ETV Bharat / state

ವ್ಯಾಪಾರ ವ್ಯವಹಾರ ಬಿಟ್ಟು ಬಿಜೆಪಿ ಕಟ್ಟಿದ್ದಕ್ಕೆ ಬೆಲೆ ಸಿಗಲಿಲ್ಲ: ಗಾಲಿ ಜನಾರ್ದನ ರೆಡ್ಡಿ

author img

By

Published : Dec 25, 2022, 3:30 PM IST

Updated : Dec 25, 2022, 8:48 PM IST

ಕೇಂದ್ರ ಗೃಹ ಸಚಿವ ಅಮಿತ್​ ಶಾ ಮಾತು ತಪ್ಪಿದ್ದಾರೆ- ಹಿಂದೆ ನನ್ನ ಎಲ್ಲಾ ವ್ಯವಹಾರ ಬದಿಗೊತ್ತಿ ಬಿಜೆಪಿ ಬೆಳೆಸಿದ್ದಕ್ಕೆ ಬೆಲೆ ಸಿಗಲಿಲ್ಲ- ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ಜನಾರ್ದನ್​ ರೆಡ್ಡಿ ಆರೋಪ

bjp-did-not-give-any-price-for-my-work-says-janardhana-reddy
ವ್ಯಾಪಾರ ವ್ಯವಹಾರ ಬಿಟ್ಟು ಬಿಜೆಪಿ ಕಟ್ಟಿದ್ದಕ್ಕೆ ಬೆಲೆ ಸಿಗಲಿಲ್ಲ: ಗಾಲಿ ಜನಾರ್ದನ ರೆಡ್ಡಿ

ವ್ಯಾಪಾರ ವ್ಯವಹಾರ ಬಿಟ್ಟು ಬಿಜೆಪಿ ಕಟ್ಟಿದ್ದಕ್ಕೆ ಬೆಲೆ ಸಿಗಲಿಲ್ಲ: ಗಾಲಿ ಜನಾರ್ದನ ರೆಡ್ಡಿ

ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊಟ್ಟ ಮಾತು ತಪ್ಪಿದ್ದು, ರಾಜ್ಯ ನಾಯಕರು ಕಡೆಗಣಿಸಿದ್ದು, ಸಿಬಿಐ ಅಧಿಕಾರಿಗಳು ಮುಂಜಾನೆ ದಾಳಿ ನಡೆಸಿ ಮಗಳ ಹೆರಿಗೆಯ ಸಾಕ್ಷಿಗಾಗಿ ಮೊಮ್ಮಗುವನ್ನು ತಡಕಾಡಿದ್ದರಿಂದ ಮನನೊಂದು ವಾಜಪೇಯಿ, ಅಡ್ವಾಣಿ ಒಡನಾಟದ ಬಿಜೆಪಿಯಿಂದ ದೂರವಾಗಲು ನಿರ್ಧರಿಸಿ ರಾಜಕೀಯ ಭವಿಷ್ಯಕ್ಕಾಗಿ ಹೊಸ ಪಕ್ಷ ಸ್ಥಾಪಿಸುತ್ತಿರುವುದಾಗಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಬಿಜೆಪಿಗೆ ತಾವು ಮಾಡಿದ ಸೇವೆಯನ್ನು ಮತ್ತು ಅದರಿಂದ ತನಗಾದ ಕಷ್ಟವನ್ನು ಸುದೀರ್ಘವಾಗಿ ಹಂಚಿಕೊಂಡಿದ್ದಾರೆ.

