ETV Bharat / state

ರಾಜ್ಯ ಪ್ರವಾಸದ ಮೂಲಕ ದಲಿತ, ಮೇಲ್ವರ್ಗದ ಮತಬುಟ್ಟಿ ಗಟ್ಟಿಗೊಳಿಸಲು ಮುಂದಾದ ಬಿಜೆಪಿ..!

author img

By

Published : Oct 13, 2022, 10:33 PM IST

ರಾಜ್ಯದಲ್ಲಿ ಚುನಾವಣಾ ಪ್ರಚಾರದ ವಾತಾವರಣ ಸೃಷ್ಟಿಯಾಗಿದ್ದು, ದಲಿತರ ಮತ್ತು ಮೇಲ್ವರ್ಗದ ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಬಿಜೆಪಿ ಮುಂದಾಗಿದೆ.

KN_BNG
ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ ಬಿಜೆಪಿ ನಾಯಕರು

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಸಿದ್ದತೆ ಆರಂಭಿಸಿರುವ ಬಿಜೆಪಿ ಮೊದಲ ಹಂತದ ರಾಜ್ಯ ಪ್ರವಾಸ ಆರಂಭಿಸಿದ್ದು, ದಲಿತರು, ಮೇಲ್ವರ್ಗವನ್ನು ಟಾರ್ಗೆಟ್ ಮಾಡಿದೆ. ದಲಿತರ ಮನೆಗೆ ಭೇಟಿ ಜೊತೆ ಸ್ಥಳೀಯ ಮಠ ಮಂದಿರಕ್ಕೂ ಲಗ್ಗೆ ಇಡುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ರಾಹುಲ್ ಗಾಂಧಿ ಪಾದಯಾತ್ರೆಯಿಂದ ಬಿಜೆಪಿ ಮತಗಳು ಚದುರದಂತೆ ನೋಡಿಕೊಳ್ಳಲು ಕೇಸರಿ ಪಡೆ ಭರ್ಜರಿ ಪ್ರವಾಸ ನಡೆಸುತ್ತಿದೆ.

ರಾಜ್ಯದಲ್ಲಿ ಚುನಾವಣಾ ಪ್ರಚಾರದ ವಾತಾವರಣ ಸೃಷ್ಟಿಯಾಗಿದ್ದು, ದಲಿತರ ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಬಿಜೆಪಿ ಮುಂದಾಗಿದೆ. ರಾಜ್ಯದಲ್ಲಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದಲ್ಲಿ ದಲಿತರ ಮತಗಳು ಅನಿವಾರ್ಯವಾಗಿದೆ‌. ಹಾಗಾಗಿ ದಲಿತರ ಮತಬುಟ್ಟಿಗೆ ಕೈಹಾಕಲು ದಲಿತರ ಮನೆಗಳಿಗೆ ಲಗ್ಗೆ ಇಡಲಾರಂಭಿಸಿದ್ದಾರೆ.

ರಾಜ್ಯ ಪ್ರವಾಸದಲ್ಲಿರುವ ರಾಜ್ಯ ಬಿಜೆಪಿ ನಾಯಕರು ಪ್ರತಿ ದಿನ ದಲಿತರ ನಿವಾಸಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದಾರೆ. ಹಾಗಾಗಿಯೇ ರಾಜ್ಯ ಬಿಜೆಪಿ ಹಿರಿಯ ನಾಯಕ ಮಾಸ್ ಲೀಡರ್ ಆಗಿರುವ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸ್ಥಳೀಯ ನಾಯಕರ ಜೊತೆ ದಲಿತರ ನಿವಾಸಕ್ಕೆ ಭೇಟಿ ನೀಡಲಾರಂಭಿಸಿದ್ದಾರೆ.

