ETV Bharat / state

ನಮ್ಮದೇ ಒರಿಜಿನಲ್ ಜಾತ್ಯತೀತ ಜನತಾ ದಳ, ನಾನೇ ಅದರ ಅಧ್ಯಕ್ಷ, ಎನ್‌ಡಿಎ ಸೇರಲ್ಲ: ಹೆಚ್‌.ಡಿ.ಕುಮಾರಸ್ವಾಮಿಗೆ ಸಿ.ಎಂ.ಇಬ್ರಾಹಿಂ ಸವಾಲ್‌!

author img

By ETV Bharat Karnataka Team

Published : Oct 16, 2023, 5:54 PM IST

Updated : Oct 16, 2023, 8:41 PM IST

ಯಾವುದೇ ಕಾರಣಕ್ಕೂ ಎನ್​ಡಿಎ ಜೊತೆ ಜೆಡಿಎಸ್‌ ಸೇರಲು ಬಿಡುವುದಿಲ್ಲ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ

ಹೆಚ್‌.ಡಿ.ಕುಮಾರಸ್ವಾಮಿಗೆ ಸಿ.ಎಂ.ಇಬ್ರಾಹಿಂ ಸವಾಲ್‌

ಬೆಂಗಳೂರು: ನಮ್ಮದೇ ಒರಿಜಿನಲ್ ಜಾತ್ಯತೀತ ಜನತಾದಳ. ನಾನೇ ಅದರ ಅಧ್ಯಕ್ಷ. ಇದು ನನ್ನ ಮನೆ. ಮುಂದೇನಾಗುತ್ತದೆ ಎಂಬುದನ್ನು ಪರದೆ ಮೇಲೆ ನೋಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ 'ದಳ'ಪತಿಗಳಿಗೆ ಖಡಕ್ ಸಂದೇಶ ರವಾನಿಸಿದರು.

ನಗರದ ನಾಗವಾರ ಮುಖ್ಯ ರಸ್ತೆಯಲ್ಲಿರುವ ಸಿಎಂಎ ಕಲ್ಯಾಣ ಮಂಟಪದಲ್ಲಿ ಇಂದು ಆಯೋಜಿಸಿದ್ದ 'ಜೆಡಿಎಸ್ ಚಿಂತನ ಮಂಥನ' ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ನನ್ನನ್ನು ಯಾರಿಂದಲೂ‌ ತೆಗೆಯಲು ಸಾಧ್ಯವಿಲ್ಲ. ಅದಕ್ಕೆ ಸಭೆ ನಡೆಸಿ ತೀರ್ಮಾನ ಮಾಡಬೇಕು. ನಿತೀಶ್ ಕುಮಾರ್, ಶರದ್ ಪವಾರ್ ಸೇರಿದಂತೆ ಕಾಂಗ್ರೆಸ್ ನಾಯಕರೂ ನನ್ನ ಜೊತೆ ಮಾತನಾಡಿದ್ದಾರೆ ಎಂದರು.

ಹೊಸ ಕೋರ್ ಕಮಿಟಿ ರಚನೆ: ಈ ಸಭೆಯ‌ ಚರ್ಚೆಯನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ತಿಳಿಸುತ್ತೇನೆ. ಹೊಸ ಕೋರ್ ಕಮಿಟಿ ರಚನೆ ಮಾಡುತ್ತೇನೆ. ಅದರ ಸಭೆ ಕರೆಯುತ್ತೇನೆ. ಅಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಜಿಲ್ಲಾ ಪ್ರವಾಸ ಮಾಡುತ್ತೇನೆ. ನಂತರ ಮುಂದಿನ ತೀರ್ಮಾನ ಎಂದರು.

ಹೆಚ್.ಡಿ.ಕುಮಾರಸ್ವಾಮಿ ಅವರು ಯಾರ ಅಭಿಪ್ರಾಯವನ್ನೂ ಕೇಳದೆ ಏಕಾಏಕಿ ದೆಹಲಿಗೆ ಹೋಗಿ ಅಮಿತ್ ಶಾ ಜೊತೆಗೆ ಫೋಟೋ ತೆಗೆಸಿಕೊಂಡು ಮೈತ್ರಿ ಘೋಷಣೆ ಮಾಡಿದ್ದಾರೆ.‌ ಜೆಡಿಎಸ್ ಪ್ರಜಾಪ್ರಭುತ್ವ ‌ಹಾಗೂ‌ ಜಾತ್ಯಾತೀತದಲ್ಲಿ ನಂಬಿಕೆ ಇಟ್ಟ ಪಕ್ಷ.‌ ನಾವು ಅಲ್ಲಿ‌ ಹೋಗೋದು‌ ಅಲ್ಲ‌, ಅವರು ಇಲ್ಲಿ ಬರಲಿ‌ ಎಂದಿದ್ದೆ. ಬಿಜೆಪಿಯವರು ಎನ್​ಆರ್​ಸಿ, ಮುಸ್ಲಿಂ ಪರ್ಸನಲ್‌ ಲಾಗೆ ಕೈ ಹಾಕಲ್ಲ ಎಂದು ಭರವಸೆ ಕೊಡ್ತಾರಾ ಎಂದು ಪ್ರಶ್ನಿಸಿದ್ದೆ ಎಂದು ತಿಳಿಸಿದರು.

