ETV Bharat / state

102 ಕೋಟಿ ಹಣಕ್ಕೆ ಸಂಬಂಧಿಸಿದಂತೆ ಸಿಎಂ ಡಿಸಿಎಂ ರಾಜೀನಾಮೆ ನೀಡಬೇಕು: ಎನ್ ರವಿಕುಮಾರ್ ಆಗ್ರಹ

author img

By ETV Bharat Karnataka Team

Published : Nov 1, 2023, 8:22 PM IST

ತಮಿಳುನಾಡಿಗೆ ಕಾವೇರಿ ನೀರು ಪ್ರತಿದಿನ 2,600 ಕ್ಯೂಸೆಕ್ ಬಿಡಲಾಗುತ್ತಿದೆ. ಸುಪ್ರೀಂಕೋರ್ಟ್ ಪ್ರಾಧಿಕಾರದ ಎದುರು ಯಾಕೆ ನೀರು ಬಿಡಲು ಅಸಾಧ್ಯ ಎಂದು ಸಮರ್ಪಕ ವಾದ ಮಂಡಿಸಲು ರಾಜ್ಯ ಸರ್ಕಾರಕ್ಕೆ ಆಗುತ್ತಿಲ್ಲ. ತಮಿಳುನಾಡಿಗೆ ಸೋಲುವುದೇ ಇವರ ಕೆಲಸ ಎಂದು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಆರೋಪಿಸಿದರು.

MLC N Ravikumar spoke to the media.
ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಮಾಧ್ಯಮದವರ ಜೊತೆ ಮಾತನಾಡಿದರು.

ಬೆಂಗಳೂರು: ಗುತ್ತಿಗೆದಾರರ ಬಳಿ ಇತ್ತೀಚೆಗೆ ಸಿಕ್ಕಿದ್ದ 102 ಕೋಟಿ ಹಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸಿಎಂ ಮತ್ತು ಡಿಸಿಎಂ ರಾಜೀನಾಮೆ ನೀಡಬೇಕು. ಈ ಹಣ ಯಾರದ್ದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಬಹಿರಂಗಪಡಿಸಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಆಗ್ರಹಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಬಂದಿದ್ದಾರೆ. ಇವರಿಬ್ಬರು ಬಂದ ತಕ್ಷಣ ಕರ್ನಾಟಕದ ಜನರು ಕಾಂಗ್ರೆಸ್ ಪಕ್ಷಕ್ಕೆ ಗುರಿ ನಿಶ್ಚಯ ಮಾಡಲು ಅವರು ಬಂದಿದ್ದಾರೆಂದು ಮಾತನಾಡುತ್ತಾರೆ. ಪಂಚರಾಜ್ಯಗಳಿಗೆ ಚುನಾವಣೆ ನಡೆಯುತ್ತಿದೆ. ಆ ಹಿನ್ನೆಲೆ ಗುರಿ ನಿಗದಿಪಡಿಸಲು ಬಂದಿರುವರು ಎಂದು ಜನರು ಮಾತನಾಡುತ್ತಿದ್ದು, ಅದಕ್ಕೆ ಕಾಂಗ್ರೆಸ್ಸಿಗರು ಉತ್ತರ ಕೊಡಬೇಕೆಂದು ಆಗ್ರಹಿಸಿದರು.

ಸಚಿವ ಸ್ಥಾನ ಸಿಗದೇ ಬೇಸರ ವ್ಯಕ್ತಪಡಿಸುವವರನ್ನು ಸಮಾಧಾನ ಪಡಿಸಲು ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಾಸಕರನ್ನು ನೇಮಿಸಲು ಈಗ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಬಂದಿದ್ದಾರೆ. ಬಹುಶಃ ನಿಗಮಗಳಿಗೆ ಇಷ್ಟು ಎಂದು ಗುರಿ ನಿರ್ಧರಿಸಲು ಬಂದಿರಬೇಕು. ಇದನ್ನು ಸ್ಪಷ್ಟಪಡಿಸಿ ಎಂದು ಸವಾಲೆಸೆದರು.

