ETV Bharat / state

ತಾಂತ್ರಿಕ ಬೆಳವಣಿಗೆಯಲ್ಲಿ ಕೃಷಿಗೆ ಒತ್ತು : ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಉದ್ಘಾಟಿಸಿ ಉಪರಾಷ್ಟ್ರಪತಿ ಕರೆ

author img

By

Published : Nov 17, 2021, 8:21 PM IST

24ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು(Bengaluru tech summit)ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಉದ್ಘಾಟನೆ ಮಾಡಿದರು. ಕೃಷಿಯು ದೇಶದ ಪ್ರಧಾನ ಕಸುಬಾಗಿರುವುದರಿಂದ ತಾಂತ್ರಿಕತೆಯು ಅದಕ್ಕೆ ಪೂರಕವಾಗಿರಬೇಕು ಎಂದರು..

Bengaluru tech summit 2021 inaugurated by vice president
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ

ಬೆಂಗಳೂರು : ಆಧುನಿಕ ತಂತ್ರಜ್ಞಾನ, ನಾವೀನ್ಯತೆ, ಸಂಶೋಧನೆ ಮತ್ತು ಜ್ಞಾನದ ಬೆಳವಣಿಗೆಗಳು ದೇಶದ ಕೃಷಿ ಸ್ಥಿತಿಯ ಸುಧಾರಣೆಗೂ‌ ಹೆಚ್ಚು ಒತ್ತು ಕೊಟ್ಟು ಮುನ್ನಡೆಯಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು(vice president m venkaiah naidu)ಹೇಳಿದರು.

'ಭವಿಷ್ಯವನ್ನು ಮುನ್ನಡೆಸು' (ಡ್ರೈವಿಂಗ್ ದ ನೆಕ್ಸ್ಟ್) ಘೋಷವಾಕ್ಯದ 24ನೇ ಆವೃತ್ತಿಯ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು(Bengaluru tech summit)ಬುಧವಾರ ಉದ್ಘಾಟಿಸಿ ಮಾತನಾಡಿದ ವೆಂಕಯ್ಯನಾಯ್ಡು, ಐಟಿ ಮತ್ತು ಬಿಟಿಯೊಂದಿಗೆ ಎಲ್ಲರೂ ಕರ್ತವ್ಯಪ್ರಜ್ಞೆಯನ್ನು (ಡ್ಯೂಟಿ) ಮೈಗೂಡಿಸಿಕೊಂಡಾಗ ದೇಶವು ಶಕ್ತಿಶಾಲಿಯಾಗಿ (ಮೈಟಿ) ಹೊರ ಹೊಮ್ಮುತ್ತದೆ. ಕೃಷಿಯು ದೇಶದ ಪ್ರಧಾನ ಕಸುಬಾಗಿರುವುದರಿಂದ ತಾಂತ್ರಿಕತೆಯು ಅದಕ್ಕೆ ಪೂರಕವಾಗಿರಬೇಕು ಎಂದರು.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಉಪ ರಾಷ್ಟ್ರಪತಿಗಳ ಭಾಷಣ..

ಜಗತ್ತು ಈಗ ಜ್ಞಾನಾಧಾರಿತವಾಗಿ ರೂಪುಗೊಳ್ಳುತ್ತಿದೆ. ಕೋವಿಡ್ ನಂತರ ಡಿಜಿಟಲೀಕರಣಗೊಳ್ಳುತ್ತಿದೆ. ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರದ ನೀತಿಗಳು ಎಷ್ಟೇ ಚೆನ್ನಾಗಿದ್ದರೂ ಅಂತಿಮವಾಗಿ ತಂತ್ರಜ್ಞಾನದ ಲಾಭಗಳನ್ನು ಸಮಾಜದ ಕಟ್ಟಕಡೆಯ ಮನುಷ್ಯನಿಗೆ ತಲುಪಿಸಬೇಕಾದ್ದು ಮುಖ್ಯ.

ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ಇದನ್ನು ಸಾಧಿಸಿಕೊಂಡು ಬಂದಿದೆ. ತಂತ್ರಜ್ಞಾನದ ಮೂಲಕ ಇಡೀ ವ್ಯವಸ್ಥೆಯನ್ನು ಪರಿವರ್ತಿಸಬೇಕೆಂಬುದೇ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯೂ ಆಗಿದೆ ಎಂದು ಹೇಳಿದರು.

ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಖಾಸಗಿ ವಲಯದ ಪಾತ್ರ ಬಹುಮುಖ್ಯ. ಇದಕ್ಕೆ ಪೂರಕವಾಗಿ ಪ್ರಧಾನಿಯವರು ಸುಧಾರಣೆ-ಸಾಧನೆ-ಪರಿವರ್ತನೆ ಎಂಬುದನ್ನೇ ಮಂತ್ರವಾಗಿಸಿಕೊಂಡು ನೀತಿಗಳನ್ನು ರೂಪಿಸುತ್ತಿದ್ದಾರೆ. ಜಗತ್ತಿನ ವಿಖ್ಯಾತ ಉದ್ದಿಮಗಳಲ್ಲೆಲ್ಲ ಭಾರತೀಯರು ನಾಯಕತ್ವ ವಹಿಸಿಕೊಂಡಿರುವುದು ಭಾರತೀಯರಾದ ನಮ್ಮ ಬೌದ್ಧಿಕ ಪ್ರಗತಿಯನ್ನು ದೃಢಪಡಿಸುತ್ತದೆ ಎಂದು ನಾಯ್ಡು ನುಡಿದರು.

ನಿರ್ದಿಷ್ಟವಾಗಿ ಬೆಂಗಳೂರು ಮತ್ತು ಒಟ್ಟಾರೆ ಭಾರತ ದೇಶವು ಅತ್ಯಂತ ಕ್ರಿಯಾಶೀಲವಾಗಿವೆ. ಇದಕ್ಕೆ ತಕ್ಕಂತೆ ಭಾರತದ ಪರಂಪರೆ ಮತ್ತು ಸಂಸ್ಕೃತಿಯ ಸಾರವಾದ ಹಂಚಿಕೊಳ್ಳುವಿಕೆ ಮತ್ತು ಇನ್ನೊಬ್ಬರ ಬಗ್ಗೆ ಗಮನ ಹರಿಸುವಿಕೆ (ಕಾಳಜಿ) ಎರಡನ್ನೂ ನಾವು ತಂತ್ರಜ್ಞಾನದ ಧಾರೆಗಳ ಮೂಲಕ ಮುಂದುವರಿಸಿಕೊಂಡು ಹೋಗಬೇಕು. ತಾಂತ್ರಿಕತೆ ಹಾಗೂ ನಾವೀನ್ಯತೆಯು ಅಂತಿಮ ಸಮಾಜದಲ್ಲಿ ಸಂತೋಷವನ್ನುಂಟು ಮಾಡುವ ಉದ್ದೇಶ ಹೊಂದಿರಬೇಕು ಎಂದರು.

