ETV Bharat / state

ಡಿ.11ಕ್ಕೆ ಜೆಡಿಎಸ್‌ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಕರೆದ ಸಿ.ಕೆ.ನಾಣು; ದೇವೇಗೌಡರ ಉಚ್ಛಾಟನೆ ಸಾಧ್ಯತೆ?

author img

By ETV Bharat Karnataka Team

Published : Dec 8, 2023, 7:18 PM IST

Updated : Dec 8, 2023, 7:23 PM IST

ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ದೇವೇಗೌಡರನ್ನು ಉಚ್ಛಾಟಿಸುವ ನಿರ್ಧಾರ ಕೈಗೊಳ್ಳುವ ಸಾಧ್ಯತೆಯ ಕುರಿತು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಪರೋಕ್ಷವಾಗಿ ತಿಳಿಸಿದ್ದಾರೆ.

ಮಾಜಿ ಸಚಿವ ಸಿಎಂ ಇಬ್ರಾಹಿಂ
ಮಾಜಿ ಸಚಿವ ಸಿಎಂ ಇಬ್ರಾಹಿಂ

ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿಕೆ

ಬೆಂಗಳೂರು: ಒಂದೆಡೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಡಿ. 9ರಂದು ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಕರೆದಿದ್ದರೆ, ಇನ್ನೊಂದೆಡೆ ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ.ನಾಣು ಅವರು, ಡಿಸೆಂಬರ್ 11ರಂದು ರಾಷ್ಟ್ರೀಯ ಕಾರ್ಯಕಾರಣಿ ಸಭೆ ಕರೆದಿದ್ದಾರೆ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಮಾಹಿತಿ ನೀಡಿದರು.

ಇಂದು ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಉಪಾಧ್ಯಕ್ಷರು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಣಿ ಸಭೆಯನ್ನು ಬೆಂಗಳೂರಿನಲ್ಲಿ ಕರೆದಿದ್ದು, ಎಲ್ಲಾ ರಾಜ್ಯದ ಅಧ್ಯಕ್ಷರು, ಉಪಾಧ್ಯಕ್ಷರನ್ನು ಸಭೆಗೆ ಆಹ್ವಾನಿಸಿದ್ದಾರೆ. ಗುಜರಾತ್, ರಾಜಸ್ಥಾನ, ತಮಿಳುನಾಡು, ತೆಲಂಗಾಣದ ಅಧ್ಯಕ್ಷರ ಸಭೆ ಕರೆಯಲಾಗಿದೆ. ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇರುವ ಎಲ್ಲರೂ ಬರಬಹುದು ಎಂದರು.

ದೇವೇಗೌಡರ ಉಚ್ಛಾಟನೆ ಸುಳಿವು: ಬಿಜೆಪಿ ಜೊತೆ ಮೈತ್ರಿ ವಿಚಾರವನ್ನು ಜೆಡಿಎಸ್ ಕಾರ್ಯಕಾರಣಿ ಸದಸ್ಯರು ಒಪ್ಪಿಲ್ಲ. ಇದು ನನ್ನ ನಿರ್ಧಾರ ಅಲ್ಲ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಈ ಕಾರಣದಿಂದ ದೇವೇಗೌಡರನ್ನು ಉಚ್ಛಾಟನೆ ಮಾಡುವ ನಿರ್ಧಾರವನ್ನು ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಇಬ್ರಾಹಿಂ ಪರೋಕ್ಷವಾಗಿ ಹೇಳಿದರು.

ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗಳು ಸಮಂಜಸವಲ್ಲ. ಭಜರಂಗದಳದವರೂ ಈ ರೀತಿಯ ಹೇಳಿಕೆ ನೀಡಲ್ಲ. ನೀವು (ಹೆಚ್ಡಿಕೆ) ಕೇಶವಕೃಪದಲ್ಲಿ ಬಾಳಲಾರರಿ, ತಾಳಲಾರರಿ. ನೀವು ಇಲ್ಲಿಗೇ ಬರಬೇಕು, ಬೇರೆ ವಿಧಿ ಇಲ್ಲ. ದೇವೇಗೌಡರು ಒತ್ತಡಕ್ಕೆ ಒಳಗಾಗಿದ್ದಾರೆ. ರೇವಣ್ಣ ಚಿಂತಾಜನಕವಾಗಿದ್ದಾರೆ ಎಂದರು.

