ETV Bharat / state

ಯಂತ್ರ ಖರೀದಿಯಲ್ಲಿ ಮತ್ತೆ ಅವ್ಯವಹಾರದ ವಾಸನೆ: ಪಾಲಿಕೆ ಸದಸ್ಯರಿಂದ ವಿರೋಧ

author img

By

Published : Aug 18, 2020, 8:13 PM IST

ಪೈಥಾನ್ ಯಂತ್ರದ ಮೂಲಕ ರಸ್ತೆಗುಂಡಿ ಮುಚ್ಚಲು ಎಆರ್​ಟಿಎಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ಟಿವಿಸಿಸಿ ಮೂಲಕ ತನಿಖೆ ನಡೆಸಿದಾಗ 5 ಕೋಟಿ 36 ಲಕ್ಷ ರೂ. ಹೆಚ್ಚುವರಿ ಬಿಲ್ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಇದನ್ನು ರಿಕವರಿ ಮಾಡಲು ಆಯುಕ್ತರಿಗೆ ಇವತ್ತೇ ಪತ್ರ ಬರೆಯುತ್ತೇನೆ. ರಿಪೋರ್ಟ್ ಬರೆದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಮೇಯರ್ ಗೌತಮ್ ಕುಮಾರ್ ಭರವಸೆ ನೀಡಿದರು.

Again irregularity in machine purchase
ಯಂತ್ರ ಖರೀದಿಯಲ್ಲಿ ಮತ್ತೆ ಅವ್ಯವಹಾರ

ಬೆಂಗಳೂರು: ನಗರದಲ್ಲಿ ಈಗಿರುವ ಕಸ ಗುಡಿಸುವ ಯಂತ್ರಗಳು (ಸ್ವೀಪಿಂಗ್ ಮಷಿನ್) ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮತ್ತೆ 20ಕ್ಕೂ ಹೆಚ್ಚು ಸ್ವೀಪಿಂಗ್ ಮಷಿನ್​​ಗಳಿಗೆ ಟೆಂಡರ್ ಕರೆಯಲಾಗಿದೆ. ಇದನ್ನು ವಿರೋಧಿಸಿ ಪಾಲಿಕೆ ಸಭೆಯಲ್ಲಿ ಬಿಜೆಪಿ ಕಾರ್ಪೋರೇಟರ್ ಪದ್ಮನಾಭ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಅವರು, ಘನತ್ಯಾಜ್ಯ ನಿರ್ವಹಣೆ ಮಾಡುವ ಅಧಿಕಾರಿಗಳಿಗೆ ಲಕ್ಷ ರೂ. ಬಹುಮಾನ ಕೊಡುತ್ತೇನೆ. ಒಂದು ಯಂತ್ರ 20 ಕಿ.ಮೀ ಕಸ ಗುಡಿಸಿದರೆ 1 ಲಕ್ಷ ಬಹುಮಾನ ಎಂದು ಅಧಿಕಾರಿಗಳಿಗೆ ಸವಾಲ್ ಹಾಕಿದರು.

ಟಿಪಿಎಸ್ ಸಂಸ್ಥೆ ಮೂಲಕ ಕೋಟ್ಯಂತರ ರೂ. ವೆಚ್ಚ ಮಾಡಿ, ಖರೀದಿಸಿದ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರಗಳು ಕೆಲಸ ಮಾಡುತ್ತಿಲ್ಲ. ಇದರ ನಡುವೆಯೇ ಮತ್ತೆ 20ಕ್ಕೂ ಹೆಚ್ಚು ವಾಹನಗಳಿಗೆ ಟೆಂಡರ್ ಕರೆಯಲಾಗಿದೆ. ಈಗಾಗಲೇ 60ಕ್ಕೂ ಹೆಚ್ಚು ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ ಬಿಬಿಎಂಪಿ ಬಳಿ ಇದೆ. ಅಧಿಕಾರಿಗಳು ಪ್ರತಿ ತಿಂಗಳು ನಿರ್ವಹಣೆಗೆಂದೇ ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದಾರೆ. ಹೀಗಾಗಿ ಹೊಸ ಯಂತ್ರಗಳ ಖರೀದಿಯ ಟೆಂಡರ್​ ರದ್ದು ಮಾಡುವಂತೆ ಆಗ್ರಹಿಸಿದರು.

