ETV Bharat / state

ಒಕ್ಕಲಿಗರ ಬಗ್ಗೆ ಪ್ರೊ ಭಗವಾನ್ ವಿವಾದಾತ್ಮಕ ಹೇಳಿಕೆ: ಬಂಧಿಸುವಂತೆ ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ ಒತ್ತಾಯ

author img

By ETV Bharat Karnataka Team

Published : Oct 14, 2023, 6:06 PM IST

Updated : Oct 14, 2023, 7:45 PM IST

ಭಗವಾನ್ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ನಾಯಕರ ಪ್ರತಿಭಟನೆ
ಭಗವಾನ್ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ನಾಯಕರ ಪ್ರತಿಭಟನೆ

ಒಕ್ಕಲಿಗರ ಕುರಿತು ಪ್ರೊ. ಭಗವಾನ್​ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಮತ್ತು ಮಾಜಿ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ನಾಯಕರ ಹೇಳಿಕೆ

ಬೆಂಗಳೂರು: ಒಕ್ಕಲಿಗರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ವಿಚಾರವಾದಿ ಪ್ರೊ. ಭಗವಾನ್ ಅವರನ್ನು ಸರ್ಕಾರ ಬಂಧಿಸಬೇಕೆಂದು ಮಾಜಿ ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಒತ್ತಾಯಿಸಿದ್ದಾರೆ. ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮಾಜದಲ್ಲಿ ಗೊಂದಲ ಉಂಟು ಮಾಡ್ತಾ ಇದ್ದಾರೆ. ಶಿಷ್ಟ ರಕ್ಷಕ ಚಾಮುಂಡಿಯನ್ನು ವಿರೋಧ ಮಾಡುತ್ತಿದ್ದಾರೆ. ಮಹಿಷಾನ ಪೂಜಿಸ್ತಾರೆ. ಇವರು ಜನರ ಭಾವನೆಗಳನ್ನು ಕೆಣಕುತ್ತಿದ್ದಾರೆ. ಈ ಭಗವಾನ್ ಬುದ್ಧಿ ಏರುಪೇರಾಗಿದೆ‌‌ ಎಂದು ಕಿಡಿಕಾರಿದರು.

ಒಕ್ಕಲಿಗರು ಸುಸಂಸ್ಕೃತರು, ಒಕ್ಕಲುತನದ ಬಗ್ಗೆ ಮಾತಾಡ್ತಿಯಾ ನೀನು?, ನಿನಗೆ ಶಕ್ತಿ ತಾಕತ್ತು ಇದ್ದರೆ, ಭಗವಂತ ನರ ಕೊಟ್ಟಿದ್ದರೆ ನೀನು ಒಬ್ಬನೇ ಮಾತನಾಡಬೇಕು. ಕುವೆಂಪು ಹೆಸರು ಉಲ್ಲೇಖ ಮಾಡಬಾರದು. ನೀನು ಒಬ್ಬನೇ ಮಾತನಾಡು, ಆಮೇಲೆ ನೋಡುವಂತೆ ಏನಾಗುತ್ತೆ ಅಂತ ಎಂದು ಭಗವಾನ್ ಅವರ ವಿರುದ್ಧ ಏಕವಚನದಲ್ಲೇ ಅಶ್ವತ್ಥನಾರಾಯಣ ಹರಿಹಾಯ್ದರು.

ಐಟಿ ದಾಳಿ ವಿಚಾರಚಾಗಿ ಪ್ರತಿಕ್ರಿಯಿಸಿ, ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲಾ ಹೇಳುವುದಕ್ಕೆ ಆಗುವುದಿಲ್ಲವೆಂದು ಡಿ. ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿ. ಕೆ. ಶಿವಕುಮಾರ್ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ತಾರೆ. ಹಾದಿ ಬೀದಿಯಲ್ಲಿ ಇರೋರಿಗೆ ಉತ್ತರ ಕೊಡೋದು ಬೇಡಪ್ಪ. ಜನರಿಗೆ ಉತ್ತರ ಕೊಡಪ್ಪ. 40% ಕಮೀಷನ್ ಅಂತ ಹೇಳಿ ಆರೋಪ ಮಾಡಿದವರ ಮನೆಯಲ್ಲೇ 42 ಕೋಟಿ ಹಣ ಸಿಕ್ಕಿದೆ. 40% ಕಮಿಷನ್ ತನಿಖೆ ಮಾಡುವುದಕ್ಕೆ ಕಮೀಷನ್ ನೇಮಕ ಮಾಡಿದವರು ಇವರು. ರಾಜಕೀಯ ಮಾಡ್ತಿದ್ದಾರೆ ಅಂತ ಹೇಳುವ ನೀವು ಇನ್ನೆಂತವರು.? ಜವಾಬ್ದಾರಿ ಇದ್ದವರು ಹೇಳುವ ಮಾತಾ ಇದು? ಎಂದು ತಿರುಗೇಟು ನೀಡಿದರು.