ನನ್ನ ವ್ಯವಹಾರವನ್ನು ಬದಿಗೊತ್ತಿ ಪಕ್ಷ ಸಂಘಟನೆ : ಬಿಜೆಪಿಗೆ ಗುಡ್ ಬೈ ಹೇಳಿ ಹೊಸ ಪಕ್ಷದ ಘೋಷಣೆ ಮಾಡುವ ಕುರಿತು ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ದೇಶದ ಗಮನ ಸೆಳೆದಿದ್ದ 1999ರ ಬಳ್ಳಾರಿ ಉಪ ಚುನಾವಣೆಯಲ್ಲಿ ಸೋನಿಯಾಗಾಂಧಿ ವಿರುದ್ಧ ಸ್ಪರ್ಧೆ ಮಾಡಿದ್ದ ಸುಷ್ಮಾಸ್ವರಾಜ್ ಪರ ನಾನು ನನ್ನ ವ್ಯವಹಾರಗಳನ್ನೆಲ್ಲಾ ಬದಿಗೊತ್ತಿ ಕೆಲಸ ಮಾಡಿದ್ದೆ. ಹಿತೈಷಿಗಳ ವಿರೋಧದ ನಡುವೆಯೂ ನಾನು ಅಂದು ಪ್ರಬಲವಾಗಿದ್ದ ಕಾಂಗ್ರೆಸ್ ಪಕ್ಷದ ವಿರೋಧ ಕಟ್ಟಿಕೊಳ್ಳುವ ರೀತಿ ಬಿಜೆಪಿ ಸಂಘಟನೆ ಮಾಡಿದೆ. ನನ್ನ ಕಚೇರಿಯಿಂದಲೇ ಸಭೆ ಆರಂಭಿಸಿ 500 ಸಭೆ ನಡೆಸಿದ್ದೆ. ಆದರೆ ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದ ಸೋಲಾಯಿತು. ಆದರೂ ಸುಷ್ಮಾ ಸ್ವರಾಜ್ ನಮ್ಮನ್ನು ಸಹೋದರರಂತೆ ಕಂಡು ಪ್ರತಿ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಬಳ್ಳಾರಿಗೆ ಬಂದು ಹೋಗುತ್ತಿದ್ದರು. ನಂತರದ ದಿನಗಳಲ್ಲಿ ನಮ್ಮ ವ್ಯಾಪಾರ ವ್ಯವಹಾರ ಬದಿಗಿಟ್ಟು ಪಕ್ಷ ಕಟ್ಟಿದೆ. ಪರಿಣಾಮವಾಗಿ ಬಳ್ಳಾರಿಯಲ್ಲಿ 2001ರಲ್ಲಿ ಮೊದಲ ಬಾರಿ ಬಿಜೆಪಿ ನಗರಸಭೆಯಲ್ಲಿ ಗೆಲುವು ಕಂಡಿತು. ನಂತರ 2004ರಲ್ಲಿ ಮೊದಲ ಕಾಂಗ್ರೆಸ್ಸೇತರ ಸಂಸದರಾಗಿ ನಮ್ಮ ಸಹೋದರ ಕರುಣಾಕರ ರೆಡ್ಡಿ ಬಿಜೆಪಿಯಿಂದ ಗೆದ್ದರು. ಜೊತೆಗೆ ಬಳ್ಳಾರಿ ಜಿಲ್ಲೆಯಲ್ಲಿ ಮೂವರು ಶಾಸಕರನ್ನು ಗೆಲ್ಲಿಸಿಕೊಂಡೆವು. ಓರ್ವ ಗ್ರಾಮಪಂಚಾಯತ್ ಸದಸ್ಯನೂ ಬಿಜೆಪಿಯಿಂದ ಇಲ್ಲದ ಬಳ್ಳಾರಿಯಲ್ಲಿ ಗ್ರಾಮಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಶಾಸಕ, ಸಂಸದ ಹೀಗೆ ಇಡೀ ಜಿಲ್ಲೆ ಬಿಜೆಪಿಮಯ ಮಾಡಿದ ಕೀರ್ತಿ ನನ್ನದು ಎಂದರು.