ಬಿಜೆಪಿ ಜತೆ ಮೈತ್ರಿ ಬೇಡ: ನಾನು ಮೈತ್ರಿ ಒಪ್ಪಲ್ಲ. ಕುಮಾರಸ್ವಾಮಿ ಅವರು ವೈಯಕ್ತಿಕವಾಗಿ ಮಾತನಾಡಿದ್ದಾರೆ. ಮೈತ್ರಿಯ ಬಗ್ಗೆ ಪಕ್ಷದಲ್ಲಿ‌ ಸಭೆ ಆಗಿದ್ಯಾ? ನಿರ್ಣಯ‌ ಆಗಿದ್ಯಾ? ಶಾಸಕರು ಸಂಪರ್ಕದಲ್ಲಿ ಇದ್ದಾರೆ. ದೇವೇಗೌಡರ ಜೊತೆಗೆ ಮಾತನಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ನಿಮಗೆ 92 ವಯಸ್ಸಾಗಿದೆ, ದೇವೇಗೌಡರೇ ತಪ್ಪು ಹೆಜ್ಜೆ ಇಡಬೇಡಿ. ದೇವೇಗೌಡರನ್ನು ಪ್ರಧಾನ ಮಂತ್ರಿ ಮಾಡಿದ್ದೇ ಜಾತ್ಯತೀತ ತತ್ವ. ಹೀಗಾಗಿ ಸಿದ್ದಾಂತ ಕುರಿತು ಬಿಜೆಪಿ ಜೊತೆಗೆ ಭಿನ್ನಾಭಿಪ್ರಾಯ ಇದೆ. ವೈಯಕ್ತಿಕ ದ್ವೇಷ ಇಲ್ಲ.‌ ‌ಚನ್ನಪಟ್ಟಣದಲ್ಲಿ ಇಪ್ಪತ್ತು ಸಾವಿರ ಮುಸ್ಲಿಮರು ಓಟ್ ಹಾಕಿದ್ದಾರೆ. ಅದಕ್ಕೆ ಗೆದ್ದಿರಿ. ಅದಕ್ಕಾಗಿ ಅಮಿತ್ ಶಾ ನಿಮ್ಮನ್ನು ಕರೆದರು. ನಿಮ್ಮ ಪುತ್ರ ನಿಂತಾಗಲೂ ಮುಸ್ಲಿಮರು ಓಟು ಕೊಟ್ಟರು ಎಂದರು.

ದೇವೇಗೌಡರು ನಮ್ಮ ರಾಷ್ಟ್ರದ ನಾಯಕರು, ತಂದೆಗೆ ಸಮಾನ. ಅವರ ಮನಸ್ಸಿನಲ್ಲಿ ನೋವಿದೆ. ಆದರೆ ಸ್ವಯಂ ನಿರ್ಣಯ ತೆಗೆದುಕೊಳ್ಳಲು ಆಗುತ್ತಿಲ್ಲ. ಈಗಲೂ ಅವಕಾಶ ಇದೆ. ಬಿಜೆಪಿ ಜೊತೆ ಹೋಗಲ್ಲ ಎಂದು ವಾಪಸ್ ಬಂದರೆ ಹೀರೋ ಆಗುತ್ತೀರಿ‌. ಜೆಡಿಎಸ್ ಯಾವ ಕಾರಣಕ್ಕೂ ಎನ್​ಡಿಎ ಜೊತೆಗೆ ಹೋಗಲ್ಲ. 19 ಜನ ಶಾಸಕರ ಜೊತೆಗೆ ನಾನೇ ಮಾತನಾಡುತ್ತೇನೆ.‌ ಒಕ್ಕಲಿಗರು ಕೂಡಾ ಕೈಬಿಟ್ಟಿದ್ದಾರೆ. ಮುಸ್ಲಿಮರನ್ನು ನಂಬಿ ರಾಜಕೀಯ ಮಾಡಿಲ್ಲ ಅಂತಾರೆ. ಆದರೆ ಯಾರನ್ನು ‌ನಂಬಿ ರಾಜಕೀಯ ಮಾಡಿದ್ದರೂ‌ ಅವರೇ ಕೈ ಬಿಟ್ಟರು.‌ ಒಂದು ವರ್ಷ ರಾತ್ರಿ ಹಗಲು ತಿರುಗಾಡಿದ್ದೇನೆ. ಸಮಾಜದ‌ವರ ಕಾಲು ಹಿಡಿದು ಓಟ್ ಹಾಕಿಸಿದ್ದೇನೆ. ಇದಕ್ಕೆ ನೀವು ಕೊಡುವ ಪ್ರತಿ ಉಪಕಾರನಾ ಎಂದು ಹೆಚ್​ಡಿಕೆ ವಿರುದ್ಧ ಕಿಡಿಕಾರಿದರು.