ನಾನೇ ಜನತಾದಳದ ಅಧ್ಯಕ್ಷ. ಯಾವ ಆಧಾರದ ಮೇಲೆ ಉಚ್ಛಾಟನೆ ಮಾಡ್ತಾರೆ. ಜಿ.ಟಿ.ದೇವೇಗೌಡರನ್ನು ನಾನೇ ಕಮಿಟಿ ಅಧ್ಯಕ್ಷರನ್ನಾಗಿ ಮಾಡಿದ್ದು. ನಮ್ಮ ಸಭೆ ಹಾಗೂ ಅವರ ಸಭೆಗೆ ಯಾರು ಬರುತ್ತಾರೆ ನೋಡಿ. 12 ಮಂದಿ ಶಾಸಕರ ಸಂಖ್ಯೆ ನಮ್ಮ ಪರವಾಗಲಿದೆ. ಜೆಡಿಎಸ್​ನ ಐದು ಮಂದಿ ಶಾಸಕರು ಸಂಪರ್ಕದಲ್ಲಿ ಇದ್ದಾರೆ. ಜನವರಿ ನಂತರ ಕ್ಲಿಯರ್ ಪಿಕ್ಚರ್ ಸಿಗಲಿದೆ. ನಾವು ಆತುರ ಮಾಡಲ್ಲ, ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಆರೋಗ್ಯ ಮುಖ್ಯ ಎಂದು ವ್ಯಂಗ್ಯವಾಡಿದರು.

ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸುತ್ತೇವೆ: ಜಾತ್ಯತೀತ ಶಕ್ತಿಗಳನ್ನು ಒಗ್ಗೂಡಿಸುತ್ತೇವೆ. ಹಾಗಾಗಿ, ನಿತೀಶ್ ಕುಮಾರ್, ಅಖಿಲೇಶ್ ಅವರನ್ನು ಭೇಟಿ ಮಾಡುತ್ತೇನೆ. ದೇವೇಗೌಡರ ನಂತರ ನಾನೇ ಸೀನಿಯರ್ ಮೋಸ್ಟ್. ಮಧ್ಯಪ್ರದೇಶ, ರಾಜಸ್ಥಾನ ಹೋಗಿದ್ರೂ ಸಿದ್ಧಾಂತ ಬಿಡಲ್ಲ. ಡಿ. 11ರ ನಂತರ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಮಾಜಿ ಶಾಸಕರಾದ ನಾಡಗೌಡ, ಮಹೀಮಾ ಪಟೇಲ್​ರ ಜೊತೆಗೆ ಹಾಲಿ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಬಕೆಟ್ ಹಿಡಿಯುವ ಕೆಲಸವೇ?: ಪಕ್ಷದ ಅಧ್ಯಕ್ಷ ನಾನು ಇದ್ದೇನೆ. ಅಮಿತ್ ಶಾ ಭೇಟಿಗೆ ಹಿಂಬಾಗಿಲಿನಿಂದ ದೇವೇಗೌಡರು ಹೋದ್ರು, ಮುಂಬಾಗಿಲಿನಿಂದ ಕುಮಾರಸ್ವಾಮಿ ಹೋದ್ರು. ವಿಜಯೇಂದ್ರ- ಅಶೋಕ್ ಅವರ ಹಿಂದೆ ನೀವು ಹೋಗಬೇಕು? ನಿಮ್ಮದು ಏನು ಉಳಿದಿದೆ. ಎಲ್ಲರಿಗೂ ಬಕೆಟ್ ಹಿಡಿಯಲು ಕುಮಾರಸ್ವಾಮಿ ಹೋಗಿದ್ದಾರೆ. ಪುಟ್ಟಪ್ಪನವರ, ಬಸವಣ್ಣನವರ ತತ್ವ ಒಪ್ಪಿಕೊಳ್ಳಿ ಎಂದು ಕುಮಾರಸ್ವಾಮಿಗೆ ಸಲಹೆ ನೀಡಿದರು.