ರಾಜಕೀಯ ಬಿಟ್ಟರೂ ಬಿಜೆಪಿ ತೊರೆಯಲ್ಲ ಎಂದಿದ್ದೆ : 2006ರಲ್ಲಿ ಯಡಿಯೂರಪ್ಪ ಮೊದಲ ಬಾರಿ ಸಿಎಂ ಆದಾಗ ಸಂಪುಟಕ್ಕೆ ಆಹ್ವಾನಿಸಿದ್ದರು. ಆದರೆ ನಾನು ರಾಮುಲುಗೆ ಕೊಡುವಂತೆ ತಿಳಿಸಿದ್ದೆ. ಅದನ್ನು ಯಡಿಯೂರಪ್ಪ ಪರಿಗಣಿಸಿದ್ದರು. ಆದರೆ ನಂತರ ಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿ ಧರ್ಮದ ಕಾರಣ ಮುಂದಿಟ್ಟು ನನ್ನನ್ನು ಪಕ್ಷದಿಂದ ಅಮಾನತ್ತು ಮಾಡಿದ್ದರು. ಆಗ ಜೆಡಿಯುನಲ್ಲಿದ್ದ ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಪಕ್ಷಕ್ಕೆ ಆಹ್ವಾನಿಸಿದ್ದರು. ಆದರೆ ನಾನು ರಾಜಕೀಯ ಬೇಕಾದರೆ ಬಿಡುತ್ತೇನೆ ಬಿಜೆಪಿ ತೊರೆಯಲ್ಲ ಎಂದಿದ್ದೆ. ನಂತರ ಅಧಿಕಾರ ಹಸ್ತಾಂತರ ಮಾಡಿದ ಜೆಡಿಎಸ್ ನಡೆ ಖಂಡಿಸಿ ಚುನಾವಣೆಗೆ ಧುಮುಕಿದ ಬಿಜೆಪಿ ಮತ್ತೆ ನನಗೆ ಆಹ್ವಾನ ನೀಡಿತು. ಅಂದು ರಾಜ್ಯಾಧ್ಯಕ್ಷರಾಗಿದ್ದ ಸದಾನಂದಗೌಡರು ಸುದ್ದಿಗೋಷ್ಟಿಯಲ್ಲಿಯೇ ಅಮಾನತು ಆದೇಶ ವಾಪಸ್ ಪಡೆದು ಪಕ್ಷದ ಪರ ಪ್ರಚಾರಕ್ಕೆ ಕರೆ ನೀಡಿದ್ದರು. ಅದರಂತೆ ನಾನು ಯಡಿಯೂರಪ್ಪ, ಅನಂತ್ ಕುಮಾರ್ ಜೊತೆಗೂಡಿ ರಾಜ್ಯದ 125 ಕ್ಷೇತ್ರದಲ್ಲಿ ಪ್ರವಾಸ ಮಾಡಿ ಪಕ್ಷ ಗೆಲ್ಲಿಸಲು ಎಲ್ಲ ಪ್ರಯತ್ನ ನಡೆಸಿದ್ದೆ. ಅದರ ಫಲವಾಗಿ ನಾವು ಅಧಿಕಾರಕ್ಕೆ ಬಂದೆವು ಎಂದು ಮೊದಲ ಬಾರಿ ಸ್ವತಂತ್ರ ಬಿಜೆಪಿ ಸರ್ಕಾರ ರಚನೆಯಲ್ಲಿ ತಮ್ಮ ಮಹತ್ವದ ಪಾತ್ರವಿತ್ತು ಎನ್ನುವುದನ್ನು ಪ್ರಸ್ತಾಪಿಸಿದರು.

ಅಭಿವೃದ್ಧಿ ಕೆಲಸ ಮರೆಮಾಚಿ ಅಪಪ್ರಚಾರ ಮಾಡಲಾಯಿತು : ಬಿಎಸ್ವೈ ಸಂಪುಟದಲ್ಲಿ ಸಚಿವನಾದ ನಂತರ ಮೈಸೂರು, ಮಂಗಳೂರು ಸೇರಿ ಹಲವು ಜಿಲ್ಲೆಯಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಒತ್ತು ನೀಡಿದ್ದೆ. ಜಾಲಿಗಿಡಗಳ ಕಾಡು ಎಂದು ಕರೆಯಲ್ಪಡುತ್ತಿದ್ದ ಬಳ್ಳಾರಿಯನ್ನು ಸುಂದರ ನಗರವಾಗಿ ಪರಿವರ್ತನೆ ಮಾಡಿದೆ. ವಿಶ್ವದ ಹಲವು ದೇಶಗಳಲ್ಲಿ ಹಂಪಿ ವೈಭವ ಸಾರುವ ಕೆಲಸ ಮಾಡಿದ್ದೇವೆ. ಶ್ರೀಕೃಷ್ಣದೇವರಾಯನ 500ನೇ ಪಟ್ಟಾಬಿಷೇಕ ಮಹೋತ್ಸವ ವಿಶ್ವವಿಖ್ಯಾತವಾಗುವಂತೆ ಮಾಡಿದೆ. ಹೆಲಿಟೂರಿಸಂಗೆ ಕೈಹಾಕಿದ್ದೆ. ಹಂಪಿಯಿದ ಬಾದಾಮಿ ಪಟ್ಟದಕಲ್ಲು, ಐಹೊಳೆಗೆ ಒಂದು, ಶಿವಮೊಗ್ಗದ ಜೋಗ ಜಲಪಾತ, ಭದ್ರಾಜಲಾಶಯ, ಮೈಸೂರು, ಬಂಡೀಪುರ, ನಾಗರಹೊಳೆಗೆ ಒಂದು ಮತ್ತು ಕೊಲ್ಲೂರು,ಸುಬ್ರಮಣ್ಯ,ಧರ್ಮಸ್ಥಳ, ಉಡುಪಿ, ಗೋಕರ್ಣ ದರ್ಶನ ಮಾಡುತ್ತಾ ಸಮುದ್ರ, ಪಶ್ಚಿಮಘಟ್ಟದ ಅರಣ್ಯ ನೋಡುವ ಅವಕಾಶ ಪ್ರವಾಸಿಗರಿಗೆ ಸಿಗಬೇಕು ಎಂದುಕೊಂಡಿದ್ದೆ. ಇನ್ನು ಎರಡು ವರ್ಷ ಸಮಯ ಸಿಕ್ಕಿದ್ದರೆ ಅದನ್ನು ಮಾಡುತ್ತಿದ್ದೆ. ಲಿಬರ್ಟಿ ಪ್ರತಿಮೆಗೂ ದೊಡ್ಡ ಕೃಷ್ಣದೇವರಾಯ, ಬಸವಣ್ಣ ಪುತ್ಥಳಿ ಮತ್ತು ಥೀಮ್ ಪಾರ್ಕ್ ಮಾಡಬೇಕು ಎಂದುಕೊಂಡಿದ್ದೆ. ಆದರೆ ಆ ಕನಸು ಈಡೇರಲೇ ಇಲ್ಲ. ಆದರೆ ಇದನ್ನೆಲ್ಲಾ ಯಡಿಯೂರಪ್ಪ ಮತ್ತು ಜನರ ಆಶೀರ್ವಾದದಿಂದ ಮಾಡಲು ಸಾಧ್ಯವಾಯಿತು ಆದರೆ ನಾನು ಮಾಡಿದ ಅಭಿವೃದ್ಧಿ ಕೆಲಸ ಮರೆಮಾಚುವ ರೀತಿ ನನ್ನ ವಿರುದ್ಧ ಅಪಪ್ರಚಾರ ಮಾಡಲಾಯಿತು ಎಂದು ದೂರಿದರು.

