ETV Bharat / state

ರೌಡಿ ಶೀಟರ್ ವಿವಾದಕ್ಕೆ ತತ್ತರಿಸಿದ ಬಿಜೆಪಿ ನಾಯಕರು: ಸಮರ್ಥನೆ, ಸ್ಪಷ್ಟೀಕರಣದಿಂದ ಕೇಸರಿ ಪಡೆಯಲ್ಲಿ ಗೊಂದಲ

author img

By

Published : Nov 30, 2022, 2:58 PM IST

ಹೊಸದಾರಿ ಆಯ್ದುಕೊಂಡು ಒಳ್ಳೆಯ ವ್ಯಕ್ತಿಯಾಗಿದ್ದಾಗ ಅವಕಾಶ ಕೊಡುವುದರಲ್ಲಿ ತಪ್ಪೇನಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ ಫೈಟರ್ ರವಿ ಸೇರ್ಪಡೆ ಸಮರ್ಥಿಸಿಕೊಂಡಿದ್ದಾರೆ.

ರೌಡಿ ಶೀಟರ್ ವಿವಾದಕ್ಕೆ ತತ್ತರಿಸಿದ ಬಿಜೆಪಿ ನಾಯಕರು:ಸಮರ್ಥನೆ, ಸ್ಪಷ್ಟೀಕರಣದಿಂದ ಕೇಸರಿಪಡೆಯಲ್ಲಿ ಗೊಂದಲ
bjp-leaders-clarification-and-justification-on-silent-sunil-program

ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವ ವೇಳೆಯಲ್ಲಿ ರಾಜ್ಯ ಬಿಜೆಪಿ ಹೊಸ ವಿವಾದದಲ್ಲಿ ಸಿಲುಕಿಕೊಂಡಿದೆ. ರೌಡಿ ಶೀಟರ್ ವಿಚಾರದಲ್ಲಿ ಸಮರ್ಥನೆ, ಸ್ಪಷ್ಟೀಕರಣ ನೀಡುವ ಮೂಲಕ ನಾಯಕರ ನಡುವೆ ಭಿನ್ನ ಹೇಳಿಕೆಗಳು ಮೂಡಿ ಬಂದಿದ್ದು, ಕೇಸರಿ ಪಾಳಯದಲ್ಲಿ ಗೊಂದಲ ಸೃಷ್ಟಿಸಿದೆ.

ವಿವಾದದಿಂದ ಪಕ್ಷದ ನಾಯಕರೂ ತತ್ತರಿಸಿದ್ದಾರೆ. ಈ ನಡುವೆ ಪಕ್ಷದ ನಾಯಕರ ನಡೆೆ ಸಂಘ ಪರಿವಾರದ ನಾಯಕರ ಕೆಂಗಣ್ಣಿಗೂ ಗುರಿಯಾಗಿದೆ. ಸಂಘದ ಸಲಹೆಯನ್ನು ನಾಯಕರು ಇಷ್ಟು ಬೇಗ ಕಡೆಗಣಿಸಿದ್ದೀರಾ ಎಂದು ಅಸಮಾಧಾನ ಹೊರ ಹಾಕಿದೆ ಎಂದು ತಿಳಿದು ಬಂದಿದೆ.

ರೌಡಿ ಶೀಟರ್ ಸೈಲೆಂಟ್ ಸುನೀಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರಾದ ಪಿಸಿ ಮೋಹನ್, ತೇಜಸ್ವಿಸೂರ್ಯ, ಶಾಸಕ ಉದಯ್ ಗರುಡಾಚಾರ್,ಎನ್.ಆರ್. ರಮೇಶ್ ಸೇರಿದಂತೆ ಕೆಲ ಬಿಜೆಪಿ ನಾಯಕರು ಭಾಗಿಯಾಗಿದ್ದರು. ಇದನ್ನು ಟೀಕಿಸಿದ್ದ ಕಾಂಗ್ರೆಸ್, ರೌಡಿ ಶೀಟರ್​ನನ್ನು ತಮ್ಮ ಪಕ್ಷಕ್ಕೆ ಕರೆತರಲು ಬಿಜೆಪಿ ಹೊರಟಿದೆ ಎಂದು ಟೀಕಿಸಿತ್ತು.

