ETV Bharat / state

ವಿಶ್ವಕಪ್ ಫೈನಲ್: ರಾಜ್ಯದ ರಾಜಕೀಯ ಮುಖಂಡರಿಂದ ಟೀಂ ಇಂಡಿಯಾಗೆ ಶುಭ ಹಾರೈಕೆ

author img

By ETV Bharat Karnataka Team

Published : Nov 19, 2023, 3:27 PM IST

ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ

Best wishes for Team India: ಭಾರತ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್​ಗೆ ರಾಜಕೀಯ ನಾಯಕರು ಶುಭ ಹಾರೈಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

ಬೆಂಗಳೂರು : ಅಹಮದಾಬಾದ್​ನಲ್ಲಿ ನಡೆಯುತ್ತಿರುವ ವಿಶ್ವಕಪ್ ಫೈನಲ್​ಗೆ ರಾಜ್ಯದ ರಾಜಕೀಯ ಮುಖಂಡರು ಪಕ್ಷಾತೀತವಾಗಿ ಟೀಂ ಇಂಡಿಯಾಗೆ ಶುಭ ಹಾರೈಸಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಂ ಇಂಡಿಯಾಗೆ ಶುಭ ಹಾರೈಸಿದ್ದು, ಭಾರತ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಕ್ರಿಕೆಟ್ ಪೈನಲ್ ಪಂದ್ಯವನ್ನು ಇಡೀ ಜಗತ್ತಿನ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ವೀಕ್ಷಿಸುತ್ತಿದ್ದಾರೆ. ನಾನೂ ಕೂಡ ಫೈನಲ್​ನ ಕುತೂಹಲಕಾರಿ ಪಂದ್ಯ ವೀಕ್ಷಿಸುತ್ತಿದ್ದೇನೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಈ ಬಾರಿ ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡವಾಗಿದೆ ಎಂದಿದ್ದಾರೆ.

ರನ್ ಮಷಿನ್ ವಿರಾಟ್ ಕೊಹ್ಲಿಯ ರನ್ ಹೊಳೆ, ಮೊಹಮದ್ ಶಮಿ ಬಾಲಿಂಗ್ ದಾಳಿ, ಸಂಘಟಿತ ಹೋರಾಟದಿಂದ ಭಾರತ ತಂಡ ಮೂರನೇ ಬಾರಿ ವಿಶ್ವಕಪ್ ಎತ್ತಿ ಹಿಡಿಯುತ್ತದೆ ಎನ್ನುವ ಅಚಲ ವಿಶ್ವಾಸ ನನಗಿದೆ. ಭಾರತ ಕ್ರಿಕೆಟ್ ತಂಡ ಜಯಶಾಲಿಯಾಗಿ ಮೂರನೇ ಬಾರಿ ಕ್ರಿಕೆಟ್​ ಲೋಕದ ವಿಶ್ವ ಚಾಂಪಿಯನ್ ಆಗಲಿ ಎಂದು ಶುಭ ಹಾರೈಸುತ್ತೇನೆ. ಗುಡ್ ಲಕ್ ಟೀಮ್ ಇಂಡಿಯಾ ಎಂದಿದ್ದಾರೆ.

ಆರ್‌ ಅಶೋಕ್ ಶುಭಹಾರೈಕೆ: ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಮ್ ಇಂಡಿಯಾಗೆ ಶುಭಾಶಯ ಕೋರಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯುತ್ತಿದೆ. ಪ್ರತಿಯೊಬ್ಬರು ಈಗಾಗಲೇ ಪೂಜೆ, ಹೋಮ ಮಾಡ್ತಿದ್ದಾರೆ. ಎಲ್ಲರೂ ಭಾರತ ಗೆಲ್ಲಲಿ ಅಂತ ಪ್ರಾರ್ಥನೆ ಮಾಡ್ತಿದ್ದಾರೆ. ನಾವು ಕೂಡ ಎಲ್ಲರ ರೀತಿ ಜೈ ಹೋ ಅಂತ ಭಾರತ ಪರವಾಗಿ ಘೋಷಣೆ ಕೂಗ್ತೀವಿ‌. ನಮ್ಮದೇ ರನ್ ರೇಟ್ ಟಾಪಲ್ಲಿದೆ. ಗುಜರಾತ್​ನಲ್ಲಿ ನಡೆಯುತ್ತಿರೋ ಕ್ರಿಕೆಟ್‌ಗೆ ಶುಭಾಶಯಗಳು. ಟೀಮ್ ವರ್ಕ್ ಮತ್ತಷ್ಟು ಹೆಚ್ಚು ಗೆಲುವನ್ನು ತಂದು ಕೊಡಲಿದೆ. ಹಿಂದೆ ಕಪಿಲ್ ದೇವ್ ಆಟ ನಮಗೆ ನೆನಪಾಗುತ್ತೆ. ಅದು ಈಗ ಸೀರಿಸ್ ಬಂದಿದೆ. ಹಿಂದೆ ಪ್ಲೇಯರ್‌ಗಳು ಅನೇಕ ಸಮಸ್ಯೆ ಎದುರಿಸಿದ್ರು. ಈಗ ಮೊದಲ ಸ್ಥಾನದಲ್ಲಿದ್ದೇವೆ. ಮೊದಲ ಸ್ಥಾನದಲ್ಲೇ ಗೆಲ್ಲಬೇಕು. ಇದು ಪ್ರತಿಯೊಬ್ಬ ಭಾರತೀಯನ ಆಶಯ ಎಂದಿದ್ದಾರೆ.

