ETV Bharat / state

ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹೋರಾಟ: ನಳಿನ್‍ ಕುಮಾರ್ ಕಟೀಲ್

author img

By ETV Bharat Karnataka Team

Published : Oct 15, 2023, 5:50 PM IST

ರಾಜ್ಯದಲ್ಲಿ ಜನರ ಹಣ ಲೂಟಿ ಮಾಡಿ ಅದನ್ನು ಪಂಚರಾಜ್ಯಗಳ ಚುನಾವಣೆಗೆ ಕಳುಹಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​ ಆರೋಪಿಸಿದರು.

ನಳಿನ್‍ಕುಮಾರ್ ಕಟೀಲ್
ನಳಿನ್‍ಕುಮಾರ್ ಕಟೀಲ್

ಬೆಂಗಳೂರು : ಕೆಟ್ಟ ಸರ್ಕಾರ ರಾಜ್ಯದಲ್ಲಿದೆ. ಈ ಸರ್ಕಾರದ ವಿರುದ್ಧ ನಾಳೆ ಮತ್ತು ನಾಡಿದ್ದು ಬಿಜೆಪಿ ಎಲ್ಲ ಜಿಲ್ಲೆ ಮತ್ತು ಮಂಡಲಗಳಲ್ಲಿ ದೊಡ್ಡ ಹೋರಾಟ ಮಾಡಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಪ್ರಕಟಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇವತ್ತು ನಾನು, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸೇರಿ ಸಭೆ ನಡೆಸಿದ್ದೇವೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಜಿಲ್ಲಾಧ್ಯಕ್ಷರು ನಾಳೆ ಜಿಲ್ಲೆಗಳಲ್ಲಿ ಮತ್ತು ಮಂಡಲ ಅಧ್ಯಕ್ಷರು ನಾಡಿದ್ದು ಮಂಡಲಗಳಲ್ಲಿ ಹೋರಾಟ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ ಎಂದರು.

ಅಧಿಕಾರಿಗಳಿಗೇ ರೇಟ್ ಫಿಕ್ಸ್ ಮಾಡಿದ ಸರ್ಕಾರವಿದು. ಅಧಿಕಾರಿಗಳಿಂದ ಭ್ರಷ್ಟಾಚಾರ ಆರಂಭಿಸಿದ ಈ ಸರ್ಕಾರದ ಕಾರ್ಯವು ಕಲಾವಿದರನ್ನೂ ಬಿಟ್ಟಿಲ್ಲ ಎಂದು ಆಕ್ಷೇಪಿಸಿದರು. ತಮ್ಮಲ್ಲಿ ಲಂಚ ಕೇಳಿದ್ದಾಗಿ ಮೈಸೂರು ದಸರಾದಲ್ಲಿ ಭಾಗವಹಿಸಬೇಕಾದ ಕಲಾವಿದರೇ ಆರೋಪ ಮಾಡಿದ್ದಾರೆ. ಹಿಂದೆ ಎಟಿಎಂ ಸರ್ಕಾರ ಬರಲಿದೆ ಎಂದಾಗ ಸಾಕ್ಷಿ ಕೊಡಿ ಎಂದಿದ್ದರು. ಇವತ್ತು ಸಾಕ್ಷಿ, ಆಧಾರಗಳನ್ನು ಸಿದ್ರಾಮಣ್ಣ, ಡಿ.ಕೆ.ಶಿವಕುಮಾರ್ ಇಟ್ಟಿದ್ದಾರೆ ಎಂದು ಹೇಳಿದರು.

ಐಟಿ ದಾಳಿ ಆದಾಗ ಗುತ್ತಿಗೆದಾರ, ಬಿಲ್ಡರ್​ಗಳ ಮನೆಯಲ್ಲಿ 40 ಕೋಟಿ, 50 ಕೋಟಿ ಹಣ ಸಿಗುತ್ತಿದೆ. 600 ಕೋಟಿ ಹಣ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ ಎರಡೇ ದಿನಗಳಲ್ಲಿ 45 ಕೋಟಿ ಒಬ್ಬ ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿದೆ. ಇದಕ್ಕೂ ಕಾಂಗ್ರೆಸ್ಸಿಗೂ ಸಂಬಂಧ ಇದೆ ಎಂಬುದು ಸ್ಪಷ್ಟ. ಈ ಲೂಟಿ ಸರ್ಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಈ ರಾಜ್ಯದಲ್ಲಿ ಜನರ ಹಣವನ್ನು ಲೂಟಿ ಮಾಡಿ ಪಂಚರಾಜ್ಯಗಳ ಚುನಾವಣೆಗೆ ಅದನ್ನು ಕಳುಹಿಸುತ್ತಿದ್ದಾರೆ. ಬೇರೆ ರಾಜ್ಯಗಳ ಚುನಾವಣೆಗೆ ಕರ್ನಾಟಕವು ಎಟಿಎಂ ಆಗಿದೆ ಎಂದು ಟೀಕಿಸಿದರು. ಇವತ್ತು ಇನ್ನೊಬ್ಬರ ಮನೆಯಲ್ಲಿ ಹಣ ಸಿಕ್ಕಿದ್ದು, ಇದೆಲ್ಲವೂ ಲೂಟಿ ಹಣ ಎಂದರಲ್ಲದೆ, ದೂರು ಕೊಡುವ ಅಧಿಕಾರಿಗಳನ್ನು ಬಂಧಿಸಲಾಗುತ್ತಿದೆ ಎಂದು ದೂರಿದರು.

