ETV Bharat / state

ಕೈಗಾರಿಕಾ ಸ್ನೇಹಿ ಕರ್ನಾಟಕ ಗಣಿ ನೀತಿಗೆ ಸಂಪುಟ ಸಭೆ ಅನುಮೋದನೆ

author img

By

Published : Mar 8, 2023, 10:54 PM IST

ಕೈಗಾರಿಕಾ ಸ್ನೇಹಿ, ಗಣಿ ಆದಾಯ ವೃದ್ಧಿಸುವ ನಿಟ್ಟಿನಲ್ಲಿ ಗಣಿಗಾರಿಕೆ ಸರಳೀಕೃತ ನಿಯಮವನ್ನು ರೂಪಿಸಲಾಗಿದೆ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ
ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ

ಬೆಂಗಳೂರು : ಕರ್ನಾಟಕ ಸಣ್ಣ ಗಣಿ ‌ನೀತಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಹಿಂದಿನ ಉಪ ಖನಿಜ ಕಾನೂನಿಗೆ ತಿದ್ದುಪಡಿ ತಂದು ನಿಯಮ ಸರಳೀಕರಿಸಿ, ಕೈಗಾರಿಕಾ ಸ್ನೇಹಿ ನೀತಿಯನ್ನು ಜಾರಿಗೆ ತರಲಾಗಿದೆ. ಪ್ರಸ್ತುತ ನೀತಿಯಲ್ಲಿ ಕೆಲ ಕ್ಲಿಷ್ಟಕರ ನಿಯಮಗಳಿದ್ದು, ಗಣಿ ಕೈಗಾರಿಕೆಗೆ ಪೂರಕವಾದ ವಾತಾವರಣ ಇದ್ದಿಲ್ಲ. ಇದೀಗ ಕೈಗಾರಿಕಾ ಸ್ನೇಹಿ, ಗಣಿ ಆದಾಯ ವೃದ್ಧಿಸುವ ನಿಟ್ಟಿನಲ್ಲಿ ಗಣಿಗಾರಿಕೆ ಸರಳೀಕೃತ ನಿಯಮವನ್ನು ರೂಪಿಸಲಾಗಿದೆ. ಬೇರೆ ಬೇರೆ ಪ್ರದೇಶಗಳಿಗೆ ಬೇರೆ ಬೇರೆ ರಾಯಲ್ಟಿ ವಿಧಿಸಲಾಗುತ್ತಿತ್ತು. ಹೊಸ ನೀತಿಯನ್ವಯ ರಾಜ್ಯದಲ್ಲಿ ಏಕರೂಪ ರಾಯಲ್ಟಿ ವಿಧಿಸಲಾಗುವುದು ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ತಿಳಿಸಿದರು.

ಈ ಬಗ್ಗೆ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ಹೊಸ ಗಣಿ ನೀತಿಯಲ್ಲಿ ನಿಯಮ‌ ಸರಳೀಕರಿಸಲಾಗಿದೆ. ಗಣಿ ಕೈಗಾರಿಗಳಿಗೆ ಪೂರಕವಾದ ವಾತಾವರಣ ಕಲ್ಪಿಸುವ ನಿಯಮವನ್ನು ರೂಪಿಸಲಾಗಿದೆ.‌ ಈ ಹೊಸ ನೀತಿಯಿಂದ ರಾಯಲ್ಟಿ ಮೂಲಕ ಬರುವ ಆದಾಯ ಹೆಚ್ಚಳವಾಗಲಿದೆ. ಅನುಮತಿ ನೀಡಿದ ಪ್ರದೇಶ ಮೀರಿ ಕ್ವಾರಿ ಮಾಡುತ್ತಿದ್ದರೆ, ದಂಡ ವಿಧಿಸಿ ಹೆಚ್ಚುವರಿ ಕ್ವಾರಿ ಮಾಡುತ್ತಿರುವ ಪ್ರದೇಶವನ್ನು ಸಕ್ರಮೀಕರಣಗೊಳಿಸಲಾಗುವುದು. ಈ ಮುಂಚೆ ಗಣಿ ಪರವಾನಗಿಗಳನ್ನು ರಾಜ್ಯ ಮಟ್ಟದ ಸಮಿತಿಯಿಂದ ಪಡೆಯಬೇಕಾಗಿತ್ತು. ಇದೀಗ ಜಿಲ್ಲಾ ಮಟ್ಟದಲ್ಲೇ ಗಣಿಗಾರಿಕೆ ಪರವಾನಗಿ ಪಡೆಯಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಗಣಿಗಾರಿಕೆ ಮಾಡುವ ಸ್ಫೋಟಕಗಳಿಗಾಗಿನ ನಿಯಮಕ್ಕೆ ತಿದ್ದುಪಡಿ ತರಲಾಗಿದೆ. ಒಂದು ವೇಳೆ, ಕಲ್ಲು ಕ್ವಾರಿಯನ್ನು ಸರ್ಕಾರಿ ಜಮೀನಿನಲ್ಲಿ ಮಾಡುತ್ತಿದ್ದರೆ, ದುಪ್ಪಟ್ಟು ದಂಡ ವಿಧಿಸಿ ಅದನ್ನು ಸಕ್ರಮಗೊಳಿಸಲು ಈ ನೀತಿಯಲ್ಲಿ ನಿಯಮ ರೂಪಿಸಲಾಗಿದೆ. ಗಣಿ ಉದ್ಯಮದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಕರ್ನಾಟಕ ಸಣ್ಣ ಗಣಿ ನೀತಿ ರೂಪಿಸಲಾಗಿದೆ.

ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮಕ್ಕೆ ಅಧಿಕಾರ: ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಗಣಿಭಾದಿತ ಪ್ರದೇಶಗಳಲ್ಲಿ ಸಮಗ್ರ ಗಣಿ ಪರಿಸರ ಪುನಃಶ್ಚೇತನ ಯೋಜನೆಯಡಿ ನೇರ ಇಲಾಖೆಗಳಿಂದ (Line Departments) ಆಡಳಿತಾತ್ಮಕ ಅನುಮೋದನೆ ಕೋರಿ ಸ್ವೀಕೃತವಾಗುವ ಪ್ರಸ್ತಾವನೆಗಳಿಗೆ ಮತ್ತು ಮೂಲ ಸೌಕರ್ಯ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಅಧಿಕಾರವನ್ನು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ಪ್ರತ್ಯಾಯೋಜಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಗಣಿ‌ ಪರಿಸರ ಪುನಶ್ಚೇತನ ಯೋಜನೆಯಡಿ 23 ಸಾವಿರ ಕೋಟಿ ರೂ‌‌. ಹಣ ಇದ್ದು, ಒಡಿಶಾ ಮಾದರಿಯಲ್ಲಿ ಹಣ ಬಳಸಿ ರಾಜ್ಯದ ಗಣಿ ಭಾದಿತ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ರಾಯಚೂರು, ಬಳ್ಳಾರಿ, ತುಮಕೂರು ಮತ್ತು ವಿಜಯನಗರ ಜಿಲ್ಲೆಯಲ್ಲಿನ ಗಣಿ ಭಾದಿತ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಇದೀಗ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮಕ್ಕೆ ಹೆಚ್ಚಿನ ಅಧಿಕಾರ ನೀಡಿದ್ದು, ಅಲ್ಲಿಯೇ ಅನುದಾನ‌ ಮಂಜೂರು ಮಾಡಬಹುದಾಗಿದೆ ಎಂದು ತಿಳಿಸಿದರು.

ಸಂಪುಟದ ಇತರ ತೀರ್ಮಾನಗಳೇನು?: - ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಳಾಯಿನಲ್ಲಿರುವ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಮೀನು ಸಂಸ್ಕರಣಾ ಸ್ಥಾವರವನ್ನು ರೂ. 25 ಕೋಟಿಗಳ ವೆಚ್ಚದಲ್ಲಿ (ಕೇಂದ್ರದ ಪಾಲು 10.92 ಕೋಟಿಗಳು) " ಮೆರೆನ್ ಎಕ್ಸ್‌ಪೋರ್ಟ್ ಯೂನಿಟ್ ಆಗಿ ಉನ್ನತೀಕರಿಸಲು ಆಡಳಿತಾತ್ಮಕ ಅನುಮೋದನೆ.

