ETV Bharat / state

ಜೆಡಿಎಸ್ ಸೇರಲು ಹೊರಟ ಸಿಎಂ ಇಬ್ರಾಹಿಂಗೆ ಮಾನ್ಯತೆ ಸಿಗುವುದೇ ಅನುಮಾನ

author img

By

Published : Feb 13, 2022, 11:59 AM IST

ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಬದಲಾವಣೆ ಮಾಡಲು ಜೆಡಿಎಸ್​​ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಈಗ ಜೆಡಿಎಸ್​​ಗೆ ಸೇರ್ಪಡೆಯಾದರೂ ಸಹ ಸಿಎಂ ಇಬ್ರಾಹಿಂಗೆ ಮಹತ್ವದ ಸ್ಥಾನಮಾನ ದೊರಕುವುದು ಅನುಮಾನ ಎನ್ನಲಾಗ್ತಿದೆ.

CM Ibrahim Reaction On Join to JDS Party
ಜೆಡಿಎಸ್ ಸೇರಲು ಹೊರಟ ಸಿಎಂ ಇಬ್ರಾಹಿಂಗೆ ಮಾನ್ಯತೆ ಸಿಗುವುದೇ ಅನುಮಾನ

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಬಹುತೇಕ ಹೊರನಡೆದಿರುವ ಸಿಎಂ ಇಬ್ರಾಹಿಂ ಮುಂದಿನ ಆಯ್ಕೆ ವಿಚಾರದಲ್ಲಿ ಸಾಕಷ್ಟು ಗೊಂದಲದಲ್ಲಿದ್ದಾರೆ ಎಂಬ ಮಾಹಿತಿ ಇದೆ. ಫೆ.14ರಂದು ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಈ ಹಿಂದೆ ಹೇಳಿದ್ದ ಇಬ್ರಾಹಿಂ ದಿನಾಂಕವನ್ನು ಮುಂದೂಡಿದ್ದು, ಫೆಬ್ರುವರಿ 25ರಂದು ಹುಬ್ಬಳ್ಳಿ ಸಮಾವೇಶದಲ್ಲಿ ಜೆಡಿಎಸ್ ಸೇರ್ಪಡೆ ದಿನಾಂಕ ಪ್ರಕಟಿಸುವುದಾಗಿ ಹೇಳಿದ್ದಾರೆ.

ತಾವು ರಾಜೀನಾಮೆ ನೀಡಿದರೆ ವಿಧಾನ ಪರಿಷತ್​​ನಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವುದು ಬಿಜೆಪಿಗೆ ಇನ್ನಷ್ಟು ಸುಲಭವಾಗಲಿದೆ. ಮಸೂದೆ ಜಾರಿಯನ್ನು ತಡೆಯುವ ಉದ್ದೇಶದಿಂದ ಅಧಿವೇಶನ ಮುಗಿಯುವವರೆಗೂ ತಾವು ಕಾಂಗ್ರೆಸ್​​ನಲ್ಲಿ ಇರುವುದಾಗಿ ಘೋಷಿಸಿದ್ದಾರೆ. ಆದರೆ ಅಸಲಿ ವಿಷಯ ಬೇರೆಯೇ ಇದೆ.

ಇದನ್ನೂ ಓದಿ: ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸು: ಜೆಡಿಎಸ್‍ ಕದ ತಟ್ಟುವರೇ ಸಿಎಂ ಇಬ್ರಾಹಿಂ?

ಈ ಹಿಂದೆ ಜೆಡಿಎಸ್ ರಾಜ್ಯಾಧ್ಯಕ್ಷರಾಗುವ ಅವಕಾಶ ಒಲಿದು ಬಂದ ಸಂದರ್ಭ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗದ ಸಿಎಂ ಇಬ್ರಾಹಿಂಗೆ ಈಗ ಜೆಡಿಎಸ್​​ನಲ್ಲಿ ಅಂತಹ ಮಹತ್ವದ ಸ್ಥಾನದ ಭರವಸೆ ಲಭಿಸಿಲ್ಲ. ಅಲ್ಪಸಂಖ್ಯಾತ ಮುಸಲ್ಮಾನ ಸಮುದಾಯದ ನಾಯಕನಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿ ತಾವು ಅಲ್ಪಸಂಖ್ಯಾತ ಪರವಾಗಿದ್ದೇವೆ ಎಂದು ತೋರಿಸಿಕೊಳ್ಳುವ ಅತ್ಯುತ್ಸಾಹದಲ್ಲಿದ್ದ ಜೆಡಿಎಸ್​ಗೆ ಇದೀಗ ಹಿಂದಿನ ಆಸಕ್ತಿ ಉಳಿದಿಲ್ಲ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಕಾರಣ ಪ್ರಮುಖ ಬದಲಾವಣೆ ಮಾಡಲು ತೀರ್ಮಾನಿಸಿದೆ. ಹೀಗಾಗಿ, ಈಗ ಜೆಡಿಎಸ್​​ಗೆ ಸೇರ್ಪಡೆಯಾದರೂ ಸಹ ಸಿಎಂ ಇಬ್ರಾಹಿಂಗೆ ಮಹತ್ವದ ಸ್ಥಾನಮಾನ ದೊರಕುವುದು ಅನುಮಾನ ಎನ್ನಲಾಗ್ತಿದೆ.