ಕನ್ನಡದಲ್ಲಿ ಭಾಷಣ, ಪುನೀತ್ ನಿಧನಕ್ಕೆ ಸಂತಾಪ : ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಕನ್ನಡದಲ್ಲೇ ಸರಾಗವಾಗಿ ತಮ್ಮ ಭಾಷಣ ಆರಂಭಿಸಿ, ಕೆಲ ಸಾಲುಗಳನ್ನು ಮಾತನಾಡಿ ಗಮನ ಸೆಳೆದರು. ಬಳಿಕ ಅವರು, ಇತ್ತೀಚೆಗೆ ಅಕಾಲಿಕವಾಗಿ ಅಗಲಿದ ಕನ್ನಡ ಚಿತ್ರರಂಗದ ಜನಪ್ರಿಯ ಮತ್ತು ಸಮಾಜಮುಖಿ ನಟ ಪುನೀತ್ ರಾಜಕುಮಾರ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಮುಕ್ತ ಸ್ವಾಗತ- ಸಿಎಂ ಬೊಮ್ಮಾಯಿ : ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರು ಮತ್ತು ಒಟ್ಟಾರೆಯಾಗಿ ರಾಜ್ಯದಲ್ಲಿ ಮನುಷ್ಯನ ಪ್ರತಿಭೆಯ ವಿಕಸನಕ್ಕೆ ತಕ್ಕ ವಾತಾವರಣವಿದೆ. ಉದ್ಯಮಗಳ ಬೆಳವಣಿಗೆಗೆ ಪೂರಕವಾದ ರಚನಾತ್ಮಕ ಸಂತಿಗಳಿವೆ. ಪ್ರತಿಯೊಂದು ಉದ್ಯಮವನ್ನೂ ರಾಜ್ಯವು ಮುಕ್ತವಾಗಿ ಸ್ವಾಗತಿಸಲಾಗುವುದು ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಭಾಷಣ

ರಾಜ್ಯವು ಐಟಿ-ಬಿಟಿ ತಂತ್ರಜ್ಞಾನ, ಬಾಹ್ಯಾಕಾಶ, ವೈಮಾಂತರಿಕ್ಷ, ಸಂಶೋಧನೆ ಮತ್ತು ಅಭಿವೃದ್ಧಿ, ಸೆಮಿಕಂಡಕ್ಟರ್ ಹೀಗೆ ಎಲ್ಲದರಲ್ಲೂ ಇಡೀ ದೇಶಕ್ಕೇ ಅಗ್ರಸ್ಥಾನದಲ್ಲಿದೆ. ಇದರ ಜತೆಗೆ ಕೌಶಲ್ಯಪೂರ್ಣ ಮಾನವ ಸಂಪನ್ಮೂಲ ಸೃಷ್ಟಿಯಲ್ಲೂ ಪ್ರಥಮ ಸ್ಥಾನದಲ್ಲಿದೆ. ಹೀಗಾಗಿ, ರಾಜ್ಯವು ತಂತ್ರಜ್ಞಾನದ ಭವಿಷ್ಯದ ಬೆಳವಣಿಗೆಗೆ ಪ್ರಶಸ್ತ ತಾಣವಾಗಿದೆ ಎಂದು ವಿವರಿಸಿದರು.

ಹೊಸ ಕರ್ನಾಟಕದಿಂದ ಹೊಸ ಭಾರತವನ್ನು ಕಟ್ಟಬಹುದು. ಪ್ರಧಾನಿ ನೀಡಿರುವ ಆತ್ಮನಿರ್ಭರ ಭಾರತ ನಿರ್ಮಾಣದ ಕನಸು ನನಸಾಗಬೇಕು. ಮೇಕ್ ಇನ್ ಕರ್ನಾಟಕದ ಮೂಲಕ ನಾವು ಮೇಕ್ ಇನ್ ಇಂಡಿಯಾವನ್ನು ಸಾಕಾರಗೊಳಿಸಬೇಕು.

ಯಶಸ್ಸು ಎಂಬುದು ಸಾಧನೆಯ ಒಂದಂಶ ಮಾತ್ರ. ಹೀಗಾಗಿ, ಯಶಸ್ಸಿಗಿಂತ ಸಾಧನೆ ಮುಖ್ಯವಾಗಿದ್ದು, ತಂತ್ರಜ್ಞಾನ ವಲಯದಲ್ಲಿರುವವರು ಸಾಧನೆಯನ್ನೇ ಗುರಿಯಾಗಿಸಿಕೊಳ್ಳಬೇಕು. ತಂತ್ರಜ್ಞಾನವು ಕೊನೆಗೆ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಅಭಿಪ್ರಾಯಪಟ್ಟರು.

