ಬೆಂಗಳೂರು : ವರನಟ ಡಾ ರಾಜ್‌ಕುಮಾರ್ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಆರೋಪದಡಿ ಪುನೀತ್ ಕೆರೆಹಳ್ಳಿ ಮೇಲೆ ಕನ್ನಡಪರ ಹೋರಾಟಗಾರರು ಹಲ್ಲೆ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು - ಪ್ರತಿದೂರು ಪ್ರಕರಣಗಳು ದಾಖಲಾಗಿವೆ.
ಇತ್ತೀಚಿಗೆ ಕನ್ನಡ ಚಿತ್ರರಂಗದಲ್ಲಿ ನಡೆದ ಬೆಳವಣಿಗೆಯೊಂದರ ವಿಚಾರವಾಗಿ ಫೇಸ್ಬುಕ್ನಲ್ಲಿ ಮಾತನಾಡಿದ್ದ ಪುನೀತ್ ಕೆರೆಹಳ್ಳಿಗೆ ಕನ್ನಡಪರ ಸಂಘಟನೆ ಕಾರ್ಯಕರ್ತ ಸಿಎಂ ಶಿವಕುಮಾರ್ ನಾಯ್ಕ್ ಬಣ ಕರೆ ಮಾಡಿದೆ. ಈ ವೇಳೆ ಶಿವಕುಮಾರ್, 'ರಾಜ್ ಕುಮಾರ್ ಫ್ಯಾಮಿಲಿ ಬಗ್ಗೆ ಹಗುರವಾಗಿ ಮಾತನಾಡಿದ್ದೀಯಾ?, ನೀನು ಕ್ಷಮೆ ಕೇಳಬೇಕು' ಎಂದಿದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕೆ ಪ್ರತಿಯಾಗಿ ಪುನಿತ್ ಕೆರೆಹಳ್ಳಿ 'ರಾಜ್ ಕುಟುಂಬದ ಕುರಿತು ನಾನು ಮಾತನಾಡಿಲ್ಲ, ಕ್ಷಮೆ ಕೇಳುವುದಿಲ್ಲ. ಮಾತನಾಡುವುದಾದರೆ ಚಾಮರಾಜಪೇಟೆಗೆ ಬನ್ನಿ' ಎಂದು ಶಿವಕುಮಾರ್ಗೆ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಶಿವಕುಮಾರ್ ನಾಯ್ಕ್ ಬಣ ಚಾಮರಾಜಪೇಟೆಗೆ ತೆರಳಿದೆ. ಈ ಸಂದರ್ಭದಲ್ಲಿ ಪುನೀತ್ ಕೆರೆಹಳ್ಳಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಎರಡೂ ಬಣಗಳ ನಡುವೆ ಗಲಾಟೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಚಾಮರಾಜಪೇಟೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಸದ್ಯ ಶಿವಕುಮಾರ್ ನಾಯ್ಕ್ ನೀಡಿದ ದೂರಿನನ್ವಯ ಪುನೀತ್ ಕೆರೆಹಳ್ಳಿ ವಿರುದ್ಧ ಜಾತಿ ನಿಂದನೆ ಹಾಗೂ ಪುನಿತ್ ಕೆರೆಹಳ್ಳಿ ನೀಡಿದ ದೂರಿನನ್ವಯ ಶಿವಕುಮಾರ್ ನಾಯ್ಕ್ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ ಅಬ್ರಹಾರ್ ಗ್ಯಾಂಗ್ ಮತ್ತೆ ಆ್ಯಕ್ವಿವ್