ಆಪ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ರೆಡ್ಡಿ : ಸಚಿವನಾಗಿದ್ದ ನನ್ನನ್ನು ಗಣಿಗಾರಿಕೆ ಪ್ರಕರಣದಲ್ಲಿ ಆಕ್ರಮಣಕಾರಿಯಾಗಿ ಬಂಧಿಸಿದರು. ಸುಷ್ಮಾ ಸ್ವರಾಜ್ ಗೋಸ್ಕರ ಮಾಡಿದ ಕೆಲಸಕ್ಕೆ ಸೇಡು ತೀರಿಸಿಕೊಳ್ಳುವ ರೀತಿ ಯುಪಿಎ ಸರ್ಕಾರ ನನ್ನನ್ನು ಬಂಧಿಸಿತ್ತು. ಆದರೆ ಅಂದು ನನ್ನವರೇ ಎಂದು ಭಾವಿಸಿದ್ದವರು, ಯಾರೂ ಕಷ್ಟದ ದಿನದಲ್ಲಿ ಬರಲಿಲ್ಲ. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಇಬ್ಬರು ನಾಯಕರು ಮಾತ್ರ ನನ್ನ ಪತ್ನಿ ಮಕ್ಕಳಿಗೆ ಧೈರ್ಯ ನೀಡಿದ್ದರು. ಅದನ್ನು ಬಿಟ್ಟು ಯಾರೊಬ್ಬರೂ ಬರಲಿಲ್ಲ, ಯಾರನ್ನೆಲ್ಲಾ ಹೊತ್ತು ತಿರುಗಿದ್ದೆನೋ ಅವರೆಲ್ಲಾ ಬರಲೇ ಇಲ್ಲ ಎಂದು ಅಂದಿನ ಆಪ್ತರ ವಿರುದ್ಧವೆಲ್ಲಾ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಪತ್ನಿಗೆ ಧನ್ಯವಾದ ಸಲ್ಲಿಸಿದ ಜನಾರ್ಧನ ರೆಡ್ಡಿ : ನಾನು ಬಂಧನವಾದಾಗ ನನ್ನ ಪತ್ನಿ ಮಗ, ಮಗಳು ಬಹಳ ನೋವು ಅ‌ನುಭವಿಸಿದರು. ಆದರೆ ನನಗೆ ಕೊಟ್ಟ ಮಾತು ಉಳಿಸಿಕೊಂಡು ಪುತ್ರಿ ಬ್ರಹ್ಮಣಿ ಲಂಡನ್ ನಲ್ಲಿ ಓದಿದ್ದಾಳೆ. ಮಗ ಪದವಿ ಮುಗಿಸಿ ಸಿನಿಮಾ ರಂಗದಲ್ಲಿ ದೇಶ ವಿದೇಶದಲ್ಲಿ ನಟನೆ ಕೋರ್ಸ್ ಮುಗಿಸಿ ಸಿನಿಮಾ ಮಾಡುತ್ತಿದ್ದಾನೆ. ಇಬ್ಬರ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಿಕೊಟ್ಟಿದ್ದಾಳೆ. ಪತಿ ಕಷ್ಟದಲ್ಲಿರುವಾಗಿ ಪತ್ನಿ ಯಾವ ರೀತಿ ಇರಬೇಕು ಎನ್ನುವುದಕ್ಕೆ ನನ್ನ ಪತ್ನಿಯೇ ನಿದರ್ಶನ ಎಂದು ಪತ್ನಿಗೆ ಮಾಧ್ಯಮಗಳ ಮೂಲಕ ಧನ್ಯವಾದ ಸಲ್ಲಿಸಿದರು.