ಪಂಚ ರಾಜ್ಯಗಳ ಚುನಾವಣೆಗೆ ನಂಬರ್ ಒನ್​ಗೆ 1000 ಕೋಟಿ, ನಂಬರ್ ಟೂಗೆ 2000 ಕೋಟಿ ಕೊಡಿ ಅಂತ ಕೇಳಿದ್ದಾರೆ. ಪಂಚರಾಜ್ಯಗಳಿಗೆ ಕಾಂಗ್ರೆಸ್ ಎರಡು ಸಾವಿರ ಕೋಟಿ ಕಳಿಸ್ತಿದ್ದಾರೆ ಅನ್ನೋದು ನಮಗೆ ಬಂದ ಮಾಹಿತಿ. ಇದರಲ್ಲಿ ನಂಬರ್ ಒನ್​ದು ಎಷ್ಟಿದೆ. ನಂಬರ್ ಟೂದು ಎಷ್ಟಿದೆ ಅಂತ ತನಿಖೆಯಿಂದ ಗೊತ್ತಾಗಬೇಕಿದೆ. ಯಾರ್ಯಾರಿಂದ ಎಷ್ಟೆಷ್ಟು ಹೋಗ್ತಿದೆ ಅಂತ ಸಿಬಿಐ ತನಿಖೆಗೆ ಕೊಟ್ರೆ ಸತ್ಯ ಗೊತ್ತಾಗುತ್ತದೆ. ಇಡಿಗೆ ತಗೋಬೇಕು ಅಂದರೆ ಎಫ್‌ಐಆರ್ ಆಗಬೇಕು. ಅಂತರರಾಜ್ಯ ವಹಿವಾಟು ಆಗಿರೋದ್ರಿಂದ ಸಿಬಿಐ ತನಿಖೆ ಸೂಕ್ತ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಗ್ರಹಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಡಹಬ್ಬಕ್ಕೆ ಕಳಂಕ ತರುವ ರೀತಿಯಲ್ಲಿ ಈ ಸರ್ಕಾರದ ಹಗರಣಗಳು, ಭ್ರಷ್ಟಾಚಾರದ ಅಸ್ಥಿಪಂಜರಗಳು ನಿತ್ಯ ಹೊರಗೆ ಬರುತ್ತಿವೆ. ದಸರಾ ಉತ್ಸವದಲ್ಲಿ ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ಅವರ ಕಾರ್ಯಕ್ರಮಕ್ಕೆ 5 ಲಕ್ಷ ಲಂಚ ಕೇಳಿದ್ದಾರೆ. 5 ಲಕ್ಷ ಅಂದ್ರೆ 60% ಲಂಚ ಕೇಳಿದಾರೆ. ಅಂದರೆ ಇವರು ಕಲಾವಿದರನ್ನು ಬಿಟ್ಟಿಲ್ಲ. ಇನ್ನು ಬೇರೆಯವರನ್ನು ಬಿಡ್ತಾರಾ?. ಇವರ ಕಮೀಷನ್​ಗೆ ಕಲಾವಿದರ ಗೌರವ ಧನದವರೆಗೂ ಮುಟ್ಟಿದೆ. ಇನ್ನು ಹೋಗ್ತಾ ಹೋಗ್ತಾ ಇವರ ಕಮೀಷನ್ ದಾಹ ಎಲ್ಲಿಗೆ ಮುಟ್ಟುತ್ತದೆ ಅಂತ ಭಯ ಆಗಿದೆ.