ಬಿಬಿಎಂಪಿ ಪ್ರತಿಪಕ್ಷ ನಾಯಕ ಅಬ್ದುಲ್ ವಾಜೀದ್ ಮಾತನಾಡಿ, ಗೌತಮ್ ಕುಮಾರ್ ಮೇಯರ್ ಆಗಿ 8 ತಿಂಗಳು ಕಳೆದಿದೆ.‌ 8 ತಿಂಗಳಲ್ಲಿ ಬಿಜೆಪಿ ಅವಧಿ ಅಟ್ಟರ್ ಫ್ಲಾಪ್. ನಿಮ್ಮ ಅವಧಿಯಲ್ಲಿ ಸಾಕಷ್ಟು ಗೋಲ್​ಮಾಲ್​ ಆಗಿದೆ. ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಅಂತ ಟೀಕಿಸಿದರು. ಟೆಂಡರ್ ನೀಡಿಕೆ, ಅಭಿವೃದ್ಧಿ ವಿಚಾರದಲಿ ಗೋಲ್​ಮಾಲ್ ಆಗಿದೆ. ಜೊತೆಗೆ ಮೆಕ್ಯಾನಿಕಲ್ ಸ್ವೀಪಿಂಗ್ ಯಂತ್ರ ಖರೀದಿ ಪ್ರಕ್ರಿಯೆ ಕೈ ಬಿಡುವಂತೆ ಆಗ್ರಹಿಸಿದರು.

ಆದ್ರೆ ಆಯುಕ್ತರು ಈ ಬಗ್ಗೆ ಸ್ಪಷ್ಟನೆ ಕೊಡುವ ಸಮಯದಲ್ಲಿ ಸ್ವೀಪಿಂಗ್ ಯಂತ್ರಗಳ ಖರೀದಿ ಬಗ್ಗೆ ಉತ್ತರಿಸಲಿಲ್ಲ. ನಗರದ ವಾರ್ಡ್ ರಸ್ತೆಗಳು 93 ಸಾವಿರ ಕಿ.ಮೀ, ಆರ್ಟೀರಿಯಲ್, ಸಬ್ ಆರ್ಟೀರಿಯಲ್ ರಸ್ತೆಗಳು 1400 ಕಿ.ಮೀ ಇದೆ. ಈ ರಸ್ತೆಗಳನ್ನು ಸ್ವಚ್ಛ ಇಟ್ಟುಕೊಳ್ಳೋದು ಮುಖ್ಯ ಎಂದಷ್ಟೇ ಹೇಳಿದರು.

ಪೈಥಾನ್ ಯಂತ್ರ ಖರೀದಿಯಲ್ಲಿ 5 ಕೋಟಿ ರೂ ಗೋಲ್​ಮಾಲ್:

ಮೇಯರ್ ಗೌತಮ್ ಕುಮಾರ್ ಮಾತನಾಡಿ, ಪೈಥಾನ್ ಯಂತ್ರ ಹಾಗೂ ಸ್ವೀಪಿಂಗ್ ಮಷಿನ್ ಎರಡಕ್ಕೂ ನನ್ನ ವಿರೋಧ ಇದೆ. ಪೈಥಾನ್ ಯಂತ್ರದ ಮೂಲಕ ರಸ್ತೆಗುಂಡಿ ಮುಚ್ಚಲು, ಎಆರ್​ಟಿಎಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ಆದರೆ, ಟಿವಿಸಿಸಿ ಮೂಲಕ ತನಿಖೆ ನಡೆಸಿದಾಗ 5 ಕೋಟಿ 36 ಲಕ್ಷ ರೂ. ಹೆಚ್ಚುವರಿ ಬಿಲ್ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಇದನ್ನು ರಿಕವರಿ ಮಾಡಲು ಆಯುಕ್ತರಿಗೆ ಇವತ್ತೇ ಪತ್ರ ಬರೆಯುತ್ತೇನೆ. ರಿಪೋರ್ಟ್ ಬರೆದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗುವುದು ಎಂದರು. ಇನ್ನು ನಾನೇ ಸ್ವೀಪಿಂಗ್ ಮಷಿನ್ ಹಗರಣದ ಬಗ್ಗೆ ಮಾಧ್ಯಮದ ಗಮನಕ್ಕೆ ತಂದಿದ್ದೆ. ಆದ್ರೆ ಯಾವುದೇ ಬಿಲ್ ಪಾವತಿ ಆಗಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ ಎಂದರು.