ಅಮಿತ್​ ಶಾ ವಿರುದ್ಧ ಅಸಮಾಧಾನ : 2018 ರ ಚುನಾವಣೆ ವೇಳೆ ನಾನು ರಾಜಕೀಯಕ್ಕೆ ಬರುವ ಯಾವುದೇ ಚಿಂತನೆ ಇರಿಸಿಕೊಂಡಿರಲಿಲ್ಲ. ಆದರೆ ಅಂದು ಅಮಿತ್ ಶಾ ರಾಜ್ಯ ಪ್ರವಾಸದ ವೇಳೆ ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದಿದ್ದರು. ಆದರೆ ವಾಪಸ್ ದೆಹಲಿಗೆ ಹೋಗುತ್ತಿದ್ದಂತೆ ಅಲ್ಲಿಗೇ ಕರೆಸಿಕೊಂಡು ಅರಿಯದೇ ಇಂತಹ ಹೇಳಿಕೆ ನೀಡಿದ್ದೆ. ಅದನ್ನೆಲ್ಲಾ ಮನಸ್ಸಿನಲ್ಲಿಟ್ಟುಕೊಳ್ಳಬೇಡಿ, ಚುನಾವಣೆಯಲ್ಲಿ ಪ್ರಚಾರ ಮಾಡಿ. ತಕ್ಷಣವೇ ನಿಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಹೇಳಿಕೆ ನೀಡಿದರೆ ತಪ್ಪು ಸಂದೇಶ ಹೋದಂತಾಗಲಿದೆ ಹಾಗಾಗಿ ಈಗ ಪ್ರಚಾರ ಮಾಡಿ ಚುನಾವಣೆ ನಂತರ ಒಳ್ಳೆಯ ಹುದ್ದೆ ಕೊಡುತ್ತೇವೆ ಎಲ್ಲರೂ ಸೇರಿ ದೇಶದಲ್ಲಿ ಪಕ್ಷ ಕಟ್ಟೋಣ ಎಂದರು. ಅದರಂತೆ ನಾನು ರಾಮುಲು ಪರ ಮೊಳಕಾಲ್ಮೂರು ಕ್ಷೇತ್ರದಲ್ಲಿ ಕೆಲಸ ಮಾಡಿದೆ. ಆದರೆ ಚುನಾವಣೆ ನಂತರ ಅಮಿತ್ ಶಾ ಸಂಪರ್ಕಕ್ಕೆ ಸಿಗುತ್ತಿಲ್ಲ. ಯಾವುದೇ ಸಂದೇಶವನ್ನೂ ಕಳಿಸಲಿಲ್ಲ. ಅಲ್ಲಿಗೆ ನಾನು ಅಮಿತ್ ಶಾ ಭೇಟಿ ಯತ್ನ ನಿಲ್ಲಿಸಿದ್ದೆ ಎಂದು ಅಮಿತ್ ಶಾ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

ಕಳೆದ ಚುನಾವಣೆಯಲ್ಲಿ ಒಂದು ಕಡೆ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರಗೆ ಕೊನೆ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿದರು. ಮತ್ತೊಂದು ಕಡೆ ನನ್ನನ್ನು ಕೇವಲ ಮೊಳಕಾಲ್ಮೂರು ಕ್ಷೇತ್ರಕ್ಕೆ ಸೀಮಿತಗೊಳಿಸಿದರು. ವಿಜಯೇಂದ್ರಗೆ ಟಿಕೆಟ್ ಕೊಟ್ಟಿದ್ದರೆ ಆ ಭಾಗದಲ್ಲಿ ನಾಲ್ಕೈದು ಸ್ಥಾನ ಹೆಚ್ಚು ಬರುತ್ತಿತ್ತು. ನನಗೆ ಉತ್ತರ ಕರ್ನಾಟದಲ್ಲಿ ಪ್ರಚಾರ ಮಾಡಲು ಬಿಟ್ಟಿದ್ದರೆ 104 ಬದಲು 134 ಸ್ಥಾನ ಬರುತ್ತಿತ್ತು. ಸ್ವತಂತ್ರವಾಗಿ ಸರ್ಕಾರ ರಚಿಸಿದ್ದರೆ ಪಕ್ಷಕ್ಕೆ ದುಡಿದಿದ್ದ ನಮ್ಮ 15 ಹಿರಿಯರಿಗೆ ಸಂಪುಟದಲ್ಲಿ ಅವಕಾಶ ಕೊಡಬಹುದಿತ್ತು. ಈ ರೀತಿ ಬೇರೆಯವರನ್ನು ಕರೆತಂದು ಅವರಿಗೆ ಸಚಿವ ಸ್ಥಾನ ಕೊಡಬೇಕಾಗುತ್ತಿರಲಿಲ್ಲ. ಈಗ ಒಂದು ರೀತಿಯ ಸಮ್ಮಿಶ್ರ ಸರ್ಕಾರ ಮಾಡಿಕೊಂಡಂತಾಗಿದೆ ಎಂದು ಬಿಜೆಪಿ ಹೈಕಮಾಂಡ್ ನಡೆಗೆ ನೇರವಾಗಿ ಬೇಸರ ವ್ಯಕ್ತಪಡಿಸಿದರು.