ಕುಮಾರಸ್ವಾಮಿಯವರೇ ನೀವು ಚನ್ನಪಟ್ಟಣದಲ್ಲಿ ಗೆದ್ದಿದ್ದು ಹೇಗೆ?. 20 ಸಾವಿರ ಮತ ಹಾಕದಿದ್ದರೆ ನೀವು ಸೋತು ಮನೆಯಲ್ಲಿ ಇರುತ್ತಿದ್ದರು. ಆಗ ಅಮಿತ್ ಷಾ ನಿಮ್ಮನ್ನ ಕರೆದು ಮಾತನಾಡುತ್ತಿರಲಿಲ್ಲ. ಕೇರಳದವರು ನಿಮ್ಮನ್ನು ಬಿಟ್ಟಾಯಿತು. ಈಗ ನಾವು ತೀರ್ಮಾನ ಮಾಡುತ್ತೇವೆ. ಮಾನ ಇಲ್ಲದ ಸ್ಥಾನ ನನಗೆ ಬೇಡ. ನನಗೆ ಸ್ಥಾನಬೇಡ ಮಾನ ಬೇಕು. ನಮಗೆ ಸಂಸ್ಕಾರ ಇದೆ. ಅದನ್ನು ಇಟ್ಟುಕೊಂಡು ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಮಹಿಮಾ ಪಟೇಲ್ ಭವಿಷ್ಯ: ಇದೇ ವೇಳೆ ಮಾತನಾಡಿದ ಮಾಜಿ ಶಾಸಕ, ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್, ಜನತಾದಳ ಅನ್ನುವ ಹೆಸರೇ ಸಮಸ್ಯೆ ಇರಬೇಕು.‌ ಮತ್ತೆ ಜನತಾದಳದವರು ಸೇರುವ ಸಮಯ ಬಂದಿದೆ ಎಂದು ಭವಿಷ್ಯ ನುಡಿದರು. ಹೊಸ ಹಾದಿಯ ಬಗ್ಗೆ ಸಿಎಂ ಇಬ್ರಾಹಿಂ ಹಾಗೂ ಎಂ.ಪಿ. ನಾಡಗೌಡರು ಯೋಚಿಸುತ್ತಿದ್ದಾರೆ. ಇಬ್ರಾಹಿಂ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ಮುಂದಿನ ವಿಧಾನಸಭೆ ಚುನಾವಣೆ ನೇತೃತ್ವವನ್ನು ಅವರೇ ವಹಿಸಬೇಕು ಎಂದು ಸಲಹೆ ನೀಡಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ, ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಬಿಜೆಪಿಗೆ ಸೇರಿದ್ದರು. ಆಗ ಫರ್ನಾಂಡಿಸ್ ಅವರು ಪ್ರಧಾನಿಯಾಗಲಿದ್ದಾರೆ ಸಹಕಾರ ಕೊಡಿ ಎಂದು ನಮ್ಮ ತಂದೆ ಜೆ.ಎಚ್.ಪಟೇಲ್ ಅವರು ಸಮ್ಮತಿಸಿದ್ದರು. ಸಿದ್ದಾಂತದ ಮೂಲಕ ಮತ ಯಾಚಿಸಬೇಕೇ ಹೊರತು ಹಣ, ಜಾತಿ ಆಧಾರದ ಮೇಲೆ ಕೇಳಿದರೆ ಅದು ದಂಧೆಯಾಗಲಿದೆ. ರಾಜಕಾರಣ ಇವತ್ತು ಒಂದು ದಂಧೆಯಾಗಿದೆ. ಈಗಾಗಲೇ ರಾಜಕಾರಣಿಗಳ ಬಗ್ಗೆ ಗೌರವ ಕಡಿಮೆಯಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಪಿ.ನಾಡಗೌಡ, ಮುಖಂಡರಾದ ಇಮ್ರಾನ್ ಪಾಶಾ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಸಿ.ಎಂ.ಇಬ್ರಾಹಿಂ ನೇತೃತ್ವದ 'ಚಿಂತನ ಮಂಥನ' ಸಭೆಯಲ್ಲಿ ಹೆಚ್.​ಡಿ.ಕುಮಾರಸ್ವಾಮಿ ಫೋಟೋ ನಾಪತ್ತೆ!

Last Updated :Oct 16, 2023, 8:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.