ಬಿಟಿಎಸ್ ಶೃಂಗದಲ್ಲಿ ನೆರೆದಿರುವವರನ್ನು ನೋಡಿದರೆ ನನಗೆ ಗಗನನೌಕೆಯಲ್ಲಿ ಕುಳಿತು ಭವಿಷ್ಯ ಯಾನ ಮಾಡುತ್ತಿದ್ದೇನೆ ಅನ್ನಿಸುತ್ತಿದೆ. ಕರ್ನಾಟಕವು ಜ್ಞಾನದ ಅಧಿದೇವತೆಯಾದ ಸರಸ್ವತಿಯ ನೆಲೆಬೀಡು. ಸರಸ್ವತಿಯನ್ನು ಹೊತ್ತಿರುವ ಹಂಸಪಕ್ಷಿಗಳು ಮಾನಸ ಸರೋವರದ ಎತ್ತರವನ್ನು ತಲುಪಬೇಕು. ಇದು ಉದ್ಯಮಿಗಳ ಗುರಿಯಾಗಬೇಕು ಎಂದು ಹೇಳಿದರು.

ಬೆಂಗಳೂರು ತಂತ್ರಜ್ಞಾನದ ತೊಟ್ಟಿಲು- ಅಶ್ವತ್ಥ್ ನಾರಾಯಣ : ಸ್ವಾಗತ ಭಾಷಣ ಮಾಡಿದ ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಕೋವಿಡ್ ಪಿಡುಗಿನ ನಂತರ ಅಭಿವೃದ್ಧಿಯ ಮಾನದಂಡಗಳು ಬದಲಾಗಿವೆ. ರಾಜ್ಯವು ಈ ಪರಿಸ್ಥಿತಿಯನ್ನು ತಂತ್ರಜ್ಞಾನದ ಬಲದಿಂದ ಸಕಾರಾತ್ಮಕವಾಗಿ ಬಳಸಿಕೊಳ್ಳುತ್ತಿದೆ ಎಂದರು.

ಉದ್ದಿಮೆಗಳ ಬೆಳವಣಿಗೆಗೆ ಸರ್ಕಾರವು ಹಲವು ಅನುಕೂಲಕರ ನೀತಿಗಳನ್ನು ರೂಪಿಸಿದೆ. ಇದರಿಂದಾಗಿ ಐಟಿ, ಬಿಟಿ, ಯೂನಿಕಾರ್ನ್ ಉದ್ದಿಮೆಗಳಲ್ಲಿ ರಾಜ್ಯವು ಅಗ್ರಸ್ಥಾನದಲ್ಲಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯಿಂದಾಗಿ ಮುಂಬರುವ ವರ್ಷಗಳಲ್ಲಿ ರಾಜ್ಯವು ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನವೋದ್ಯಮಗಳ ಸ್ಥಾಪನೆಯಲ್ಲಿ ರಾಜ್ಯವು ಜಾಗತಿಕ ಮಟ್ಟದಲ್ಲಿ ಅಗ್ರಪಂಕ್ತಿಯಲ್ಲಿದೆ. ನೀತಿ ಆಯೋಗದ ಸಮೀಕ್ಷೆಯಲ್ಲಿ ರಾಜ್ಯವು ಸತತ ಎರಡನೇ ವರ್ಷವೂ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಐಟಿ ರಫ್ತಿನಲ್ಲಿ ಕರ್ನಾಟಕವು ದೇಶದ ಶೇ. 40ರಷ್ಟು ಕೊಡುಗೆಯ ಸಿಂಹಪಾಲನ್ನು ನೀಡುತ್ತಿದೆ ಎಂದರು.