ನನ್ನನ್ನು ಬಳ್ಳಾರಿಯಿಂದ ಹೊರಹಾಕಿದರು : ಸುಪ್ರೀಂ ಕೋರ್ಟ್ ನಿಂದ ಮೊದಲ ಬಾರಿ ಜಾಮೀನು ಸಿಕ್ಕಾಗ ಬಳ್ಳಾರಿಗೆ ಹೋಗಬಾರದು ಎನ್ನುವ ನಿರ್ಬಂಧ ಇತ್ತು. ಆದರೆ ವಿಶೇಷ ಕಾರ್ಯಕ್ರಮ ಇದ್ದಾಗ ಹೋಗಲು ಅನುಮತಿ ಇತ್ತು. ಆದರೆ ಕಳೆದ 2 ವರ್ಷದ ಹಿಂದೆ ಶಾಶ್ವತವಾಗಿ ಬಳ್ಳಾರಿಯಲ್ಲಿ ಇರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ನಾನು ನನ್ನ ಕುಟುಂಬದ ಜೊತೆ ಆನಂದವಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದೆ. ಮತ್ತಷ್ಟು ಸಮಸ್ಯೆ ತಂದುಕೊಳ್ಳುವುದು ಬೇಡ ಎಂದು ನಾನು ಮಾಧ್ಯಮಗಳಿಂದ ದೂರ ಉಳಿದಿದ್ದೆ. ಆದರೆ ಇತ್ತೀಚೆಗೆ ಸೆಪ್ಟಂಬರ್ ನಲ್ಲಿ ಇದ್ದಕ್ಕಿದ್ದಂತೆ ಸಿಬಿಐ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಇರಬಾರದು. ಸಾಕ್ಷಿಗಳ ವಿಚಾರಣೆಗೆ ತೊಂದರೆಯಾಗಲಿದೆ. ಹಾಗಾಗಿ ಅವರು ಬಳ್ಳಾರಿಯಲ್ಲಿರಬಾರದು ಎಂದು ಅರ್ಜಿ ಹಾಕಿದ್ದಾರೆ. ನನ್ನ ಬಂಧನವಾದಾಗ ಸಾವಿರ ಕೋಟಿ ಲಕ್ಷ ಕೋಟಿ ಲೂಟಿ ಹೊಡೆದಿದ್ದೇನೆ ಎಂದರು. ಆದರೆ ಇದಕ್ಕೆ ಎಷ್ಟು ಸೊನ್ನೆ ಎಂದು ತಿಳಿಯಬೇಕು. ನನ್ನ ಬಂಧಿಸಿದ್ದಾಗಲೇ ದೇಶ ವಿದೇಶಗಳಲ್ಲಿ ತಡಕಾಡಿ 1200 ಕೋಟಿ ನನ್ನಿಂದ ಅಕ್ರಮವಾಗಿದೆ ಎಂದು ಆರೋಪ ಪಟ್ಟಿ ಸಲ್ಲಿಸಿದರು. 12 ವರ್ಷ ಕೋರ್ಟ್ ನಲ್ಲಿ ವಿಚಾರಣೆಯಾಯಿತು. ಆದರೂ ಈಗ ಮತ್ತೆ ನನ್ನ ಬಳ್ಳಾರಿಯಿಂದ ಹೊರಹಾಕಿದರು. ಇದರ ಹಿಂದೆ ಯಾರಿದ್ದಾರೋ ಏನೋ ಗೊತ್ತಿಲ್ಲ ಎಂದು ಬಿಜೆಪಿ ಹೈಕಮಾಂಡ್ ವಿರುದ್ಧ ಪರೋಕ್ಷವಾಗಿ ಪಿತೂರಿ ನಡೆಸಿರುವ ಅನುಮಾನ ವ್ಯಕ್ತಪಡಿಸಿದರು.