ಕೊರೊನಾ ಹಿನ್ನೆಲೆ, ಸರ್ಕಾರ ಆಕ್ಸಿಜನ್ ಸರಬರಾಜು‌ ಮಾಡ್ತಿಲ್ಲ. ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ, ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ. ಒಂದು ಕಡೆ ಬೆಡ್​ಗಳಿಲ್ಲ, ಮತ್ತೊಂದು ಕಡೆ ಅಕ್ಸಿಜನ್ ಪೂರೈಕೆಯಾಗ್ತಿಲ್ಲ ಎಂದರು. ವಾಜೀದ್ ಹೇಳಿಕೆಗೆ ಬಿಜೆಪಿ ಕಾರ್ಪೊರೇಟರ್ಸ್ ವಿರೋಧಿಸಿ, ಆಕ್ಸಿಜನ್ ಪೂರೈಸ್ತಿರೋದು ಖಾಸಗಿ ಕಂಪನಿಗಳು. ಅದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಬಿಜೆಪಿ ಕಾರ್ಪೊರೇಟರ್ ಡಾ. ರಾಜು ಪ್ರತ್ಯುತ್ತರ ನೀಡಿದರು.

ವಿಶೇಷ ಆಯುಕ್ತ ರವೀಂದ್ರ ವಿರುದ್ಧ ಶಿಸ್ತುಕ್ರಮ:

ಅವಧಿ ಮುಗಿಯುತ್ತಿರುವ ಹಿನ್ನೆಲೆ, ಬಡ ಮಕ್ಕಳಿಗೆ ಲ್ಯಾಪ್​ಟಾಪ್ ನೀಡುವ ವಿಚಾರ ಹಾಗೂ ಕಲ್ಯಾಣ ಯೋಜನೆಗಳ ಜಾರಿಗೆ ಪಾಲಿಕೆ ಸದಸ್ಯರು ಒತ್ತಾಯಿಸಿದ್ದಾರೆ. ಆದರೆ, ಕಳೆದ ಎರಡು ಸಭೆಗಳಿಗೂ ಕಲ್ಯಾಣ ಯೋಜನೆಗಳ ವಿಶೇಷ ಆಯುಕ್ತ ರವೀಂದ್ರ ಗೈರಾಗಿದ್ದು, ಅಧಿಕಾರಿ ವಿರುದ್ಧ ಸದಸ್ಯರು ಆಕ್ರೋಶ ಹೊರಹಾಕಿದರು. ಮಕ್ಕಳು ದಿನನಿತ್ಯ ಆನ್​ಲೈನ್ ಶಿಕ್ಷಣ ಸಿಗದೆ ಪರದಾಡುತ್ತಿದ್ದಾರೆ. ಮೊಬೈಲ್ ಆದ್ರೂ ಕೊಡಿಸುವಂತೆ ಪೋಷಕರು ಮನವಿ ಮಾಡ್ತಿದ್ದಾರೆ. ಆದೇಶ ನೀಡಿದ್ರೆ ಸಾಕು ಮಕ್ಕಳಿಗೆ ಲ್ಯಾಪ್​ಟಾಪ್, ಟ್ಯಾಬ್ ನೀಡಬಹುದು ಎಂದು ಸದಸ್ಯರು ಒತ್ತಾಯಿಸಿದರು. ಲ್ಯಾಪ್​ಟಾಪ್ ಗುಣಮಟ್ಟ ಹಾಗೂ ಬೆಲೆ ಪರಿಶೀಲಿಸಿ ಕಿಯೋನಿಕ್ಸ್​ಗೆ ಗುತ್ತಿಗೆ ನೀಡಲಾಗುವುದು ಎಂದು ಆಯುಕ್ತರು ಉತ್ತರಿಸಿದ್ರು.

ಈ ವೇಳೆ ಮಾತನಾಡಿದ ಪದ್ಮನಾಭ ರೆಡ್ಡಿ, ಮಕ್ಕಳಿಗೆ ಮೊಬೈಲ್, ಲ್ಯಾಪ್​ಟಾಪ್ ಕೊಡಿಸಿ ಇಲ್ಲ ಆನ್​ಲೈನ್ ಎಜುಕೇಶನ್ ನಿಲ್ಲಿಸಿ ಎಂದು ಆಗ್ರಹಿಸಿದ್ರು. ಈ ಬಗ್ಗೆ ಮೇಯರ್ ಪ್ರತಿಕ್ರಿಯಿಸಿ, ಹೋಂ ಕ್ವಾರಂಟೈನ್ ಇದ್ದಾರೆ ಎಂದು ನನ್ನ ಬಳಿಯೂ ಸುಳ್ಳು ಹೇಳಿದ್ದರು. ಕೂಡಲೇ ಶಿಸ್ತುಕ್ರಮ ಕೈಗೊಂಡು, ಮಾತೃ ಇಲಾಖೆಗೆ ವಾಪಸು ಕಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಹಸಿ ಕಸ ಟೆಂಡರ್ ಸುಮೊಟೊ ನಿರ್ಧಾರ ಎಂದು ಆಕ್ಷೇಪ:

