ETV Bharat / state

ಪ್ರಧಾನಿ ಎದುರು ಮಾತನಾಡುವ ಧೈರ್ಯವಿಲ್ಲದ ಬಿಜೆಪಿಗರಿಂದಲೇ ರಾಜ್ಯದ ಹಿತಕ್ಕೆ ಧಕ್ಕೆ: ಡಿಸಿಎಂ ಡಿ.ಕೆ.ಶಿವಕುಮಾರ್

author img

By ETV Bharat Karnataka Team

Published : Sep 15, 2023, 8:59 PM IST

ನೀರಿನ ವಿಚಾರದಲ್ಲಿ ನಮಗೆ ರಾಜಕಾರಣ ಬೇಕಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಡಿಸಿಎಂ ಡಿ ಕೆ ಶಿವಕುಮಾರ್
ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

ಬೆಂಗಳೂರು : ಕಾವೇರಿ ವಿಚಾರ, ರಾಜ್ಯದ ಹಿತಾಸಕ್ತಿಯ ವಿಚಾರಗಳಿಗೆ ಪ್ರಧಾನಿ ಮೋದಿಯವರ ಎದುರು ನಿಂತು ಮಾತನಾಡುವ ಧೈರ್ಯ ರಾಜ್ಯ ಬಿಜೆಪಿ ನಾಯಕರಿಗಿಲ್ಲ. ಕರ್ನಾಟಕಕ್ಕೆ ತೊಂದರೆ ಆಗಿರುವುದೇ ಇಂತಹ ನಾಯಕರಿಂದ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಕುಮಾರಕೃಪಾ ಅತಿಥಿಗೃಹದ ಬಳಿ ಇಂದು ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸುತ್ತಾ, ಕೇಂದ್ರ ಪರಿಸರ ಇಲಾಖೆಯಿಂದ ಅನೇಕ ಕಾಮಗಾರಿಗೆ ನಿರಾಕ್ಷೇಪಣಾ ಪತ್ರ ತರಲು ಬಿಜೆಪಿ ಕೈಯಲ್ಲಿ ಆಗಿಲ್ಲ. ರಾಜ್ಯದ ಅಭಿವೃದ್ದಿಗೆ ಅವರಿಂದಲೇ ತೊಂದರೆ ಆಗುತ್ತಿದೆ. ನೀರಿನ ವಿಚಾರದಲ್ಲಿ ರಾಜಕಾರಣ ನಮಗೆ ಬೇಕಿಲ್ಲ. ಎಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡೋಣ ಎನ್ನುವುದು ನನ್ನ ಧೋರಣೆ. ಬಿಜೆಪಿಯವರು ನನಗೆ ಬೈಯಲಿ, ಉಗಿಯಲಿ, ಏನು ಬೇಕಾದರೂ ಹೇಳಲಿ, ನಾನು ರಾಜ್ಯದ ಹಿತಾಸಕ್ತಿಗೆ ಕೆಲಸ ಮಾಡುತ್ತೇನೆ ಎಂದರು.

ಎಲ್ಲಾ ನದಿ ವ್ಯಾಜ್ಯಗಳು ಮೂರು ವರ್ಷಗಳಲ್ಲಿ ಇತ್ಯರ್ಥವಾಗಬೇಕು ಎಂದು ಕೇಂದ್ರ ಸರ್ಕಾರವೇ ಕಾನೂನು ಮಾಡಿದೆ. ಅವರೇ ಎರಡೂ ರಾಜ್ಯಗಳನ್ನು ಕೂರಿಸಿಕೊಂಡು ಸಮಸ್ಯೆ ಬಗೆಹರಿಸಬಹುದಲ್ಲವೇ? ಎಂತೆಂಥ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ. ಇದು ಆಗುವುದಿಲ್ಲವೇ?. ಮೇಕೆದಾಟು ಯೋಜನೆ ಆಗಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎಂದು ಹೇಳಿದರು.

ಇಂಡಿಯಾ ಸಭೆ ಮಾಡುತ್ತಾರೆ. ನೀರಿನ ವಿಚಾರಕ್ಕೆ ಸಭೆ ನಡೆಸಲು ಆಗುವುದಿಲ್ಲವೇ? ಎನ್ನುವ ಪ್ರತಿಪಕ್ಷಗಳ ಪ್ರಶ್ನೆಗೆ, ನಾವು ಎಲ್ಲಾ ಸಭೆ ಮಾಡಿದ್ದೇವೆ. ಆಯಾಯಾ ನಾಯಕರಿಗೆ ಅವರ ರಾಜ್ಯಗಳ ಹಿತಾಸಕ್ತಿ ಮುಖ್ಯ. ಮೇಲೆ ಕುಳಿತಿರುವ ಕೇಂದ್ರ ಸರ್ಕಾರಕ್ಕೆ ವಾಸ್ತವಾಂಶ ಗೊತ್ತಿದೆ. ಇಬ್ಬರನ್ನು ಕರೆಸಿ ಮಾತುಕತೆ ನಡೆಸಲಿ ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಕಾವೇರಿ ವಿಚಾರವಾಗಿ ಸರ್ವಪಕ್ಷ ನಿಯೋಗ ಭೇಟಿಗೆ ಪ್ರಧಾನಿ ಕಚೇರಿಯಿಂದ ಯಾವುದೇ ಉತ್ತರವಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್

ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವ ಮೊದಲು ಎರಡು ದಿನ ನೀರು ಹರಿಸಿ ಎಂದು ಕಾನೂನು ತಜ್ಞರು ಸಲಹೆ ನೀಡಿದ್ದಾರೆ. ನಾವು ನೀರು ಬಿಡುವುದಿಲ್ಲ ಎಂದು ಹೇಳಿದ್ದೆವು. ಆದರೆ ಸುಪ್ರೀಂ ಕೋರ್ಟಿನ ಮುಂದೆ ಹೋದಾಗ ಆದೇಶ ಪಾಲನೆ ಮಾಡಲಾಗಿದೆಯೇ? ಎಂದು ಪರಿಶೀಲಿಸಲಾಗುತ್ತದೆ. ಪಾಲನೆ ಮಾಡದೆ ಇದ್ದ ಸಂದರ್ಭದಲ್ಲಿ ತೊಂದರೆಯಾಗುತ್ತದೆ ಎನ್ನುವ ಅಭಿಪ್ರಾಯ ಬಂದಿದೆ ಎಂದರು.

ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೆಖಾವತ್ ಅವರಿಗೆ ವಸ್ತುಸ್ಥಿತಿ ವಿವರಿಸಿದ್ದೇನೆ. ಮುಂದೆ ನಾವು ಯಾವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎನ್ನುವುದನ್ನೂ ಸಹ ತಿಳಿಸಿದ್ದೇವೆ. ದೆಹಲಿಯಲ್ಲಿ ಸಚಿವರ ಬಳಿ ಚರ್ಚೆ ಏನಾಯಿತು ಎಂದು ಸಂದರ್ಭ ಬಂದಾಗ ವಿವರಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Cauvery water dispute: 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಪ್ರಾಧಿಕಾರ ಹೇಳಿದೆ, ಆದರೆ ನಮ್ಮ ಬಳಿ ನೀರಿಲ್ಲ: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.