ETV Bharat / state

ಡಿಸೆಂಬರ್ ತಿಂಗಳಲ್ಲಿ ಸುಶಾಸನ ಮಾಸ ಆಚರಣೆ: ಸಚಿವ ಅಶ್ವತ್ಥನಾರಾಯಣ

author img

By

Published : Nov 29, 2022, 5:38 PM IST

Celebration of Sushasan Masa in December
ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್​ ಅಶ್ವತ್ಥನಾರಾಯಣ

ಹಿಂದಿನ ವರ್ಷಗಳಲ್ಲಿ ಮಾಜಿ ಪ್ರಧಾನಿ ದಿವಂಗತ ಎ ಬಿ ವಾಜಪೇಯಿ ಅವರ ನೆನಪಿನಲ್ಲಿ ಡಿಸೆಂಬರ್ 25 ರಂದು ಸುಶಾಸನ ದಿನ ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಇಡೀ ಡಿಸೆಂಬರ್ ತಿಂಗಳನ್ನು ಸುಶಾಸನ ಮಾಸವಾಗಿ ಆಚರಿಸಲಾಗುತ್ತದೆ ಎಂದು ಸಚಿವ ಸಿ ಎನ್​ ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಂಗಳೂರು: ಸುಶಾಸನ ಮಾಸದ ಅಂಗವಾಗಿ ಉನ್ನತ ಶಿಕ್ಷಣ, ಎಲೆಕ್ಟ್ರಾನಿಕ್ಸ್, ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆಗಳಲ್ಲಿ ಡಿಸೆಂಬರ್ ತಿಂಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್​ ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದಾರೆ.

ಸುಶಾಸನ ಮಾಸಾಚರಣೆಗೆ ಸಿಎಂ ಚಾಲನೆ: ವಿಕಾಸಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ಮಾತನಾಡಿದ ಅವರು, ಹಿಂದಿನ ವರ್ಷಗಳಲ್ಲಿ ಮಾಜಿ ಪ್ರಧಾನಿ ದಿವಂಗತ ಎ ಬಿ ವಾಜಪೇಯಿ ಅವರ ನೆನಪಿನಲ್ಲಿ ಡಿಸೆಂಬರ್ 25 ರಂದು ಸುಶಾಸನ ದಿನ ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಇಡೀ ಡಿಸೆಂಬರ್ ತಿಂಗಳನ್ನು ಸುಶಾಸನ ಮಾಸವಾಗಿ ಆಚರಿಸಲಾಗುತ್ತದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಡಿಸೆಂಬರ್ 1 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸುಶಾಸನ ಮಾಸಾಚರಣೆಗೆ ಚಾಲನೆ ನೀಡಲಿದ್ದಾರೆ. ವಿದ್ಯಾರ್ಥಿಗಳು, ಇಲಾಖೆ ಸಿಬ್ಬಂದಿ, ಉದ್ಯಮಶೀಲರು ಇವರೆಲ್ಲರನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಉನ್ನತ ಶಿಕ್ಷಣ ಇಲಾಖೆಯು ವಿಶ್ವವಿದ್ಯಾಲಯ ಆಡಳಿತದಲ್ಲಿ ಪಾರದರ್ಶಕತೆಯನ್ನು ಖಾತ್ರಿಗೊಳಿಸಲು ಹಲವಾರು ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಂದು ವಿಶ್ವವಿದ್ಯಾಲಯವು ಡಿಸೆಂಬರ್ 10ರ ಒಳಗಾಗಿ ತಮಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ತಮ್ಮ ತಮ್ಮ ವೆಬ್​ಸೈಟ್​ನಲ್ಲಿ ಪ್ರಕಟಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್​ ಅಶ್ವತ್ಥನಾರಾಯಣ ಮಾಹಿತಿ