- ಇನ್‌ವೆಸ್ಟ್ ಕರ್ನಾಟಕ 2022 ನ್ನು ಆಯೋಜಿಸುವ ಸಲುವಾಗಿ ಇವೆಂಟ್‌ ಮ್ಯಾನೇಜ್‌ಮೆಂಟ್ಸ್‌ ಪಾರ್ಟರನ್ನು ನೇಮಿಸಲು 08.09.2022 ರಂದು ಹೊರಡಿಸಲಾದ ಸರ್ಕಾರಿ ಆದೇಶಕ್ಕೆ ಘಟನೋತ್ತರ ಅನುಮೋದನೆ ಮತ್ತು ರೂ. 74.99 ಕೋಟಿಗಳ ಪರಿಷ್ಕೃತ ಅಂದಾಜು ಮೊತ್ತಕ್ಕೆ ಅನುಮೋದನೆ.

- ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವ್ಯಾಪ್ತಿಯಲ್ಲಿರುವ ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಸುಮಾರು 155 ಗ್ರಾಮಗಳ ರೈತರ ವಿದ್ಯುತ್ ಗೃಹ ಬಳಕೆಯ ವಿದ್ಯುತ್ ಶುಲ್ಕದ ಬಾಕಿ ಮೊತ್ತ ರೂ. 38.67 ಕೋಟಿಗಳಲ್ಲಿ, ಬಡ್ಡಿ ಮೊತ್ತ ರೂ. 3.62ಗಳನ್ನು ಒಂದು ಬಾರಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ, ಮನ್ನಾ ಮಾಡಲು ಅನುಮೋದನೆ ಹಾಗೂ ಅಸಲು ಮೊತ್ತ ರೂ. 35.04 ಕೋಟಿಗಳನ್ನು ಸದರಿ ಗ್ರಾಹಕರಿಂದ ವಸೂಲಿ ಮಾಡಲು ಅಸ್ತು.

- ಗಿಣಿಗೇರಾ-ರಾಯಚೂರು, ತುಮಕೂರು-ರಾಯದುರ್ಗ, ಬಾಗಲಕೋಟೆ-ಕುಡಚಿ ಮತ್ತು ಚಿಕ್ಕಮಗಳೂರು-ಬೇಲೂರು ನೂತನ ರೈಲು ಮಾರ್ಗಗಳ ಯೋಜನೆಗಳ ಪರಿಷ್ಕೃತ ಅಂದಾಜುಗಳಿಂದ ಹೆಚ್ಚಾಗಿರುವ ರಾಜ್ಯದ ಪಾಲಿನ ಮೊತ್ತ ರೂ. 964.41 ಕೋಟಿಗಳಿಗೆ ಅನುಮೋದನೆ.

- ಗೃಹ ಬಳಕೆ, ವಾಣಿಜ್ಯ/ ಕೈಗಾರಿಕಾ ಗ್ರಾಹಕರಿಗೆ ಕೊಳವೆ ಮೂಲಕ ನೈಸರ್ಗಿಕ ಅನಿಲ ಸರಬರಾಜು (PNG) ಮತ್ತು ವಾಹನಗಳಿಗೆ ಕಂಪ್ರೆಸ್ ನೈಸರ್ಗಿಕ ಅನಿಲ (CNG) ಒದಗಿಸುವ ಕುರಿತಾದ ನಗರ ಅನಿಲ ವಿತರಣಾ ಜಾಲದ ಅಭಿವೃದ್ಧಿ ರಾಜ್ಯ ನೀತಿ"ಗೆ ಅನುಮೋದನೆ.

- ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ 2022- 23ನೇ ಸಾಲಿನ ಸರ್ಕಾರದ ವಿವೇಚನಾ ನಿಧಿ (GDQ) ಕ್ರಿಯಾ ಯೋಜನೆಯಡಿ ಗುಲಬರ್ಗಾ ವಿವಿಯಲ್ಲಿ ಸ್ಮಾರ್ಟ್ ಕ್ಲಾಸ್ ರೂಂ, ಎಲ್.ಎಂ.ಎಸ್ ಜೊತೆಗೆ ಹೈಬ್ರಿಡ್ ಕಲಿಕೆ ಸೌಲಭ್ಯ, ವಿಡಿಯೋ ಕಾನ್ಫರೆಸ್ಸಿಂಗ್​, ಮಾನಿಟರಿಂಗ್ ಅಳವಡಿಸುವ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ರೂ. 13.69 ಕೋಟಿಗಳ ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.

