ETV Bharat / state

ಬೆಂಗಳೂರಲ್ಲಿ ಮತ್ತೆ ಬುಲ್ಡೋಜರ್ ಘರ್ಜನೆ: ಪಾಲಿಕೆಯಿಂದ ಒತ್ತುವರಿ ತೆರವು ಕಾರ್ಯಾಚರಣೆ ಶುರು

author img

By

Published : Jul 20, 2023, 7:27 AM IST

evacuation in bengaluru
ಬೆಂಗಳೂರಲ್ಲಿ ಒತ್ತುವರಿ ಕಾರ್ಯಾಚರಣೆ

ಬೆಂಗಳೂರಲ್ಲಿ ಒತ್ತುವರಿ ಮಾಡಿಕೊಂಡು ತಲೆ ಎತ್ತಿರುವ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ಮತ್ತೆ ಆರಂಭವಾಗಿದೆ. ಕೆಲವು ಕಡೆ ನೋಟಿಸ್​ ದೊರೆತ ಬಳಿಕ ಕಟ್ಟಡದ ಮಾಲೀಕರೇ ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಿದ್ದಾರೆ.

ಬೆಂಗಳೂರು: ಒತ್ತುವರಿ ಕಟ್ಟಡಗಳ ತೆರವು ಕಾರ್ಯಾಚರಣೆಗೆ ನಗರದಲ್ಲಿ ಮತ್ತೆ ಬುಲ್ಡೋಜರ್​​ಗಳ ಘರ್ಜನೆ ಆರಂಭವಾಗಿದೆ. ಪೂರ್ವ ವಲಯ ಪುಲಕೇಶಿನಗರ ಕ್ಷೇತ್ರದ ಶಾಂಪುರ ವ್ಯಾಪ್ತಿಯಲ್ಲಿ ದ್ವಿತೀಯ ಮಳೆ ನೀರುಗಾಲುವೆಯನ್ನು ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿರುವ ಸ್ಥಳದಲ್ಲಿ ಬುಧವಾರದಿಂದ ಒತ್ತುವರಿ ತೆರವು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.

ಶಾಂಪುರ ವ್ಯಾಪ್ತಿಯಲ್ಲಿ ಸರ್ವೇ ಸಂಖ್ಯೆ 6, 12 ಮತ್ತು 12 ಸೇರಿದಂತೆ ಸುಮಾರು 700 ಮೀಟರ್ ಉದ್ದದ ದ್ವಿತೀಯ ಮಳೆ ನೀರುಗಾಲುವೆಯ ಮೇಲೆ 13 ಕಟ್ಟಡಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ಈಗಾಗಲೇ ಕಂದಾಯ ಇಲಾಖೆಯ ಭೂಮಾಪಕರಿಂದ ಒತ್ತುವರಿಯಾಗಿರುವ ಪ್ರದೇಶದಲ್ಲಿ ಸಮೀಕ್ಷೆ ನಡೆಸಿ ಒತ್ತುವರಿ ಮಾಡಿಕೊಂಡವರಿಗೆ ತಹಶೀಲ್ದಾರ್ ನೋಟಿಸ್ ನೀಡಿದ್ದರು. ಆದ್ದರಿಂದ ಕಂದಾಯ ಇಲಾಖೆಯ ಭೂಮಾಪಕರು, ವಾರ್ಡ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಬೃಹತ್ ನೀರುಗಾಲುವೆ ವಿಭಾಗದ ಇಂಜಿನಿಯರ್ ನೇತೃತ್ವದಲ್ಲಿ ಬುಧವಾರ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆರಂಭಿಸಿದರು.

evacuation in bengaluru
ಜಂಟಿ ಆಯುಕ್ತರಿಂದ ಕುಡಿಯುವ ನೀರಿನ ಸಮಸ್ಯೆ ಪರಿಶೀಲನೆ

ರಾಜಕಾಲುವೆಯ ಪ್ರದೇಶದಲ್ಲಿ ಕಟ್ಟಡಗಳನ್ನು ನಿಮಾರ್ಣ ಮಾಡಿಕೊಂಡಿರುವುದರಿಂದ ಎಲೆಕ್ಟ್ರಾನಿಕ್ ಟೋಟಲ್ ಸ್ಟೇಷನ್ ಸರ್ವೇ ಮೂಲಕ ಮತ್ತೊಮ್ಮೆ ಸಮೀಕ್ಷೆ ನಡೆಸಿ ಒತ್ತುವರಿ ಜಾಗವನ್ನು ತೆರವುಗೊಳಿಸಬೇಕು. ಈ ಸಂಬಂಧ ಸಮೀಕ್ಷೆ ನಡೆಸಿ ಒತ್ತುವರಿ ತೆರವು ಕಾರ್ಯ ಮುಂದುವರಿಸಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಗುರುತಿಸಿರುವಂತಹ ಒತ್ತುವರಿ ಪ್ರದೇಶದಲ್ಲಿ ಮನೆಯ ಮಾಲೀಕರೇ ಸ್ವಯಂಪ್ರೇರಿತವಾಗಿ ತೆರವು ಮಾಡಿಕೊಳ್ಳುತ್ತಿದ್ದು, ಸಮೀಕ್ಷೆ ಪೂರ್ಣಗೊಂಡ ಬಳಿಕ ಸಂಪೂರ್ಣ ಒತ್ತುವರಿಯನ್ನು ತೆರವುಗೊಳಿಸಿ ದ್ವಿತೀಯ ಮಳೆ ನೀರುಗಾಲುವೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಚೆನ್ನಸಂದ್ರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ: ಮಹದೇವಪುರ ವಲಯ ಕಾಡುಗೋಡಿ ವಾರ್ಡ್ ಚೆನ್ನಸಂದ್ರ ವ್ಯಾಪ್ತಿಯಲ್ಲಿ ಸುಮಾರು 30 ಮೀಟರ್ ಉದ್ದದ ರಾಜಕಾಲುವೆಯಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿರುವ ಮಳಿಗಳನ್ನು ಸ್ವಯಂ ಪ್ರೇರಿತವಾಗಿ ಅವರೇ ತೆರವುಗೊಳಿಸಿಕೊಳ್ಳುತ್ತಿದ್ದಾರೆ.

ಜಂಟಿ ಆಯುಕ್ತರಿಂದ ಕುಡಿಯುವ ನೀರಿನ ಸಮಸ್ಯೆ ಪರಿಶೀಲನೆ: ಬಿಬಿಎಂಪಿ ವ್ಯಾಪ್ತಿಯ ಮಹದೇವಪುರ ವಲಯ ವ್ಯಾಪ್ತಿಯ 110 ಹಳ್ಳಿಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಶೀಲಿಸಿ ಕೂಡಲೇ ಬೋರ್ ವೆಲ್ ಕೊರೆದು ನೀರಿನ ವ್ಯವಸ್ಥೆ ಕಲ್ಪಿಸಲು ವಲಯ ಜಂಟಿ ಆಯುಕ್ತರಾದ ಡಾ. ದಾಕ್ಷಾಯಿಣಿ ಬುಧವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಹದೇವಪುರ ವಲಯದ ಹಗದೂರು ವಾರ್ಡ್ ಹಾಗೂ ಹೂಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಹಳ್ಳಿಗಳಿಗೆ ಭೇಟಿ ನೀಡಿ ಸ್ಥಳಿಯ ನಿವಾಸಿಗಳ ಅಹವಾಲುಗಳನ್ನು ಸ್ವೀಕರಿಸಿ ನೀರಿನ ಸಮಸ್ಯೆಯಿರುವ ಕಡೆ ಕೂಡಲೇ ಬೋರ್ ವೆಲ್ ಕೊರೆದು ನೀರಿನ ವ್ಯವಸ್ಥೆ ಮಾಡಲು ಸೂಚಿಸಿದರು.

ಹಗದೂರು ವಾರ್ಡ್ ವಾರ್ಡ್ ವ್ಯಾಪ್ತಿಯಲ್ಲಿ ಬರುವ ರಾಮಗೊಂಡನಹಳ್ಳಿ, ನಲ್ಲೂರಹಳ್ಳಿ, ಪಟ್ಟಂದೂರು ಅಗ್ರಹಾರ, ಗಾಂಧಿಪುರ ಗ್ರಾಮಗಳಿಗೆ ಭೇಟಿ ನೀಡಿ, ರಾಮಗೊಂಡನಹಳ್ಳಿ ಹಾಗೂ ಗಾಂಧಿ ಪುರದಲ್ಲಿ ತಲಾ 2 ಬೋರ್‌ವೆಲ್ ಕೊರೆಸಲು ಹೇಳಿದರು. ಪರಿಶೀಲನೆಯಲ್ಲಿ ಪಾಲಿಕೆಯ ಇಂಜಿನಿಯರ್​ಗಳು, ಜಲಮಂಡಳಿಯ ಇಂಜಿನಿಯರ್​ಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಬೆಂಗಳೂರು ನಗರದಲ್ಲಿ ರಾಜಕಾಲುವೆ ಒತ್ತುವರಿ: ವಸ್ತುಸ್ಥಿತಿ ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.