ETV Bharat / state

ಸಿ.ಎಂ.ಇಬ್ರಾಹಿಂ ನೇತೃತ್ವದ 'ಚಿಂತನ ಮಂಥನ' ಸಭೆಯಲ್ಲಿ ಹೆಚ್.​ಡಿ.ಕುಮಾರಸ್ವಾಮಿ ಫೋಟೋ ನಾಪತ್ತೆ!

author img

By ETV Bharat Karnataka Team

Published : Oct 16, 2023, 3:18 PM IST

Updated : Oct 16, 2023, 4:16 PM IST

ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಜೆಡಿಎಸ್​ ಮಾಡಿಕೊಂಡಿರುವ ಮೈತ್ರಿಗೆ ಪಕ್ಷದ ಮುಸ್ಲಿಂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಜೆಡಿಎಸ್‌ಗೆ ರಾಜೀನಾಮೆ ನೀಡಿದ್ದಾರೆ. ಇದೀಗ ಹೊಸ ಬೆಳವಣಿಗೆಯಲ್ಲಿ ಪಕ್ಷದ ಚಿಂತನ ಮಂಥನ ಸಭೆಯ ವೇದಿಕೆಯಲ್ಲಿ ಹೆಚ್‌ಡಿಕೆ ಫೋಟೋ ಕೂಡಾ ಮಾಯವಾಗಿದೆ.

ಮಾಜಿ ಸಿಎಂ ಹೆಚ್​ಡಿಕೆ ಫೋಟೋ ನಾಪತ್ತೆ
ಮಾಜಿ ಸಿಎಂ ಹೆಚ್​ಡಿಕೆ ಫೋಟೋ ನಾಪತ್ತೆ

ಹೆಚ್.​ಡಿ.ಕುಮಾರಸ್ವಾಮಿ ಫೋಟೋ ನಾಪತ್ತೆ

ಬೆಂಗಳೂರು : ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ನಡೆಯುತ್ತಿರುವ 'ಚಿಂತನ ಮಂಥನ' ಸಭೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಫೋಟೋ ನಾಪತ್ತೆಯಾಗಿದೆ. ನಗರದ ನಾಗವಾರ ಮುಖ್ಯರಸ್ತೆಯಲ್ಲಿರುವ ಸಿಎಂಎ ಕಲ್ಯಾಣ ಮಂಟಪದಲ್ಲಿ ಈ ಸಭೆ ನಡೆಯುತ್ತಿದ್ದು, ಸಭೆ ನಡೆಸುತ್ತಿರುವ ಸ್ಥಳದಲ್ಲಿ ಹಾಕಿರುವ ಫ್ಲೆಕ್ಸ್​ಗಳು ಹಾಗೂ ವೇದಿಕೆ ಮೇಲಿನ ಬ್ಯಾನರ್​ನಲ್ಲೂ ಕುಮಾರಸ್ವಾಮಿ ಫೋಟೋಗೆ ಜಾಗವಿಲ್ಲದಂತಾಗಿದೆ.

ಬಿಜೆಪಿ ಜೊತೆಗಿನ ಮೈತ್ರಿ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸಿ.ಎಂ.ಇಬ್ರಾಹಿಂ ಮೈತ್ರಿ ವಿರೋಧಿಸುತ್ತಿರುವ ಅಸಮಾಧಾನಿತ ನಾಯಕರ ಸಭೆ ನಡೆಸುತ್ತಿದ್ದಾರೆ. ಮುಖಂಡರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಇಬ್ರಾಹಿಂ, "ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಏನು ಮಾಡಿದರು, ಕುಮಾರಸ್ವಾಮಿ ಏನು ಮಾಡಿದರು ಎಂಬುದು ಬೇಡ. ಮುಂದೆೇನು ಮಾಡಬೇಕು. ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಮಾತನಾಡುವಂತೆ ಸಲಹೆ ನೀಡಿದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಮುಖ್ಯ ಗುರಿಯಾಗಬೇಕು. ಹಾಗಾಗಿ, ಎಲ್ಲಾ ಜಿಲ್ಲೆಗಳಿಂದ ಬಂದಿರುವ ಮುಖಂಡರು ನಿಮ್ಮ, ನಿಮ್ಮ ಸಲಹೆಗಳನ್ನು ನೀಡಿ" ತಿಳಿಸಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾಗಿದ್ದ ಸೈಯದ್ ಶಫೀವುಲ್ಲಾ ಸಾಹೇಬ್ ಮಾತನಾಡಿ, "ಇವತ್ತು ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರೇ ಕರೆದಿರುವ ಪ್ರತ್ಯೇಕ ಸಭೆ ಇದಾಗಿದೆ. ಈಗಾಗಲೇ ರಾಜೀನಾಮೆ ಕೊಟ್ಟಿದ್ದೇನೆ. ಆದರೂ ನನಗೆ ಆಹ್ವಾನ ಕೊಟ್ಟಿದ್ದಾರೆ. ಸಭೆಗೆ ಬಂದು ನಿಮ್ಮ ನಿಲುವು ತಿಳಿಸಿ ಎಂದು ಹೇಳಿದ್ದಾರೆ" ಎಂದರು.