- ಶಿವಮೊಗ್ಗದ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘಕ್ಕೆ ಕಲ್ಲಹಳ್ಳಿ ಗ್ರಾಮದ 126ರಲ್ಲಿ ಮಂಜೂರಾಗಿರುವ 1-31 ಎಕರೆ/ ಗುಂಟೆ ಜಮೀನಿನನ್ನು 'ಸ್ಮಶಾನದ ಉದ್ದೇಶ'ದ ಬದಲಾಗಿ ಶೈಕ್ಷಣಿಕ ಉದ್ದೇಶ ಎಂದು ಮಾರ್ಪಾಡು ಮಾಡಲು ಒಪ್ಪಿಗೆ.

- ಶಿಕಾರಿಪುರ ತಾಲೂಕಿನ ಶ್ರೀಹರ ಪಂಚಮಸಾಲಿ ಸೇವಾ ಟ್ರಸ್ಟ್ ಗೆ ದೂಪದಹಳ್ಳಿ ಗ್ರಾಮದ ಸ.ನಂ. 2ರಲ್ಲಿ 20 ಗುಂಟೆ ಜಮೀನನ್ನು ಸಮುದಾಯ ಭವನ ನಿರ್ಮಾಣದ ಉದ್ದೇಶಕ್ಕಾಗಿ ಮಂಜೂರು.

- ಸಾಗರ ತಾಲೂಕು ಆಡಳಿತ ಸೌಧ ಕಟ್ಟಡದ 3ನೇ ಮತ್ತು 4ನೇ ಅಂತಸ್ತಿನ ಹಾಗೂ ಬಾಕಿ ಇರುವ ಮೂಲಭೂತ ಸೌಕರ್ಯ ಕಲ್ಪಿಸುವ ಹೆಚ್ಚುವರಿ ಕಾಮಗಾರಿಯ ಒಟ್ಟು 13.65 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

- ಭಾರತ ಸರ್ಕಾರದ 4-ಜಿ ಸ್ಯಾಚುರೇಶನ್ ಪ್ರಾಜೆಕ್ಟ್ ಕಾರ್ಯಕ್ರಮದ ಅಡಿ ದೂರ ಸಂಪರ್ಕ ಜಾಲವಿಲ್ಲದ ಗ್ರಾಮಗಳಲ್ಲಿ ದೂರ ಸಂಪರ್ಕ ಸ್ಥಾವರಗಳನ್ನು ಸ್ಥಾಪಿಸಲು, ಅಂತಹ ಪ್ರತಿ ಗ್ರಾಮಗಳಲ್ಲಿ 2,000 ಚ.ಅ. ಜಮೀನನ್ನು ಬಿಎಸ್‌ಎನ್‌ಎಲ್‌ ಸಂಸ್ಥೆಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಒಪ್ಪಿಗೆ. ಮೊಬೈಲ್ ನೆಟ್ವರ್ಕ್ ಇಲ್ಲದ ರಾಜ್ಯದ 1,200- 1300 ಗ್ರಾಮಗಳಲ್ಲಿ ಟವರ್ ಸ್ಥಾಪಿಸಲಾಗುವುದು.

- ಜೆಎಸ್ಎಸ್ ಮಹಾವಿದ್ಯಾಪೀಠ ಮೈಸೂರು ಇವರಿಗೆ ವಿಜಯಪುರ ತಾಲ್ಲೂಕಿನ ಭೂತನಾಳ ಗ್ರಾಮದ 162 ರಲ್ಲಿ 21-08 ಎಕರೆ/ಗುಂಟೆ ಜಮೀನನ್ನು ಮಂಜೂರು.

- 2022-23ನೇ ಸಾಲಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಮೋಟಾರು ವಾಹನ ತೆರಿಗೆ ಮೊತ್ತ 166.99 ಕೋಟಿಗಳನ್ನು ಸರ್ಕಾರಕ್ಕೆ ಪಾವತಿಸಿವುದರಿಂದ ವಿನಾಯಿತಿ ನೀಡಲು ಒಪ್ಪಿಗೆ.