ಪಕ್ಷ ತೊರೆಯುವುದು ಅನಿವಾರ್ಯ: ಈಗಾಗಲೇ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಸಂಪೂರ್ಣ ಸಂಬಂಧ ಹಳಸಿದ್ದು ಕಾಂಗ್ರೆಸ್ ತೊರೆಯುವುದು ಸಿಎಂ ಇಬ್ರಾಹಿಂಗೆ ಅನಿವಾರ್ಯವಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧವೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಾರಿ ವಾಗ್ದಾಳಿ ನಡೆಸಿದ್ದಾರೆ.

ಅಲ್ಲದೇ ತಾವು ಪಕ್ಷ ತೊರೆಯುವ ಮಾತನ್ನು ಸಾಕಷ್ಟು ಸಾರಿ ಆಡಿದರೂ ಸಹ ಹೋಗಬೇಡಿ ಎಂದು ತಡೆಯುವ ಪ್ರಯತ್ನವನ್ನು ಯಾವುದೇ ಕಾಂಗ್ರೆಸ್ ನಾಯಕರು ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೂ ಸಹ ಸಿಎಂ ಇಬ್ರಾಹಿಂ ಪಕ್ಷ ಬಿಟ್ಟು ಹೋದರೆ ಹೋಗಲಿ ಎಂಬ ಅಭಿಪ್ರಾಯ ಇದ್ದಂತಿದೆ. ಇಬ್ರಾಹಿಂ ಪಕ್ಷ ಬಿಡುವುದರಿಂದ ಯಾವುದೇ ರೀತಿಯಲ್ಲೂ ಅಲ್ಪಸಂಖ್ಯಾತರ ಕಾಂಗ್ರೆಸ್ ಮೇಲೆ ಕಡಿಮೆಯಾಗುವುದಿಲ್ಲ ಎಂಬ ವಿಶ್ವಾಸ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮೂಡಿದೆ.

ಇದರಿಂದ ಸಿಎಂ ಇಬ್ರಾಹಿಂ ಕಾಂಗ್ರೆಸ್​​ನಲ್ಲಿ ಇರಲಿ ಅಥವಾ ಜೆಡಿಎಸ್​​ಗೆ ತೆರಳಲು ಎಲ್ಲಿಯೂ ಲಾಭವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಸಿಎಂ ಇಬ್ರಾಹಿಂ ತಮ್ಮ ಹಳೆಯ ವರ್ಚಸ್ಸನ್ನು ಕಳೆದುಕೊಂಡಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿದೆ. ಇದರಿಂದ ಜೆಡಿಎಸ್ ಸೇರ್ಪಡೆಯಾದರು ತೆನೆಹೊತ್ತ ಮಹಿಳೆ ಪಕ್ಷಕ್ಕೆ ಯಾವುದೇ ಲಾಭವಾಗುವುದಿಲ್ಲ ಎಂಬ ವಿಶ್ವಾಸ ಕಾಂಗ್ರೆಸ್ ನಾಯಕರದ್ದಾಗಿದೆ.

ವಿಶೇಷ ಸ್ಥಾನಮಾನ ಸಿಗುವ ಸಾಧ್ಯತೆ ಕಡಿಮೆ: ಈ ಮಾಹಿತಿ ತಿಳಿದಿರುವ ಜೆಡಿಎಸ್ ಸಹ ಯಾವುದೇ ಸ್ಥಾನಮಾನದ ಭರವಸೆಯನ್ನು ಇಬ್ರಾಹಿಂಗೆ ಸದ್ಯ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಇಬ್ರಾಹಿಂ ಸಹ ತಾವು ಜೆಡಿಎಸ್ ಸೇರುವುದಾಗಿ ಒಮ್ಮೆ ಹೇಳಿಕೊಂಡರೆ ಮಗದೊಮ್ಮೆ ಸಮಾಜವಾದಿ ಪಕ್ಷವನ್ನು ಸೇರುವುದಾಗಿ ಹೇಳುತ್ತಿದ್ದಾರೆ. ಇನ್ನೊಂದೆಡೆ ತಾವು ಬಹುಜನ ಸಮಾಜ ಪಕ್ಷದ ತಲು ತೆರಳುವ ಚಿಂತನೆ ನಡೆಸಿದ್ದಾರೆ ಅಭಿಪ್ರಾಯಪಟ್ಟಿದ್ದಾರೆ.