ವೆಬ್‌ ಸೈಟ್​ನಲ್ಲಿ ವಿವರಗಳ ಪ್ರಕಟ: ಸಂಯೋಜಿತ ಕಾಲೇಜುಗಳು ಹಾಗೂ ಘಟಕ ಕಾಲೇಜುಗಳು ಕೂಡ ಈ ವಿವರಗಳನ್ನು ತಮ್ಮ ವೆಬ್ ಸೈಟ್‌ನಲ್ಲಿ ಹಾಕಬೇಕು. ಒಂದೊಮ್ಮೆ ಘಟಕ ಕಾಲೇಜುಗಳಲ್ಲಿ ವೆಬ್‌ಸೈಟ್ ಇಲ್ಲದಿದ್ದರೆ ವಿಶ್ವವಿದ್ಯಾಲಯದ ವೆಬ್‌ ಸೈಟ್​ನಲ್ಲಿಯೇ ವಿವರಗಳನ್ನು ಪ್ರಕಟಿಸಬೇಕು. ಪಠ್ಯಕ್ರಮ ಕೋರ್ಸ್​ಗಳ ವಿವರ, ಅನುಮತಿಸಲಾದ ವಿದ್ಯಾರ್ಥಿಗಳ ಸಂಖ್ಯೆ, ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ, ಬೋಧಕ ಸಿಬ್ಬಂದಿ ವಿವರ, ಬೋಧಕೇತರ ಸಿಬ್ಬಂದಿ ವಿವರ, ವಿಶ್ವವಿದ್ಯಾಲಯಗಳಿಗೆ ಕೊಡಲಾಗಿರುವ ಅನುದಾನದ ಮೊತ್ತದ ಮಾಹಿತಿ, ಹಾಲಿ ನಡೆಯುತ್ತಿರುವ ಪ್ರಾಜೆಕ್ಟ್‌ಗಳು, ವಿಶ್ವವಿದ್ಯಾಲಯದ ಬ್ಯಾಂಕ್ ಖಾತೆ ಮಾಹಿತಿಗಳು ಇತ್ಯಾದಿ ಪ್ರತಿಯೊಂದು ಮಾಹಿತಿಯೂ ವೆಬ್‌ಸೈಟ್‌ನಲ್ಲಿ ಲಭ್ಯವಾಗಿಸುವುದು ಇದರ ಉದ್ದೇಶವಾಗಿದೆ.

ಹಾಗೆಯೇ ಸಾಮಾಜಿಕ ಜಾಲತಾಣಗಳ ಮೂಲಕ ತಕ್ಷಣದಿಂದಲೇ ಜಾರಿಗೆ ಬರುವಂತೆ ಶೈಕ್ಷಣಿಕ ಪರಿಷತ್ ಸಭೆ, ಹಣಕಾಸು ಸಮಿತಿ ಸಭೆ, ಸಿಂಡಿಕೇಟ್‌ ಸಭೆಗಳ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಪ್ರತಿಯೊಂದು ವಿಶ್ವವಿದ್ಯಾಲಯವು 5 ವರ್ಷಗಳ ಸಾಂಸ್ಥಿಕ ಅಭಿವೃದ್ಧಿ ಯೋಜನೆ ಸಿದ್ಧಪಡಿಸಬೇಕು. ಇದು ಕಡ್ಡಾಯ. ಇದನ್ನು ನೀತಿ ಆಯೋಗದ ಗಮನದಲ್ಲಿರಿಸಿಕೊಂಡು ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಡಿಸೆಂಬರ್ ಮೊದಲ ವಾರದಲ್ಲಿ ಕಾರ್ಯಗಾರವನ್ನು ನಡೆಸಲಿದೆ. ಈ ಐಡಿಪಿಯನ್ನು ಕೂಡ ವಿಶ್ವವಿದ್ಯಾಲಯಗಳು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸುವುದು ಕಡ್ಡಾಯವಾಗಿರುತ್ತದೆ.

ಆನ್‌ಲೈನ್‌ ಡಿಜಿಟಲ್ ಕಲಿಕೆ ಆರಂಭ: ಅರ್ಹ ವಿಶ್ವವಿದ್ಯಾಲಯಗಳು ಮಾರ್ಚ್‌ ವೇಳೆಗೆ ಆನ್‌ಲೈನ್‌ ಡಿಜಿಟಲ್ ಕಲಿಕೆ ಹಾಗೂ ಆನ್‌ಲೈನ್ ಕೋರ್ಸ್‌ಗಳನ್ನು ಆರಂಭಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮಾರ್ಗದರ್ಶನ ನೀಡಲಿದೆ. ಪದವಿ ಹಂತದಲ್ಲಿ ಕನಿಷ್ಠ ಒಂದು ಕೋರ್ಸ್ ಆದರೂ ಆನ್‌ಲೈನ್​ನಲ್ಲಿ ಶಿಕ್ಷಣ ಕೊಡಬೇಕು. ಪ್ರತಿಯೊಂದು ವಿಶ್ವವಿದ್ಯಾಲಯವು ಜನವರಿ ಮುಗಿಯುವ ಮುನ್ನ ಅಲೂಮ್ನಿ ಕನೆಕ್ಟ್ ಆಫೀಸ್ ಹಾಗೂ ಅಲೂಮ್ನಿ ಪೋರ್ಟಲ್ ಹೊಂದಿರಬೇಕು ಎಂದು ಸೂಚಿಸಿದರು.