ಮೋದಿ ಎಷ್ಟು ಬಾರಿ ನಿಮಗೆ ಕರೆ ಮಾಡಿದ್ರು ಎಂದು ಪ್ರಶ್ನಿಸಿದ ಇಬ್ರಾಹಿಂ, ನಾನು ಜೆಡಿಎಸ್ ರಾಜ್ಯಾಧ್ಯಕ್ಷ ಆಗದಿದ್ರೆ ಜೆಡಿಎಸ್ 2 ಸ್ಥಾನ ಗೆಲ್ಲುತಿತ್ತು. ಈ ಸತ್ಯ ಯಾರೂ ಮರೆಮಾಚಲು‌ ಆಗಲ್ಲ. ನೀವು ಅಲ್ಲೇ ಬೇಕಾದರೂ ಇರಿ. ಭಜರಂಗದಳದ ರಾಜ್ಯಾಧ್ಯಕ್ಷರ ಥರ ಹೇಳಿಕೆ ನೀಡಬೇಡಿ ಎಂದರು.

ಯತ್ನಾಳ್ ಹತಾಶರಾಗಿದ್ದಾರೆ: ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಯಾರೇ ಸ್ಪರ್ಧೆ ಮಾಡಿದರೂ ಜೆಡಿಎಸ್ ಸೋಲಲಿದೆ. ಮಾಜಿ ಸಚಿವ ಸಿ.ಎಸ್.ಪುಟ್ಟರಾಜ್ ಅವರನ್ನು ನಿಲ್ಲಿಸಬೇಕೆಂದು ಚರ್ಚೆ ಮಾಡಿದ್ದಾರೆ. ಯಡಿಯೂರಪ್ಪ ಮಗ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರ ಬಸನಗೌಡ ಪಾಟೀಲ್ ಯತ್ನಾಳ್ ಹತಾಶರಾಗಿದ್ದಾರೆ.

ಹಿಂದುತ್ವದ ವಿಚಾರದಲ್ಲಿ ಯತ್ನಾಳ್ ಹಾಗೂ ಕುಮಾರಸ್ವಾಮಿ ನಡುವೆ ಫೈಟ್​ ನಡೆಯುತ್ತಿದೆ. ದತ್ತಮಾಲೆ, ಶಬರಿಮಲೆ ಒಂದು ತಿಂಗಳಿಗೆ ಹಾಕಬೇಡಿ, 12 ತಿಂಗಳಿಗೂ ಹಾಕಿ. ಸುಳ್ಳು ಹೇಳಲಾಗದು, ಮದ್ಯ ಕುಡಿಯಂಗಿಲ್ಲ ಎಂದು ಇಬ್ರಾಹಿಂ ವ್ಯಂಗ್ಯವಾಡಿದರು.

ಸಾಕಷ್ಟು ಸಮಸ್ಯೆಗಳು ರಾಜ್ಯದಲ್ಲಿವೆ: ಯತ್ನಾಳ್ ಕುಟುಂಬದವರು ದರ್ಗಾಕ್ಕೆ ಹೋಗ್ತಾರೆ. ಜನರ ಸಮಸ್ಯೆ, ಬರಗಾಲ, ಉದ್ಯೋಗ ಸೇರಿದಂತೆ ಸಾಕಷ್ಟು ಸಮಸ್ಯೆಗಳು ರಾಜ್ಯದಲ್ಲಿವೆ. ಉಡುಪಿ ಹೋಟೆಲ್​ಗೆ ಹೋಗಿ ಬಿರಿಯಾನಿ ಕೇಳಬೇಡಿ, ನಿಮ್ಮ ಕೆಲಸ ನೀವು ಮಾಡಿ, ನಮ್ಮ ಕೆಲಸ ನಾವು ಮಾಡ್ತೇವೆ ಎಂದರು.

