮರ್ಶಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಿತ್ರದ ನಟ ಆದಿತ್ಯ, ನಿರ್ದೇಶಕ ಬಾಲು, ನಿರ್ಮಾಪಕ ಚಂದ್ರಶೇಖರ್ ಸೇರಿದಂತೆ ಚಿತ್ರತಂಡ ವಾಣಿಜ್ಯ ಮಂಡಳಿಗೆ ದೂರು ನೀಡಿದೆ.

ಓದಿ : ಸಾಂಸ್ಕೃತಿಕ ನಗರಿಯಲ್ಲಿ 'ಯುವರತ್ನ'... ಪವರ್​ ಸ್ಟಾರ್ ನೋಡಲು ಮುಗಿಬಿದ್ದ ಅಭಿಮಾನಿಗಳು

ದೂರು ನೀಡಿದ ಬಳಿಕ ಮಾತನಾಡಿದ ನಟ ಆದಿತ್ಯ, ಕಳೆದ ವಾರ ನಮ್ಮ ಸಿನಿಮಾ ಮುಂದುವರೆದ ಅಧ್ಯಾಯ ರಾಜ್ಯಾದ್ಯಂತ ತೆರೆ ಕಂಡಿದೆ. ಚಿತ್ರ ಬಿಡುಗಡೆಯಾದ ಎರಡು ಮೂರು ಗಂಟೆಗಳಲ್ಲೇ ಯೂಟ್ಯೂಬ್ ಸಿನಿಮಾ ವಿಮರ್ಶಕರು ಚಿತ್ರವನ್ನು ನಕಾರಾತ್ಮಕವಾಗಿ ವಿಮರ್ಶೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಪ್ರತಿಷ್ಠಿತ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ನಮ್ಮ ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ ಹಾಗೂ ಸಿನಿಮಾ ನೋಡಿದ ಕನ್ನಡ ಪ್ರೇಕ್ಷಕರು ಕೂಡ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ, ಕೆಲವೊಂದು ಯೂಟ್ಯೂಬ್ ಚಾನೆಲ್‌ಗಳು ನಮ್ಮ ಸಿನಿಮಾ ಮಾತ್ರವಲ್ಲದೆ ಸಾಕಷ್ಟು ಬೇರೆ ಕನ್ನಡ ಸಿನಿಮಾಗಳಿಗೂ ಈ ರೀತಿ ಕೆಟ್ಟ ಪ್ರಚಾರ ಮಾಡಿ ಜನರ ದಿಕ್ಕು ತಪ್ಪಿಸಿದ್ದಾರೆ. ಸಿನಿಮಾ ಬಿಡುಗಡೆಗೆ ಮುನ್ನವೇ ಯೂಟ್ಯೂಬ್ ಚಾನೆಲ್‌ಗಳು ಸಿನಿಮಾಗಳ ಪ್ರಚಾರಕ್ಕೆ ಹಣದ ಬೇಡಿಕೆ ಇಟ್ಟಿರುತ್ತಾರೆ. ಹಣ ಕೊಡಲು ನಿರಾಕರಿಸಿದಾಗ ಈ ರೀತಿ ವಿನಾ ಕಾರಣ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡುತ್ತಾರೆ ಎಂದು ಆರೋಪಿಸಿದರು. ಯೂಟ್ಯೂಬ್ ಸಿನಿಮಾ ವಿಮರ್ಶಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಚಿತ್ರತಂಡ

ಚಿತ್ರ ತಂಡದ ದೂರು ಸ್ವೀಕರಿಸಿದ ಮಾತನಾಡಿದ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎನ್.ಎಂ.ಸುರೇಶ್, ಕೂಡಲೇ ಯೂಟ್ಯೂಬ್ ವಿಮರ್ಶಕರು ಫಿಲ್ಮ್ ಚೇಂಬರ್ ಮಾತಿಗೆ ಬೆಲೆ ಕೊಡಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು. ಇನ್ನು ಎರಡು ದಿನಗಳ ಫಿಲ್ಮ್ ಚೇಂಬರ್ ಸಭೆ ಕರೆದು ಕನ್ನಡ ಸಿನಿಮಾಗಳ ಬಗ್ಗೆ ಅಪಪ್ರಚಾರ ಮಾಡದಂತೆ ಎಚ್ಚರಿಕೆ ಕೊಡುವುದಾಗಿ ಭರವಸೆ ನೀಡಿದರು.

Last Updated : Mar 23, 2021, 4:08 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.