ದಸರಾ ಅನ್ನು ಸಾಂಸ್ಕೃತಿಕ ಅಧ:ಪತನದತ್ತ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ. ಈ ಪ್ರಕರಣ ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರದ ವಿರುದ್ಧ ಸಿದ್ದರಾಮಯ್ಯ ಗುಡುಗುತ್ತಾರೆ. ಈಗ ಸಿಎಂ ಅವರ ತವರು ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಇದಕ್ಕೆ ಏನಂತಾರೆ ಸಿದ್ದರಾಮಯ್ಯ? ಎಂದು ಪ್ರಶ್ನಿಸಿದರು.

ಅಂಬಿಕಾಪತಿ ಮತ್ತು ಸಂತೋಷ್‌ ಕೃಷ್ಣಪ್ಪ ಇಬ್ಬರೂ ಈ ರಾಜ್ಯದ ನಂಬರ್ ಒನ್ ಮತ್ತು ನಂಬರ್ ಟು. ಅವರ ಬೇನಾಮಿ ಇದು ನಮಗೆ ಗೊತ್ತಾಗಿರೋ ಮಾಹಿತಿ. ತಮ್ಮ ಅಕ್ರಮ ಮುಚ್ಚಿಹಾಕಲು ಬೇನಾಮಿ ಮಾಡಿಕೊಂಡಿದ್ದಾರೆ. ಪಂಚ ರಾಜ್ಯಗಳ ಚುನಾವಣೆಗೆ ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ. ಹಿಂದೆಯೂ ಎಟಿಎಂ ಆಗಿತ್ತು. ಗೋವಿಂದರಾಜು ಡೈರಿಯಲ್ಲೇ ಅದರ ಬಗ್ಗೆ ಮಾಹಿತಿ ಇತ್ತು. ಈಗ ಗುತ್ತಿಗೆದಾರರ ಮನೆಯಲ್ಲಿ ಸಿಕ್ಕ ಕೋಟಿ ಕೋಟಿ ಹಣದ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು. ಪಂಚ ರಾಜ್ಯಗಳ ಚುನಾವಣೆಗೆ ರಾಜ್ಯದಿಂದ ಫಂಡ್ ಮಾಡಲಾಗುತ್ತಿದೆ. ಸಿಎಂ ಹುದ್ದೆಗೆ ಟವೆಲ್ ಹಾಕಿ ಕೂತಿರೋರು ಎರಡು ಸಾವಿರ ಕೋಟಿ ಸಂಗ್ರಹ ಮಾಡೋದಾಗಿ ಹೇಳಿದ್ದಾರೆ. ಈಗ ಸಿಎಂ‌ ಆಗಿರೋರು ಅದರಲ್ಲಿ ಅರ್ಧ ಕೊಡೋದಾಗಿ ಹೇಳಿದ್ದಾರಂತೆ ಎಂದು ಸಿಎಂ, ಡಿಸಿಎಂ ವಿರುದ್ಧ ಸಿ ಟಿ ರವಿ ಗಂಭೀರ ಆರೋಪ ಮಾಡಿದರು.

ಕೋಟಿ ಕೋಟಿ ಹಣ ಪತ್ತೆ ಪ್ರಕರಣದ ಸಿಬಿಐ ತನಿಖೆ ನಡೆಯಬೇಕಿದೆ. ಸಿಎಂ ತಮ್ಮ ಪ್ರಾಮಾಣಿಕತೆ ಸಾಬೀತು ಮಾಡಲು ಈ ಪ್ರಕರಣವನ್ನು ಸಿಬಿಐಗೆ ಕೊಡಲಿ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟ ಸರ್ಕಾರ ಅಂತ ನಮ್ಮ ಆರೋಪ ಇದೆ. ನಿಮ್ಮ ಸರ್ಕಾರ ಪ್ರಾಮಾಣಿಕ ಸರ್ಕಾರ ಅಂದರೆ ಸಿಬಿಐ ತನಿಖೆಗೆ ವಹಿಸಿ. ಇದರಿಂದ ಸಮಗ್ರ ತನಿಖೆಯಾಗಿ ಸತ್ಯ ಹೊರಗೆ ಬರುತ್ತದೆ. ಹಣ ಸಿಕ್ಕಿರೋದು ನಮಗೆ ಸಂಬಂಧ ಇಲ್ಲ ಅಂತ ಸಿಎಂ ಹೇಳಿದ್ದರು. ನಿಮಗೆ ಸಂಬಂಧ ಇಲ್ಲದಿದ್ದರೆ ಪ್ರಕರಣ ಸಿಬಿಐಗೆ ಕೊಡಿ ಎಂದು ಐಟಿ ದಾಳಿ ಪ್ರಕರಣ ಸಿಬಿಐಗೆ ಕೊಡಲು ಸಿ ಟಿ ರವಿ ಆಗ್ರಹಿಸಿದರು.