ಇವರ ಆಲೋಚನೆ ಹೇಗಿದೆ ನೋಡಿ. ಅನ್​ ಅಕೌಂಟ್ ಆಗಿ ಸಿಕ್ಕಿರೋದನ್ನು ಇವರು ವಿರೋಧಿಸಬೇಕು. ಅದನ್ನು ಬಿಟ್ಟು ರಾಜಕೀಯ ಪ್ರೇರಿತ ಅಂತ ಹೇಳೋದು ಎಷ್ಟು ಸರಿ?. ಇವರ ಆದಾಯ ಏನು, ಹೇಗೆ ಬಂತು ಅಂತ ತನಿಖೆ ಮಾಡಬೇಕು. ಆದಾಯ ಗುಟ್ಟು ಕೇಳಬೇಕು. ಡಿಕೆಶಿ ಅವರಿಗೆ ಅದಕ್ಕೆ ಹೇಳಿದ್ದು ಒಂದು ಯೂನಿವರ್ಸಿಟಿ ಮಾಡಿ ಅಂತ. ದುಡ್ಡು ಮಾಡೋದು ಹೇಗೆ ಅಂತ ಯೂನಿವರ್ಸಿಟಿ ಮಾಡಿ ಡಿಕೆಶಿ ಅವರೆ. ಡಿಕೆಶಿ ಯೂನಿವರ್ಸಿಟಿ, ಅಂಬಿಕಾಪತಿ ಯೂನಿವರ್ಸಿಟಿ, ಸಿದ್ದರಾಮಯ್ಯ ಯೂನಿವರ್ಸಿಟಿ, ಪ್ರಿಯಾಂಕ್ ಖರ್ಗೆ ಯೂನಿವರ್ಸಿಟಿ, ಜಮೀರ್ ಅಹ್ಮದ್ ಯೂನಿವರ್ಸಿಟಿ ಅಂತ ಮಾಡಿ. ಎಲ್ಲರಿಗೂ ದುಡ್ಡು ಮಾಡುವುದನ್ನು ಕಲಿಸಿಕೊಡಿ ಎಂದು ವಾಗ್ದಾಳಿ ನಡೆಸಿದರು.

ಆರಗ ಜ್ಞಾನೇಂದ್ರ ವಾಗ್ದಾಳಿ: ಮತ್ತೊಂದೆಡೆ ಒಕ್ಕಲಿಗ ಸಮುದಾಯವನ್ನು ನಿಂದಿಸಿರುವ ಪ್ರೊ. ಭಗವಾನ್ ವಿರುದ್ಧ ರಾಜ್ಯ ಸರ್ಕಾರ ಸುಮೊಟೋ ಪ್ರಕರಣ ದಾಖಲಿಸಬೇಕೆಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ಪ್ರೊ. ಭಗವಾನ್ ನಿನ್ನೆ ಮೈಸೂರಿನಲ್ಲಿ ಮಹಿಷಾ ದಸರಾ ಉತ್ಸವ‌ವನ್ನು ನಡೆಸಿದ್ದಾರೆ. ಇಲ್ಲಿ ಮಾಡುವಾಗ ಭಗವಾನ್ ಎನ್ನುವ ತಲೆಹರಟೆ, ಸ್ವಯಂ ಘೋಷಿತ ಬುದ್ಧಿ ಜೀವಿ ಆಡಿದ ಮಾತು ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಹೇಳಲು ಆಗುವುದಿಲ್ಲ.

ಒಕ್ಕಲಿಗರ ಜನಾಂಗೀಯ ನಿಂದನೆಯನ್ನು ಮಾಡಿ ಮಾತನಾಡಿದ್ದಾನೆ. ಈತ ತನ್ನ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವೇ ಇಲ್ಲ. ಅನೇಕ ಬಾರಿ ಅರೆಸ್ಟ್ ಮಾಡಿದ್ರು ಸಹ ಇದೇ ಕಾಂಗ್ರೆಸ್​ನವರು ಸಂಪೂರ್ಟ್ ಮಾಡಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಮೇಲೆ ದೌರ್ಜನ್ಯ ಮೇರೆ ಮೀರಿದೆ: ಹೆಚ್​ ಡಿ ಕುಮಾರಸ್ವಾಮಿ

Last Updated :Oct 14, 2023, 7:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.