ಹೊಸ ಪಕ್ಷ ಕಟ್ಟುವ ನಿರ್ಧಾರ ಮೊದಲೇ ತೆಗೆದುಕೊಳ್ಳಬೇಕಿತ್ತು : ನನ್ನ ಮಗಳ ಹೆರಿಗೆಯಾಗಿತ್ತು. ಕನಿಷ್ಟ ಮೂರು ತಿಂಗಳಾದರೂ ಬಳ್ಳಾರಿಯಲ್ಲಿರುವ ಅವಕಾಶ ನೀಡಿ ಎಂದು ಕೋರ್ಟ್ ನಲ್ಲಿ ಮನವಿ ಮಾಡಿದಾಗ 1 ತಿಂಗಳು ಅವಕಾಶ ಸಿಕ್ಕಿತ್ತು. ಆದರೆ ಹೆರಿಗೆ ಆಗಿರುವುದು ನಿಜವೋ ಇಲ್ಲವೋ ಯಾರಿಗೆ ಗೊತ್ತು ಎಂದು ಸಿಬಿಐ ಅಧಿಕಾರಿಗಳು ಒಂದು ದಿನ ಮುಂಜಾನೆ 5.30ಕ್ಕೆ ಬಂದು ಬಾಗಿಲು ಬಡಿದು ಮಗಳ ಹೆರಿಗೆ ಬಗ್ಗೆ ಖಚಿತತೆ ಪಡಿಸಿಕೊಂಡರು. ಮೊಮ್ಮಗಳ ತೋರಿಸಿ ಎಂದರೆ ನಂತರ ಮಗುವಿನ ಜೊತೆ ನನ್ನ ಫೋಟೋ ತೆಗೆದುಕೊಂಡರು. ನನ್ನ ಕಾರಣದಿಂದ ಪತ್ನಿ,ಮಕ್ಕಳು ಕಷ್ಟ ಅನುಭವಿಸಿದ್ದಾರೆ. ಆದರೆ ಇನ್ನು ಕಣ್ಣುಬಿಡದ ಮೊಮ್ಮಗಳಿಗೂ ಕಷ್ಟ ಕೊಡುವಂತೆ ಮುಂಜಾನೆ ಬಂದು ಫೋಟೋ ತೆಗೆದುಕೊಂಡ ಘಟನೆ ನನಗೆ ಸಹಿಸಲಾಗಲಿಲ್ಲ. ಆಗಲೇ ನನಗೆ ಮೊದಲೇ ನಾನು ಸ್ವತಂತ್ರ ರಾಜಕೀಯ ನಿರ್ಧಾರ ತೆಗೆದುಕೊಳ್ಳಬೇಕಿತ್ತು ಎನಿಸಿತು. ಹಾಗಾಗಿ ತಕ್ಷಣವೇ ನಾನು ಈಗ ಹೊಸ ಪಕ್ಷ ಕಟ್ಟಬೇಕು ಎನ್ನುವ ನಿರ್ಧಾರಕ್ಕೆ ಬಂದೆ ಎಂದು ರಾಜಕೀಯ ಕ್ಷೇತ್ರದಲ್ಲಿ ಹೊಸ ಹಾದಿ ಆಯ್ಕೆ ಮಾಡಿಕೊಂಡ ಕಾರಣವನ್ನು ಬಹಿರಂಗಪಡಿಸಿದರು.