ವಿಜಯನಗರ ಜಿಲ್ಲೆಯ ಕಮಲಾಪುರ ಗ್ರಾಮದ ಅಂಬೇಡ್ಕರ್ ಕಾಲೋನಿಯ ದಲಿತ ಕುಟುಂಬದ ಹಿರಾಳ ಕೊಲ್ಲಾರಪ್ಪ ಅವರ ಮನೆಗೆ ತೆರಳಿದ ಯಡಿಯೂರಪ್ಪ ಹಾಗೂ ಬೊಮ್ಮಾಯಿ‌, ಅವರ ನಿವಾಸದಲ್ಲೇ ಉಪಹಾರ ಸೇವಿಸಿದರು. ಹಾಗೂ ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ಆ ಮೂಲಕ ದಲಿತರ ಜೊತೆ ನಾವಿದ್ದೇವೆ ಎನ್ನುವ ಸಂದೇಶ ರವಾನಿಸುವ ಪ್ರಯತ್ನ ನಡೆಸಿದರು.

KN_BNG_
ಗವಿಮಠಕ್ಕೆ ಭೇಟಿ ನೀಡಿದ ಕಟೀಲ್​

ಈ ಹಿಂದಿನ ಪ್ರವಾಸದ ವೇಳೆ ದಲಿತರ ನಿವಾಸಕ್ಕೆ ಭೇಟಿ ನೀಡಿದ್ದಾಗ ಹೋಟೆಲ್ ನಿಂದ ಉಪಹಾರ ತರಿಸಿ ಅದನ್ನು ದಲಿತರ ನಿವಾಸದಲ್ಲಿ ಸೇವಿಸಿ ಸಾಕಷ್ಟು ಟ್ರೋಲ್ ಆಗಿದ್ದ ಬಿಜೆಪಿ ನಾಯಕರು ಈ ಬಾರಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದು, ದಲಿತರ ನಿವಾಸದಲ್ಲಿಯೇ ಸಿದ್ದಪಡಿಸಿದ್ದ ಉಪಾಹಾರ ಸೇವಿಸಿ ಆ ಮೂಲಕ ದಲಿತರ ನಿವಾಸ ಭೇಟಿಯನ್ನು ಅರ್ಥಪೂರ್ಣವಾಗಿ ಮಾಡುವ ಪ್ರಯತ್ನ ನಡೆಸಿದ್ದಾರೆ.

ಇನ್ನು ರಾಜ್ಯದಲ್ಲಿ ಎಸ್ಸಿ ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಿಸಿರು ಬಿಜೆಪಿ ದಲಿತರಿಗೆ ಭರ್ಜರಿ ಉಡುಗೊರೆ ನೀಡಿದ್ದು, ರಾಜ್ಯ ಪ್ರವಾಸದ ವೇಳೆ ಈ ವಿಚಾರವನ್ನೂ ಪ್ರಸ್ತಾಪಿಸಿ ಸರ್ಕಾರ ದಲಿತರ ಪರ ಎನ್ನುವ ವಿಷಯವನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ.‌ ರ‍್ಯಾಲಿಗಳಲ್ಲಿ ಹೇಳುವ ಜೊತೆಗೆ ದಲಿತರ ನಿವಾಸಕ್ಕೆ ಭೇಟಿ ನೀಡಿದಾಗಲೂ ಈ ವಿಷಯ ಪ್ರಸ್ತಾಪಿಸಿ ದಲಿತರ ಜೊತೆ ಸಂವಾದ ನಡೆಸಿ ಸರ್ಕಾರ ದಲಿತರ ಪರ ಏನೆಲ್ಲಾ ಮಾಡಿದೆ ಎನ್ನುವ ವಿಷಯ ತಿಳಿಸುತ್ತಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ದಲಿತರ ಮತಗಳು ಗಣನೀಯ ಪ್ರಮಾಣದಲ್ಲಿ ಬಿಜೆಪಿಗೆ ಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗಿತ್ತು. ಹಾಗಾಗಿ ದಲಿತ ಸಮುದಾಯದ ಮತಬುಟ್ಟಿ ಭದ್ರಪಡಿಸಿಕೊಳ್ಳಲು ಬಿಜೆಪಿ ಸಾಕಷ್ಟು ಪ್ರಯತ್ನ ನಡೆಸುತ್ತಿದೆ.

