ETV Bharat / state

ಎನ್​ಎಚ್​ಎಂ ಯೋಜನೆಯಡಿ ನೇಮಕವಾಗಿರುವ ನೌಕರರ ವೇತನ ಶೇ.15 ರಷ್ಟು ಹೆಚ್ಚಳ: ಸಚಿವ ಡಾ.ಸುಧಾಕರ್

author img

By

Published : Feb 23, 2023, 6:53 PM IST

ಗುತ್ತಿಗೆ ಆಧಾರಿತ ಹಾಗೂ ಹೊರಗುತ್ತಿಗೆ ಆಧಾರಿತ ನೌಕರರ ವೇತನ ಶೇ.15ರಷ್ಟು ಹೆಚ್ಚಳವಾಗಲಿದೆ ಎಂದು ಸಚಿವ ಸುಧಾಕರ್​ ತಿಳಿಸಿದರು.

ಸಚಿವ ಡಾ.ಸುಧಾಕರ್
ಸಚಿವ ಡಾ.ಸುಧಾಕರ್

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ (ಎನ್ಎಚ್ಎಂ) ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಆಧಾರಿತ ಹಾಗೂ ಹೊರಗುತ್ತಿಗೆ ಆಧಾರಿತ ನೌಕರರ ಬಹುದಿನಗಳ ಬೇಡಿಕೆಯಂತೆ ಶೇ.15ರಷ್ಟು ವೇತನ ಒಂದೆರಡು ದಿನಗಳಲ್ಲಿ ಹೆಚ್ಚಳವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಇಂದು ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯೆ ಪೂರ್ಣಿಮಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ವೇತನ ಪರಿಷ್ಕರಣೆ ಸಂಬಂಧ ಚರ್ಚಿಸಲಾಗಿದ್ದು, ಅವರು ಇದಕ್ಕೆ ಸಮ್ಮತಿಸಿದ್ದಾರೆ. ಈ ಸಂಬಂಧ ಹಣಕಾಸು ಇಲಾಖೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದೆರಡು ದಿನಗಳಲ್ಲಿ ಆದೇಶ ಪ್ರಕಟವಾಗಲಿದೆ ಎಂದು ಸಚಿವ ಸುಧಾಕರ್​ ಹೇಳಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರನ್ನು ಖಾಯಂ ಮಾಡುವುದಿಲ್ಲ. 21,542 ಗುತ್ತಿಗೆ ಆಧಾರಿತ ನೌಕರರು ಹಾಗೂ 3494 ಹೊರಗುತ್ತಿಗೆ ಆಧಾರಿತ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮವನ್ನ ರಾಜ್ಯ ಆರೋಗ್ಯ ಸೊಸೈಟಿ ಮತ್ತು ಜಿಲ್ಲಾ ಆರೋಗ ಸೊಸೈಟಿ ಮೂಲಕ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.

ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರದ ಪಾಲನ್ನು ರಾಜ್ಯ ಸರ್ಕಾರವು ರಾಜ್ಯ ಆರೋಗ್ಯ ಸೊಸೈಟಿಯ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯ ಆರೋಗ್ಯ ಸೊಸೈಟಿ ಮೂಲಕ ಜಿಲ್ಲಾ ಸೊಸೈಟಿಗೆ ಬಿಡುಗಡೆ ಮಾಡಿ ಜಿಲ್ಲಾ ಆರೋಗ್ಯ ಸೊಸೈಟಿಗಳ ಮೂಲಕ ಸಿಬ್ಬಂದಿಗೆ ವೇತನ ನೀಡಲಾಗುತ್ತಿದೆ. ಇನ್ನು ಹೊರಗುತ್ತಿಗೆ ನೌಕರರಿಗೂ ಇದೇ ರೀತಿ ಜಿಲ್ಲಾ ಸೊಸೈಟಿ ಮೂಲಕ ವೇತನ ನೀಡಲಾಗುವುದು ಎಂದು ಹೇಳಿದರು. ಕಾಂಗ್ರೆಸ್ ಸದಸ್ಯ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ ಪರವಾಗಿ ಡಾ.ಅಜಯ್ ಧರ್ಮಸಿಂಗ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವರು, ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಪ್ರತ್ಯೇಕ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರು ಮಾಡಲು ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಅವಕಾಶವಿಲ್ಲ ಎಂದರು.

ಹೆಚ್ಚಿನ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುವುದು: ಕಳೆದ ಮೂರು ವರ್ಷಗಳಲ್ಲಿ ಹಾಸಿಗೆ ಬಳಕೆ ಪ್ರಮಾಣ ಶೇ.37 ರಷ್ಟಿದೆ. ನಿಯಮಗಳ ಪ್ರಕಾರ ಶೇ.70 ಕ್ಕಿಂತ ಹೆಚ್ಚು ಇರಬೇಕು. ಕಲ್ಯಾಣ ಕರ್ನಾಟಕದ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಈ ಆಸ್ಪತ್ರೆ ಹೆಚ್ಚು ಮಾಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದರು. ಆಡಳಿತ ಪಕ್ಷದ ಸದಸ್ಯ ಹರತಾಳ ಹಾಲಪ್ಪ ಅವರು ವೈದ್ಯರ ವೇತನ ಹೆಚ್ಚಿಸಬೇಕು ಎಂದು ಸಚಿವ ಸುಧಾಕರ್​ ಅವರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿಪಕ್ಷದ ಉಪ ನಾಯಕ ಯು.ಟಿ.ಖಾದರ್, ಬಿಜೆಪಿ ಸದಸ್ಯ ಕಳಕಪ್ಪ ಬಂಡಿ, ಜೆಡಿಎಸ್ ಸದಸ್ಯ ಸಾ.ರಾ. ಮಹೇಶ್ ಮತ್ತಿತರರು ದನಿಗೂಡಿಸಿದರು.