ಬಂಗಾರಪ್ಪ, ಯಡಿಯೂರಪ್ಪ, ಶ್ರೀರಾಮುಲು ಸ್ವಂತ ಪಕ್ಷ ಕಟ್ಟಿ ಸೋತಿರಬಹುದು. ಆದರೆ ಬಂಗಾರಪ್ಪ,ಯಡಿಯೂರಪ್ಪ ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಆದರೆ ಶ್ರೀರಾಮುಲು ನನ್ನ ಸ್ನೇಹಿತ. ನಾನು ಜೈಲಿನಲ್ಲಿದ್ದಾಗ ಪಕ್ಷ ಕಟ್ಟಿ ಸೋತಿದ್ದಾನೆ. ನನ್ನ ಅನುಪಸ್ಥಿತಿಯಲ್ಲಿ ಸೋಲಾಗಿದೆ ಅಷ್ಟೆ ಎಂದು ಸ್ಪಷ್ಟಪಡಿಸುತ್ತ ತಮ್ಮ ಹೊಸ ಪಕ್ಷ ಕಟ್ಟುವ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಯಡಿಯೂರಪ್ಪ, ರಾಮುಲು ನನ್ನ ಜೊತೆ ಬರುತ್ತಾರೆ ಎಂದು ಅವರ ಬಗ್ಗೆ ನಾನು ಮಾತನಾಡಿಲ್ಲ. ವಾಜಪೇಯ, ಅಡ್ವಾಣಿ, ಸುಷ್ಮಾ ಸ್ವರಾಜ್, ಅನಂತ್ ಕುಮಾರ್, ಯಡಿಯೂರಪ್ಪ, ಶ್ರೀ ರಾಮುಲು ಜೊತೆಗಿನ ಒಡನಾಟ ನೆನಪಿಸಿಕೊಂಡು ನಾನು ಪಕ್ಷದಿಂದ ಹೊರಗೆ ಬಂದಿದ್ದೇನೆ. 25 ವರ್ಷದ ಹಿಂದಿನ ಘಟನೆ ಇಂದಿನ ಯುವ ಪೀಳಿಗೆಗೆ ಗೊತ್ತಾಗಲಿ ಎಂದು ಹಳೆಯ ಘಟನೆ ವಿವರ ಹಂಚಿಕೊಂಡಿದ್ದೇನೆ ಅಷ್ಟೆ.ಇದರ ಹೊರತು ಅವರು ನನ್ನ ಜೊತೆ ಬರಲಿ ಎನ್ನುವ ಉದ್ದೇಶವಿಲ್ಲ. ಹೇಳಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು ಆದರೆ ನಿಧಾನಿಸಿ ಯೋಚಿಸಿದರೆ ಎಲ್ಲವೂ ಗೊತ್ತಾಗಲಿದೆ ಎಂದು ತಮ್ಮ ಇಂದಿನ ಪರಿಸ್ಥಿತಿಗೆ ಯಾರೆಲ್ಲಾ ಕಾರಣ ಎನ್ನುವುದು ಭವಿಷ್ಯವೇ ಹೇಳಲಿದೆ ಎಂದು ಸುದೀರ್ಘ ಸುದ್ದಿಗೋಷ್ಟಿಗೆ ವಿರಾಮ ನೀಡಿದರು.

ಬಳ್ಳಾರಿ ರಿಪಬ್ಲಿಕ್ ಪಟ್ಟ: ಗಣಿ ಮಾಲೀಕರಿಂದ ಶೇ.6 ರಷ್ಟು ಅರಣ್ಯ ತೆರಿಗೆ ಸಂಗ್ರಹಕ್ಕೆ ಯಡಿಯೂರಪ್ಪ ಮೂಲಕ ಕಾನೂನು ತಂದಾಗ ದೊಡ್ಡ ದೊಡ್ಡ ಗಣಿಮಾಲೀಕರು ವಿರೋಧಿಸಿ ದೆಹಲಿ ಮಟ್ಟದಲ್ಲಿ ಸಭೆ ನಡೆಸಿ ಬಳ್ಳಾರಿ ರಿಪಬ್ಲಿಕ್ ಎನ್ನುವ ಪಟ್ಟ ನೀಡಿದರು. ಆದರೆ ನಾವು ಅಂದು ತಂದ ಸರ್ಕಾರಿ ಆದೇಶವನ್ನು ಹೈಕೋರ್ಟ್ ನಿಂದ ಹಿಡಿದು ಸುಪ್ರೀಂ ಕೋರ್ಟ್ ವರೆಗೆ ಎಲ್ಲಾ ಕಡೆ ಎತ್ತಿ ಹಿಡಿಯಲಾಯಿತು. ಪರಿಣಾಮವಾಗಿ ಕಳೆದ 13 ವರ್ಷಗಳ ಕಾನೂನು ಹೋರಾಟದ ಸಮಯದಲ್ಲಿ ಸಂಗ್ರಹ ಮಾಡಿದ್ದ 25 ಸಾವಿರ ಕೋಟಿ ಅರಣ್ಯ ತೆರಿಗೆ ಹಣವನ್ನು ಈಗ ಬಳ್ಳಾರಿ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಅಭಿವೃದ್ಧಿಗೆ ವಿನಿಯೋಗ ಮಾಡಿಕೊಳ್ಳಲು ಅನುಮತಿಸಲಾಗಿದೆ. ಬಳ್ಳಾರಿ ರಿಪಬ್ಲಿಕ್ ಎನ್ನಿಸಿಗೊಂಡಾಗ ಆದ ನೋವು ಅಭಿವೃದ್ಧಿಗೆ ಹಣ ಸಿಕ್ಕಾಗ ಮರೆಯಾಯಿತು ಎಂದರು.

ಇದನ್ನೂ ಓದಿ : ಹೊಸ ರಾಜಕೀಯ ಪಕ್ಷ ಘೋಷಿಸಿದ ಮಾಜಿ ಸಚಿವ ಜನಾರ್ದನ​ ರೆಡ್ಡಿ!

Last Updated : Dec 25, 2022, 8:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.