ಬಿಬಿಎಂಪಿ ಕಳೆದ ಸಭೆಯಲ್ಲಿ ಹಸಿ ಕಸ ಟೆಂಡರ್ ಜಾರಿ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಂಡಿತು. ಆದರೆ, ಮಾಜಿ ಮೇಯರ್​ಗಳ ಸಮಿತಿಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಕೈಬಿಡಲಾಗಿದೆ. ಬಿಜೆಪಿ ಟೆಂಡರ್​ಗೆ ಕಾರ್ಯಾದೇಶ ನೀಡುವಲ್ಲಿ ಸುಮೊಟೋ ನಿರ್ಧಾರ ತೆಗೆದುಕೊಂಡಿದೆ ಎಂದು ಮಾಜಿ ಮೇಯರ್ ಮಂಜುನಾಥ್ ರೆಡ್ಡಿ ಆರೋಪಿಸಿದರು.

ಯಂತ್ರ ಖರೀದಿಯಲ್ಲಿ ಮತ್ತೆ ಅವ್ಯವಹಾರ

ಇದಕ್ಕೆ ಉತ್ತರಿಸಿದ ಮೇಯರ್ ಗೌತಮ್ ಕುಮಾರ್, ಕೋರ್ಟಿನ ಆದೇಶದ ಪ್ರಕಾರ ಆದಷ್ಟು ಬೇಗ ವರ್ಕ್ ಆರ್ಡರ್ ನೀಡಲಾಗಿದೆ. ಈ ಹಿಂದೆ ಪಶ್ಚಿಮ ವಲಯದಲ್ಲೇ 46 ಲಕ್ಷದವರೆಗೆ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈಗಿನ ಟೆಂಡರ್ ಪ್ರಕಾರ 309 ಕೋಟಿ ರೂ. ಪಾಲಿಕೆಗೆ ಉಳಿತಾಯವಾಗುತ್ತೆ ಎಂದರು.

ವೈಟ್ ಟಾಪಿಂಗ್ ಹಣ ಬಿಡುಗಡೆ ಮಾಡಿದ್ರೆ (ಸದನದ) ಬಾವಿಗಿಳೀತೇನೆ ಎಂದು ವಿ.ವಿ.ಪುರಂ ಪಾಲಿಕೆ ಸದಸ್ಯೆ ವಾಣಿ ವಿ.ರಾವ್ ಆಕ್ರೋಶ ಹೊರಹಾಕಿದರು. ವರ್ಷ ಕಳೆದರೂ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಿಲ್ಲ, ಕೆಲಸವೂ ಅರ್ಧಕ್ಕೇ ನಿಂತಿದೆ ಎಂದು ಬೇಸರ ವ್ಯಕ್ತಪಡಿಸಿದರು‌. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ನಾಳೆಯಿಂದಲೇ ಕೆಲಸ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇನ್ನು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ ಮಾತನಾಡಿ, ಬೆಂಗಳೂರು ನಗರದಿಂದ ಏರ್​ಪೋರ್ಟ್ ಹೋಗಬೇಕೆಂದರೆ ಟ್ರಾಫಿಕ್ ಇರುತ್ತದೆ. ಹೆಣ್ಣೂರು ರಸ್ತೆಯಿಂದ ಏರ್​ಪೋರ್ಟ್​​ಗೆ ಹೋಗಬಹುದು. ಆದರೆ, ದುರ್ದೈವ ಆ ರಸ್ತೆ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ಆ ರಸ್ತೆ ಯಾವಾಗ ಸರಿ ಮಾಡುತ್ತೀರಾ ಎಂದು ಪ್ರಶ್ನಿಸಿದರು. ಒಟ್ಟಿನಲ್ಲಿ ಸಭೆಯಲ್ಲಿ ಕಸ, ಅವ್ಯವಹಾರ, ಕಲ್ಯಾಣ ಯೋಜನೆಗಳ ಜಾರಿ ಕುರಿತು ಚರ್ಚೆಗಳು ನಡೆದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.