ಇದು ದೊಡ್ಡ ವಿವಾದವಾಗುತ್ತಿದ್ದಂತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾಯಕರು ನುಣಚಿಕೊಳ್ಳುವ ಪ್ರಯತ್ನ ನಡೆಸಿದರು. ಸೈಲೆಂಟ್ ಸುನೀಲ್ ರೌಡಿ ಶೀಟರ್ ಎಂದು ಗೊತ್ತಿರಲಿಲ್ಲ. ಜನಪರ ಕಾರ್ಯಕ್ರಮ ಎನ್ನುವ ಕಾರಣಕ್ಕೆ ಹೋಗಿದ್ದೆವು ಎಂದು ಸ್ಟಷ್ಟೀಕರಣ ನೀಡಿದರು.

ಈ ವಿವಾದದ ಕಿಡಿ ಜೋರಾದ ಬೆನ್ನಲ್ಲೇ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಾವ ಕಾರಣಕ್ಕೂ ಸೈಲೆಂಟ್ ಸುನೀಲ್ ಬಿಜೆಪಿ ಸೇರ್ಪಡೆ ಇಲ್ಲ ಎಂದು ಘೋಷಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಂದ ವಿವರಣೆ ಪಡೆದುಕೊಳ್ಳಲಾಗುತ್ತದೆ ಎಂದೂ ತಿಳಿಸಿ ವಿವಾದಕ್ಕೆ ತೆರೆ ಎಳೆಯಲು ಮುಂದಾಗಿದ್ದರು. ಆದರೆ, ವಿವಾದ ಸಧ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ, ಇದಕ್ಕೆ ಕಾರಣ ಫೈಟರ್ ರವಿ ಬಿಜೆಪಿ ಸೇರ್ಪಡೆ.

ಸಮರ್ಥಿಸಿಕೊಳ್ಳಲು ರೆಡಿ: ಒಂದು ಕಡೆ ಸೈಲೆಂಟ್ ಸುನೀಲ್​ನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದ ಬಿಜೆಪಿ, ಮತ್ತೊಂದೆಡೆ ರೌಡಿ ಹಿನ್ನಲೆ ಹೊಂದಿರುವ ನಾಗಮಂಗಲದ ಫೈಟರ್ ರವಿಯನ್ನು ಕಮಲ ಪಾಳೆಯಕ್ಕೆ ಸ್ವಾಗತಿಸಿದೆ. ಸುಮಲತಾ ಬೆಂಬಲಿಗ ಸಚ್ಚಿದಾನಂದ ಬಿಜೆಪಿ ಸೇರ್ಪಡೆ ವೇಳೆ ಮಲ್ಲಿಕಾರ್ಜುನ್ ಅಲಿಯಾಸ್ ಫೈಟರ್ ರವಿ ಬಿಜೆಪಿ ಸೇರಿದ್ದಾನೆ.

ಅಧಿಕೃತವಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆದುಕೊಂಡಾಗಿದೆ. ಹೀಗಾಗಿ ಬಿಜೆಪಿಗೆ ಈಗ ರವಿ ಬಿಜೆಪಿ ಸೇರ್ಪಡೆ ವಿಷಯ ಬಿಸಿ ತುಪ್ಪವಾಗಿದೆ ಹಾಗಾಗಿ ಅನಿವಾರ್ಯವಾಗಿ ಫೈಟರ್ ರವಿ ಬಿಜೆಪಿ ಸೇರ್ಪಡೆಯನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.


ಯಾವುದೋ ಕಾರಣಕ್ಕೆ ರೌಡಿಯಾದ ವ್ಯಕ್ತಿ ಮನಃ ಪರಿವರ್ತನೆಯಾಗಿ ಬದಲಾದ ನಂತರವೂ ಆತನನ್ನು ಹಳೆ ಮನಸ್ಥಿತಿಯಲ್ಲಿಯೇ ನೋಡಬೇಕಾ? ಹೊಸದಾರಿ ಆಯ್ದುಕೊಂಡು ಒಳ್ಳೆಯ ವ್ಯಕ್ತಿಯಾಗಿದ್ದಾಗ ಅವಕಾಶ ಕೊಡುವುದರಲ್ಲಿ ತಪ್ಪೇನಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಫೈಟರ್ ರವಿ ಸೇರ್ಪಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಅಲ್ಲದೇ, ಪಕ್ಷದಲ್ಲಿ ಚರ್ಚಿಸಿಯೇ ಪಕ್ಷ ಸೇರ್ಪಡೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ. ನಾಯಕರ ಈ ಹೇಳಿಕೆಗಳು ಗೊಂದಲ ಸೃಷ್ಟಿಯಾಗುವಂತೆ ಮಾಡಿದೆ.