ರಾಜ್ಯದಲ್ಲಿ ಭೀಕರ ಬರಗಾಲ ಇದೆ. ಬಿಜೆಪಿ ನಾಯಕರು ವಿಧಾನಸೌಧದ ಬದಲಿಗೆ ಪ್ರಧಾನಿ ನರೇಂದ್ರ ಮೋದಿ ಮನೆ ಮುಂದೆ ಕುಳಿತು ಮನವಿ ಮಾಡಲಿ. ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಮಿತಿ ಮಾಡಿ, ವಾರಕ್ಕೆ ಒಂದು ಬಾರಿ ಸಭೆ ಸೇರಿ ರೈತರಿಗೆ ಪರಿಹಾರ ತಲುಪಿಸಿ, ಒಂದು ಕಮಿಟಿ ಮಾಡುವಂತೆ ಸಿಎಂಗೆ ಇಬ್ರಾಹಿಂ ಅವರು ಮನವಿ ಮಾಡಿದರು.

ಇವಿಎಂನಲ್ಲಿ ಮತದಾನ ನಡೆಯಬಾರದು: ಮಧ್ಯಪ್ರದೇಶ ಚುನಾವಣೆ ಫಲಿತಾಂಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಇಬ್ರಾಹಿಂ ಅವರು, ಇವಿಎಂ ಹ್ಯಾಕ್ ಮಾಡಿದ್ದಾರೆ. ಅಮೆರಿಕ ಸೇರಿದಂತೆ ಇತರ ದೇಶಗಳಲ್ಲಿ ಇವಿಎಂ ಇಲ್ಲ. ಇವಿಎಂ ಇರುವ ಕಡೆಗಳಲ್ಲಿ ಬಿಜೆಪಿ ಗೆದ್ದಿದೆ. ಎಲ್ಲಿ ಬೇಕೋ ಅಲ್ಲೇ ಬಿಜೆಪಿ ಬರುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಇವಿಎಂನಲ್ಲಿ ಮತದಾನ ನಡೆಯಬಾರದು ಎಂದು ಹೇಳಿದರು.

ಮೂರನೇ ಶಕ್ತಿಯನ್ನು ಕಟ್ಟಲು ಹೊರಟಿದ್ದೇವೆ: ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿದೆ. ರಾಹುಲ್ ಗಾಂಧಿಯವರಿಗೆ ರಾಜ್ಯದಿಂದ ಸ್ಪರ್ಧೆಗೆ ಸ್ವಾಗತ. ಇಂದಿರಾ ಗಾಂಧಿ ರಾಜ್ಯದಿಂದ ಗೆದ್ದರು. ಅವರ ಮೊಮ್ಮಗ ಕೂಡ ರಾಜ್ಯದಿಂದ ಗೆಲ್ಲಲಿ. ನನಗೆ ಕಾಂಗ್ರೆಸ್ ಮೇಲೆ ಸಿಟ್ಟಿಲ್ಲ. ಕಾಂಗ್ರೆಸ್ ನಾಯಕ ಸಂಪರ್ಕದಲ್ಲೂ ಇಲ್ಲ ಎಂದ ಅವರು, ಮೂರನೇ ಶಕ್ತಿಯನ್ನು ಕಟ್ಟಲು ಹೊರಟಿದ್ದೇವೆ. I.N.D.I.A ಗೆ ಬೆಂಬಲ ನೀಡುವುದಾಗಿ ತಿಳಿಸಿದರು.

ಇದನ್ನೂ ಓದಿ: ರಾಜ್ಯಾಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದನ್ನ ಪ್ರಶ್ನಿಸಿ ನಾನು ಕೋರ್ಟ್​ಗೆ ಹೋಗುತ್ತೇನೆ: ಸಿಎಂ ಇಬ್ರಾಹಿಂ

Last Updated : Dec 8, 2023, 7:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.