ಇದೇ ವೇಳೆ ಭಾರತ ತಂಡಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಲ್ ದಿ‌ ಬೆಸ್ಟ್ ಹೇಳಿದ್ದಾರೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಆಸ್ಟ್ರೇಲಿಯಾ ನಡುವೆ ವಿಶ್ವಕಪ್ ಫೈನಲ್ ಪಂದ್ಯಾವಳಿ ನಡೆಯುತ್ತಿದೆ. ಇಡೀ ದೇಶ ಭಾರತ ಗೆಲ್ಲಬೇಕೆಂದು ಪೂಜೆ ಸಲ್ಲಿಸ್ತಿದೆ. ಇಡೀ ದೇಶ ಗೆಲುವಿನ ನಿರೀಕ್ಷೆಯಲ್ಲಿದೆ. ಎಲ್ಲರೂ ಪೂಜೆ ಸಲ್ಲಿಸುತ್ತಿದ್ದಾರೆ. ಎಲ್ಲರ ಆಶಯವೂ ಭಾರತ ಗೆಲ್ಲಬೇಕು ಅನ್ನೋದಾಗಿದೆ. ಒಂದೂ ಪಂದ್ಯ ಸೋಲದೇ ಭಾರತ ಸತತ ಗೆದ್ದುಕೊಂಡು ಬಂದಿದೆ. ಹಾಗಾಗಿ ಇವತ್ತಿನ ಫೈನಲ್​ನಲ್ಲಿ ಸಹ ಭಾರತಕ್ಕೆ ಉತ್ತಮ ಗೆಲುವು ಸಿಗಲಿ. ಆಲ್ ದ ಬೆಸ್ಟ್ ಅಂತ ಈ ಸಂದರ್ಭದಲ್ಲಿ ಭಾರತ ತಂಡಕ್ಕೆ ಶುಭ ಕೋರುತ್ತೇನೆ ಎಂದು ಹೇಳಿದರು.‌

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಭಾರತ ತಂಡಕ್ಕೆ ಶುಭ ಕೋರಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್: ರೋಹಿತ್ ಶರ್ಮ‌ ಸಾರಥ್ಯದ ಭಾರತ ತಂಡ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಲಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಶುಭ ಹಾರೈಸಿದ್ದಾರೆ. ಗುಜರಾತ್​ನ ಅಹಮದಾಬಾದ್​ನಲ್ಲಿ ಇಂದು ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಜಯಗಳಿಸಲಿ ಎಂದು ‌ಸಚಿವರು ಪ್ರಾರ್ಥಿಸಿದ್ದಾರೆ. ಭಾರತ ತಂಡ ಟೂರ್ನಿಯಲ್ಲಿ ಸತತ 10 ಪಂದ್ಯಗಳಲ್ಲಿ ಜಯ ದಾಖಲಿಸಿದ್ದು, ಫೈನಲ್ ಪಂದ್ಯದಲ್ಲೂ ನಮ್ಮ ತಂಡವೇ ಜಯಿಸಲಿ ಎಂದಿದ್ದಾರೆ.

ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಗೆಲುವಿನ ಅಭಿಯಾನ ಆರಂಭಿಸಿದ್ದ ಭಾರತ, ಇದೇ ಗೆಲುವಿನ ಲಯವನ್ನು ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲೂ ಮುಂದುವರಿಸಲಿ. ನಾಯಕ ರೋಹಿತ್ ಶರ್ಮ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಕನ್ನಡಿಗ ರಾಹುಲ್ ಒಳಗೊಂಡ ಭಾರತ ತಂಡದಿಂದ ಸಂಘಟಿತ ಹೋರಾಟ ಮೂಡಿ ಬರಲಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ವಿಶ್ವಕಪ್ ಫೈನಲ್‌​: ಭಾರತದ ಗೆಲುವಿಗೆ ಕ್ರಿಕೆಟ್​ ಅಭಿಮಾನಿಗಳಿಂದ ದೇವಾಲಯಗಳಲ್ಲಿ ಪೂಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.