ಈ ವಿಷಯವನ್ನೇ ದಾಳವಾಗಿಸಿಕೊಂಡ ಪ್ರತಿಪಕ್ಷಗಳು: ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಈ ವಿಷಯವನ್ನು ದಾಳವಾಗಿ ಬಳಸಿಕೊಂಡಿದೆ. ಪ್ರತಿನಿತ್ಯ ರೌಡಿ ಶೀಟರ್ ವಿಷಯವನ್ನು ಪ್ರಸ್ತಾಪಿಸಿ ಬಿಜೆಪಿ ನಾಯಕರನ್ನು ರಾಜ್ಯದ ಜನತೆಯ ಮುಂದೆ ತಲೆ ತಗ್ಗಿಸುವಂತೆ ಮಾಡಲು ಯತ್ನಿಸುತ್ತಿದ್ದಾರೆ.

ಪಾತಕಿಗಳು, ದರೋಡೆಕೋರರು, ಡ್ರಗ್ ಪೆಡ್ಲರ್ ಗಳು, ಕ್ರಿಮಿನಲ್ ಗಳು, ಭ್ರಷ್ಟರು, ರೇಪಿಸ್ಟ್ ಗಳು ಎಲ್ಲರಿಗೂ ರಾಜ್ಯ ಬಿಜೆಪಿ ತವರು ಮನೆಯಂತಾಗಿದೆ ಎಂದು ಪ್ರತಿಪಕ್ಷಗಳು ಟೀಕಿಸುತ್ತಿವೆ. ಇತ್ತ ಸುಮ್ಮನಿರದ ಬಿಜೆಪಿ, ಕಾಂಗ್ರೆಸ್​ ಪಕ್ಷದ ರೌಡಿಶೀಟರ್​ ಕುರಿತು ಮಾತನಾಡುವ ಮೂಲಕ ಪರಸ್ಪರ ರೌಡಿ ಶೀಟರ್ ಕೆಸರೆರಚಾಟದಲ್ಲಿ ರಾಜಕೀಯ ಪಕ್ಷಗಳು ಮುಳುಗಿವೆ.

ಆರ್​ಎಸ್​ಎಸ್​​ ಗರಂ: ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಸೇರುವವರ ಸಂಖ್ಯೆ ಹೆಚ್ಚಾಗುತ್ತದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷದ ಬೆಳವಣಿಗೆಗೆ ಸೂಕ್ತ ನಾಯಕರನ್ನು ಸೇರಿಸಿಕೊಳ್ಳಬೇಕು. ಆದರೆ, ಇತರ ಕಡೆ ಪಕ್ಷಕ್ಕೆ ಅನುಕೂಲವಾಗಲಿದೆ ಎಂದರೆ ಮಾತ್ರ ಪಕ್ಷಕ್ಕೆ ಸೇರಿಸಿಕೊಳ್ಳಿ, ಕೆಲವೆಡೆ ಅನಗತ್ಯವಿದೆ.

ಆದರೆ, ಇದು ಎಲ್ಲೆಡೆ ಅನಿವಾರ್ಯವಲ್ಲ ಎನ್ನುವುದನ್ನು ನೆನಪಿಡಿ ಎಂದು ಸಂಘದ ನಾಯಕರು ರಾಜ್ಯ ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದರು. ಆದರೂ ಅಪರಾಧ ಹಿನ್ನೆಲೆ ಹೊಂದಿದ ವ್ಯಕ್ತಿಯನ್ನು ಪಕ್ಷಕ್ಕೆ ಕರೆತಂದಿರುವುದಕ್ಕೆ ಸಂಘ ಪರಿವಾರದ ನಾಯಕರು ಗರಂ ಆಗಿದ್ದಾರೆ.

ರಾಜ್ಯ ಬಿಜೆಪಿ ನಾಯಕರನ್ನು ತರಾಟೆ ತೆಗೆದುಕೊಂಡಿದ್ದಾರೆ. ಪಕ್ಷ ಸೇರಿಸಿಕೊಳ್ಳುವ ಮುನ್ನ ಚರ್ಚಿಸಬೇಕು ಎನ್ನುವ ಸಂದೇಶವನ್ನು ಯಾಕೆ ಧಿಕ್ಕರಿಸಿರುವುದಕ್ಕೆ ಕಿಡಿಕಾರಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸೈಲೆಂಟ್ ಸುನೀಲ್ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ : ನಳಿನ್‍ಕುಮಾರ್ ಕಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.