"ಮೈತ್ರಿ ವಿಚಾರದಲ್ಲಿ ಅಲ್ಪಸಂಖ್ಯಾತರು ಅಲ್ಲದೆ ಜಾತ್ಯತೀತ ಸಿದ್ಧಾಂತ ನಂಬಿರುವ ಸಮುದಾಯಕ್ಕೆ ನೋವಾಗಿದೆ. 2006ರಲ್ಲಿ ಕುಮಾರಸ್ವಾಮಿ ಬಿಜೆಪಿ ಜೊತೆ ಕೈಜೋಡಿಸಿದ್ದರು. ಆಗ ನಾವು ಬಹಳಷ್ಟು ಜನ ಬೆಂಬಲ ಕಳೆದುಕೊಂಡೆವು. ಜನರ ಜೊತೆ ಪಕ್ಷದ ಪ್ರಮುಖ ಲೀಡರ್ಸ್​ ಕಳೆದುಕೊಂಡೆವು. ಆಮೇಲೆ ಪಕ್ಷ ಹಂತ ಹಂತವಾಗಿ ಸುಧಾರಣೆ ಆಗುತ್ತಾ ಬಂತು".

"ಸುಧಾರಣೆ ಆಗುವ ಹಂತದಲ್ಲಿ ವಿಧಾನಸಭೆಯಲ್ಲಿ ಮತ ಕಡಿಮೆಯಾಗಿರುವುದಕ್ಕೆ ಅನೇಕ ಕಾರಣಗಳಿವೆ. ಅಲ್ಪಸಂಖ್ಯಾತರು ಮಾತ್ರವಲ್ಲದೇ ಒಕ್ಕಲಿಗರು, ಲಿಂಗಾಯತ, ಕುರುಬರು ಸೇರಿದಂತೆ ಬೇರೆ ಸಮುದಾಯಗಳ ಓಟ್‌ಗಳು ಕಡಿಮೆ ಬಿದ್ದಿವೆ. ಓಟ್ ಶೇರ್ ಕಮ್ಮಿಯಾಗಿದೆ. ಅದಕ್ಕಾಗಿ 19 ಸೀಟ್ ಬಂದಿದೆ. ಇದನ್ನು ಹೇಗೆ ಬದಲಾವಣೆ ಮಾಡೋದು ಎನ್ನುವುದು ಬಿಟ್ಟು, ಈಗ ಏಕಾಏಕಿ ಬದಲಾವಣೆಯ ನಿರ್ಧಾರ ಕೈಗೊಂಡಿದ್ದಾರೆ. 2006ರಲ್ಲಾದ ಪರಿಸ್ಥಿತಿ ಪಕ್ಷಕ್ಕೆ ಬರಲಿದೆ" ಎಂದು ಹೇಳಿದರು.

ಕಲಬುರಗಿ, ಶಿವಮೊಗ್ಗ, ಮೈಸೂರು, ಬೀದರ್, ರಾಯಚೂರು, ಮಂಡ್ಯ, ಚಿಕ್ಕಮಗಳೂರು, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಅಲ್ಪಸಂಖ್ಯಾತ ಜೆಡಿಎಸ್ ಮುಖಂಡರು ಜೆಡಿಎಸ್-ಬಿಜೆಪಿ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದರು. ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಸಿ.ಎಂ.ಇಬ್ರಾಹಿಂಗೆ ಬೆಂಬಲ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ಪರ್ಸಂಟೇಜ್ ಪಟಾಲಂ' ಕಸಕ್ಕೂ ಬಾಯಿ ಹಾಕಿದೆ; ಜನರ ಸಮಾಧಿ ಮೇಲೆ ಬ್ರ್ಯಾಂಡ್‌ ಬೆಂಗಳೂರು ಕಟ್ಟಿದರೆ ಸುಮ್ಮನೆ ಬಿಡಲ್ಲ: ಕುಮಾರಸ್ವಾಮಿ

Last Updated : Oct 16, 2023, 4:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.