ರಾಜ್ಯವು ಮುಂಬರುವ ದಿನಗಳಲ್ಲಿ ಬಯೋಎಕಾನಮಿಯಲ್ಲೂ ದೇಶದ ಅಗ್ರ ಸ್ಥಾನವನ್ನು ಅಲಂಕರಿಸಲಿದೆ. ಜೀವವಿಜ್ಞಾನವನ್ನು ಉತ್ತೇಜಿಸಲು ಸದ್ಯದಲ್ಲೇ ಎಲಿಕ್ಸ್ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಜಗತ್ತಿನ ಸಮಸ್ಯೆಗಳಿಗೆ ತಂತ್ರಜ್ಞಾನ ಆಧರಿಸಿ ಪರಿಹಾರ : ಇಸ್ರೇಲ್​​ನ ಪ್ರಾಯೋಗಿಕತೆ ಹಾಗೂ ಭಾರತದ ಕಲ್ಪನೆ ಎರಡೂ ಸೇರಿದರೆ ನಾವೀನ್ಯತೆಯಲ್ಲಿ ಕ್ರಾಂತಿ ಉಂಟು ಮಾಡಬಹುದು. ಎರಡೂ ದೇಶಗಳು ಸೇರಿಕೊಂಡು ಜಗತ್ತಿನ ಸಮಸ್ಯೆಗಳಿಗೆ ತಂತ್ರಜ್ಞಾನವನ್ನು ಆಧರಿಸಿ ಪರಿಹಾರ ಕಂಡು ಹಿಡಿಯಲು ಸಾಧ್ಯವಿದೆ. ಯಾರು ನಾವೀನ್ಯತೆಗೆ ತೆರೆದುಕೊಳ್ಳುತ್ತಾರೋ ಅವರದೇ ಮುಂದಿನ ಭವಿಷ್ಯ ಎಂದು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ವರ್ಚುಯಲ್ ಮೂಲಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದರು.

ಸಿಲಿಕಾನ್ ಸಿಟಿಯಲ್ಲಿ ಕಾನ್ಸುಲೇಟ್ ಕಚೇರಿ : ಬೆಂಗಳೂರು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ನೆಲೆಯಾಗಿದೆ. ಇಲ್ಲಿ ನಾವು ನಮ್ಮ ಕಾನ್ಸುಲೇಟ್ ಕಚೇರಿ ತೆರೆಯಲಿದ್ದೇವೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮಾಹಿತಿ ನೀಡಿದರು.

ಭಾರತದಲ್ಲಿನ ಆವಿಷ್ಕಾರಗಳಿಂದ ಜಗತ್ತಿನ ಉದ್ದಿಮೆಗಳ ಬದಲಾವಣೆ : ಭಾರತದಲ್ಲಿ ನಡೆಯುತ್ತಿರುವ ತಾಂತ್ರಿಕ ಆವಿಷ್ಕಾರಗಳು ಇಡೀ ಜಗತ್ತಿನ ಉದ್ದಿಮೆಗಳನ್ನು ಬದಲಿಸುತ್ತಿವೆ. ನಾವು ಕರ್ನಾಟಕದೊಂದಿಗೆ ಬ್ಯಾಂಕಿಂಗ್ ಮತ್ತು ಟೆಲಿಕಾಂ ವಲಯಗಳಲ್ಲಿ ಸಹಕರಿಸಲು ಉತ್ಸುಕರಾಗಿದ್ದೇವೆ ಎಂದು ಅಮೆರಿಕದ ಕಿಂಡ್ರೆಲ್ ಕಂಪನಿಯ ಸಿಇಒ ಮಾರ್ಟಿನ್ ಶ್ರೋಟರ್ ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಐಟಿ ಬಿಟಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್, ಐಟಿ, ಬಿಟಿ ಮತ್ತು ಸ್ಟಾರ್ಟಪ್ ವಿಷನ್ ಗ್ರೂಪ್ ಗಳ ಮುಖ್ಯಸ್ಥರಾದ ಕ್ರಮವಾಗಿ ಕ್ರಿಸ್ ಗೋಪಾಲಕೃಷ್ಣನ್, ಕಿರಣ್ ಮಜುಂದಾರ್ ಷಾ ಮತ್ತು ಪ್ರಶಾಂತ್ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.