ಖಾದರ್ ಮಾತನಾಡಿ, ವೈದ್ಯರಿಗೆ ಕೆಲವೆಡೆ ರಕ್ಷಣೆ ಇಲ್ಲ. ಏಕ ವಚನದಲ್ಲಿ ಬಾಯಿಗೆ ಬಂದಂತೆ ಮಾತಾಡುತ್ತಾರೆ. ಮೊದಲು ಇದು ನಿಲ್ಲಬೇಕು ಎಂದು ಸಲಹೆ ಮಾಡಿದರು. ಆಗ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ವೈದ್ಯರ ವೇತನ ಪರಿಷ್ಕರಣೆ ಸಂಬಂಧ ಪರಿಶೀಲನೆ ನಡೆಸಲು ಸೂಚಿಸಿದರು.

ಗಗನಚುಕ್ಕಿ, ಭರಚುಕ್ಕಿಗೆ ರೋಪ್ ವೇ : ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿರುವ ಕಾವೇರಿ ಕಣಿವೆಯ ಪ್ರವಾಸಿತಾಣ ಗಗನ ಚುಕ್ಕಿ, ಭರಚುಕ್ಕಿಗೆ ಸಂಪರ್ಕ ಕಲ್ಪಿಸಲು ರೋಪ್ ವೇ ನಿರ್ಮಾಣ ಮಾಡುವ ಬಗ್ಗೆ ಈಗಾಗಲೇ 40 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಬಜೆಟ್​ನಲ್ಲಿ ಹೆಚ್ಚಿನ ಅನುದಾನ ಬಿಡುಗಡೆಗೆ ಅವಕಾಶ ಮಾಡಿಕೊಂಡು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವುದಾಗಿ ಇಂಧನ ಸಚಿವ ವಿ.ಸುನಿಲ್ ಕುಮಾರ್ ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ ಡಾ.ಅನ್ನದಾನಿ ಅವರ ಪ್ರಶ್ನೆಗೆ ಉತ್ತರಿಸಿದರು. ಲೋಕೋಪಯೋಗಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಕ್ಷೇತ್ರದಲ್ಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಿವೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಅನ್ನದಾನಿ, ಗಗನಚುಕ್ಕಿ, ಭರಚುಕ್ಕಿ ಸೇರಿದಂತೆ ಹಲವಾರು ಪ್ರವಾಸಿ ತಾಣಗಳು ತಮ್ಮ ಕ್ಷೇತ್ರದಲ್ಲಿದ್ದು, ಬೆಂಗಳೂರಿಗೆ ಹತ್ತಿರದಲ್ಲಿವೆ. ಈ ತಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸಲು ಕಾರ್ಯಕ್ರಮಗಳನ್ನು ರೂಪಿಸಲು ಹಲವು ಬಾರಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಡುಗೆ ತಯಾರಿಕಾ ಸಿಬ್ಬಂದಿ ಗೌರವಧನ ಹೆಚ್ಚಳಕ್ಕೆ ಕ್ರಮ: ಸರ್ಕಾರಿ ಶಾಲೆಗಳಲ್ಲಿ ಅಡುಗೆ ತಯಾರಿಕಾ ಸಿಬ್ಬಂದಿ ಗೌರವಧನವನ್ನು ಹೆಚ್ಚಳ ಮಾಡಲು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್, ವಿಧಾನಸಭೆಯಲ್ಲಿ ಜೆಡಿಎಸ್ ಸದಸ್ಯ.ಸಾ.ರಾ.ಮಹೇಶ್ ಅವರ ಪ್ರಶ್ನೆಗೆ ಶಿಕ್ಷಣ ಸಚಿವರ ಪರವಾಗಿ ಉತ್ತರಿಸಿದರು.

ಅಡುಗೆ ತಯಾರಿಕಾ ಸಿಬ್ಬಂದಿ ಪೈಕಿ ಮುಖ್ಯ ಅಡುಗೆಯವರಿಗೆ 2,700 ರಿಂದ 3,700 ರೂ. ಗೆ ಗೌರವಧನ ಹೆಚ್ಚಿಸಲಾಗಿದೆ. ಬಜೆಟ್​​ನಲ್ಲಿ ಒಂದು ಸಾವಿರ ರೂ. ಹೆಚ್ಚಳ ಮಾಡಲು ಪ್ರಸ್ತಾಪಿಸಲಾಗಿದೆ ಎಂದರು. ಗೌರವಧನ ನೀಡುತ್ತಿರುವುದು ಅವರ ಸೇವೆಗೆ ಸೂಕ್ತವಲ್ಲ ಎಂಬ ಭಾವನೆ ಸರ್ಕಾರದ್ದಾಗಿದ್ದು, ಗೌರವಧನ ಹೆಚ್ಚಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಕಲಾಗುವುದು ಎಂದು ಹೇಳಿದರು. ಶಾಲೆಗಳಲ್ಲಿ 25 ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ಕಡೆಗಳಲ್ಲೂ ಅಡುಗೆ ಸಿಬ್ಬಂದಿ ನೇಮಕ ಮಾಡಿಕೊಳ್ಳುವ ಸಂಬಂಧ ಶಿಕ್ಷಣ ಸಚಿವರ ಗಮನಕ್ಕೆ ತಂದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಇದನ್ನೂ ಓದಿ: ಕೆಆರ್​ಐಡಿಎಲ್​ ಮೂಲ ಉದ್ದೇಶ ಈಡೇರಿಸಲು ವಿಫಲ: ಸಿಎಜಿ ವರದಿಯಲ್ಲಿ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.