ಮಠ ಮಂದಿರಕ್ಕೆ ಭೇಟಿ: ಮತ್ತೊಂದೆಡೆ ಮೇಲ್ವರ್ಗದ ಮತಗಳನ್ನು ಬಿಜೆಪಿ ಕಡೆಗಣಿಸುವಂತಿಲ್ಲ ಹಾಗಾಗಿ ಅವರನ್ನೂ ತಲುಪಲು ಪ್ಲಾನ್ ಮಾಡಿಕೊಂಡಿದ್ದು, ಮಠ - ಮಂದಿರಗಳ ಭೇಟಿಗೆ ಮುಂದಾಗಿದೆ. ರಾಜ್ಯ ಪ್ರವಾಸದುದ್ದಕ್ಕೂ ಸ್ಥಳೀಯವಾಗಿರುವ ಪ್ರಮುಖ ಮಠ - ಮಂದಿರಗಳಿಗೆ ಬಿಜೆಪಿ ನಾಯಕರು ಭೇಟಿ ನೀಡುತ್ತಿದ್ದಾರೆ. ಮಠಾಧೀಶರ ಆಶೀರ್ವಾದ ಪಡೆದುಕೊಂಡು ಮಠದಲ್ಲಿ ಕೆಲ ಸಮಯ ಕಳೆದು ಮೇಲ್ವರ್ಗ ಸಮುದಾಯಗಳ ಪ್ರಮುಖರ ಜೊತೆ ಮಾತುಕತೆ ನಡೆಸಿ ಇಡೀ ಸಮುದಾಯದ ವಿಶ್ವಾಸ ಗಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ.

KN_BNG_
ಮಠಾದೀಶರೊಂದಿಗೆ ಚರ್ಚೆ

ಇನ್ನೊಂದೆಡೆ ಮೊದಲ ತಂಡದ ನೇತೃತ್ವ ವಹಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಕೂಡ ಇದೇ ಹಾದಿಯಲ್ಲಿದ್ದಾರೆ. ಪ್ರವಾಸದುದ್ದಕ್ಕೂ ದಲಿತರ ನಿವಾಸಕ್ಕೆ ಭೇಟಿ ನೀಡುವುದು, ಸ್ಥಳೀಯ ಮಠಗಳಿಗೆ ಭೇಟಿ ನೀಡಿ ಮಠಾಧೀಶರಿಂದ ಆಶೀರ್ವಾದ ಪಡೆದುಕೊಳ್ಳುವುದು, ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುವ ಕಾಯಕ ಮಾಡುತ್ತಿದ್ದಾರೆ.

ರಾಜ್ಯಾದ್ಯಂತ ನಡೆಯುತ್ತಿರುವ ಕಾರ್ಯಕರ್ತರ ಸಂಕಲ್ಪ ಯಾತ್ರೆಯ ನಿಮಿತ್ತ ನಳಿನ್ ಕುಮಾರ್ ಕಟೀಲ್ ನೇತೃತ್ವದ ಮೊದಲ ತಂಡ ಮತ್ತು ಯಡಿಯೂರಪ್ಪ, ಬೊಮ್ಮಾಯಿ‌ ನೇತೃತ್ವದ ಎರಡನೇ ತಂಡ ತಾವು ಭೇಟಿ ನೀಡುವ ಮತದಾರರ ಕ್ಷೇತ್ರದಲ್ಲಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಫಲಾನುಭವಿಗಳ ಸಭೆ ನಡೆಸುತ್ತಿದ್ದಾರೆ. ಆ ಮೂಲಕ ಸರ್ಕಾರದ ಸಾಧನೆಗಳು, ಯೋಜನೆಗಳನ್ನು ಫಲಾನುಭವಿಗಳಿಗೆ ಮನವರಿಕೆ ಮಾಡಿಕೊಟ್ಟು ಬಿಜೆಪಿ ಪರ ಅವರಲ್ಲಿ ಒಲವು ಮೂಡುವಂತೆ ಮಾಡುತ್ತಿದ್ದಾರೆ.