ಹಲವಾರು ಕಾರ್ಯಕ್ರಮಗಳ ಆಯೋಜನೆ: ಪ್ರತಿಯೊಂದು ವಿಶ್ವವಿದ್ಯಾಲಯವು ಉದ್ಯಮದೊಡನೆ ಒಡಂಬಡಿಕೆ ಮಾಡಿಕೊಳ್ಳಲು ಮುಂದಾಗಬೇಕು. ಹೀಗೆ ಮಾಡಿಕೊಂಡ ಎಂಒಯು ವಿವರಗಳನ್ನು ವೆಬ್‌ಸೈಟ್‌ನಲ್ಲಿ ಹಾಕಬೇಕು. ವೆಬ್ ಸೈಟ್ ನಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಬಾಕಿ ಕಡತ ವಿಲೇವಾರಿ, ಸೆಂಟರ್ ಆಫ್ ಎಕ್ಸಲೆನ್ಸ್ ಕಟ್ಟಡದ ಉದ್ಘಾಟನೆ, ಕೌಶಲ ಕಟ್ಟಡದ ಉದ್ಘಾಟನೆ, ವಿದ್ವತ್ ಗೋಷ್ಠಿಗಳು, ಮಹಿಳಾ ಉದ್ಯಮಶೀಲತೆ, ಗ್ರಾಮೀಣ ಉದ್ಯಮಶೀಲತೆ, ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ, ಇ- ಆಡಳಿತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಪರಿಣಾಮಕಾರಿ ಬಳಕೆ, ಸ್ವಸಹಾಯ ಗುಂಪುಗಳ ಕಾರ್ಯ ಚಟುವಟಿಕೆಗಳ ನಿರ್ವಹಣೆಗೆ ತಂತ್ರಾಂಶ ಅಳವಡಿಕೆ ಇವೆಲ್ಲವನ್ನು ಇದು ಒಳಗೊಂಡಿರುತ್ತದೆ. ಐಟಿ ಬಿಟಿ ಇಲಾಖೆಯು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್, ಎಚ್‌ಡಿಎಫ್‌ಸಿ, ರೋಬೋಟಿಕ್‌ ಆರ್ಟ್‌ಪಾರ್ಟ್ ಇತ್ಯಾದಿ ಸಂಸ್ಥೆಗಳ ಜೊತೆ ಸೇರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ನೀಟ್, ಸಿಇಟಿ ವೇಳೆ ಅರ್ಜಿಯಲ್ಲಿ ತಪ್ಪು ಮಾಹಿತಿ ಕೊಡದ ಹಾಗೆ ಕ್ರಮ: ಅಶ್ವತ್ಥ ನಾರಾಯಣ

ಹುಬ್ಬಳ್ಳಿ ಧಾರವಾಡ ಬೆಳಗಾವಿ, ಬೀದರ್‌, ಮಂಗಳೂರು ಉದ್ಯಮ ವಲಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಅಲ್ಲಿಯೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಸಿಒಐ ಕಟ್ಟಡ ಉದ್ಘಾಟನೆ, ಹುಬ್ಬಳ್ಳಿಯಲ್ಲಿ ಬಹು ಕೌಶಲ್ಯ ಕಟ್ಟಡ ಉದ್ಘಾಟನೆ, ಅತ್ಯುತ್ತಮ ಜಿಟಿಟಿಸಿ ಪುರಸ್ಕಾರ ಮತ್ತಿತರ ವಿಷಯ ಒಳಗೊಂಡಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.