ಅವರು ಬಂದು ಹೋಗಿ ಕೆಲವೇ ದಿನಗಳಲ್ಲಿ ಇಬ್ಬರು ಗುತ್ತಿಗೆದಾರರ ಮನೆಗಳಲ್ಲಿ 102 ಕೋಟಿ ಹಣ ಸಿಕ್ಕಿತು. ಅದು ಕಾಂಗ್ರೆಸ್ಸಿನದೇ ಹಣ, ಸಿಎಂ, ಡಿಸಿಎಂ ಅವರೇ ಸಂಗ್ರಹಿಸಿದ ಹಣ, ಅದನ್ನು ಪಂಚರಾಜ್ಯಗಳ ಚುನಾವಣೆಗೆ ಸಂಗ್ರಹಿಸಿ ಕಳಿಸಲು ಇಡಲಾಗಿತ್ತು ಎಂಬುದು ಜಗಜ್ಜಾಹೀರಾಗಿದೆ. ಇವರು ಕನ್ನಡದ ಸಂಪತ್ತನ್ನು ರಕ್ಷಿಸುವುದಿಲ್ಲ. ಕನ್ನಡದ ಜಲ,ನೆಲ,ಭಾಷೆಯನ್ನು ರಕ್ಷಿಸುವುದಿಲ್ಲ. ಅದರ ಬಗ್ಗೆ ಮಾತನಾಡುವ ನೈತಿಕ ಸ್ಥೈರ್ಯ ಈ ಸರಕಾರಕ್ಕೆ ಇಲ್ಲ ಎಂದು ಟೀಕಿಸಿದರು.

ತಮಿಳುನಾಡಿಗೆ 2600 ಕ್ಯೂಸೆಕ್ ನೀರು: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿದ್ದಾರೆ. ಈಗ 2600 ಕ್ಯೂಸೆಕ್ ನೀರನ್ನು ಪ್ರತಿದಿನ ಬಿಡಲಾಗುತ್ತಿದೆ. ಸುಪ್ರೀಂ ಕೋರ್ಟ್, ಪ್ರಾಧಿಕಾರದ ಮುಂದೆ ಯಾಕೆ ನೀರು ಬಿಡಲು ಅಸಾಧ್ಯ ಎಂದು ಸಮರ್ಪಕವಾದ ಮಂಡಿಸಲು ಇವರಿಂದ ಆಗುತ್ತಿಲ್ಲ. ತಮಿಳುನಾಡಿಗೆ ಸೋಲುವುದೇ ಇವರ ಕೆಲಸ ಎಂದು ಆಕ್ಷೇಪಿಸಿದರು.

ಡಿ.ಕೆ.ಶಿವಕುಮಾರ್ ಅವರು ಮೇಕೆದಾಟು ಪಾದಯಾತ್ರೆ ಮಾಡಿದರು. ಮೇಕೆದಾಟು ವಿಚಾರ ಈಗ ಮಾತನಾಡುತ್ತಿಲ್ಲ ಯಾಕೆ? ತಮಿಳುನಾಡು ಒಪ್ಪಿಗೆ ಕೊಡಬೇಕೆಂಬ ಯೋಚನೆಯಿಂದ ಈಗ ಸಿಎಂ, ಡಿಸಿಎಂ ತೆಪ್ಪಗೆ ಇದ್ದಾರೆ. ಇದರ ಬಗ್ಗೆ ಮಾತನಾಡಿ ಎಂದು ಆಗ್ರಹಿಸಿದರು.

