ETV Bharat / state

ಗಡಿ ವಿವಾದದ ನಡುವೆ ಬೆಳಗಾವಿ ಪ್ರವಾಸ ಹೊರಟ ಸಿಎಂ ಬೊಮ್ಮಾಯಿ‌

author img

By

Published : Dec 2, 2022, 8:46 AM IST

Etv Bharat
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಗಡಿ ವಿವಾದದ ಮಧ್ಯೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ಬೆಂಗಳೂರು: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಬೆಳಗಾವಿ ಜಿಲ್ಲಾ ಪ್ರವಾಸಕ್ಕೆ ಅಣಿಯಾಗಿದ್ದಾರೆ. ವಿವಿಧ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನಾ ಕಾರ್ಯಕ್ರಮ ನೆರವೇರಿಸುವುದರ ಮೂಲಕ ಮಹಾರಾಷ್ಟ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲಿದ್ದಾರೆ.

ಬೆಳಗ್ಗೆ 9.30 ಕ್ಕೆ ಬೆಂಗಳೂರಿನ ಹೆಚ್‌ಎಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಸಿಎಂ ಪ್ರಯಾಣಿಸಲಿದ್ದು, 10.30ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪುವರು. 10.40 ಕ್ಕೆ ರಸ್ತೆ ಮಾರ್ಗದ ಮೂಲಕ ಸಾಗಿ 11.40 ಕ್ಕೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ದೊಡಮಂಗಡಿ ತಲುಪಲಿದ್ದಾರೆ. ಅಲ್ಲಿ ಮೊದಲ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಬಸವೇಶ್ವರ ವೃತ್ತದಲ್ಲಿ ನಿರ್ಮಿಸಿರುವ ಬಸವೇಶ್ವರರ ಕಂಚಿನ ಪುತ್ಥಳಿ ಅನಾವರಣ ಮಾಡಲಿದ್ದಾರೆ.

ಈ ಕಾರ್ಯಕ್ರಮದ ನಂತರ ಅಪರಾಹ್ನ 12 ಗಂಟೆಗೆ ದೊಡಮಂಗಡಿಯಿಂದ ಹೊರಟು 12.15 ಕ್ಕೆ ಸಾಲಹಳ್ಳಿ ತಲುಪಲಿದ್ದಾರೆ. ಡಾ.ಶ್ಯಾಮ ಪ್ರಸಾದ್ ಮುಖರ್ಜಿ ವೇದಿಕೆಯಲ್ಲಿ ಆಯೋಜನೆ ಮಾಡಿರುವ ರಾಮದುರ್ಗ ತಾಲ್ಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.

ಎರಡನೇ ಕಾರ್ಯಕ್ರಮ ಮುಗಿಸಿದ ನಂತರ ಮಧ್ಯಾಹ್ನ 2.30 ಕ್ಕೆ ಸಾಲಹಳ್ಳಿಯಿಂದ ರಸ್ತೆ ಮಾರ್ಗದ ಮೂಲಕ ಹೊರಟು 3.30 ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. 3.45 ಕ್ಕೆ ವಿಶೇಷ ವಿಮಾನದ ಮೂಲಕ ಹೊರಟು ಸಂಜೆ 4.45 ಕ್ಕೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗುವರು.

ಗಡಿ ವಿವಾದದ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿದೆ. ಮರಾಠಿ ಭಾಷಿಕರು ಹೆಚ್ಚಿರುವ ಬೆಳಗಾವಿ, ನಿಪ್ಪಾಣಿ, ಕಾರವಾರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಹೇಳುತ್ತಿದೆ. ಇದಕ್ಕೆ ಪ್ರತಿಯಾಗಿ ಮಹಾರಾಷ್ಟ್ರದ ಜತ್ತ ಕರ್ನಾಟಕಕ್ಕೆ ಸೇರಿಸಿಕೊಳ್ಳುವ ಹೇಳಿಕೆಯನ್ನು ಸಿಎಂ ಬಸವರಾಜ ಬೊಮ್ಮಾಯಿ‌ ನೀಡಿದ್ದರು.

ಕರ್ನಾಟಕದ ಒಂದಿಂಚು ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದಿರುವ ಕರ್ನಾಟಕ ಸಿಎಂ, ಮಹಾರಾಷ್ಟ್ರದ ಒಂದಿಂಚೂ ಭೂಮಿ ಬಿಟ್ಟುಕೊಡಲ್ಲ ಎಂದು ಮಹಾರಾಷ್ಟ್ರ ಸಿಎಂ ಹೇಳಿಕೆ ನೀಡಿದ್ದು ಗಡಿ ಬಿಕ್ಕಟ್ಟು ಹೆಚ್ಚಾಗಿ ಉಭಯ ರಾಜ್ಯಗಳ ನಡುವಿನ ಅಂತಾರಾಜ್ಯ ಸಾರಿಗೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಎರಡೂ ಭಾಗದಲ್ಲಿ ಹೋರಾಟಗಾರರ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆಯೇ ದೆಹಲಿಗೆ ಹೋಗಿ ವಕೀಲರ ಜೊತೆ ಗಡಿ ವಿವಾದ ಕುರಿತ ಮಾತುಕತೆ ನಡೆಸಿ ಬಂದಿರುವ ಸಿಎಂ ಇಂದು ಗಡಿ ವಿವಾದದ ಜ್ವಾಲೆ ಇರುವ ಬೆಳಗಾವಿ ಜಿಲ್ಲಾ ಪ್ರವಾಸಕ್ಕೆ ತೆರಳುತ್ತಿದ್ದಾರೆ.

ಇದನ್ನೂ ಓದಿ: ಬೊಮ್ಮಾಯಿ ದಾವಣಗೆರೆ - ಕೊಪ್ಪಳ ಜಿಲ್ಲಾ ಪ್ರವಾಸ : ಇಂದು ಅಂಜನಾದ್ರಿ ಬೆಟ್ಟಕ್ಕೆ ಸಿಎಂ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.