ETV Bharat / state

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ : ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತೆ

author img

By

Published : Feb 11, 2022, 5:00 PM IST

CD case Victim went to Supreme court to question interim order
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತೆ

ಎಸ್ಐಟಿ ರಚನೆ ಸಿಂಧುತ್ವವನ್ನು ಪ್ರಶ್ನಿಸಿದ್ದರಿಂದಲೇ ಹೈಕೋರ್ಟ್ ಮೊದಲಿಗೆ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ತಡೆ ನೀಡಿತ್ತು. ಆದರೆ, ಇದೀಗ ಎಸ್ಐಟಿಯ ತನಿಖಾ ವರದಿಯನ್ನು ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಿದೆ..

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶ ಪ್ರಶ್ನಿಸಿ ಪ್ರಕರಣದ ಸಂತ್ರಸ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಎಸ್ಐಟಿ ತನಿಖಾ ವರದಿಯನ್ನು ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಹೈಕೋರ್ಟ್ ಅನುಮತಿಸಿ ನೀಡಿರುವ ಮಧ್ಯಂತರ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಪ್ರಕರಣದ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ ಕೋರಿಕೆ ಮೇರೆಗೆ ಎಸ್ಐಟಿ ರಚನೆ ಮಾಡಲಾಗಿದೆ. ಆರೋಪಿ ಕೋರಿಕೆಯಂತೆ ಎಸ್ಐಟಿ ರಚಿಸಿರುವ ಕ್ರಮವೇ ಅಸಿಂಧು. ಇಂತಹ ವಿಶೇಷ ತನಿಖಾ ದಳದ ಮುಖ್ಯಸ್ಥರಾಗಿದ್ದ ಸೌಮೇಂದು ಮುಖರ್ಜಿ ವರದಿಗೆ ಸಹಿಯನ್ನೇ ಹಾಕಿರಲಿಲ್ಲ.

ಹೈಕೋರ್ಟ್ ಈ ಕುರಿತು ವಿಚಾರಣೆ ನಡೆಸಿದ್ದ ವೇಳೆ ಮೊದಲಿಗೆ ವರದಿಗೂ ತನಗೂ ಸಂಬಂಧವಿಲ್ಲ ಎಂಬಂತೆ ಹೇಳಿಕೆ ನೀಡಿದ್ದ ಅಧಿಕಾರಿ, ನಂತರ ಅದನ್ನೇ ಅನುಮೋದಿಸಿದ್ದಾರೆ. ಇದನ್ನು ಗಮನಿಸಿದರೆ ಎಸ್ಐಟಿ ತನಿಖೆ ಮೇಲೆ ಹಲವು ಅನುಮಾನಗಳು ಮೂಡುತ್ತವೆ ಎಂದಿದ್ದಾರೆ.

ಎಸ್ಐಟಿ ರಚನೆ ಸಿಂಧುತ್ವವನ್ನು ಪ್ರಶ್ನಿಸಿದ್ದರಿಂದಲೇ ಹೈಕೋರ್ಟ್ ಮೊದಲಿಗೆ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ತಡೆ ನೀಡಿತ್ತು. ಆದರೆ, ಇದೀಗ ಎಸ್ಐಟಿಯ ತನಿಖಾ ವರದಿಯನ್ನು ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಿದೆ.

ಎಸ್ಐಟಿ ರಚನೆಯ ಸಿಂಧುತ್ವವನ್ನೇ ಪ್ರಶ್ನಿಸಿರುವ ಅರ್ಜಿ ಬಾಕಿ ಇರುವ ವೇಳೆ ಅದರ ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಹೈಕೋರ್ಟ್ ಸಮ್ಮತಿ ನೀಡಿರುವ ಕ್ರಮ ಸರಿಯಿಲ್ಲ ಎಂದು ಹೇಳಿದ್ದಾರೆ.

ಒಂದು ವೇಳೆ ಎಸ್ಐಟಿಯು ರಚಿಸಿರುವ ಕ್ರಮವೇ ಅಸಿಂಧುವಾದರೆ ತನಿಖಾ ವರದಿಯೂ ಅಸಿಂಧುಗೊಳ್ಳುತ್ತದೆ. ಇಂತಹ ವರದಿಯನ್ನು ಆಧರಿಸಿ ವಿಚಾರಣಾ ನ್ಯಾಯಾಲಯ ವಿಚಾರಣೆ ನಡೆಸುವುದು ಸೂಕ್ತವಲ್ಲ. ಆದ್ದರಿಂದ, ಎಸ್ಐಟಿ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ನೀಡಿರುವ ಮಧ್ಯಂತರ ಆದೇಶಕ್ಕೆ ತಡೆ ನೀಡಬೇಕು ಎಂದು ಯುವತಿ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡಿದ ಎಸ್ಐಟಿ: ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಿದ ತನಿಖಾ ದಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.