ರಾಜ್ಯದಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ನಡೆಯುತ್ತಿದ್ದು ಕಾಂಗ್ರೆಸ್​ನ ಭಾರತ್ ಜೋಡೋ ಪಾದಯಾತ್ರೆಗೆ ಭರ್ಜರಿ ಯಶಸ್ಸು ಸಿಗುತ್ತಿದೆ ಇದು ಮತದಾರರ ಸೆಳೆಯುವಲ್ಲಿಯೂ ಸಫಲವಾಗುತ್ತದೆ ಎನ್ನುವ ಆತಂಕಕ್ಕೆ ಸಿಲುಕಿರುವ ಬಿಜೆಪಿ ನಾಯಕರು ದಲಿತರು, ಮೇಲ್ವರ್ಗದ ಮತದಾರರ ಮತಗಳು ಕೈತಪ್ಪದಂತೆ ನೋಡಿಕೊಳ್ಳಲು ರಾಜ್ಯ ಪ್ರವಾಸದ ವೇಳೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದಾರೆ.

ರಾಜ್ಯ ಪ್ರವಾಸದುದ್ದಕ್ಕೂ ಪ್ರತಿ ಕಾರ್ಯಕ್ರಮದಲ್ಲೂ ಕಾಂಗ್ರೆಸ್ ಪಕ್ಷವನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದು, ರಾಹುಲ್ ಗಾಂಧಿಯನ್ನೂ ಟೀಕಿಸಿ ಹೇಳಿಕೆ ನೀಡುತ್ತಿದ್ದಾರೆ. ರಾಹುಲ್ ಪಾದಯಾತ್ರೆಯನ್ನೇ ವ್ಯಂಗ್ಯವಾಡುತ್ತಿದ್ದಾರೆ. ಯಡಿಯೂರಪ್ಪ ಮಾಡಿದ್ದ ಹಳೆಯ ಪಾದಯಾತ್ರೆಗಳನ್ನ ಉಲ್ಲೇಖಿಸಿ ರಾಹುಲ್ ಪಾದಯಾತ್ರೆ ಹೀಗಳೆಯುತ್ತಿದ್ದಾರೆ.

KN_BNG_KN_BNG_
ಬಿಜೆಪಿ ನಾಯಕರಿಂದ ಜನ ಸಂಕಲ್ಪ ಯಾತ್ರೆ

ಒಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನ ಭಾರತ್ ಜೋಡೋ ಪಾದಯಾತ್ರೆ ಪ್ರಭಾವ ಬೀರದಂತೆ ಕೇಸರಿ ಅಲೆಯನ್ನು ಎಬ್ಬಿಸಲು ಬಿಜೆಪಿ ನಾಯಕರು ಟೊಂಕಕಟ್ಟಿ ನಿಂತಿದ್ದು, ಒಂದೇ ಪ್ರವಾಸದಲ್ಲಿ ದಲಿತರು ಮತ್ತು ಮೇಲ್ವರ್ಗದ ಮತಬುಟ್ಟಿ ಭದ್ರಪಡಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಇದರಲ್ಲಿ ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಯಾರು ಸ್ಟ್ರಾಂಗ್ ಅಂತಾ ಚುನಾವಣೆಯಲ್ಲಿ ಜನ ತೀರ್ಮಾನಿಸಲಿದ್ದಾರೆ: ಸಿದ್ದರಾಮಯ್ಯಗೆ ಬಿಜೆಪಿ ತಿರುಗೇಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.