ಸರಕಾರದಲ್ಲಿ ಭುಗಿಲೆದ್ದ ಆಂತರಿಕ ಕಲಹ: ಕಾಂಗ್ರೆಸ್ ಸರಕಾರದಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಇದನ್ನು ಶಮನ ಮಾಡಲು ಡಿ ಕೆ ಶಿವಕುಮಾರ್​ ಬೆಳಗಾವಿಗೆ ಹೋಗುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವ ಪರಮೇಶ್ವರರ ಮನೆಗೆ ಹೋಗುತ್ತಾರೆ. ಬೆಳಗಾವಿಗೆ ಹೋದ ಸಂದರ್ಭದಲ್ಲಿ ಒಬ್ಬ ಶಾಸಕರು ಡಿ ಕೆ ಶಿವಕುಮಾರರ ಸ್ವಾಗತಕ್ಕೆ ಬಂದಿಲ್ಲ. ಸಿದ್ದರಾಮಯ್ಯ ಅವರು ಗೃಹ ಸಚಿವ ಪರಮೇಶ್ವರರ ಮನೆಗೆ ಹೋದಾಗ ಡಿ ಕೆ ಶಿವಕುಮಾರರು ಬೆಂಗಳೂರಿನಲ್ಲೇ ಇದ್ದರೂ ಅವರನ್ನು ಊಟಕ್ಕೆ ಕರೆದಿಲ್ಲ. ಹೀಗೆ ಆಂತರಿಕ ಕಲಹ, ಗುದ್ದಾಟ ಮುಗಿಲು ಮುಟ್ಟಿದೆ ಎಂದು ಆರೋಪಿಸಿದರು.

ನಮ್ಮ ರಮೇಶ ಜಾರಕಿಹೊಳಿ ಅವರು ಹೇಳಿದ್ದು ಸತ್ಯವಾಗಿದೆ. ಈ ಸರಕಾರ ಏನು ಬೇಕಾದರೂ ಆಗಬಹುದೆಂದು ಸರಿಯಾಗಿಯೇ ಹೇಳಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಿಬ್ಬರು ಬಂದಿರುವುದು ಕರ್ನಾಟಕಕ್ಕೆ ಅತ್ಯಂತ ನಾಚಿಕೆಗೇಡಿನ ವಿಚಾರ. ಕರ್ನಾಟಕಕ್ಕೆ ಲೂಟಿ ಮಾಡಲು, ಗುರಿ ನಿರ್ಧರಿಸಲು ಬಂದಿದ್ದಾರೆ ಎಂದು ಅವರು ಪುನರುಚ್ಚರಿಸಿದರು.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ: ಬೆಳಗಾವಿ, ಚಿಕ್ಕೋಡಿ ಕರ್ನಾಟಕದ ಅವಿಭಾಜ್ಯ ಅಂಗ. ಕರ್ನಾಟಕವನ್ನು ಭಾಗ ಮಾಡುವ ಪ್ರಶ್ನೆಯೇ ಇಲ್ಲ. ಇದು ದಶಕಗಳ ಹಿಂದೆಯೇ ನಿರ್ಧಾರವಾದ ವಿಚಾರ. ಮಹಾರಾಷ್ಟ್ರದವರ ಲಾಭಕ್ಕಾಗಿ ಆಗಿಂದಾಗ್ಗೆ ಗಲಾಟೆ ಮಾಡುತ್ತಾರೆ. ಬಸ್ ಸುಟ್ಟು ಹಾಕುತ್ತಾರೆ. ಗಡಿಮೀರಿ ನಮ್ಮ ರಾಜ್ಯದ ಒಳಗಡೆ ಪ್ರವೇಶಿಸುತ್ತಾರೆ. ಪೊಲೀಸರು ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಕರ್ನಾಟಕ ಅಖಂಡವಾಗಿ ಇರಬೇಕೆಂಬುದು ಬಿಜೆಪಿ ನಿರ್ಧಾರ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಇದನ್ನೂಓದಿ:ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂಪಾಯಿ ಆಫರ್ ನೀಡಿದ್ದರೆ ಬಹಿರಂಗಪಡಿಸಲಿ: ಯತ್ನಾಳ್ ಸವಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.