ಸರೋದ್ ವಾದಕ ರಾಜೀವ್ ತಾರಾನಾಥ್ ರಿಂದ ಕಮೀಷನ್ ಕೇಳಿದ ಪ್ರಕರಣದ ನೈತಿಕತೆ ಯಾರು ಹೊತ್ಕೋತಾರೆ? ಸಿಎಂ ಮೂಗಿನ ನೇರಕ್ಕೆ, ಸಿಎಂ ತವರು ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಯಾರು ನೈತಿಕ ಹೊಣೆ ಹೊತ್ಕೋತಾರೆ ಅಂತ ಸಿಎಂ ಹೇಳಲಿ. ಖುದ್ದು ಸಿಎಂ‌ ಅವರೇ ಹೊಣೆ ಹೊತ್ಕೋತಾರಾ? ಅಥವಾ ಜಿಲ್ಲಾ ಉಸ್ತುವಾರಿ ಸಚಿವರು ನೈತಿಕತೆ ಹೊತ್ಕೋತಾರಾ? ಎಂದು ಸಿಎಂಗೆ ಸಿ ಟಿ ರವಿ ಪ್ರಶ್ನಿಸಿದರು.

ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ಇಲ್ಲ: ರೈತರಿಗೆ ಎರಡು ಗಂಟೆ ಕರೆಂಟ್ ಕೊಡೋ ಯೋಗ್ಯತೆ ಈ ಸರ್ಕಾರಕ್ಕೆ ಇಲ್ಲ. ಇನ್ನು ಐದು ಗಂಟೆ ಹೇಗೆ ಕೊಡ್ತಾರೆ?. ಯುವನಿಧಿ ಜಾರಿಗೆ ತರಲೇ ಇಲ್ಲ. ಅಕ್ಕಿ ಯೋಜನೆಗೆ ಎರಡು ತಿಂಗಳಷ್ಟೇ ಹಣ ಕೊಟ್ರು. ಇನ್ನೆರಡು ತಿಂಗಳು ಕೊಡ್ಲಿಲ್ಲ. ಶಕ್ತಿ ಯೋಜನೆ ಅಂತಾರೆ. ಹಲವು ಮಾರ್ಗಗಳಲ್ಲಿ ಬಸ್ ಸಂಚಾರ ಇಲ್ಲ. ಬಸ್ ನಿಲ್ಲಿಸಿದ್ದಾರೆ. ಗುತ್ತಿಗೆದಾರರಿಗೆ ಬಿಲ್ ಕೊಡೋ ಯೋಗ್ಯತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಗೃಹಲಕ್ಷ್ಮಿ ಯೋಜನೆಯಲ್ಲಿ ಹಣ ಹಾಕಿಲ್ಲ. ಸಿ.ಟಿ.ರವಿ ಹೆಂಡತಿಗೂ ಗೃಹಲಕ್ಷ್ಮಿ ಇಲ್ಲ, ಕಾಕಾಪಾಟೀಲ್​ಗೂ ಇಲ್ಲ, ಮಹಾದೇವಪ್ಪಗೂ ಇಲ್ಲ. ಗೃಹಲಕ್ಷ್ಮಿ ಒಂದೇ ತಿಂಗಳು ಹಣ ಹಾಕಿರೋದು ಇವರು. ಇದರ ಮೇಲೆ ನಮ್ಮದು ನುಡಿದಂತೆ ನಡೆದ ಸರ್ಕಾರ ಅಂತಾರೆ. ಇಷ್ಟಾದರೂ ನಾವು ನುಡಿದಂತೆ ನಡೆದವರು ಅಂತಾರೆ.ಇವರು ಎಐಸಿಸಿಗೆ ವಸೂಲಿ ಹಣ ಕಳಿಸೋದ್ರಲ್ಲಿ ನುಡಿದಂತೆ ನಡೆದಿದ್ದಾರೆ ಅಷ್ಟೇ ಎಂದು ಸರ್ಕಾರದ ವಿರುದ್ಧ ಸಿ ಟಿ ರವಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಾಂಗ್ರೆಸ್​ ಸರ್ಕಾರಕ್ಕೆ ಅಭದ್ರತೆ ಕಾಡುತ್ತಿದೆ: ಸಿ.ಟಿ.ರವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.