- ಬೆಂಗಳೂರು ಜಲಮಂಡಳಿಯ ಶಿವ ಅಣೆಕಟ್ಟೆಯಿಂದ ಶಿವ ಸಮತೋಲನ ಜಲಾಶಯ (ಎಸ್.ಬಿ.ಆರ್) ದವರೆಗೆ ಸುಮಾರು 2.5 ಕಿ.ಮೀ. ಉದ್ದದ 3,200 ಮಿ.ಮೀ. ವ್ಯಾಸದ ಕಚ್ಚಾ ನೀರು ಸರಬರಾಜು (Supply). ತಯಾರಿಕೆ (Fabrication) ಮತ್ತು ಜೋಡಿಸಲ್ಪಡುವ (Laying) ಕಾಮಗಾರಿಯ ರೂ. 93.05 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ.

- ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಗ್ರಾಮದ ಹತ್ತಿರ ಕೃಷ್ಣಾ ನದಿಯ ನೀರನ್ನು ಉಪಯೋಗಿಸಿಕೊಂಡು ಬೆಳಗಾವಿ ಜಿಲ್ಲೆ, ಚಿಕ್ಕೋಡಿ ತಾಲ್ಲೂಕಿನ 14 ಗ್ರಾಮಗಳ ಸುಮಾರು 8,390 ಹೆಕ್ಟೇರ್​ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ರೂ. 567 ಕೋಟಿ ಮೊತ್ತದ ಕರಗಾಂವ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.

-ಸರ್ಕಾರಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ 17 ರಷ್ಟು ಮದ್ಯಂತರ ವೇತನ ಹೆಚ್ಚಳ ಆದೇಶ ಮಾಡಿದ್ದು, ಇದಕ್ಕಾಗಿ ವಾರ್ಷಿಕ 7,246 ಕೋಟಿ ರೂ. ವೆಚ್ಚವಾಗಲಿದ್ದು, ಅದಕ್ಕೆ ಅನುಮೋದನೆ

- ರಾಯಚೂರು ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ 219 ಕೋಟಿ ರೂ.ಪರಿಷ್ಕೃತ ಮೊತ್ತಕ್ಕೆ ಅನುಮೋದನೆ.

- ವಿಜಯನಗರ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಮುಚ್ಚಿ ಹೋಗಿತ್ತು. 8 ಲಕ್ಷ ಟನ್ ಕಬ್ಬು ಬೆಳೆಯುತ್ತಿದ್ದರು. ಈಗ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಅನುಮೋದನೆ ನೀಡಿದೆ. 454.60 ಕೋಟಿ ರೂ. ಬಂಡವಾಳ ಹಾಕಿ ಹಂಪಿ ಶುಗರ್ಸ್ ಪ್ರೈ ಲಿ. ಕಾರ್ಖಾನೆ ಸ್ಥಾಪನೆ ಮಾಡಲಿದ್ದು, ಸರ್ಕಾರ ಇದಕ್ಕಾಗಿ 82 ಎಕರೆ ಜಾಗವನ್ನು ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ನೀಡಲು ಅನುಮೋದನೆ.

- ಹಾವೇರಿ ತಾಲೂಕು 10 ಎಕರೆ ಜಮೀನು ರಾಷ್ಟ್ರೋತ್ತಾನ‌ ಪರಿಷತ್ ಗೆ ಪರಾಭಾರೆಗೆ ಅನುಮೋದನೆ

- ಗೋಕಾಕ್ ಜಲಾಪಾತದ ಕೆಳಭಾಗದಿಂದ ರಸ್ತೆಯುದ್ದಕ್ಕೂ ಪ್ರವಾಹವಾಗುವುದನ್ನು ರಕ್ಷಿಸಲು ತಡೆಗೋಡೆ ಕಟ್ಟಲು 615 ಕೋಟಿ ರೂ.

ಇದನ್ನೂ ಓದಿ : ಹೊರ ರಾಜ್ಯದಿಂದ ಖರೀದಿಸಿಯಾದರೂ ಬೇಸಿಗೆಯಲ್ಲಿ ವಿದ್ಯುತ್‌ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ: ರೈತರಿಗೆ ಸಿಎಂ ಭರವಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.