ಯಾವ ಪಕ್ಷ ಸೇರಬೇಕೆಂಬ ವಿಚಾರದಲ್ಲಿ ಸಿಎಂ ಇಬ್ರಾಹಿಂ ಅವರಲ್ಲಿ ಸಾಕಷ್ಟು ಗೊಂದಲವಿದೆ ಎಂಬ ಮಾತು ಕೇಳಿ ಬರುತ್ತಿದೆ. ಕಾಂಗ್ರೆಸ್ ತಿಳಿಸುವುದನ್ನು ಬಹುತೇಕ ನಿರ್ಧಾರವಾಗಿ ಸ್ವೀಕರಿಸಿರುವ ಸಿಎಂ ಇಬ್ರಾಹಿಂ ಮುಂದಿನ ನಡೆ ಯಾವುದು ಎನ್ನುವುದೇ ಸಂದರ್ಭದಲ್ಲಿ ಜೆಡಿಎಸ್ ನಲ್ಲಿ ಅಂತಹ ನಿರೀಕ್ಷಿತ ಸ್ಥಾನ ಸಿಗುವುದು ಅನುಮಾನ ಎಂಬ ಮಾತು ಸಹ ಕೇಳಿ ಬರುತ್ತಿದೆ. ಒಟ್ಟಾರೆ ಯಾವುದೇ ಪಕ್ಷ ಸೇರಿದರು ಸಿಎಂ ಇಬ್ರಾಹಿಂ ಗೆ ವಿಶೇಷ ಸ್ಥಾನಮಾನ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗ್ತಿದೆ.

ಭದ್ರಾವತಿ ನಿರೀಕ್ಷೆ: 73 ವರ್ಷದ ಸಿಎಂ ಇಬ್ರಾಹಿಂ ರಾಜ್ಯ ಸುತ್ತಿ ಯಾವುದೇ ಪಕ್ಷ ಸಂಘಟಿಸುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. 2013ರ ವಿಧಾನಸಭೆ ಚುನಾವಣೆಯಲ್ಲಿ ಭದ್ರಾವತಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿಎಂ ಇಬ್ರಾಹಿಂ 22 ಸಾವಿರಕ್ಕೂ ಅಧಿಕ ಪಡೆದಿದ್ದರು. ಶೇ. 15.55 ರಷ್ಟು ಮತ ಪಡೆದಿದ್ದ ಅವರಿಗೆ ಮೂರನೇ ಸ್ಥಾನ ಲಭಿಸಿತ್ತು.

ಒಂದು ಸ್ವತಂತ್ರ ಅಭ್ಯರ್ಥಿಯಾಗಿ ದ್ವಿತೀಯ ಸ್ಥಾನ ಪಡೆದಿದ್ದ ಬಿ.ಕೆ. ಸಂಗಮೇಶ್ವರ ಕಾಂಗ್ರೆಸ್ ಶಾಸಕರಾಗಿ ಭದ್ರಾವತಿಯಿಂದ ಆಯ್ಕೆಯಾಗಿದ್ದಾರೆ. 2008ರಿಂದಲೂ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅಪ್ಪಾಜಿಗೌಡ ಒಂದು ಅವಧಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ವರ್ಷ ಕೋವಿಡ್​​ಗೆ ತುತ್ತಾಗಿ ಅವರು ನಿಧನರಾಗಿರುವ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿಯ ಕೊರತೆ ಭದ್ರಾವತಿಗೆ ಎದುರಾಗಿದೆ.

ಶೇ. 40ರಷ್ಟು ಮತದಾರರನ್ನು ಹೊಂದಿರುವ ಜೆಡಿಎಸ್​​​ಗೆ ಈಸಾರಿ ಸಿಎಂ ಇಬ್ರಾಹಿಂ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಗೆಲ್ಲುವ ವಿಶ್ವಾಸ ಇದೆ. ಅಲ್ಲದೇ ಸಿಎಂ ಇಬ್ರಾಹಿಂ ರಾಜಕೀಯದಲ್ಲಿ ಮುಂದುವರಿಯಲು ಸದ್ಯಕ್ಕೆ ಇರುವ ಅವಕಾಶ ಇದೊಂದೆ. ಹಾಗಾಗಿ ಹೆಚ್ಚಿನ ಷರತ್ತು ವಿಧಿಸದೆ ಅವರು ಜೆಡಿಎಸ್​​ನತ್ತ ಮುಖ ಮಾಡಿದ್ದಾರೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಅತೃಪ್ತ ಸಿ.ಎಂ.ಇಬ್ರಾಹಿಂ ಮನವೊಲಿಕೆಗೆ ಆಪ್ತನ ಮೂಲಕ ಸಿದ್ದರಾಮಯ್ಯ ಯತ್ನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.